ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ

ಕಪ್ಪುವರ್ಣದ ಯುವಕನ ಹತ್ಯೆ: ಪೊಲೀಸ್‌ ಅಧಿಕಾರಿ ನಿರ್ದೋಷಿ ತೀರ್ಪು
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಕಪ್ಪು ವರ್ಣದ  ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ (ಫರ್ಗ್ಯುಸನ್‌ ಪ್ರಕರಣ) ಆರೋಪಿ, ಬಿಳಿ ವರ್ಣದ ಪೊಲೀಸ್‌ ಅಧಿಕಾರಿ ನಿರ್ದೋಷಿ ಎಂದು ನೀಡಿರುವ ಕೋರ್ಟ್‌ ತೀರ್ಪಿನ ವಿರುದ್ಧ  ಅಮೆರಿಕದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಪ್ರಾಸಿಕ್ಯೂಟರ್‌ ಬಾಬ್‌ ಮೆಕ್ಲಾಕ್ ಓದಿದರು. ಇದನ್ನು ನೇರಪ್ರಸಾರ ಮಾಡಲಾಯಿತು. ಆರೋಪಿ ಪೊಲೀಸ್‌ ಅಧಿಕಾರಿ ನಿರಪರಾಧಿ ಎಂದು ಪ್ರಕಟಿಸುತ್ತಿದ್ದಂತೆಯೇ ಮೃತ ಯುವಕನ  ಸಾವಿರಾರು ಬೆಂಬಲಿಗರು ಉದ್ರಿಕ್ತ­ಗೊಂಡು ರಸ್ತೆಗಳಿಗೆ ಇಳಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಜನಾಂಗೀಯ ಗಲಭೆಗೆ ತಿರುಗುವ ಸಾಧ್ಯತೆ ಇರುವುದರಿಂದ ನ್ಯೂಯಾರ್ಕ್‌, ಫರ್ಗ್ಯುಸನ್‌, ಕ್ಯಾಲಿಫೋರ್ನಿಯಾ ಸೇರಿದಂತೆ ಪ್ರಮುಖ ಪ್ರದೇಶ­ಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ಆರೋಪಿಯಾಗಿದ್ದ ಪೊಲೀಸ್‌ ಅಧಿಕಾರಿ ಡರೆನ್‌ ವಿಲ್ಸನ್‌ ಕಾರ್ಯನಿರ್ವಹಿಸುವ ಫರ್ಗ್ಯುಸನ್‌ನ ಠಾಣೆ ಎದುರು ಜಮಾಯಿಸಿದ ಜನರು ‘ಕೊಲೆಗಡುಕ ಪೊಲೀಸನನ್ನು ಬಿಟ್ಟುಬಿಟ್ಟರು’ ಎಂದು ಕೂಗಿದರು.

ರೊಚ್ಚಿಗೆದ್ದ ಕೆಲವರು ಪೊಲೀಸ್‌ ವಾಹನಗಳನ್ನು ಧ್ವಂಸಗೊಳಿಸಿ, ಅಂಗಡಿಗಳನ್ನು ದೋಚಿದರು. ಉಳಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆ ಶಾಂತಿ­ಯುತವಾಗಿತ್ತು.

ಏನಿದು  ಫರ್ಗ್ಯುಸನ್‌  ಪ್ರಕರಣ?

ಕಳೆದ ಆಗಸ್ಟ್‌ನಲ್ಲಿ ಮಸ್ಸೋರಿ ಪ್ರಾಂತ್ಯದಲ್ಲಿನ ಫರ್ಗ್ಯುಸನ್‌ ನಗರದ ರಸ್ತೆ ಬದಿಯಲ್ಲಿ ನಿಂತಿದ್ದ 18 ವರ್ಷದ ಕಪ್ಪು ವರ್ಣದ ನಿರಾಯುಧನಾಗಿದ್ದ ಮೈಕಲ್‌ ಬ್ರೌನ್‌ ಮೇಲೆ ಬಿಳಿ ವರ್ಣದ  ಪೊಲೀಸ್‌ ಅಧಿಕಾರಿ ಡರೆನ್‌ ವಿಲ್ಸನ್‌ ಆರು ಗುಂಡು ಹಾರಿಸಿ ಕೊಂದಿದ್ದರು.

ಈ ಘಟನೆ ಅಮೆರಿಕದಲ್ಲಿರುವ ಕಪ್ಪು ಜನಾಂಗೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವೆಡೆ ಹಿಂಸಾಕೃತ್ಯಗಳೂ ನಡೆದಿದ್ದವು. ಕಪ್ಪು ವರ್ಣೀಯರ ವಿರುದ್ಧದ ಬಿಳಿ ವರ್ಣದ ಪೊಲೀಸರ ವರ್ತನೆ, ಜನಾಂಗೀಯ ಭೇದದ ಕುರಿತು ರಾಷ್ಟ್ರವ್ಯಾಪಿ ಚರ್ಚೆಗಳಾಗಿದ್ದವು.

‘ಆತ್ಮರಕ್ಷಣೆಗಾಗಿ ಗುಂಡು’: ದರೋಡೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಬ್ರೌನ್‌ ಮತ್ತು ವಿಲ್ಸನ್‌ ನಡುವೆ ಜಗಳ ಉಂಟಾಯಿತು. ಕಾರಿನೊಳ­ಗಿದ್ದ ವಿಲ್ಸನ್‌ ಕಿಟಕಿ ಬಳಿ ನಿಂತಿದ್ದ ಬ್ರೌನ್‌ ಮೇಲೆ ಗುಂಡು ಹಾರಿಸಿದರು. ಅಲ್ಲಿಂದ ಓಡಿದ ಬ್ರೌನ್‌ನನ್ನು ವಿಲ್ಸನ್‌ ಬೆನ್ನಟ್ಟಿ, ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ನುಡಿದರು. ವಿಲ್ಸನ್‌ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲದ ಕಾರಣ ಈ ಪ್ರಕರಣ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಸೋಮವಾರ ರಾತ್ರಿ ಶ್ವೇತ ಭವನದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ‘ಕೈ ಮೇಲೆತ್ತಿ, ಗುಂಡಿಕ್ಕಬೇಡಿ’, ‘ಜನಾಂಗೀಯ ಪೊಲೀಸ್‌ ಭಯೋತ್ಪಾದನೆ ನಿಲ್ಲಿಸಿ’, ‘ಮೈಕ್‌ ಬ್ರೌನ್‌ಗೆ ನ್ಯಾಯ ದೊರಕಿಸಿ’ ಮುಂತಾದ ಘೋಷಣೆಗಳನ್ನು ಕೂಗಿದರು.

ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಮತ್ತು ಯೂನಿಯನ್ ಸ್ಕ್ವೇರ್‌ಗಳಲ್ಲಿ ‘ಪೊಲೀಸರ ನಿರಂಕುಶಾಧಿ­ಕಾರಕ್ಕೆ ಧಿಕ್ಕಾರ’ ಎಂಬ ಬರಹವುಳ್ಳ ಬ್ಯಾನರ್‌ಗಳನ್ನು ಹಿಡಿದ ಪ್ರತಿಭಟನಾಕಾರರು ‘ನ್ಯಾಯವಿಲ್ಲ, ಶಾಂತಿಯೂ ಇಲ್ಲ’ ಎಂಬ ಘೋಷಣೆ­ಗಳನ್ನು ಕೂಗಿದರು. ಪ್ರತಿಭಟನಾ­ಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಕೆಲವೆಡೆ ಅಶ್ರುವಾಯು ಷೆಲ್‌ಗಳನ್ನು ಪ್ರಯೋಗಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ನ್ಯೂಯಾರ್ಕ್‌ ನಗರ ಪೊಲೀಸ್‌ ಮುಖ್ಯಸ್ಥ ಬಿಲ್‌ ಬ್ರಾಟನ್‌ ಅವರ ಮುಖಕ್ಕೆ ಕೆಲವರು ಕೆಂಪು ದ್ರಾವಣವೊಂದನ್ನು ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಬಾಸ್ಟನ್‌, ಷಿಕಾಗೊ, ಲಾಸ್‌ ಏಂಜಲಿಸ್‌ಗಳಲ್ಲಿ ಸಹ ಪ್ರತಿಭಟನೆಗಳು ನಡೆದವು. ಕಪ್ಪುವರ್ಣೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ಹೆದ್ದಾರಿ ತಡೆ ನಡೆಯಿತು. ತೀರ್ಪು ಹೊರಬೀಳುತ್ತಿದ್ದಂತೆಯೇ ಬ್ರೌನ್‌ನ ಕುಟುಂಬದ ಸದಸ್ಯರ ಕಣ್ಣೀರು ಉಕ್ಕಿಹರಿಯಿತು.

‘ನಮ್ಮ ಮಗನನ್ನು ಕೊಂದಾತನಿಗೆ  ಶಿಕ್ಷೆ ಆಗದೆ ಇರುವುದು ತೀವ್ರ ನಿರಾಶೆ ಉಂಟುಮಾಡಿದೆ’ ಎಂದು ಕುಟುಂಬದವರು ದುಃಖ ವ್ಯಕ್ತಪಡಿಸಿದರು. ಬಿಳಿಯ ವರ್ಣದ 9 ಮತ್ತು 3 ಕಪ್ಪು ವರ್ಣದ ನ್ಯಾಯಾಧೀಶರು 25 ದಿನಗಳಲ್ಲಿ ಸುಮಾರು 60 ಸಾಕ್ಷ್ಯಗಳನ್ನು 70 ಗಂಟೆಗೂ ಹೆಚ್ಚುಕಾಲ ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT