ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನರಮನೆ ತೆರೆದ ಅಡುಗೆಮನೆ

Last Updated 15 ಜುಲೈ 2014, 19:30 IST
ಅಕ್ಷರ ಗಾತ್ರ

‘ಅ ಡುಗೆಮನೆಯೇ ಹೆಂಗಳೆಯರ ಜಗತ್ತು’  ಎನ್ನುವಂಥ ಕಾಲವೊಂದಿತ್ತು. ಇದೀಗ ಅಡುಗೆ ಮನೆಯಿಂದಲೇ ಇಡೀ ಜಗತ್ತಿಗೆ ಇಣುಕಬಹುದು! ಅಡುಗೆಮನೆಯೀಗ ಹಜಾರದ ನಂತರ ಬರುವ ಕತ್ತಲೆ ಕೋಣೆಯಾಗಿ ಉಳಿದಿಲ್ಲ. ವಿಶಾಲ ಹಜಾರದ ಒಂದು ಅಂಗವಾಗಿ ಬದಲಾಗಿದೆ.

‘ಓಪನ್‌ ಕಿಚನ್‌’ ಎಂಬ ಪರಿಕಲ್ಪನೆಯಿಂದಾಗಿ ನಾಲ್ಕು ಗೋಡೆಗಳ ನಡುವಣ ಅಡುಗೆ ಮನೆ, ಇದೀಗ ಗೋಡೆಗಳೇ ಇಲ್ಲದಂತೆ ಮನೆಯೊಳಗೆ ಒಂದಾಗಿ ಬೆರೆತಿದೆ. ಈ ಓಪನ್‌ ಕಿಚನ್‌ ಪರಿಕಲ್ಪನೆ ಜನಪ್ರಿಯವಾಗಿದ್ದು 1920ರ ನಂತರದಿಂದೀಚೆಗೆ. ಈ ತೆರೆದ ಅಡುಗೆಮನೆಯೂ ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಅಂಗವಾಗಿಯೇ  ಬೆಳೆಯಿತು. ‘ಕಲೊನಿಯಲ್‌’ ಮಾದರಿಯ ಮನೆಗಳನ್ನು ಹೊರತು ಪಡಿಸಿದರೆ ದೊಡ್ಡ ಮಹಲುಗಳಲ್ಲಿ ಅಡುಗೆಮನೆಯನ್ನು ಲಿವಿಂಗ್‌ನಿಂದ ಬೇರ್ಪಡಿಸದೇ ಇರಬೇಕು ಎನ್ನುವ ರೂಢಿ ಜನಪ್ರಿಯವಾಗತೊಡಗಿತು.

ಅಲ್ಲಿಗಾಗಲೇ ಅಡುಗೆ ಮಾಡುವುದು ಸಹ ಕೇವಲ ಕೆಲಸವಾಗಿ ಅಷ್ಟೇ ಅಲ್ಲ, ಕಲೆಯಾಗಿ ಬದಲಾಗಿತ್ತು. ಆತಿಥ್ಯವಹಿಸಿಕೊಂಡ ಮನೆಯ ಒಡತಿ, ಅತಿಥಿಗಳೊಂದಿಗೆ ಬೆರೆಯುತ್ತಲೇ ತನ್ನ ಪಾಕ ಪ್ರಾವೀಣ್ಯವನ್ನು ಮೆರೆಯುವ ಅವಕಾಶ ಈ ತೆರೆದ ಅಡುಗೆಮನೆ ನೀಡುತ್ತಿತ್ತು.
ಮನೆ, ಹಜಾರ ವಿಶಾಲವಾಗಿದ್ದರಷ್ಟೇ ಇದು ಚೆನ್ನ ಎಂಬುದು ಅವರ ನಂಬಿಕೆಯಾಗಿತ್ತು. ಇಲ್ಲದಿದ್ದರೆ ಒಗ್ಗರಣೆ ಘಾಟು, ಕರಿದ ಕಮರು, ಹೆಚ್ಚಿದ ತರಕಾರಿಯ ಕಸ ಇವೆಲ್ಲವೂ ಬಂದವರಿಗೆ ಅಡರುವ ಅಪಾಯವೂ ಇತ್ತಲ್ಲ. ಈ ಸಾಧ್ಯತೆಗಳಿಂದಾಗಿಯೇ ತೆರೆದ ಅಡುಗೆಮನೆ ಪ್ರಾಶಸ್ತ್ಯವನ್ನು ಕಳೆದುಕೊಂಡಿತು.

ಆದರೆ 1980ರಿಂದೀಚೆಗೆ ಕಟ್ಟಡ ಸಂಸ್ಕೃತಿಯು ಎತ್ತರೆತ್ತರ ಬೆಳೆಯುವಂತಾದಾಗ ಮತ್ತೆ ಜನಪ್ರಿಯತೆಯ ಹಾದಿ ಹಿಡಿಯಿತು.
ಈ ಸಲ ಅತಿಥಿಗಳಿಗಿಂತ ಟಿವಿ ಮೋಹ, ಮಕ್ಕಳೊಂದಿಗೆ ಬೆರೆಯಲೇಬೇಕಾದ ಅಗತ್ಯ, ಅಡುಗೆ ಮನೆಯೊಂದಿಗೆ ಇಡೀ ಮನೆಯ ನಿರ್ವಹಣೆ ಮಾಡಬೇಕಾದ ಸನ್ನಿವೇಶಗಳನ್ನೂ ಕಡೆಗಣಿಸುವಂತಿರಲಿಲ್ಲ. ಔದ್ಯೋಗಿಕ ಮಹಿಳೆಯು ಕುಟುಂಬದೊಂದಿಗೆ ಬೆರೆಯಲು ಅನುಕೂಲವಾಗುವಂತೆ ಈ ಅಡುಗೆಮನೆಗಳನ್ನು ವಿನ್ಯಾಸಗೊಳಿಸುವುದು ಆರಂಭವಾಯಿತು.

ಗೋಡೆಗಳಿಲ್ಲದ ಅಡುಗೆಮನೆಗೆ ಮಾಡುಗಳೆಲ್ಲಿ? ಸಾಮಗ್ರಿಗಳ ಸಂಗ್ರಹಣೆ ಹೇಗೆ? ಆಗ ನಿಧಾನವಾಗಿ ಕಾಲಿಟ್ಟಿದ್ದು ಮಾಡ್ಯುಲರ್ ಕಿಚನ್‌.
ಅಡುಗೆ ಮನೆಯ ಸಕಲ ಸರಂಜಾಮುಗಳನ್ನು ತನ್ನ ಒಡಲೊಳಗೆ ಮುಚ್ಚಿಟ್ಟು, ಬಾಯ್ಬಿಡದ ಕಪಾಟುಗಳು ಗೋಡೆಗಂಟಿದವು.
ಒಗ್ಗರಣೆಯ ಘಾಟು, ಎಣ್ಣೆ ಕಮರು ಆಚೆ ಹೋಗಲೆಂದೇ ಚಿಮಣಿಗಳು ಮತ್ತೆ ಬಳಕೆಗೆ ಬಂದವು. ಇದೀಗ ಮಾಡ್ಯುಲರ್‌ ಕಿಚನ್‌, ರೆಡಿ ಕಿಚನ್‌, ಫ್ರೆಂಚ್‌ ಕಿಚನ್‌ ಎಲ್ಲವೂ ಮನೆಯೊಡತಿಯನ್ನು ಸೆಳೆಯುತ್ತಿವೆ. ಜಾಗ ಉಳಿಯುವುದಾದರೆ ಎಂಬ ಚೌಕಾಶಿಗೆ ಇಳಿದಲ್ಲಿ ಈ ಸಾಧ್ಯತೆಯೇ ಅನಿವಾರ್ಯವಾಗುವ ಅವಕಾಶಗಳೂ ಇಲ್ಲದಿಲ್ಲ.

ನೋವಾ ಇಂಟೀರಿಯರ್ಸ್‌ನ ಪ್ರಿಯದರ್ಶನ್‌ ಪ್ರಕಾರ, ಗೋಡೆಗಂಟುವ ಕಪಾಟುಗಳು, ಹೆಚ್ಚು ಜಾಗವನ್ನು ಉಳಿಸುತ್ತವೆ. ಆಧುನಿಕ ನೋಟವನ್ನು ನೀಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಮನೋಸ್ಥಿತಿಯನ್ನೂ ಬಿಂಬಿಸುತ್ತವೆ. ಗೋಡೆ ಕಟ್ಟುವಲ್ಲಿ ಉಳಿಸಿದ ಹಣವನ್ನೇ ಇಲ್ಲಿ ಬಂಡವಾಳ ಹೂಡಿದರಾಯಿತು. ಒಂದೆರಡು ದಶಕಗಳವರೆಗೂ ಆರಾಮವಾಗಿರಬಹುದು.

ಆಗಾಗ ಸ್ವಚ್ಛಗೊಳಿಸುತ್ತಿದ್ದರೆ, ನೋಡಿಕೊಳ್ಳುತ್ತಿದ್ದರೆ ಶಾಶ್ವತವಾಗಿಯೇ ಈ ಕಪಾಟುಗಳನ್ನು ಉಳಿಸಿಕೊಳ್ಳಬಹುದು. ಆದರೆ ಅಳವಡಿಸುವ ಮುನ್ನವೇ ಯಾವ ಬಗೆಯ ಕಟ್ಟಿಗೆಯನ್ನು ಬಳಸಬೇಕು ಎನ್ನುವುದರ ಬಗ್ಗೆ ಎಚ್ಚರದ ತೀರ್ಮಾನ ತೆಗೆದುಕೊಳ್ಳಬೇಕು. ಮೇಲಿಂದ ಮೇಲೆ ಒಳಾಲಂಕಾರ ಬದಲಾವಣೆ ಮಾಡಲು ಇಷ್ಟ ಪಡುವವರು ಅದನ್ನು ಮೊದಲೇ ಇಂಟೀರಿಯರ್ಸ್‌ಗೆ ಹೇಳುವುದು ಒಳಿತು. ಬದಲಾವಣೆಗೆ ಹೊಂದುವಂತೆ, ಜೋಡಣೆಗಳನ್ನು ಮಾಡಲಾಗುತ್ತದೆ ಎನ್ನುತ್ತಾರೆ ಅವರು.

ಪ್ರೇರಣಾ ಅಕಾಡೆಮಿಯ ಆಪ್ತ ಸಮಾಲೋಚಕಿ ಉಷಾ ಮೀರಾ, ಓಪನ್‌ ಕಿಚನ್‌ ಪರಿಕಲ್ಪನೆಯಿಂದ ಹೆಣ್ಮಕ್ಕಳು ಕುಟುಂಬದೊಂದಿಗೆ ಬೆರೆಯಲು ಹೆಚ್ಚು ಅನುಕೂಲವಾಗುತ್ತದೆ. ಅಡುಗೆ ಮನೆ ಮಹಿಳೆಯರ ಜವಾಬ್ದಾರಿ ಎನ್ನುವ ಮನೋಭಾವವನ್ನೂ ಬದಲಿಸುತ್ತದೆ. ಮಹಿಳೆಯರ ಕೆಲಸದಲ್ಲಿ ಭಾಗಿಯಾಗಲು ತೆರೆದ ಬಾಗಿಲಿನ ಸ್ವಾಗತ ನೀಡುತ್ತವೆ ಓಪನ್‌ ಕಿಚನ್‌ಗಳು. ಎಲ್ಲರ ಸಹಭಾಗಿತ್ವ ಮನೆ ಸದಸ್ಯರಲ್ಲಿ ಸೌಹಾರ್ದವನ್ನು ಮೂಡಿಸುತ್ತದೆ. ‘ಎಲ್ಲರಿಗೂ ಮಾಡಿ ಹಾಕುವುದಷ್ಟೇ ನನ್ನ ಕೆಲಸ’ ಎಂಬ ಅಸಮಾಧಾನದಿಂದ ಹೊರತರುತ್ತದೆ ಎನ್ನುತ್ತಾರೆ ಅವರು.

‘ಓಪನ್‌ ಕಿಚನ್‌’ನಿಂದಾಗಿ ಅಡುಗೆ ಮನೆ ಅಸ್ತವ್ಯಸ್ತವಾಗಿದ್ದರೆ ಬಂದವರಿಗೆ ಚಂದ ಕಾಣಿಸದು. ಎಲ್ಲರ ಮುಂದೆಯೇ ಅಡುಗೆ ಮಾಡುವುದು ಅಷ್ಟು ಹಿಡಿಸದು ಎನ್ನುವ ಮಹಿಳೆಯರೂ ತಮ್ಮ ಅಡುಗೆ ಮನೆಯನ್ನು ಹಜಾರದಿಂದ ಬೇರ್ಪಡಿಸಲು ಅರ್ಧ ಗೋಡೆಗಳನ್ನು ಮಾತ್ರ ನಿರ್ಮಿಸುತ್ತಿದ್ದಾರೆ. ಮೂರೂವರೆಯಿಂದ ನಾಲ್ಕಡಿ ಎತ್ತರದ ಈ ಗೋಡೆ, ಈ ಭಾಗದಲ್ಲಿ ಹಲವಾರು ಮಾಡುಗಳನ್ನು (ವಿಂಗಡಣೆ) ಹೊಂದಿದ್ದು, ಡೈನಿಂಗ್‌ಗೆ ಅಗತ್ಯವಿರುವ ಎಲ್ಲ ಸರಂಜಾಮುಗಳನ್ನು ಹೊಂದಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ.

ಸಣ್ಣ ಮೇಜಿನಂತೆ ಬರುವ ಅಡ್ಡಗೋಡೆ ವಿನ್ಯಾಸದ ದೃಷ್ಟಿಯಿಂದಲೂ ಹೊಸತನ್ನು ನೀಡಿದರೆ ಮೇಜಿನ ಮೇಲೆ ಪೇರಿಸಿಡದಂತೆ ಉಪ್ಪಿನಕಾಯಿ ಭರಣಿಗಳಿಗೆ ಸಮೀಪದಲ್ಲಿ ಜಾಗವನ್ನೂ ಹೊಂದಿಸಿ ಕೊಡುತ್ತವೆ. ಮನೆ ಕಟ್ಟಿಸುತ್ತಿದ್ದರೆ ಓಪನ್‌ ಕಿಚನ್‌ಗಳತ್ತ ಒಮ್ಮೆ ಕಣ್ಣು ಹಾಯಿಸಿ. ನಿಮ್ಮ ಅಗತ್ಯ ಹಾಗೂ ಸ್ಥಳಾವಕಾಶವನ್ನು ಗಮನದಲ್ಲಿರಿಸಿಕೊಂಡು ಯೋಜಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT