ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತವಾಹಿನಿಯೊಂದು ಹರಿಯುತಿದೆ...

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಮೃತ ಸೋಮೇಶ್ವರ ಕೊಂಚ ದಣಿದಂತೆ ಕಾಣಿಸುತ್ತಿದ್ದರು. ಅದು ಎಂಬತ್ತರ ವಯಸ್ಸಿನ ದಣಿವಲ್ಲ. ‘ಈ ನರ್ಮದಾ ಇತ್ತೀಚೆಗೆ ನಾನು ಬರೆಯುವುದನ್ನೇ ಆಕ್ಷೇಪಿಸುತ್ತಾಳೆ’ ಎನ್ನುವ ಮುನಿಸು ಬೆರೆತ ದಣಿವದು. ಚಹಾ ಕುಡಿಯುತ್ತ, ಚಹಾ ಮಾಡಿಕೊಟ್ಟ ಪತ್ನಿಯನ್ನೇ ಆಕ್ಷೇಪಿಸುತ್ತಿದ್ದರು! ಅಂದಹಾಗೆ, ಇದು ಆ ಕ್ಷಣದ ಆಕ್ಷೇಪವಷ್ಟೇ. ಏಕೆಂದರೆ, ಅಮೃತ ಸೋಮೇಶ್ವರ ಅವರ ಎಂಬತ್ತರ ಹರಯದ ಚೈತನ್ಯದ ಗುಟ್ಟೇ ಅವರ ಪತ್ನಿ ನರ್ಮದಾ.

ರಾಜ್ಯದ ಮತ್ತು ಕರಾವಳಿಯ ಸಾಹಿತ್ಯ – ಸಾಂಸ್ಕೃತಿಕ  ಕ್ಷೇತ್ರಗಳಲ್ಲಿ ಅಮೃತ ಸೋಮೇಶ್ವರ ಅವರದು ಬಹುಮುಖ್ಯ ಹೆಸರು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರದು ಬಿಡುಗಣ್ಣು. ಸಮಕಾಲೀನ ಘಟನೆಗಳ ಬಗ್ಗೆ ನಿರಂತರವಾಗಿ ತಮ್ಮ ಪ್ರತಿಕ್ರಿಯೆ ದಾಖಲಿಸುತ್ತಲೇ ಬಂದಿರುವ ಅವರು, ಕೊನೆಯ ಪಕ್ಷ ಒಂದು ಪತ್ರವನ್ನಾದರೂ ಬರೆದು ತಮ್ಮ ಒಲವು ನಿಲುವು ವ್ಯಕ್ತಪಡಿಸದೆ ಇರುವವರಲ್ಲ. ಅವರದು ಹಿರಿಯಜ್ಜನಂತೆ ತಿದ್ದುವ ಪ್ರಕ್ರಿಯೆ. ‘ಲೋಕದ ಆಗುಹೋಗುಗಳಿಗೆ ನೀವು ಯಾಕೆ ಚಿಂತೆ ಮಾಡಿ ಆರೋಗ್ಯ ಹಾಳುಮಾಡಿಕೊಳ್ತೀರಿ... ಸುಮ್ಮನಿರಿ’ ಎನ್ನುವುದು ಪತ್ನಿಯ ಪ್ರೀತಿಯ ಗದರಿಕೆ.

ಅಮೃತ ಸೋಮೇಶ್ವರರು ತಮ್ಮ ಸಾಹಿತ್ಯ ಕೃಷಿಯುದ್ದಕ್ಕೂ ವ್ಯವಸ್ಥೆಯ ಹುಳುಕುಗಳ ವಿರುದ್ಧ, ಮೇಲ್ವರ್ಗದ ವಂಚನೆಗಳ ವಿರುದ್ಧ ಸಾತ್ವಿಕವಾದ ಪ್ರತಿಭಟನೆಯನ್ನು ನಿರಂತರವಾಗಿ ವ್ಯಕ್ತಪಡಿಸುತ್ತಾ ಬಂದವರು. ಅವರ ಬಹುಮುಖಿ ಸಾಹಿತ್ಯ ಕೃಷಿಯಲ್ಲಿ ಯಾವುದೇ ಕೃತಿ ಕೈಗೆತ್ತಿಕೊಂಡರೂ ಪ್ರತಿಭಟನೆಯ ಎಳೆಯೊಂದು ಥಟ್ಟೆಂದು ಗೋಚರಿಸುತ್ತದೆ. ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚುವ ಪ್ರೀತಿಯೊಂದಿಗೇ ಅವರ ಟೀಕೆ ಇರುತ್ತದೆ.

ಜಾನಪದ, ಕನ್ನಡ, ತುಳು ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅವರು ವಿದ್ವತ್‌ಪೂರ್ಣ ಸಾಹಿತ್ಯ ರಚನೆ. ಅವರ ಸಾಹಿತ್ಯಿಕ ಕೊಡುಗೆಗಳು ಆಯಾ ಕ್ಷೇತ್ರದಲ್ಲಿ ಮೈಲಿಗಲ್ಲಾಗಿ ಮಹತ್ವವನ್ನು ಪಡೆದಿವೆ. ಅವರು ನಡೆಸಿದ ಆಳ ಅಧ್ಯಯನದಿಂದ ಕನ್ನಡ ಸಾಹಿತ್ಯಕ್ಕೆ ಲಾಭವಾಗಿದೆ, ಅವರ ಸೂಕ್ಷ್ಮ ಗ್ರಹಿಕೆಗಳಿಂದ ತುಳು ಸಾಹಿತ್ಯ ಕ್ಷೇತ್ರವೂ ಸಂಪನ್ನಗೊಂಡಿದೆ. ಕನ್ನಡ ಪ್ರಾಧ್ಯಾಪಕರಾಗಿದ್ದುದರಿಂದ ನವೋದಯ, ಪ್ರಗತಿಶೀಲ, ಬಂಡಾಯದ ಧೋರಣೆಯನ್ನು ತುಳುಸಾಹಿತ್ಯಕ್ಕೆ ತಂದುಕೊಡುವುದು ಅವರಿಂದ ಸಾಧ್ಯವಾಗಿದೆ. ಇನ್ನೂ ಅಂಬೆಗಾಲಿಡುತ್ತಿದ್ದ ತುಳು ಸಾಹಿತ್ಯ ಲೋಕದಲ್ಲಿ ಅಮೃತರ ತೂಕಮಯ ಕೃತಿಗಳು ಸಾಹಿತ್ಯಿಕ ಶಿಸ್ತನ್ನು ಮೂಡಿಸಿವೆ.

ಯಕ್ಷಗಾನ ಪ್ರಸಂಗಗಳ ಸಾಹಿತ್ಯಕ್ಕೆ ‘ಕನ್ನಡ ಸಾಹಿತ್ಯ ಚರಿತ್ರೆ’ಯಲ್ಲಿ ಸ್ಥಾನ ನೀಡಬೇಕು ಎನ್ನುವ ಆಗ್ರಹ ಮತ್ತು ಆ ಕುರಿತಾದ ಚರ್ಚೆ ಬಹುಕಾಲದಿಂದ ಚಾಲ್ತಿಯಲ್ಲಿದೆ. ಕೆಲವು ದಶಕಗಳ ಹಿಂದೆ, ಯಕ್ಷಗಾನ ಪ್ರಸಂಗಗಳಲ್ಲಿ ಸಾಹಿತ್ಯವನ್ನು ಹುಡುಕಿ ನೋಡಬೇಕಾದ ಆಭಾಸಕಾರೀ ವಾತಾವರಣವೂ ಇತ್ತು.

ಅಂತಹ ಕಾಲಘಟ್ಟದಲ್ಲಿ ಅಮೃತ ಸೋಮೇಶ್ವರ ಅವರು 13 ಪ್ರಸಂಗಗಳ ಸಂಪುಟವನ್ನು ರಚಿಸಿದರು. ಅವು ಬರೀ ಪುರಾಣ ಕತೆಗಳ ಕಾವ್ಯಾತ್ಮಕ ವರದಿಗಾರಿಕೆ ಆಗಿರದೇ, ಆ ಕಥನಗಳಲ್ಲಿ ವೈಚಾರಿಕತೆ ಮತ್ತು ಸುಧಾರಣಾವಾದಿ ಆಶಯಗಳನ್ನು ಒಳಗೊಂಡಿದ್ದವು. ಪುರಾಣ ಕಥೆಗಳನ್ನಾಧರಿಸಿದರೂ ಯಕ್ಷಗಾನದ ಸಂದೇಶ ಸಕಾಲಿಕ, ಸಾರ್ವಕಾಲಿಕ ಆಗಿರಬೇಕು ಎಂಬ ಆಶಯವನ್ನು ಅವರು ತಮ್ಮ ‘ಯಕ್ಷಾಂದೋಳ’ದಿಂದ ಹಿಡಿದು ಇಂದಿಗೂ ಪ್ರತಿಪಾದಿಸುತ್ತಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಇರುವ ತಪ್ಪು ಗ್ರಹಿಕೆಗಳು, ವೈದಿಕ ನೆಲೆಯಿಂದ ನಡೆಯುವ ತಪ್ಪು ವಿಶ್ಲೇಷಣೆಗಳನ್ನು ಸೋಮೇಶ್ವರ ‘ಯಕ್ಷತರು’ ಕೃತಿಯಲ್ಲಿ ನಿಷ್ಠುರತೆಯಿಂದ ಅನಾವರಣಗೊಳಿಸಿದ್ದಾರೆ. ಯಕ್ಷಗಾನ ಭರತನ ‘ನಾಟ್ಯಶಾಸ್ತ್ರ’ದಿಂದ ಬಂದದ್ದು ಎಂದು ಜಿದ್ದಿಗೆ ಬಿದ್ದು ಮಾಡುವ ಪ್ರತಿಪಾದನೆಯನ್ನು ಅವರು ನಿರಾಕರಿಸಿದ್ದಾರೆ. ಪೌರಾಣಿಕ ಪ್ರಸಂಗಕ್ಕೆ ಆಧುನಿಕ ಸಂವೇದನೆ ಬೆರೆಸುವ ಮೂಲಕ ಹೊಸ ಪ್ರೇಕ್ಷಕರು ಬರುವಂತೆ ಮಾಡಿ ಅವರಿಗೆ ಹೊಸ ಅನುಭವ ದಕ್ಕುವಂತೆ ಮಾಡುವುದೂ ಅವರಿಂದ ಸಾಧ್ಯವಾಗಿದೆ. ಅವರ ಕೆಲಸ ಯಕ್ಷಗಾನ ಪ್ರಸಂಗಗಳಿಗೆ ಅಧ್ಯಯನದ ಶಿಸ್ತನ್ನು ಒದಗಿಸಿಕೊಟ್ಟಿದೆ. ಅಮೃತ ಸೋಮೇಶ್ವರರ ಇಂತಹ ಮೌಲ್ವಿಕ ಕೆಲಸಗಳಿಂದಾಗಿಯೇ, ಯಕ್ಷಗಾನ ಪ್ರಸಂಗಗಳನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗುರ್ತಿಸಬೇಕು ಎಂಬ ಆಗ್ರಹಕ್ಕೆ ಆನೆಬಲ ದೊರೆಯುವಂತಾಗಿದೆ.

ಪ್ರತಿಭಟನೆ ಮತ್ತು ವೈಚಾರಿಕ ಕ್ರಾಂತಿಯ ಉದ್ದೇಶ ಆಕ್ರಮಣಕಾರಿ ಆಗುವುದಲ್ಲ ಎನ್ನುವ ನಿಲುವಿನ ಸೋಮೇಶ್ವರರು, ಯಾವುದೇ ಆಮಿಷಗಳಿಗೆ ಬಲಿಯಾಗದೆ ಗೌಜುಗದ್ದಲಗಳ ನಡುವೆ ತನ್ನ ನಿಲುವನ್ನು ಬಿಟ್ಟುಕೊಡಬಾರದು ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟವರು. ಈ ಕುರಿತು ಅವರು ಎಂದೂ ಪ್ರವಚನ ಮಾಡಿದವರಲ್ಲ. ಎಲ್ಲ ಸಂದರ್ಭಗಳಲ್ಲಿಯೂ ವಿವೇಕಯುತ ಚಿಂತನೆಯೊಂದಿಗೆ ತಮ್ಮ ನಿಲುವನ್ನು ಮಂಡಿಸಿದ್ದಾರೆ.

‘ಎಲೆಗಿಳಿ’, ‘ರುದ್ರಶಿಲೆ ಸಾಕ್ಷಿ’, ‘ಕೆಂಪುನೆನಪು’ ಮತ್ತು ‘ಮಾನವತೆ ಗೆದ್ದಾಗ’ ಎಂಬ ಅವರ ಕಥಾಸಂಕಲನಗಳಲ್ಲಿ ಶೋಷಣೆಯ ವಿರುದ್ಧದ ಧ್ವನಿ ಇದೆ. ಪುರೋಹಿತಶಾಹಿಯ, ಅರ್ಚಕ ವರ್ಗದ ವಂಚನೆಗಳ ಉಲ್ಲೇಖವನ್ನು ಅವರ ಕವನಗಳಲ್ಲಿ ಕಾಣಬಹುದು. ಸಂಶೋಧನೆಯ ಹಾದಿಯಲ್ಲಿಯೂ ಆ ಎಳೆ ಇದೆ. ‘ತೀರದ ತೆರೆ’ ಅವರ ಪ್ರಸಿದ್ಧ ಕಾದಂಬರಿ. ‘ಪದ ಸಂಪತ್ತು’ ಕೃತಿ ಜೀವನಪ್ರೀತಿಗೆ ಸಂಬಂಧಿಸಿದಂತಿದೆ.

‘ಅಪಾರ್ಥಿನಿ’ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ವಿಶಿಷ್ಟ ಕೃತಿ. ಅಮೃತ ಸೋಮೇಶ್ವರರು ತಾವು ಗಮನಿಸಿದ ಪದಗಳಿಗೆ ಅನರ್ಥ ವಿವರಣೆ ಅಥವಾ ಪದವೊಂದನ್ನು ತಿರುವುಮುರುವು ಮಾಡುವ ಕಸರತ್ತು ಈ ಕೃತಿಯಲ್ಲಿದೆ. ಮೃಗಲಯಾಧಿಕಾರಿ, ಮೃಣ್ಮುಖಪ್ರಿಯ ಮುಂತಾದ ತಮಾಷೆ ಪದಗಳು ಅಮೃತರ ಹುರುಪುತನಕ್ಕೊಂದು ಉದಾಹರಣೆ.

ಸೋಮೇಶ್ವರ ಅವರು ಅಪ್ಪಟ ಮಹಿಳಾವಾದಿ ಎನ್ನುವುದನ್ನು ಇಲ್ಲಿ ಉಲ್ಲೇಖಿಸಬೇಕು. ದಕ್ಷಿಣ ಕನ್ನಡ ಮತ್ತು ಕೇರಳದುದ್ದಕ್ಕೂ ಇರುವ ‘ಭಗವತಿ ಆರಾಧನೆ’ಯನ್ನು ವಿಮರ್ಶೆಯ ನೆಲೆಯಿಂದ ಅಧ್ಯಯನ ಮಾಡಿದ್ದಾರೆ. ಸ್ತ್ರೀಯ ಋತುಸ್ರಾವವನ್ನು ನೆಪವಾಗಿಸಿಕೊಂಡು ಧಾರ್ಮಿಕ ಆಚರಣೆಗಳಲ್ಲಿ ಆಕೆಯನ್ನು ದೂರ ಇರಿಸುವುದನ್ನು ಅವರು ಖಂಡತುಂಡವಾಗಿ ವಿರೋಧಿಸುತ್ತಾರೆ. ಸ್ತ್ರೀ ದೇವತೆಗಳ ಆರಾಧನೆ ಸಂದರ್ಭದಲ್ಲಿಯೂ ಸ್ತ್ರೀಯರನ್ನೇ ದೂರ ಇಡುವ ವೈರುಧ್ಯವನ್ನು ಟೀಕಿಸುತ್ತಾರೆ. 

ಇಂದು ಯಕ್ಷಗಾನ ಕ್ಷೇತ್ರಕ್ಕೆ ಮಹಿಳೆ ಮತ್ತು ಮಕ್ಕಳ ಪ್ರವೇಶ ಸ್ವಾಗತಾರ್ಹ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಕ್ಕಳ ಮನೋಭೂಮಿಕೆಗೆ ಪೂರಕವಾಗಿ, ಮಹಿಳೆಯರ ಭಾವಕೋಶಕ್ಕೆ ಹೊಂದುವಂತಹ ಪ್ರಸಂಗಗಳು ರಚನೆಯಾಗಬೇಕು ಎಂಬ ಸೂಕ್ಷ್ಮ ಅಗತ್ಯವನ್ನು ಅಮೃತರು ಗುರುತಿಸಿ ಹೇಳುತ್ತಾರೆ.

‘ಕನ್ನಡ, ತುಳು ಮತ್ತು ಮಲಯಾಳಂ’ ಎಂಬ ಮೂವರು ಅವ್ವೆಯರ ಕೂಸು ನಾನು’ ಎಂದು ಪರಿಚಯಿಸಿಕೊಳ್ಳುವ ಅಮೃತರು, ತಮ್ಮ ತಾಯಿಯೂ ಪ್ರಗತಿಶೀಲ ಧೋರಣೆ ಹೊಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಅಮೃತರಿಗೆ ಜೀವನ್‌, ಚೇತನ್‌ ಎಂಬಿಬ್ಬರು ಪುತ್ರರು.

ಅಧ್ಯಯನಶೀಲ ಮತ್ತು ಸಂಶೋಧನಾ ಪ್ರವೃತ್ತಿಯ ಅನೇಕ ಶಿಷ್ಯರನ್ನು ಬೆಳೆಸಿರುವ ಅಮೃತ ಸೋಮೇಶ್ವರರ ಮತ್ತೊಂದು ಸಾಧನೆ. ಶಿಷ್ಯಸಾಗರವೇ ಇದ್ದರೂ ವಂದಿಮಾಗಧರನ್ನು ಅವರು ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ. ಪಾಡ್ದನ ಸಂಪುಟ, ಪ್ರಸಂಗ ಸಂಪುಟ, ನಾಟಕ ಸಂಪುಟಗಳು ಅವರ ಅಧ್ಯಯನದ ವೈವಿಧ್ಯತೆಗೆ ಮತ್ತು ನಿರಂತರ ಕ್ರಿಯಾಶೀಲತೆಗೆ ಉದಾಹರಣೆಯಂತಿವೆ. ಎಂಬತ್ತರ ಸಂದರ್ಭದಲ್ಲೂ ಅವರ ಅಧ್ಯಯನದ ಶಿಸ್ತು ಕೊಂಚವೂ ಮಸುಕಾಗಿಲ್ಲ, ಸಮಾಜದ ಬಗೆಗಿನ ಕುತೂಹಲ ಕಡಿಮೆಯಾಗಿಲ್ಲ. ಈ ಹಿರಿಯಜ್ಜನನ್ನು ನೋಡುತ್ತಿದ್ದರೆ, ‘ಅಮೃತವಾಹಿನಿಯೊಂದು ಹರಿಯುತಿಹುದು...’ ಗೀತೆ ಎದೆದುಂಬುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT