ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಈಗಲೂ ಪ್ರಬಲ ದೇಶ: ಟ್ರಂಪ್‌ಗೆ ತಿರುಗೇಟು

ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಅರ್ಹತೆ ಹೊಂದಿರುವ ಹಿಲರಿ ನನಗಿಂತಲೂ ಉತ್ತಮರು: ಒಬಾಮ
Last Updated 28 ಜುಲೈ 2016, 19:50 IST
ಅಕ್ಷರ ಗಾತ್ರ

ಫಿಲಡೆಲ್ಫಿಯಾ(ಪಿಟಿಐ): ‘ಅಮೆರಿಕ ಈಗಾಗಲೇ ಮಹಾನ್‌ ರಾಷ್ಟ್ರವಾಗಿದ್ದು, ಹಿಂದೆಂದಿಗಿಂತಲೂ ಸುಭದ್ರವಾಗಿದೆ. ಈಗಲೂ ಪ್ರಬಲ ರಾಷ್ಟ್ರವಾಗಿಯೇ ಉಳಿದಿದೆ’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಪ್ರತಿಪಾದಿಸಿದರು.

ಡೆಮಾಕ್ರಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಅವರು, ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಟೀಕೆಗಳಿಗೆ ಪ್ರತ್ಯುತ್ತರ ನೀಡಿದರು.

‘ತನ್ನನ್ನು ತಾನೇ ಉದ್ಯಮಿ ಎಂದು ಕರೆದುಕೊಂಡಿರುವ ಟ್ರಂಪ್‌, ದೇಶದ ಕುರಿತು ಸರಿಯಾದ ಯೋಜನೆ ಹಾಗೂ ದೃಷ್ಟಿಕೋನ ಹೊಂದಿಲ್ಲ. ಅಲ್ಲದೇ ದೇಶದ ಸಮಸ್ಯೆಗಳ ಬಗ್ಗೆ ಅರಿವಿಲ್ಲ’ ಎಂದು ದೂರಿದರು.

45 ನಿಮಿಷದ ತಮ್ಮ ಭಾಷಣದಲ್ಲಿ  ಆಕ್ರಮಣಕಾರಿ ದಾಟಿಯಲ್ಲಿ ಮಾತನಾಡಿದ ಒಬಾಮ, ‘ಉದ್ಯಮಿ ಟ್ರಂಪ್‌ ಅವರು ಬಿತ್ತುತ್ತಿರುವ ಭಯ ಹಾಗೂ ಸಿನಿಕತೆಯನ್ನು ತಿರಸ್ಕರಿಸುವ ಮೂಲಕ ಮತದಾರರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಯೋಜನೆಗಳಿಲ್ಲದ ಟ್ರಂಪ್‌ ಘೋಷಣೆ: ದಶಕಗಳಿಂದ ಅಕ್ರಮ ವಲಸಿಗರಿಂದ ಅಪರಾಧ ಕೃತ್ಯಗಳು  ನಡೆಯುತ್ತಿದ್ದು, ಇದಕ್ಕೆ ತಮ್ಮಿಂದ ಮಾತ್ರ ಪರಿಹಾರ ಸಾಧ್ಯ ಎಂಬ ಟ್ರಂಪ್‌ ಹೇಳಿಕೆಗೆ  ತಿರುಗೇಟು ನೀಡಿದ ಒಬಾಮ,  ‘ಅಪರಾಧ ಪ್ರಕರಣಗಳ ಪ್ರಮಾಣ ಇಳಿಮುಖವಾಗಿರುವುದು ಟ್ರಂಪ್‌ಗೆ ತಿಳಿದಿಲ್ಲ.

ಕೇವಲ ಘೋಷಣೆಗಳ ಮೂಲಕ ಜನರಲ್ಲಿ ಭೀತಿಯುಂಟು ಮಾಡುತ್ತಿದ್ದಾರೆ. ಭಯ ಬಿತ್ತುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನುವ ಭಾವನೆ ಟ್ರಂಪ್‌ ಅವರಲ್ಲಿ ಮೂಡಿದೆ’ ಎಂದು ಒಬಾಮ ಆರೋಪಿಸಿದರು.

‘ಅತ್ಯಂತ ಪ್ರಬಲವಾದ ಸೇನಾಪಡೆಯನ್ನು ಹೊಂದಿರುವ ಅಮೆರಿಕವನ್ನು ಜಗತ್ತಿನ ಮುಂದೆ ದುರ್ಬಲವಾಗಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ.  ಪ್ರಜಾಪ್ರಭುತ್ವ ಎಂದರೆ ನಿರಂತವಾಗಿ  ಒಡೆದು ಆಳುವ ನೀತಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ಅಮೆರಿಕ ಪ್ರಬಲ: ‘ಅಮೆರಿಕ ಕೆಲ ವರ್ಷಗಳಿಂದ ಬದಲಾವಣೆ ಕಂಡಿದೆ. ಫ್ಯಾಸಿಸ್ಟ್‌, ಕಮ್ಯುನಿಸ್ಟ್‌, ಜಿಹಾದಿಗಳು ಹಾಗೂ ಪುಡಾರಿ ನಾಯಕರು ಅಮೆರಿಕದ ಮೇಲೆ  ಮಾಡಿದ ದಾಳಿ ಫಲಪ್ರದವಾಗಿಲ್ಲ ಎಂಬುದನ್ನು ನನ್ನ ಪೋಷಕರು ಕಲಿಸಿಕೊಟ್ಟಿದ್ದಾರೆ’ ಎಂದು ಟ್ರಂಪ್‌ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.

ತಮ್ಮನ್ನು ತಿಳಿವಳಿಕೆ ಇಲ್ಲದ ಅಧ್ಯಕ್ಷ ಎಂದು ಟ್ರಂಪ್‌ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಶಕ್ತಿ ಏನು ಎಂಬುದನ್ನು ಸ್ವಯಂ ಘೋಷಿತ ನಾಯಕರಿಂದ ಪ್ರಮಾಣ ಪತ್ರ ಪಡೆಯಬೇಕಿಲ್ಲ ಎಂದು ಹೇಳಿದರು.

ಹಿಲರಿ ಅರ್ಹ ಅಭ್ಯರ್ಥಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್‌ ಅವರು,  ಇದುವರೆಗಿನ ಅಮೆರಿಕ ಅಧ್ಯಕ್ಷರಿಗಿಂತ ಹೆಚ್ಚು ಅರ್ಹತೆ ಹೊಂದಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರೇ ಸೂಕ್ತ ಅಭ್ಯರ್ಥಿ ಎಂದು  ಪ್ರಶಂಸೆ ವ್ಯಕ್ತಪಡಿಸಿದರು.

‘ಬಿಲ್‌ಕ್ಲಿಂಟನ್‌ ಹಾಗೂ ನಾನೂ ಸೇರಿದಂತೆ  ಯಾರೂ ಹೊಂದಿರದ ಅರ್ಹತೆಯನ್ನು ಹಿಲರಿ ಅವರು ಹೊಂದಿದ್ದಾರೆ.  ಈಗಾಗಲೇ ದೇಶದ ಅತ್ಯುನ್ನತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಿಲರಿ, ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅಭಿಪ್ರಾಯಪಟ್ಟರು.

‘ಟ್ರಂಪ್ ಕಪಟಿ, ಮೋಸಗಾರ’: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಬ್ಬ ಮೋಸಗಾರ, ಸುಳ್ಳ ಹಾಗೂ ಕಪಟಿ ಎಂದು  ಡೆಮಾಕ್ರಟಿಕ್ ಪಕ್ಷದ ನಾಯಕರು ಆರೋಪಿಸಿದ್ದಾರೆ.  ಟ್ರಂಪ್ ಅವರ ಹೆಚ್ಚುಗಾರಿಕೆ ಎಂದರೆ ಅವರ ಬೂಟಾಟಿಕೆಯೊಂದೇ ಎಂದು ಅವರು ಟೀಕಿಸಿದ್ದಾರೆ.

ಟ್ರಂಪ್ ಕಮಾಂಡರ್ ಆಗಲಾರರು–ಪನೆಟ್ಟಾ:  ಹಿಲರಿ ಅವರ ನಾಪತ್ತೆಯಾಗಿರುವ ಇ–ಮೇಲ್ ಪತ್ತೆಹಚ್ಚಲು ರಷ್ಯಾಗೆ ಕುಮ್ಮಕ್ಕು ನೀಡುವ ಮೂಲಕ ವಿದೇಶಿ ಶಕ್ತಿಯೊಂದಕ್ಕೆ ಸೈಬರ್ ಗೂಢಚಾರ ನಡೆಸಲು  ಅವಕಾಶ ಮಾಡಿಕೊಟ್ಟ ವ್ಯಕ್ತಿ ಅಮೆರಿಕದ ಮುಖ್ಯಸ್ಥ ಹುದ್ದೆಗೆ ಏರಲಾರ ಎಂದು ಸಿಐಎ ಮಾಜಿ ಮುಖ್ಯಸ್ಥ ಲಿಯೋನ್ ಪೆನೆಟ್ಟಾ ಅವರು ಹೇಳಿದ್ದಾರೆ.

ಮುಖ್ಯಸ್ಥರಾದವರು ದೇಶವನ್ನು ಸೈಬರ್ ದಾಳಿಯಿಂದ ರಕ್ಷಿಸಬೇಕು. ಆದರೆ ಟ್ರಂಪ್ ಅವರ ನಡೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು  ಪೆನೆಟ್ಟಾ ಟೀಕಿಸಿದ್ದಾರೆ. 

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಕೀಯ ದಾಳ ಉರುಳಿಸುವ ಸಮಯ ಇದಲ್ಲ. ಅಸ್ಥಿರ ಜಗತ್ತಿನಲ್ಲಿ ಅಮೆರಿಕವು ಅಸ್ಥಿರ ನಾಯಕತ್ವಕ್ಕೆ ಅಧಿಕಾರ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ.

ಸ್ಫೂರ್ತಿಯ ಮಿಷೆಲ್‌
‘ದೇಶದ ಅಧ್ಯಕ್ಷನಾಗಿ ಎಂಟು ವರ್ಷಗಳ ಆಡಳಿತ ನಡೆಸಿದ ನನಗೆ ವಯಸ್ಸಾಗಿದೆ. ಆದರೆ ನನ್ನ ಬುದ್ಧಿವಂತ ಪತ್ನಿ ಮಿಷೆಲ್‌ ಅವರಿಗಲ್ಲ’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ತಮ್ಮ ಪತ್ನಿಯನ್ನು ಮನದುಂಬಿ ಶ್ಲಾಘಿಸಿದರು. ‘ಮಿಷೆಲ್‌ ದೇಶದ ಪ್ರಥಮ ಮಹಿಳೆಯಾಗಿ ಸ್ಫೂರ್ತಿ ತುಂಬುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಅಂದು ಪುಟಾಣಿಗಳಾಗಿದ್ದ ನನ್ನ ಎರಡು ಹೆಣ್ಣು ಮಕ್ಕಳಾದ ಮಲಿಯಾ ಹಾಗೂ ಸಶಾ ಇಂದು ನನ್ನ ಎದೆಯವರೆಗೆ ಬೆಳೆದು ನಿಂತಿದ್ದಾರೆ. ಅವರನ್ನು ನೋಡಿದರೆ ನನಗೆ ಹೆಮ್ಮೆ ಅನಿಸುತ್ತದೆ. ಉತ್ತಮ ಮಕ್ಕಳನ್ನು  ನೀಡುವ ಮೂಲಕ ಮಿಷೆಲ್‌ ನನ್ನನ್ನು ಒಬ್ಬ ಉತ್ತಮ ತಂದೆ ಹಾಗೂ ಉತ್ತಮ ಪ್ರಜೆಯನ್ನಾಗಿ ರೂಪಿಸಿದ್ದಾಳೆ’ ಎಂದು ಹೆಮ್ಮೆಪಟ್ಟರು.

ದೂರದೃಷ್ಟಿ ಇಲ್ಲದ ಡೆಮಾಕ್ರಟಿಕ್ ನಾಯಕರು: ಟ್ರಂಪ್‌ ಟೀಕೆ
ಫಿಲಡೆಲ್ಫಿಯಾ (ಪಿಟಿಐ):
‘ಬಡತನ, ಹತಾಶೆಯಲ್ಲಿ ಜೀವಿಸುತ್ತಿರುವ ಲಕ್ಷಾಂತರ ಮಂದಿಗೆ ಅಮೆರಿಕವು ಒಂದು ಮಹಾನ್ ದೇಶ ಎನ್ನುವ ಭಾವನೆ ಮೂಡಿಲ್ಲ’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

‘ಅಮೆರಿಕ ಈಗಾಗಲೇ ಮಹಾನ್ ದೇಶ. ನಮ್ಮ  ಭದ್ರತೆ, ಸಾಮರ್ಥ್ಯಗಳು ಯಾರೊಬ್ಬರ ಮೇಲೂ ಅವಲಂಬಿತವಾಗಿಲ್ಲ’ ಎಂದು ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಬರಾಕ್ ಒಬಾಮ ಅವರು ನೀಡಿದ್ದ ಹೇಳಿಕೆಗೆ ಟ್ರಂಪ್ ಟ್ವಿಟರ್‌ನಲ್ಲಿ  ತಿರುಗೇಟು ನೀಡಿದ್ದಾರೆ.  

‘ಅಮೆರಿಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಯಾವುದೇ ದೃಷ್ಟಿಕೋನವನ್ನು ಡೆಮಾಕ್ರಟಿಕ್ ಪಕ್ಷದ ನಾಯಕರು ಪ್ರಸ್ತಾಪಿಸಿಲ್ಲ’ ಎಂದು ಟ್ರಂಪ್ ಅವರ ಪ್ರಚಾರ ಸಮಿತಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಟೀಕಿಸಲಾಗಿದೆ.

*
ಪುಢಾರಿಗಳ ನಾಯಕನಂತಿರುವ ಟ್ರಂಪ್‌, ದೇಶದ ಜನತೆಯಲ್ಲಿ ಭಯ ಹಾಗೂ ಸಿನಿಕತೆಯನ್ನು ಸೃಷ್ಟಿಸುತ್ತಿದ್ದಾರೆ. ದೇಶದ ಜನತೆ ಭೀತಿ ಮತ್ತು ಸಿನಿಕತೆಯಿಂದ ಹೊರಬರಬೇಕು
-ಬರಾಕ್‌ ಒಬಾಮ, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT