ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ಮಡಿಲು ಸೇರಿದ ಮಕ್ಕಳು

ಬಾಲ ಮಂದಿರದಲ್ಲಿ ಮನ ಕಲಕಿದ ಆ ಕ್ಷಣ...
Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲೆಗೆ ಹೋಗು ಎಂದು ಹೇಳಿದೆ. ಅಷ್ಟಕ್ಕೆ ಮನೆಬಿಟ್ಟು ಓಡಿ­ಹೋದ. ಆತನಿಗಾಗಿ  ಹುಡುಕದ ಸ್ಥಳವಿಲ್ಲ. ಹುಬ್ಬಳ್ಳಿ, ಮಂಗಳೂರು, ಮೈಸೂರು ಅಲ್ಲದೆ ಗೋವಾಕ್ಕೂ ಹೋಗಿ ಹುಡುಕಿದೆ. ಅದಕ್ಕಾಗಿ ₨ 30 ಸಾವಿರ ಖರ್ಚಾಯಿತು. ಆದರೆ, ಎಂಟು ತಿಂಗ­ಳಾ­ದರೂ ಸುಳಿವು ಸಿಗಲಿಲ್ಲ. ಪತ್ನಿ ನೀಲವ್ವ ಊಟ ಮಾಡುತ್ತಿರಲಿಲ್ಲ. ಸದಾ ಮಗ­ನದ್ದೇ ಕೊರಗು.

ದೇವರಿಗೆ ಹರಕೆ ಹೊತ್ತುಕೊಂಡೆವು. ಕೆಲ ದಿನಗಳ ಹಿಂದೆ ಒಳ್ಳೆಯ ಸುದ್ದಿಬಂತು. ಬೆಂಗಳೂರಿನ ಬಾಲ ಮಂದಿರದಲ್ಲಿರುವ ವಿಷಯ ಪೊಲೀಸರಿಂದ ಗೊತ್ತಾಯಿತು’ –ಹೀಗೆಂದು ಹೇಳುತ್ತಾ ಕಣ್ಣೀರಾ­ಗಿದ್ದು ಹಾವೇರಿ ಜಿಲ್ಲೆಯ ಹಾಲಪ್ಪ. ಪಕ್ಕದಲ್ಲಿದ್ದ ಪತ್ನಿ ನೀಲವ್ವ, 15ರ ಹರೆಯದ ಪುತ್ರನನ್ನು ಅಪ್ಪಿಕೊಂಡು ಬಿಕ್ಕಳಿಸುತ್ತಿದ್ದರು.

ನಗರ ರೈಲು ನಿಲ್ದಾಣದಲ್ಲಿ ಕುಳಿತಿದ್ದ ಶಿವರಾಜ್‌ ಎಂಬ ಬಾಲಕನನ್ನು ‘ಸಾಥಿ ಸ್ವಯಂ ಸೇವಾ ಸಂಸ್ಥೆ’ಯು ರಕ್ಷಿಸಿ
ಬಾಲ ಮಂದಿರಕ್ಕೆ ಸೇರಿಸಿತ್ತು. ಅದಕ್ಕೂ ಮುನ್ನ ಆತ ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ ಅಲೆದಾಡಿದ್ದ.
‘ನಾನು ಹಾಗೂ ಪತ್ನಿ, ಲಗ್ಗೆರೆಯ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಪುತ್ರ ರಘು ಕೆಟ್ಟ ಚಟಗಳನ್ನು ಅಂಟಿಸಿಕೊಂಡಿದ್ದ. ಕುಡಿತ, ಬೀಡಿ ಸೇದುವುದು, ಪೆಟ್ರೋಲ್‌ಅನ್ನು ಬಟ್ಟೆಗೆ ಹಾಕಿಕೊಂಡು ಮೂಸುವುದು ಮಾಡು­ತ್ತಿದ್ದ.

ಇಂಥ ಕೆಟ್ಟ ಕೆಲಸ ಮಾಡ­ಬೇಡ, ಶಾಲೆಗೆ ಹೋಗು ಎಂದು ಹೊಡೆ­ದಿದ್ದಕ್ಕೆ ಮನೆ ಬಿಟ್ಟು ಓಡಿ ಹೋದ. ತಿಂಗಳಾದರೂ ಮನೆಗೆ ಬರಲಿಲ್ಲ. ಆದರೆ, ಕೆಲ ದಿನಗಳ ಹಿಂದೆ ಆತ ಇರುವ ಸ್ಥಳವನ್ನು ಪೊಲೀಸರು ನಮಗೆ ತಿಳಿಸಿದರು’ –ಈ ರೀತಿ ಹೇಳುತ್ತಾ ಬಿಕ್ಕಳಿಸಿದ್ದು ಮಣಿ ಹಾಗೂ ಅಮುದಾ ದಂಪತಿ. ಇವರ 12 ವರ್ಷ ವಯಸ್ಸಿನ ಪುತ್ರ ರಘು ಕೂಡ ಪಕ್ಕದಲ್ಲೇ ಇದ್ದ. ಈತ ಮೂರು ಬಾರಿ ಮನೆಬಿಟ್ಟು ಓಡಿ ಹೋಗಿದ್ದಾನೆ.

‘ನನ್ನ ಪುತ್ರ 4 ಸಲ ಮನೆ ಬಿಟ್ಟು ಹೋಗಿದ್ದಾನೆ. ಏನು ಮಾಡುವುದೆಂದು ತೋಚುತ್ತಿಲ್ಲ. ಒಮ್ಮೆ ವಿಜಯವಾಡಕ್ಕೆ ಹೋಗಿದ್ದ. ಅಲ್ಲಿಂದ ಕರೆದುಕೊಂಡು ಬಂದ ಕೇವಲ ಮೂರೇ ತಿಂಗಳಲ್ಲಿ ಮತ್ತೆ ಮನೆ ಬಿಟ್ಟು ಓಡಿ ಹೋದ. ರೈಲ್ವೆ ನಿಲ್ದಾಣದಲ್ಲಿ ಇದ್ದ ಈತನನ್ನು ಬಾಲ ಮಂದಿ­ರಕ್ಕೆ ಸೇರಿಸಲಾಗಿದೆ ಎಂದು ಪೊಲೀ­ಸರು ನಮಗೆ ಕರೆ ಮಾಡಿ ಹೇಳಿದರು’ –ಹೀಗೆಂದು ನೋವಿನಿಂದ ತಮ್ಮ ದುಃಖ ಹೇಳಿಕೊಂಡಿದ್ದು ತುಮಕೂರು ಮೂಲದ ಸೈಯದ್‌ ಮುಬಾರಕ್‌. ಇವರ 14 ವರ್ಷದ ಪುತ್ರ ಸಲೀಮ್‌ ಅಕ್ಕಪಕ್ಕದ ಮನೆಯಲ್ಲಿ ಕಳ್ಳತನ ಮಾಡು­ತ್ತಿದ್ದ. ಈ ರೀತಿ ಮಾಡಬೇಡ ಎಂದು ತಂದೆ ಹೊಡೆದಿದ್ದರು. ಆದರೆ, ತಂದೆಯ ಕಿಸೆಯಿಂದ ₨ 2 ಸಾವಿರ ಕದ್ದು ಓಡಿ ಹೋಗಿದ್ದ.

ಸಾಥಿ ಸಂಸ್ಥೆಯ ಸಹಯೋಗದಲ್ಲಿ ನಗರದಲ್ಲಿರುವ ಬಾಲ ಮಂದಿರ ಆವರಣದಲ್ಲಿ ಮಂಗಳ­ವಾರ ಆಯೋಜಿಸಲಾಗಿದ್ದ ‘ಮರಳಿ ಗೂಡಿಗೆ’ ಕಾರ್ಯಕ್ರಮ ಮನಕಲಕು­ವಂತಿತ್ತು. ಒಬ್ಬೊಬ್ಬರದ್ದು ಒಂದೊಂದು ಕಥೆ. ಮನೆಬಿಟ್ಟು ಬಂದಿದ್ದ 24 ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಡಲಾಯಿತು.

ನಗರ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಈ ಮಕ್ಕಳನ್ನು ಸಾಥಿ ಸಂಸ್ಥೆಯು ರಕ್ಷಿಸಿತ್ತು. ಈ ಮಕ್ಕಳ ಮನಃ­ಪರಿವರ್ತನೆಗಾಗಿ ಒಂದು ತಿಂಗಳ ಶಿಬಿರ ಕೂಡ ಆಯೋಜಿಸಲಾಗಿತ್ತು. ಇವರಲ್ಲಿ ಕೆಲವರು ಐದು ಬಾರಿ ಮನೆಬಿಟ್ಟು ಓಡಿ ಹೋದವರಿದ್ದಾರೆ. ಕರ್ನಾಟಕವಲ್ಲದೇ, ಆಂಧ್ರಪ್ರದೇಶ, ಮಧ್ಯ­ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಿಂದ ಮನೆಬಿಟ್ಟು ಬಂದವರು ಇದ್ದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮ­ದಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್‌ ನಿಜಗುಣ ಮಾತನಾಡಿ, ‘ಮಕ್ಕಳಿಲ್ಲದ ಮನೆ ಊಹಿ­ಸಿಕೊಳ್ಳಲೂ ಸಾಧ್ಯವಿಲ್ಲ. ಕೆಟ್ಟ ಗಳಿಗೆ­ಯಲ್ಲಿ ಮಕ್ಕಳು ಮನೆಬಿಟ್ಟು ಓಡಿಹೋಗಿ­ರಬಹುದು. ಹೊರಗೆ ಬಂದು ದುಷ್ಟರ ಕೈಯಲ್ಲಿ ಸಿಕ್ಕಿದರೆ ಅನಾಹುತ ಉಂಟಾ­ಗಬಹುದು. ಆದರೆ, ಇಂಥ ಮಕ್ಕಳನ್ನು ರಕ್ಷಿಸುವಲ್ಲಿ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಪೋಷಕರು ಕೂಡ ತಮ್ಮ ಮಕ್ಕಳನ್ನು ಪ್ರೀತಿ, ಅಕ್ಕರೆಯಿಂದ ಬೆಳೆಸಬೇಕು. ಜೊತೆಗೆ ತಿಳಿವಳಿಕೆ ಮೂಡಿಸಬೇಕು’ ಎಂದರು.

ಸಮಗ್ರ ಮಕ್ಕಳ ರಕ್ಷಣಾ ಯೋಜನಾ ನಿರ್ದೇಶಕಿ ಶಶಿಕಲಾ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದಿವ್ಯಾ ನಾರಾಯಣಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನಿತಾ ಶಿವಕುಮಾರ್‌ ಹಾಗೂ ಸಾಥಿ ಉಪ ಕಾರ್ಯದರ್ಶಿ ಬಸವರಾಜ ಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT