ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಮಕ್ಕಳ ಅಕ್ರಮ ರವಾನೆ

ಬೆಂಗಳೂರು ಪೊಲೀಸರಿಂದ 16 ಜನರ ಬಂಧನ
Last Updated 8 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ, ವೀಸಾ ಪಡೆದು ನಗರ ಮೂಲಕ ಅಮೆರಿಕಕ್ಕೆ ಮಕ್ಕಳನ್ನು ರವಾನಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ 16 ಮಂದಿಯನ್ನು ಬಂಧಿಸಿದ್ದಾರೆ.

‘ಜಯಮಹಲ್‌ನ ಉದಯ್‌ ರುದ್ರಪ್ರತಾಪ್ ಸಿಂಗ್ (44) ಪ್ರಮುಖ ಆರೋಪಿ. ಈತ ತನ್ನ ಸಹಚರರೊಂದಿಗೆ  ಗುಜರಾತ್‌, ಬಿಹಾರ ಮತ್ತು ಉತ್ತರ ಪ್ರದೇಶದ 10 ವರ್ಷದ ಆಸುಪಾಸಿನ ಮಕ್ಕಳನ್ನು ಅಕ್ರಮವಾಗಿ ಕಳುಹಿಸಿ ಕೊಡುತ್ತಿದ್ದ’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ಮಗುವನ್ನು ಅಮೆರಿಕಕ್ಕೆ ಕಳುಹಿಸಲು ಅವರ ನೈಜ ಪೋಷಕರಿಂದ ₹25 ಲಕ್ಷ  ಪಡೆಯುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ಅಕ್ರಮವಾಸಿಗಳ ನೆರವಿಗೆ: ‘ಅಮೆರಿಕದಲ್ಲಿ ನೆಲೆಸಿರುವ  ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಉದಯ್ ರುದ್ರಪ್ರತಾಪ್‌ನನ್ನು ಸಂಪರ್ಕಿಸುವ ಅಗತ್ಯ ಏನಿತ್ತು? ತಾವೇ ನೇರವಾಗಿ ಕರೆಸಿಕೊಳ್ಳುವ ಅವಕಾಶ ಇತ್ತಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಶೇಖರನ್, ‘ಪ್ರವಾಸಿ ವೀಸಾ ಅಡಿ ಅಮೆರಿಕಕ್ಕೆ ಹೋದ  ಈ ಮೂರು ರಾಜ್ಯಗಳ ಅನೇಕರು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಅಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ತಮ್ಮ ಮಕ್ಕಳನ್ನು ಕರೆಸಿಕೊಳ್ಳಲು ನಮ್ಮನ್ನು ಸಂಪರ್ಕಿಸುತ್ತಿದ್ದರು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದರು.

‘ಈವರೆಗೆ 30ಕ್ಕೂ ಹೆಚ್ಚು ಮಕ್ಕಳನ್ನು ಅಕ್ರಮವಾಗಿ ಕಳುಹಿಸಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಮಕ್ಕಳನ್ನು ನಿಜವಾಗಿಯೂ ಪೋಷಕರ ಮಡಿಲು ಸೇರಿಸುತ್ತಿದ್ದರೆ, ಇಲ್ಲವೇ ಎಂಬ ಸಂದೇಹ ನಮಗೂ ಇವೆ.  ಈ ಬಗ್ಗೆ ತನಿಖೆ ನಡೆದಿದೆ’ ಎಂದು ಮಾಹಿತಿ ನೀಡಿದರು.

6 ತಂಡಗಳಾಗಿ ಕೃತ್ಯ: ‘ಆರೋಪಿಗಳು 6 ತಂಡಗಳಾಗಿ ಕೆಲಸ ಮಾಡುತ್ತಿದ್ದರು. ಈ ಆರೋಪಿಗಳು ಬೇರೆಯವರನ್ನು  ಕರೆತಂದು ಅವರನ್ನು ಮಕ್ಕಳ ತಂದೆ ತಾಯಿ ಎಂಬಂತೆ ಬಿಂಬಿಸುತ್ತಿದ್ದರು. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಅವರಿಗೆ ವೀಸಾ ವ್ಯವಸ್ಥೆ ಕಲ್ಪಿಸಿ, ಅವರ ಮೂಲಕ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಬಂಧಿತರು:  ಹೊರಮಾವಿನ ಮೈಕೆಲ್, ಪವಿನ್, ಸಹಕಾರ ನಗರದ ರಾಜೇಶ್, ಆರ್.ಟಿ. ನಗರದ ಸಿಮೋನ್, ಕುಶಾಲಪ್ಪ, ಬಾಣಸವಾಡಿಯ ಗುಣ
ಶೇಖರ್, ಗೆದ್ದಲಹಳ್ಳಿಯ ಡೊಮಿನಿಕ್‌, ಬೊಮ್ಮನಹಳ್ಳಿಯ ಜಾಯ್ಸನ್‌, ಮಹಾಲಕ್ಷ್ಮಿಪುರದ ಮಂಜುನಾಥ್‌, ಕಮ್ಮನಹಳ್ಳಿಯ ಫ್ರಾನ್ಸಿಸ್‌ ಕ್ರಿಸ್ಟೋಫರ್ ಆನಂದ್ ಅಂಥೋಣಿ, ರಾಮಮೂರ್ತಿನಗರದ ಸಂಗೀತಾ ಪ್ರಕಾಶ್, ಎಚ್‌ಎಎಲ್‌ನ ಲತಾ ವೇಮ ರೆಡ್ಡಿ, ಬನಶಂಕರಿಯ ಸುಧೀರ್ ಕುಮಾರ್, ಭಾನುಪ್ರಕಾಶ್, ಗಿರಿನಗರದ ವೀಣಾ ಪ್ರಕಾಶ್.

ಹೋಗುವಾಗ ಒಟ್ಟಿಗೆ, ಬರುವಾಗ ಬೇರೆ ಬೇರೆ
ಅಮೆರಿಕಕ್ಕೆ ಮಕ್ಕಳನ್ನು ಅಕ್ರಮವಾಗಿ ಕಳುಹಿಸುತ್ತಿರುವ ಬಗ್ಗೆ ಒಂದು ವರ್ಷದ ಹಿಂದೆಯೇ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆರೋಪಿಗಳ ಪತ್ತೆಗೆ ಅಂದಿನ ಕಮಿಷನರ್ ಎಂ.ಎನ್‌. ರೆಡ್ಡಿ ಅವರು,  ಹರಿಶೇಖರ್‌ ನೇತೃತ್ವದಲ್ಲಿ 14 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.

‘ಆರೋಪಿಗಳ ಪ್ರತಿಯೊಂದು ಗುಂಪಿನ ಮೇಲೂ ನಿಗಾ ಇಟ್ಟಿದ್ದೆವು.  ಅಲ್ಲದೇ, ಮಕ್ಕಳ ಪೋಷಕರು ಎಂದು ಬಿಂಬಿಸಿದ್ದ ವ್ಯಕ್ತಿಗಳ ವಿಳಾಸವನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ಗೊತ್ತಾಯಿತು’ ಎಂದು ಹರಿಶೇಖರನ್‌ ಹೇಳಿದರು.

‘ಮಕ್ಕಳನ್ನು ಇಲ್ಲಿಂದ ಕರೆದೊಯ್ಯುತ್ತಿದ್ದ ನಕಲಿ ಅಪ್ಪ, ಅಮ್ಮಂದಿರು ಅವರನ್ನು ಅಲ್ಲಿ ಬಿಟ್ಟು ವಾರದಲ್ಲೇ ವಾಪಸ್ ಬರುತ್ತಿದ್ದರು. ಆದರೆ ಜತೆಗೆ ಮಕ್ಕಳನ್ನು ವಾಪಸ್ ಕರೆತರುತ್ತಿರಲಿಲ್ಲ’ ಎಂದು ತಿಳಿಸಿದರು.

‘ಅಲ್ಲದೇ, ನಗರದಿಂದ ಒಟ್ಟಿಗೆ ಹೋಗುತ್ತಿದ್ದ ಪುರುಷ ಹಾಗೂ ಮಹಿಳೆ ವಾಪಸ್ ಪ್ರತ್ಯೇಕವಾಗಿ ಬರುತ್ತಿದ್ದರು. ಇದರಿಂದ ಅನುಮಾನ ಬಂತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಮಾಹಿತಿ ಸಿಕ್ಕಿತು. ಅದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು   ವಿವರಿಸಿದರು.

ಏನು, ಹೇಗೆ?
* ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ಮಕ್ಕಳನ್ನು ಕರೆಸಿಕೊಳ್ಳಲು ಸಾಧ್ಯವಾಗುತ್ತಿರಲ್ಲಿಲ್ಲ.
* ಹೀಗಾಗಿ ಅವರು ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು.
* ಆರೋಪಿಗಳು ಪ್ರತಿ ಮಗುವನ್ನು ಕಳುಹಿಸಲು  ₹ 25 ಲಕ್ಷ ಪಡೆಯುತ್ತಿದ್ದರು
* ನಕಲಿ ಅಪ್ಪ–ಅಮ್ಮನನ್ನು ಸೃಷ್ಟಿಸಿ, ವೀಸಾ ಕೊಡಿಸಿ, ಅವರ ಮೂಲಕ ಮಕ್ಕಳನ್ನು ಕಳುಹಿಸುತ್ತಿದ್ದರು.
* ನಕಲಿ ಪೋಷಕರು, ಮಕ್ಕಳನ್ನು ಅಮೆರಿಕದಲ್ಲೇ ಬಿಟ್ಟು ವಾಪಸ್ ಬರುತ್ತಿದ್ದರು.

***
ಅಕ್ರಮವಾಗಿ ರವಾನೆಯಾಗಿರುವ ಮಕ್ಕಳ ವಿವರ ಪರಿಶೀಲಿಸುವಂತೆ ಅಮೆರಿಕ ಪೊಲೀಸರಿಗೆ ಮನವಿ ಮಾಡಲಾಗಿದೆ
-ಪಿ. ಹರಿಶೇಖರನ್,  ಹೆಚ್ಚುವರಿ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT