ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯಕ್ಕೆ ಬೆಂಕಿ: ಇಲಾಖೆಗಳ ವೈಫಲ್ಯ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೊಂಡುಕುರಿಗಳ ಅಭಯಾರಣ್ಯ ಎಂದೇ  ಹೆಸರು­ವಾಸಿ­ಯಾಗಿ­ರುವ ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯ­ಧಾಮಕ್ಕೆ ಕಳ್ಳಬೇಟೆ­ಗಾರರು ಬೆಂಕಿ ಹಾಕಿದ ಹಿನ್ನೆಲೆಯಲ್ಲಿ ವನ್ಯಮೃಗಗಳು ಜೀವಭೀತಿ­ಯಿಂದ ದಿಕ್ಕಾಪಾಲಾಗಿ ಓಡಿ  ಅರಣ್ಯದ ಸುತ್ತಲಿನ ಹಳ್ಳಿಗಳನ್ನು ಪ್ರವೇಶಿಸಿ  ಗ್ರಾಮಸ್ಥರ ಮೇಲೆ ದಾಳಿ ಮಾಡಿವೆ. ಅಳಿವಿನ ಅಂಚಿಗೆ ಸರಿದಿರುವ ಕೊಂಡು­ಕುರಿ­ಗಳನ್ನು  ಉಳಿಸುವ ಉದ್ದೇಶದ, ಏಷ್ಯಾಖಂಡದ ಪ್ರಥಮ  ಕೊಂಡುಕುರಿ ಅಭಯಾರಣ್ಯ­ದಲ್ಲಿ ಯುಗಾದಿ ಅಮಾವಾಸ್ಯೆಯಂದು ಸಾಂಪ್ರದಾಯಿಕ­ವಾಗಿ ನಡೆಯುವ ಬೇಟೆಯನ್ನು ತಡೆಯಲು ಯತ್ನಿಸಿದಾಗ ಬೇಟೆಗಾರರ ಗುಂಪು ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಾಹನಕ್ಕೆ ಹಾನಿ ಮಾಡಿ ಕಾಡಿಗೆ ಬೆಂಕಿ ಹಚ್ಚಿ ದಿನಗಳೇ ಕಳೆದಿವೆ. ಸುಮಾರು ಎಂಟು ಸಾವಿರ ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ದುಷ್ಕರ್ಮಿ­ಗಳನ್ನು ಬಂಧಿಸುವ ಗೋಜಿಗೆ ಹೋಗಿಲ್ಲ. ಕಾಡನ್ನು ಕಾಯುವ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಅಪರಾಧಕ್ಕೆ ಕಾರಣ­ರಾದ ಕಳ್ಳ­ಬೇಟೆಗಾರರು ಎಲ್ಲೂ ಓಡಿಹೋಗಿಲ್ಲ. ಕಾಡಿನ ಅಂಚಿನಲ್ಲಿಯೇ ಗುಂಪು ಕಟ್ಟಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯದಲ್ಲಿ ಬೇಟೆ­ಯಾಡು­ವುದು ಕಾನೂನಿನ ಪ್ರಕಾರ ಅಪರಾಧ. ಇದನ್ನು ತಡೆಯಲು ಹೋದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ. ಈ ಬಗ್ಗೆ ಪೊಲೀಸ್‌ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯನ್ನು ಎತ್ತಿ ಹೇಳುತ್ತದೆ. ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ನಡುವೆ ಸಮನ್ವಯ ಕೊರತೆ ಮೊದಲಿನಿಂದಲೂ ಇದೆ. ಈ ಕೊರತೆ ಈ ಪ್ರಕರಣದಲ್ಲಿಯೂ ದೊಡ್ಡದಾಗಿ ಕಾಣುತ್ತಿದೆ.

ಘಟನೆ ನಡೆದು ನಾಲ್ಕೈದು ದಿನಗಳೇ ಕಳೆದರೂ ತಮ್ಮ ಮೇಲಿನ ಹಲ್ಲೆ­ಯನ್ನು ಖಂಡಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೇ ಹೋಗಿಲ್ಲ. ಇದನ್ನು ಪ್ರತಿಭಟನೆ ಎನ್ನುವ ಬದಲು ಕರ್ತವ್ಯ ನಿರ್ಲಕ್ಷ್ಯ ಎಂದೇ ವ್ಯಾಖ್ಯಾನ ಮಾಡಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಚುನಾ­ವಣಾ ಕರ್ತವ್ಯಕ್ಕೆ ನೇಮಿಸಿದ ಹಿನ್ನೆಲೆಯಲ್ಲಿ ಅವರು ಬೆಂಕಿ ಬಿದ್ದ ಜಾಗಕ್ಕೆ ತೆರಳಿಲ್ಲ. ಜೊತೆಗೆ ಅವರನ್ನು ವರ್ಗ ಸಹ ಮಾಡಲಾಗಿದೆ.  ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಹಾಗೂ ಹುಲಿ ಅಭಯಾರಣ್ಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸ­ಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ೧೯೯೮ರಲ್ಲಿಯೇ ಆದೇಶ ಹೊರಡಿಸಿದೆ.

ಈ ಆದೇಶದ ವ್ಯಾಪ್ತಿಯನ್ನು ಸಂಪೂರ್ಣ ಅರಣ್ಯ ಇಲಾಖೆಗೆ ವಿಸ್ತರಿಸಬೇಕು. ಬೇಸಿಗೆಯಲ್ಲಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕು­ವುದು ಹೆಚ್ಚಾಗುತ್ತಿದೆ.  ಇಲ್ಲಿ ಬಿದ್ದ ಮಳೆಯಿಂದ ಸ್ವಾಭಾವಿಕವಾಗಿಯೇ ಕೆಲವು ಕಡೆ  ಈಗ ಬೆಂಕಿ ನಂದಿದೆ.  ಚುನಾವಣಾ ಕಾರ್ಯಕ್ಕೆ ನೇಮಿಸ­ಲಾಗಿ­ದ್ದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ      ಸಂರ­ಕ್ಷಣಾ­ಧಿ­ಕಾರಿ­ಗಳು ಕರ್ತವ್ಯ ಮರೆಯಬಾರದಿತ್ತು. ಅರಣ್ಯ ಸಂರಕ್ಷಣಾಧಿ­ಕಾರಿ ಸಹ ಕಾಡಿಗೆ ಹೋಗುವುದನ್ನು ಯಾವ ಕಾರಣಕ್ಕೆ ಮರೆತರು ಎನ್ನುವ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಕಾಡು ನಾಶ ಹೆಚ್ಚುತ್ತಿರುವಾಗ ಇಂತಹ ಘಟನೆಗಳಿಗೆ ಕಾರಣವಾದ ದುರುಳರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT