ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ ಎಂದರೆ...

Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಸಾಂಸ್ಕೃತಿಕ ಚೌಕಟ್ಟಿನಲ್ಲಿ ತಾಯಿ ಇಂದಿಗೂ ತಾಯಿಯಾಗಿಯೇ ಇದ್ದಾಳೆ. ಆದರೆ ಭಾವನೆಗಳ ನೆಲೆಯಲ್ಲಿ ಎಲ್ಲೋ ಒಂದೆಡೆ ತಾಯಿ  ನೇಪಥ್ಯಕ್ಕೆ ಸರಿಯುತ್ತಿದ್ದಾಳೆ. ಅಮ್ಮಾ ಎಂಬ ಕರೆ ಇಂದಿಗೂ ತಾಯ ಹೃದಯವನ್ನು ಎಷ್ಟೇ ದೂರದಲ್ಲಿದ್ದರೂ ತಟ್ಟುತ್ತದೆ. ಆದರೆ ಕಂದಾ ಎಂಬ ಕರೆ ಆಧುನಿಕತೆಯ ಪ್ರಕ್ಷುಬ್ಧತೆಯಲ್ಲಿ ಮರೆಯಾಗುತ್ತದೆ.

ಅ ಅಮ್ಮಾ.. ಅಮ್ಮಾ... ನೀ ಅಮ್ಮಾ ಎಂದಾಗ ಏನೋ ಸಂತೋಷವೂ  ‘ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು ನಿನ್ನಾ ಸಂಗ ಆಡಲೆಂದು ಬಂದೇ ನಾನು’, ‘ಅಮ್ಮಾ ಎಂದರೆ ಏನೋ ಹರುಷವೂ ನಮ್ಮ ಪಾಲಿಗೆ ಅವಳೇ ದೈವವೂ’,  ‘ಅಮ್ಮಾ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆಬೇಕು’  ಇಂತಹ ಸುಮಧುರ ಗೀತೆಗಳು 1960 ರಿಂದ 90ರ ದಶಕದವರೆಗೂ ಗುನುಗುನಿಸುತ್ತಿದ್ದವು. ಇಂದಿಗೂ ಇಂತಹ ಹಾಡುಗಳು ನಮ್ಮ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತವೆ. ಹಿಂದಿ ಚಿತ್ರದ ಒಂದು ಸುಮಧುರ ಗೀತೆ ಹೀಗಿದೆ  ‘ಹೇ ಮಾ ತೆರೀ ಸೂರತ್ ಕಿ ಅಲಗ್ ಭಗವಾನ್ ಕಿ ಮೂರತ್ ಚಾಹೋಗಿ’  (ಬಡೀ ಮಾ ಚಿತ್ರದ್ದು) ಅಂದರೆ ಅಮ್ಮಾ ನಿನ್ನ ವದನಾರವಿಂದವನ್ನು ಹೊರತುಪಡಿಸಿದರೆ ಕೇವಲ ದೇವರನ್ನಷ್ಟೇ ಬಯಸುತ್ತೇವೆ ಎಂದರ್ಥ.

ಸಾಮಾನ್ಯವಾಗಿ ಭಾರತದ ಸಂದರ್ಭದಲ್ಲಿ ಹೇಳುವುದಾದರೆ ಚಲನ ಚಿತ್ರಗಳು ಸಾಮಾಜಿಕ ಮೌಲ್ಯಗಳ ಪ್ರತಿಬಿಂಬದಂತೆ ವ್ಯಕ್ತವಾಗುತ್ತಿದ್ದವು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು, ಜನಸಾಮಾನ್ಯರ ತಲ್ಲಣಗಳನ್ನು ಮತ್ತು ಸಾಮಾಜಿಕ ಮೌಲ್ಯಗಳನ್ನು ಕಥಾನಕಗಳ ಮೂಲಕ, ಹಾಡುಗಳ ಮೂಲಕ ಬಿತ್ತರಿಸುವ ಒಂದು ಪ್ರಯತ್ನವನ್ನು ಭಾರತದ ಚಿತ್ರರಂಗದಲ್ಲಿ ಕಾಣಬಹುದು. ಇಂದಿಗೂ ಈ ಪರಂಪರೆ ಜೀವಂತವಾಗಿದೆ. ಆದರೆ ಈ ಅಮ್ಮಾ ಎಂಬ ಮೌಲಿಕ ಪದ ಮರೆಯಾಗುತ್ತಿದೆ. ಪರದೆಯ ಮೇಲಿನ ಅಮ್ಮನ ಚಿತ್ರಣವೂ ಸಹ ಬದಲಾಗುತ್ತಿದೆ. ಇದೂ ಸಮಕಾಲೀನ ಭಾರತೀಯ ಸಮಾಜದ ಪ್ರತಿಬಿಂಬ ಎನ್ನಲು ಅಡ್ಡಿಯಿಲ್ಲ. ತಾಯಿ ಅಥವಾ ಅಮ್ಮ ಇದು ನಿಘಂಟಿನಲ್ಲಿರುವ ಪದ ಮಾತ್ರವಲ್ಲ. 

ಈ ಪದದ ಹಿಂದೆ ಒಂದು ಭಾವನೆಯಿದೆ, ಭಾವುಕತೆ ಇದೆ, ಮೌಲ್ಯ ಇದೆ, ಪರಂಪರೆ ಇದೆ, ಸಂಸ್ಕೃತಿ ಇದೆ. ಹಾಗೆಯೇ ಮಾನವೀಯ ನೆಲೆಯೂ ಇದೆ. ಸಲಹುವುದು, ಸುಖವಾಗಿ ಇರಿಸುವುದು ಇವೆಲ್ಲವೂ ಭೌತಿಕ  ಅಂಶಗಳು. ಆದರೆ ತಾಯಿ ಎಂಬ ಮೌಲ್ಯವನ್ನು ಸಂರಕ್ಷಿಸಲು ಬೇಕಿರುವುದು ಕರುಳ ಸಂಬಂಧದ ಸೂಕ್ಷ್ಮಗಳನ್ನು ಗ್ರಹಿಸುವ ಮನಸ್ಸು, ಹೊಕ್ಕಳ ಬಳ್ಳಿಯ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಹೃದಯ, ಮಾತೃ ಹೃದಯದ ಬಡಿತವನ್ನು ಗ್ರಹಿಸುವ ಪ್ರಜ್ಞೆ. ಬಹುಶಃ ಆಧುನಿಕ ಜಗತ್ತಿನಲ್ಲಿ, ಸಮಕಾಲೀನ ಭಾರತೀಯ ಸಮಾಜದಲ್ಲಿ ಈ ಪ್ರಜ್ಞೆ ಕ್ಷೀಣಿಸುತ್ತಿದೆ. ಸಾಮಾಜಿಕ ನೆಲೆಯಲ್ಲಿ ತಾಯಿಯ ಪಾತ್ರ ಬದಲಾಗಿಲ್ಲ. ಕೌಟುಂಬಿಕ ನೆಲೆಯಲ್ಲೂ ಬದಲಾಗಿಲ್ಲ. ಸಾಂಸ್ಕೃತಿಕ ಚೌಕಟ್ಟಿನಲ್ಲಿ ತಾಯಿ ಇಂದಿಗೂ ತಾಯಿಯಾಗಿಯೇ ಇದ್ದಾಳೆ.

ಆದರೆ ಭಾವನೆಗಳ ನೆಲೆಯಲ್ಲಿ ಎಲ್ಲೋ ಒಂದೆಡೆ  ತಾಯಿ  ನೇಪಥ್ಯಕ್ಕೆ ಸರಿಯುತ್ತಿದ್ದಾಳೆ.  ಅಮ್ಮಾ ಎಂಬ ಕರೆ ಇಂದಿಗೂ ತಾಯ ಹೃದಯವನ್ನು ಎಷ್ಟೇ ದೂರದಲ್ಲಿದ್ದರೂ ತಟ್ಟುತ್ತದೆ. ಆದರೆ ಕಂದಾ ಎಂಬ ಕರೆ ಆಧುನಿಕತೆಯ ಪ್ರಕ್ಷುಬ್ಧತೆಯಲ್ಲಿ ಮರೆಯಾಗುತ್ತದೆ. ಮಕ್ಕಳ ಬೇಕು ಬೇಡಗಳನ್ನು, ಆಯ್ಕೆ ಆದ್ಯತೆಗಳನ್ನು, ನೋವು ನಲಿವುಗಳನ್ನು ಅವರ ನಾಡಿ ಮಿಡಿತದಿಂದಲೇ ಗ್ರಹಿಸುವ ತಾಯ ಹೃದಯ ಸದಾ ಸಾಂತ್ವನಕ್ಕೆ ಸಿದ್ಧವಾಗಿರುತ್ತದೆ.  ಆದರೆ ತಂತ್ರಜ್ಞಾನವನ್ನೇ ತಮ್ಮ ಸಂವಹನ ಮಾಧ್ಯಮವನ್ನಾಗಿ ಪರಿಗಣಿಸುವ ಯುವ ಸಮಾಜಕ್ಕೆ ಭಾವನೆಗಳ ನೆಲೆಯಲ್ಲಿ ವ್ಯಕ್ತವಾಗುವ ಸಾಂತ್ವನ ಹೃದಯ ತಟ್ಟುತ್ತಿಲ್ಲ.

ತಮ್ಮ ಆದ್ಯತೆಗಳೇ ಪ್ರಧಾನ, ತಮ್ಮ ಆಯ್ಕೆಗಳೇ ಅಂತಿಮ ಎಂದು ಪರಿಗಣಿಸುವ ಯುವ ಸಮಾಜ ತಮ್ಮ ಹೆತ್ತೊಡಲಿಗೂ ಕೆಲವು ಆದ್ಯತೆಗಳಿರುತ್ತವೆ ಎಂಬ ವಾಸ್ತವವನ್ನೆ ಮರೆತಿರುತ್ತವೆ. ನಿದರ್ಶನ ರೂಪದಲ್ಲಿ ಹೇಳುವುದಾದರೆ 1970-80 ದಶಕದ ಮುನ್ನ ಮಕ್ಕಳು (ಯಾವುದೇ ವಯೋಮಿತಿ ಇರಲಿ) ಮನೆಗೆ ಬರುತ್ತಲೇ  ಅಮ್ಮಾ ಹಸಿವಾಗುತ್ತಿದೆ ತಿನ್ನಲು ಏನಾದರೂ ಕೊಡು  ಎಂದು ಕೇಳುತ್ತಿದ್ದರು. ಅಡುಗೆ ಮನೆಯಲ್ಲಿ ಏನಿದೆಯೋ ಇಲ್ಲವೋ ತಾಯಿಯಾದವಳು ಹಸಿವು ನೀಗಿಸುತ್ತಿದ್ದಳು.  1990ರ ದಶಕದ ನಂತರದ ಬೆಳವಣಿಗೆಗಳಲ್ಲಿ ಇಲ್ಲಿ ಕೊಂಚ ಮಾರ್ಪಾಟಾಯಿತು. ಮಕ್ಕಳು ತಮಗೆ ತಿನ್ನಲು ಇಂತಹುದೇ ಬೇಕು ಎಂದು ಪಟ್ಟು ಹಿಡಿಯುವುದು ಸಾಮಾನ್ಯವಾಯಿತು.

ಆಗಲೂ ತಾಯಿಯಾದವಳು ಧೃತಿಗೆಡಲಿಲ್ಲ. 21ನೆಯ ಶತಮಾನದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಮನೆಗೆ ಬಂದ ಮಕ್ಕಳು  ನನಗೆ ಬೇಡಮ್ಮ ನಾನು ಹೊರಗೆ ತಿಂದುಕೊಂಡು ಬಂದೆ  ಎಂದು ಮೊಬೈಲ್ ಮೇಲೆ ಕೈಯ್ಯಾಡಿಸುತ್ತಾ ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಮುಳುಗಿ ಹೋಗುತ್ತಾರೆ. ತಮ್ಮನ್ನು ಬಾಲ್ಯದಲ್ಲಿ ಸಲಹಿದ ಅಮ್ಮನ ಸೃಷ್ಟಿದತ್ತ ಲ್ಯಾಪ್‌ಟಾಪ್ (ತೊಡೆಗಳು) ಅನಾಥ ಪ್ರಜ್ಞೆಯಿಂದ ನರಳುತ್ತವೆ, ಮೌನವಾಗಿ. ಇಲ್ಲಿ ತಾಯಿ ತನಗೆ ತಾನೇ ಸಾಂತ್ವನದ ನುಡಿಗಳನ್ನಾಡಿಕೊಳ್ಳುತ್ತಾ ಮೌನವಾಗುತ್ತಾಳೆ. ಏಕೆ ಹೀಗೆ? ಆಧುನಿಕ ತಂತ್ರಜ್ಞಾನ ಸಮಾಜದ ಗತಿವಿಧಿಗಳನ್ನೇ ಬದಲಿಸಿದೆ. ಮಾನವ ಸಂಬಂಧಗಳನ್ನು ವಿದ್ಯುನ್ಮಾನ ತಂತ್ರಜ್ಞಾನದ ಸಾಧನಗಳಲ್ಲಿ ಅಡಗಿಸಿಟ್ಟಿವೆ.

ಈ ಗತಿವಿಧಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತು ಪ್ರಪಂಚದಲ್ಲಿ ಕಾಣಬಹುದು. ಜಾಹೀರಾತು ಒಂದರಲ್ಲಿ, ಹೊರದೇಶಕ್ಕೆ ಹೋಗುತ್ತಿರುವ ತನ್ನ ತಾಯಿಯನ್ನು ಸ್ವತಃ ಬೀಳ್ಕೊಡಲು ಇಚ್ಛಿಸದ ಮಗ ತನ್ನ ತಾಯಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಾನೆ, ತಂತ್ರಜ್ಞಾನದ ಮೂಲಕ. ಇಲ್ಲಿ ತಾಯಿ ತನ್ನ ಪುತ್ರನನ್ನು ಹೆಮ್ಮೆಯಿಂದ ನೆನೆಯುತ್ತಾಳೆ. ಆದರೆ ಈ ಸನ್ನಿವೇಶದಲ್ಲ ಮಾನವೀಯ ಸ್ಪರ್ಶ, ಮಾತೃ ಹೃದಯದ ಆಲಿಂಗನ ಮರೆಯಾಗುವುದನ್ನು ನಾವು ಗಮನಿಸುವುದೇ ಇಲ್ಲ. ತಂತ್ರಜ್ಞಾನ ಏನನ್ನು ಬೇಕಾದರೂ ಸಾಧಿಸುತ್ತದೆ. ಆದರೆ ಪ್ರೀತಿ ವಾತ್ಸಲ್ಯಗಳನ್ನು ಬೆಸೆಯುವ ಮಾನವೀಯ ಸ್ಪರ್ಶದ ಅನುಭವ ಒದಗಿಸುವುದಿಲ್ಲ.

ಇದು ನಮ್ಮ ಪ್ರಜ್ಞೆ ಕೆರಳಿಸುವುದೇ ಇಲ್ಲ. ಇನ್ನು ಕೆಲವು ಜಾಹೀರಾತುಗಳಲ್ಲಿ ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ಅಮ್ಮನ ಅವಶ್ಯಕತೆಯೇ ಇಲ್ಲ ಎನ್ನುವ ಸಂದೇಶವೂ ವ್ಯಕ್ತವಾಗುತ್ತದೆ. ಶಾಲೆಯಿಂದ ಬಸವಳಿದು ಬರುವ ಮಕ್ಕಳು ಅಡುಗೆ ಮನೆಯಲ್ಲಿ ನೂಡಲ್ಸ್ ಕಂಡ ಕೂಡಲೇ ಅಮ್ಮನ ಇರುವಿಕೆಯ ಅವಶ್ಯಕತೆಯೇ ಇಲ್ಲ ಎಂಬಂತೆ ಸಂದೇಶ ಸಾರಲಾಗುತ್ತದೆ. ತಮ್ಮ ಬಟ್ಟೆ ಒಗೆಯಲು ಅಮ್ಮ ಇಲ್ಲದಿದ್ದರೇನಂತೆ,  ಸೋಪಿನ ಪುಡಿ ಇದೆಯಲ್ಲಾ! ಅಮ್ಮ ಆಫೀಸಿನಿಂದ ತಡವಾಗಿ ಬಂದರೇನಂತೆ ಪಿಜ್ಜಾ ಮನೆ ಬಾಗಿಲಿಗೇ ಬರುತ್ತದೆಯಲ್ಲಾ! ಹೀಗೆ ತಾಯಿ ಎಂಬ ಅಮೂಲ್ಯ ಅಸ್ತಿತ್ವವನ್ನು ನಿರಾಕರಿಸಲು ಆಧುನಿಕ ತಂತ್ರಜ್ಞಾನ ಮತ್ತು ಕೈಗೆಟುಕುವ ಪದಾರ್ಥಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ಇದು ನೋಡಲು ರಂಜನೆ ಎನಿಸಬಹುದು ಆದರೆ ಭವಿಷ್ಯದ ಪೀಳಿಗೆಯ ಮೇಲೆ ಇದರ ಭೀಕರ ಪರಿಣಾಮವನ್ನು ನಿರ್ಲಕ್ಷಿಸಲಾಗುವುದಿಲ್ಲ. ಒಂದು ಕಾಲಘಟ್ಟದಲ್ಲಿ, ಅಂದರೆ ಮೂವತ್ತು ವರ್ಷಗಳ ಹಿಂದೆಯೂ ಭಾರತದ ಕೌಟುಂಬಿಕ ಮೌಲ್ಯಗಳು ಕೂಡಿ ಬಾಳುವ, ಒಂದೇ ಸೂರಿನಡಿ ಬಾಳು ಸವೆಸುವ ತಹತಹ ಇತ್ತು. ಮಕ್ಕಳಿಗೆ ವೈವಾಹಿಕ ಸಂಬಂಧ ಅರಸುವಾಗ ಅತಿ ದೂರದ ಸಂಬಂಧಗಳನ್ನು ನಿರಾಕರಿಸುವ ಪ್ರಕರಣಗಳು ಸಾಮಾನ್ಯವಾಗಿದ್ದವು. ತಮ್ಮ ಒಡಲ ಕುಡಿಗಳು ತಮ್ಮೊಡನೆಯೇ ಇರಬೇಕು ಅಥವಾ ಸಮೀಪದಲ್ಲೇ ಇರಬೇಕು ಎಂಬ ಆಶಯ, ಆಕಾಂಕ್ಷೆ ಮತ್ತು ವಾತ್ಸಲ್ಯ ಭರಿತ ವಾಂಛೆ ಪೋಷಕರಲ್ಲಿ ಕಾಣಬಹುದಿತ್ತು. ಆದರೆ ಕಾಲ ಬದಲಾದಂತೆಲ್ಲಾ ಸಾಮಾಜಿಕ ಮೌಲ್ಯಗಳೂ ಬದಲಾಗುತ್ತವೆ.

ಇದು ಸ್ವಾಭಾವಿಕ ಪ್ರಕ್ರಿಯೆಯಾದ್ದರಿಂದ ತಪ್ಪು ಒಪ್ಪುಗಳ ನಿಷ್ಕರ್ಷೆ ಬೇಕಿಲ್ಲ.ಆದರೆ ಈ ಬದಲಾದ ಮೌಲ್ಯಗಳ ಮೌಲ್ಯಮಾಪನ ಅಗತ್ಯ. ಇದು ಕೇವಲ ಉದ್ಯೋಗ, ಭವಿಷ್ಯದ ಹಾದಿ ಅಥವಾ ಐಷಾರಾಮಿ ಬದುಕಿನ ಹಪಾಹಪಿಯ ಸಂಕೇತವಾಗಿ ಕಾಣುವುದಿಲ್ಲ. ಬದಲಾಗಿ ನೆಮ್ಮದಿಯ ತಾಣಗಳನ್ನು ಅರಸುತ್ತಾ ಹೋಗುವ ಪ್ರಕ್ರಿಯೆಯಾಗಿ ಕಾಣುತ್ತದೆ. ಆಧುನಿಕ ತಂತ್ರಜ್ಞಾನ ಮಾನವ ಸಂಬಂಧಗಳನ್ನು ಸಂವಹನದ ನೆಲೆಯಲ್ಲಿ ಬೆಸೆಯುವುದರಿಂದ ಲೌಕಿಕ ಮತ್ತು ಭೌತಿಕ ಸಂಬಂಧಗಳು ನಗಣ್ಯವಾಗುತ್ತಿವೆ. ತಮ್ಮ ಮಕ್ಕಳು ಎಷ್ಟೇ ದೂರದಲ್ಲಿರಲಿ ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದು ಅಥವಾ ಸದಾ ಸಂಪರ್ಕದಲ್ಲಿರಬಹುದು ಎಂಬ ನಂಬಿಕೆ ಲೌಕಿಕ ಸಂಬಂಧ ಮತ್ತು ಸಾಮೀಪ್ಯದ ಬಯಕೆಗಳನ್ನು ಕಡೆಗಣಿಸುವಂತೆ ಮಾಡಿದೆ.

ತಾಯಿಯ ಮೌಲಿಕ ಅಭಿವ್ಯಕ್ತಿಗೂ ಇಲ್ಲಿ ಧಕ್ಕೆ ಉಂಟಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಒಡಲ ಕುಡಿಗಳ ಬಯಕೆಗಳನ್ನು ಹೃದಯಾಂತರಾಳದಿಂದ ಗ್ರಹಿಸುವ ಆಧುನಿಕ ತಾಯಂದಿರ ಹೃದಯದ ಬಡಿತ ಯುವ ಸಮಾಜದ ಗ್ರಹಿಕೆಗೆ ನಿಲುಕುತ್ತಲೇ ಇಲ್ಲ. ಇದು ಮಧ್ಯಮ ಮತ್ತು ಶ್ರೀಮಂತ ವರ್ಗಗಳಲ್ಲಿ ಸಾಮಾನ್ಯವಾಗಿ ಕಾಣುವ ವಿದ್ಯಮಾನ. ಆದರೂ ಕ್ರಮೇಣ ಗ್ರಾಮೀಣ ಪ್ರದೇಶಕ್ಕೂ ಹಬ್ಬುತ್ತಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಮ್ಮನ ಅಂತರಾಳದ ಆಯ್ಕೆ, ಆದ್ಯತೆ ಮತ್ತು ಬಯಕೆಗಳನ್ನು ಕೇವಲ ತಹತಹಿಕೆ ಎಂದು ಪರಿಗಣಿಸುವ ಯುವ ಪೀಳಿಗೆ ತಮ್ಮ ಆಯ್ಕೆ ಮತ್ತು ಆದ್ಯತೆಗಳ ಮೂಲಕ ತಾಯಿಯ ಆತ್ಮವನ್ನು ಬಂಧಿಸುವ ಪ್ರಯತ್ನದಲ್ಲಿದೆ.

ವೃದ್ಧಾಶ್ರಮಗಳಲ್ಲಿ ಸುಖ(?) ಜೀವನ ನಡೆಸುತ್ತಿರುವ ತಾಯಂದಿರು ಸಾಗರದಾಚೆ ಇರುವ ಮಕ್ಕಳ ಕರೆಗೆ ಸ್ಪಂದಿಸಲು ತಂತ್ರಜ್ಞಾನವೊಂದೇ ಮಾರ್ಗ. ವಿಪರ್ಯಾಸವೆಂದರೆ ತಮ್ಮ ಮಕ್ಕಳೊಂದಿಗೇ ಇರುವ ತಾಯಂದಿರಿಗೂ ತಂತ್ರಜ್ಞಾನವೇ ಮಾರ್ಗವಾಗಿರುವುದು. ಸೆಲ್ಫಿಗಳು ಭಾವಚಿತ್ರಗಳನ್ನು ಸೃಷ್ಟಿಸುತ್ತವೆ. ಆದರೆ ಒಡಲಾಳದ ಭಾವನೆಗಳನ್ನು ಸ್ಫುರಿಸುವುದಿಲ್ಲ. ಅಂತರಂಗದ ಆಶಯಗಳನ್ನು ಬೆಸೆಯುವುದಿಲ್ಲ. ಹೃದಯದ ಬಡಿತವನ್ನು ಆಲಿಸುವುದಿಲ್ಲ. ತಾಯಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಅಮೂರ್ತ ವಿದ್ಯಮಾನ ನಮ್ಮನ್ನು ಕಾಡಲೇಬೇಕು. ಕಾಡುತ್ತಿದೆ. ಕಾಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT