ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಸಹಕಾರ ಕೋರಿದ ಪೊಲೀಸರು

ಮಕ್ಕಳ ಸಾಗಣೆ ಜಾಲದ ಮೂಲ ಪತ್ತೆಗೆ ಕ್ರಮ
Last Updated 9 ಫೆಬ್ರುವರಿ 2016, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಕ್ಕೆ ಮಕ್ಕಳ ಸಾಗಣೆ’ ಮಾಡಿದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೂರ್ವ ವಿಭಾಗದ ಪೊಲೀಸರು, ಜಾಲದ ಮೂಲವನ್ನು ಹುಡುಕಲು ಅಮೆರಿಕದ ನೆರವು ಕೋರಲು ಮುಂದಾಗಿದ್ದಾರೆ.

‘ಈಗ ಬಂಧಿತರಾಗಿರುವ ಆರೋಪಿಗಳು ಜಾಲದ ಏಜೆಂಟ್‌ಗಳಷ್ಟೆ. ಇಡೀ ದಂಧೆ ಅಮೆರಿಕದಲ್ಲಿರುವ ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಅವರ ಸೂಚನೆಯಂತೆಯೇ ಏಜೆಂಟ್‌ಗಳು ಮಕ್ಕಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು. ಹೀಗಾಗಿ ತನಿಖೆಗೆ ಅಮೆರಿಕದ ಸಹಕಾರ ಬಹಳ ಮುಖ್ಯ. ಈ ಸಂಬಂಧ ಅಮೆರಿಕ ರಾಯಭಾರಿ ಕಚೇರಿಗೆ ಸಮಗ್ರ ವರದಿ ಸಲ್ಲಿಸಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಗುಜರಾತ್‌ನಿಂದ ಹೆಚ್ಚು ಮಕ್ಕಳನ್ನು ಅಮೆರಿಕಕ್ಕೆ ಸಾಗಣೆ ಮಾಡಲಾಗಿದೆ. ಇದನ್ನು ಗಮನಿಸಿದರೆ, ಅಲ್ಲಿ ನೆಲೆಸಿರುವ ಗುಜರಾತ್‌ ರಾಜ್ಯದವರೂ ಈ ಜಾಲದ  ಜತೆ ಸಂಪರ್ಕದಲ್ಲಿರುವುದು ಸ್ಪಷ್ಟವಾಗುತ್ತದೆ. ಆದರೆ, ಬೆಂಗಳೂರು ಸೇರಿದಂತೆ  ನಮ್ಮ ರಾಜ್ಯದ ಯಾವುದೇ ಭಾಗದಿಂದ ಮಕ್ಕಳು ಈ ಜಾಲದಿಂದ ವಿದೇಶಕ್ಕೆ ಸಾಗಣೆಯಾಗಿಲ್ಲ. ಆದರೆ, ಮಕ್ಕಳನ್ನು ಕರೆದೊಯ್ಯಲು ಅಗತ್ಯ ದಾಖಲೆಗಳನ್ನು ಸೃಷ್ಟಿಸುವ ಕೇಂದ್ರವಾಗಿ ಮಾತ್ರ ಬೆಂಗಳೂರು ಬಳಕೆಯಾಗಿದೆ.

‘ಬಂಧಿತರ ಪೈಕಿ ಗುಜರಾತ್‌ನ ಉದಯ ಪ್ರತಾಪ್ ಸಿಂಗ್ ಅಪರಾಧ ಹಿನ್ನೆಲೆಯುಳ್ಳವನು. ಈ ಹಿಂದೆ ಸಹ ಮಾನವ ಸಾಗಣೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದಾನೆ. ಸಿಂಗ್‌ನ ಪೂರ್ವಾಪರ ಕುರಿತು ಮಾಹಿತಿ ನೀಡುವಂತೆ ಗುಜರಾತ್ ಪೊಲೀಸರನ್ನು ಸಂಪರ್ಕಿಸಿ ಸಹಕಾರ ಕೋರಿದ್ದೇವೆ.

‘ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಿದ ನಂತರ ಅಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಸಿಂಗ್‌ನ ತಂಡಕ್ಕೆ ಗೊತ್ತಾಗುತ್ತಿರಲಿಲ್ಲ.  ಅಲ್ಲಿರುವ ತಂದೆ–ತಾಯಿ ಅಕ್ರಮವಾಗಿ ತಮ್ಮ ಮಕ್ಕಳನ್ನು ಕರೆಸಿಕೊಳ್ಳುವ ಅಗತ್ಯವೇನಿತ್ತು? ಒಂದು ವೇಳೆ ಅವರ ವೀಸಾ ಅವಧಿ ಮುಗಿದ ನಂತರವೂ ಅಲ್ಲಿ ವಾಸವಾಗಿದ್ದ ಕಾರಣಕ್ಕೆ ತಮ್ಮ ಮಕ್ಕಳನ್ನು ನಕಲಿ ಪೋಷಕರ ಮೂಲಕ ಕರೆಸಿಕೊಂಡಿರಬಹುದೇ? ಎಂಬ ಹಲವು ಅನುಮಾನಗಳು ಈವರೆಗಿನ ತನಿಖೆಯಿಂದ ವ್ಯಕ್ತವಾಗಿದೆ.

ಮಕ್ಕಳ ಕಳ್ಳ ಸಾಗಣೆ ಪ್ರಕರಣ ಸಂಬಂಧ ನಗರದ ವಿವಿಧೆಡೆ ಸೋಮವಾರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಮೂವರು ಮಹಿಳೆಯರು ಸೇರಿದಂತೆ 16 ಮಂದಿಯನ್ನು ಬಂಧಿಸಿದ್ದರು.

ಗುಪ್ತಚರ ಮಾಹಿತಿ
‘ಅಮೆರಿಕಕ್ಕೆ ಮಕ್ಕಳ ಸಾಗಣೆ ಆಗುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ (ಐಬಿ) ಮಾಹಿತಿ ಸಿಕ್ಕಿತ್ತು. ಐಬಿ ನೀಡಿದ ಸುಳಿವಿನ ಮೇರೆಗೆ ಈ ಜಾಲದ ಮೇಲೆ ನಿಗಾ ವಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಕಮಿಷನ್ ಆಸೆಗೆ ಬಂಧಿತರು ಅಂತರರಾಷ್ಟ್ರೀಯ ಮಟ್ಟದ ಬೃಹತ್ ಜಾಲಕ್ಕೆ ಕೈಜೋಡಿಸಿರುವುದು ಖಚಿತವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT