ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯಕ್ಕೆ ಕಾಲಿಟ್ಟ ಯದುವೀರ–ತ್ರಿಷಿಕಾ

Last Updated 27 ಜೂನ್ 2016, 22:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿದ ವಿವಾಹ ಮಹೋತ್ಸವದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ರಾಜಮನೆತನದ ತ್ರಿಷಿಕಾ ಕುಮಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸೋಮವಾರ ಬೆಳಿಗ್ಗೆ ನಡೆದ ಮುಹೂರ್ತದ ಧಾರ್ಮಿಕ ವಿಧಿವಿಧಾನ, ಸಂಜೆ ಜರುಗಿದ ಉಯ್ಯಾಲೆ ಹೂವಿನಾಟ ಹಾಗೂ ಅರಮನೆ ವಿದ್ಯುದೀಪಗಳ ಅಲಂಕಾರದಲ್ಲಿ ನವದಂಪತಿ ಕಂಗೊಳಿಸಿದರು. ಮೂರು ದಶಕಗಳ ಬಳಿಕ ರಾಜವಂಶಸ್ಥರ ಮನೆಯಲ್ಲಿ ಮದುವೆ ನಡೆದಿದ್ದು, ಅರಮನೆಯಲ್ಲಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಬೆಳಿಗ್ಗೆ 9.05ರಿಂದ 9.35ರೊಳಗೆ ಸಲ್ಲುವ ಕರ್ಕಾಟಕ ಲಗ್ನದ ಸಾವಿತ್ರ ಮುಹೂರ್ತದಲ್ಲಿ ವೇದ–ಮಂತ್ರ ಪಠಣಗಳೊಂದಿಗೆ ರಾಜಸ್ತಾನದ ಡುಂಗರಪುರ ರಾಜಮನೆತನದ ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀ ಕುಮಾರಿ ಅವರು ಕನ್ಯಾದಾನ ಮಾಡಿದರು. ಅರಮನೆಯ ಕಲ್ಯಾಣ ಮಂಟಪ ದಲ್ಲಿನ ವೇದಿಕೆಯನ್ನು ಮುಹೂರ್ತ ಕ್ಕಾಗಿ ಕಮಲದ ಹೂವು, ಸುಗಂಧರಾಜ, ಸೇವಂತಿಗೆ, ಮಲ್ಲಿಗೆಯಿಂದ ಶೃಂಗರಿಸಲಾಗಿತ್ತು. ವಧು–ವರರಿಗೆಂದು ಖಾಸ್‌ ಸೆಟ್‌ ಲವಾ ಜಮಾ ಹಾರ ಮಾಡಿ ಸಲಾಗಿತ್ತು.

ಅರಮನೆಗೆ ಮೆರುಗು ತಂದ ಕಲ್ಯಾಣೋತ್ಸವ
ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು 10.23ಕ್ಕೆ ಸರಿಯಾಗಿ ತ್ರಿಷಿಕಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿದರು. ಬಳಿಕ ಚಿನ್ನದ ಕಾಲುಂಗರ ತೊಡಿಸಿದರು. ಉಭಯ ಕುಟುಂಬದವರು ತಾಳಿಪೂಜೆ ಮಾಡಿ ನವಜೋಡಿಯನ್ನು ಅರಸಿದರು.

ಸುಮಾರು ಮೂರು ಗಂಟೆ ವಿವಾಹದ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಅರಮನೆಯ ಕಲ್ಯಾಣ ಮಂಟಪದ ಶ್ರೀಮಂತಿಕೆಯು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸಹೋದರಿ ಇಂದ್ರಾಕ್ಷಿ ದೇವಿ, ಪತಿ ರಾಜಾಚಂದ್ರ ಅವರು ಮುಹೂರ್ತ ಕಾರ್ಯ ನೆರವೇರಿಸಿಕೊಟ್ಟರು.

ಹಸಿರು ಅರಳಿನ ಸರ, ಚೆಂಗುಲಾಬಿ ಮಿಶ್ರಿತ ಕಾಂಜೀವರಂ ಹಸಿರು ಸೀರೆ ತೊಟ್ಟಿದ್ದ ಪ್ರಮೋದಾದೇವಿ ಅವರು ಶ್ರೀಕಂಠದತ್ತ ಅವರ ಭಾವಚಿತ್ರದ ಎದುರು ಕುಳಿತು ಮಾರ್ಗದರ್ಶನ ನೀಡಿದರು. ಪ್ರಮೋದಾದೇವಿ ತಾಯಿ ಪುಟ್ಟರತ್ನಮ್ಮಣ್ಣಿ, ಯದುವೀರ ಅವರ ಹೆತ್ತವರಾದ ತ್ರಿಪುರಸುಂದರಿದೇವಿ ಹಾಗೂ ಸ್ವರೂಪ್ ಆನಂದ ಗೋಪಾಲರಾಜೇಅರಸ್ ಇದ್ದರು.

ವಿದ್ವಾನ್‌ ಜನಾರ್ದನ ಅಯ್ಯಂಗಾರ್‌ ಹಾಗೂ ಕುಮಾರಸ್ವಾಮಿ ಸಾರಥ್ಯದಲ್ಲಿ ಸುಮಾರು 20 ಪುರೋಹಿತರು, ಜೋಯಿಸರು, ಅರ್ಚಕರು ವಿಧಿವಿಧಾನ ನಡೆಸಿಕೊಟ್ಟರು. ಮಧುಮಗ ಯದು ವೀರ ಅವರು ಗುಲಾಬಿ ಬಣ್ಣದ ‘ಅಂಗರಕ’ ಪೋಷಾಕು ಧರಿಸಿ ಕಂಗೊಳಿಸಿದರೆ, ತ್ರಿಷಿಕಾ ಕಿತ್ತಲೆ ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದರು.

ರಾಜವಂಶಸ್ಥರು, ಅರಸು ಮನೆತನದವರು ಜರ್ತಾರಿ ಉಡುಪು, ಪೇಟ ಧರಿಸಿದ್ದರು. ಯುವತಿಯರು ಮೊಬೈಲ್‌ನಲ್ಲಿ ನೂತನ ದಂಪತಿಯ ಫೊಟೊ ಕ್ಲಿಕ್ಕಿಸುತ್ತಾ, ಮಗದೊಮ್ಮೆ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸಿದರು. ಕಲ್ಯಾಣ ಮಂದಿರದ ಒಳಗೆ ಹಾಗೂ ಹೊರಗೆ ಸುಮಾರು ಸಾವಿರ ಮಂದಿ ಸೇರಿದ್ದರು. ಉಳಿದವರಿಗೆ ವಜ್ರಮುಷ್ಟಿ ಕಾಳಗ ನಡೆಯುವ ಸ್ಥಳದಲ್ಲಿ ಆಸನ ವ್ಯವಸ್ಥೆ ಮಾಡಿ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

4 ಗಂಟೆಗೆ ಎದ್ದ ಯದುವೀರ: ನಸುಕಿನ 4 ಗಂಟೆಗೆ ಎದ್ದ ಯದುವೀರ ಅವರು ವರಸ್ನಾನ ವಿಧಿವಿಧಾನ ಪೂರೈಸಿದರು. ಅವರು ಹೊರಬರುತ್ತಿದ್ದಂತೆ ಅರಮನೆ ಗೀತೆ ‘ಕಾಯೋ ಶ್ರೀಗೌರಿ’ ಅನುರಣಿಸಿತು. 6.30ಕ್ಕೆ ಕಾರಿನಲ್ಲಿ ಮದನ ವಿಲಾಸ ಬಾಗಿಲಿನಿಂದ ದಿಬ್ಬಣ ಹೊರಟಿತು. ಅರಮನೆಯ ಆನೆ ಬಾಗಿಲಿನಲ್ಲಿ ಭತ್ತ ಮತ್ತು ಅವರೆಕಾಳಿನಿಂದ ವರನನ್ನು ಸ್ವಾಗತಿಸಲಾಯಿತು.

ಸವಾರ್‌ ತೊಟ್ಟಿಯಲ್ಲಿ ವರನನ್ನು ಪೂರ್ವಾಭಿಮುಖವಾಗಿ ನಿಲ್ಲಿಸಿ ವಧುವಿನ ಕಡೆಯವರು ಆರತಿ ಬೆಳಗಿದರು. ದೇವರ ಮನೆಯಲ್ಲಿ ತ್ರಿಷಿಕಾ ಅವರು ಗೌರಿ ಪೂಜೆ ಸಲ್ಲಿಸಿದರು. 7.15ರ ಸುಮಾರಿಗೆ ಹಸೆಮಣೆಯಲ್ಲಿ ಆಸೀನರಾದ ಯದುವೀರ ವಿವಿಧ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಗಣಪತಿ ಪೂಜೆ, ಕನ್ಯಾಪ್ರತಿಗ್ರಹ ಜರುಗಿತು.

9.05ರ ಬಳಿಕ ವಧು–ವರರನ್ನು ಮುಖಾಮುಖಿಯಾಗಿ ನಿಲ್ಲಿಸಿ ‘ಕನ್ಯಾ ನಿರೀಕ್ಷಣೆ’ ಶಾಸ್ತ್ರ ನೆರವೇರಿಸಲಾಯಿತು. ಬಳಿಕ ಮಹಾಸಂಕಲ್ಪ, ಅಕ್ಷತಾರೋಪಣೆ, ಕಂಕಣ ಧಾರಣೆ ನಡೆಯಿತು. ಮಧ್ಯಾಹ್ನ 12ಕ್ಕೆ ಭೋಜನ ಶುರುವಾಯಿತು. ಸಂಜೆ 5.30ಕ್ಕೆ ಔಪಾಸನೆ ಜರುಗಿತು. ಮಂಗಳವಾರ ರಾತ್ರಿ ದರ್ಬಾರ್‌ ಸಭಾಂಗಣದಲ್ಲಿ ಆರತಕ್ಷತೆ, ಸಂಗೀತ ಕಾರ್ಯಕ್ರಮ, ಜೂನ್‌ 29ಕ್ಕೆ ನವದಂಪತಿಯ ಮೆರವಣಿಗೆ ನಡೆಯಲಿದೆ.

‘ಚಾಮುಂಡೇಶ್ವರಿದೇವಿ ನನಗೆ ಸ್ಫೂರ್ತಿ’
‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಿಧನರಾದಾಗ ಆಘಾತಕ್ಕೆ ಒಳಗಾಗಿದ್ದೆ. ಏನು ಮಾಡಬೇಕೆಂದು ತೋಚಿರಲಿಲ್ಲ. ಆದರೆ, ಚಾಮುಂಡೇಶ್ವರಿ ದೇವಿ ನನ್ನ ಕೈಹಿಡಿದು ಇಲ್ಲಿವರೆಗೆ ನಡೆಸಿಕೊಂಡು ಬಂದಿದ್ದಾಳೆ. ಸದಾ ಮಾರ್ಗದರ್ಶನ ನೀಡುತ್ತಿರುವ ದೇವಿಯೇ ನನಗೆ ಸ್ಫೂರ್ತಿ’

-ಹೀಗೆಂದು ಹೇಳಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ತಮ್ಮ ಕೈಯಲ್ಲಿದ್ದ ದೇವಿ ಚಿತ್ರ ತೋರಿಸಿದರು. ಇಡೀ ದಿನ ಅವರು ಚಿತ್ರ ಹಿಡಿದುಕೊಂಡೇ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದರು. ‘ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಖುಷಿ ಇದೆ. ಕುಟುಂಬದವರಿಂದಲೂ ಉತ್ತಮ ಬೆಂಬಲ ಲಭಿಸಿದೆ. ನಿರೀಕ್ಷೆಯಂತೆ ಎಲ್ಲಾ ಕಾರ್ಯಕ್ರಮಗಳು ಜರುಗುತ್ತಿವೆ’ ಎಂದರು.

ಉಯ್ಯಾಲೆಯಲ್ಲಿ ದಂಪತಿ ಹೂ ಚೆಂಡಿನಾಟ
ಮೈಸೂರು:
ನವದಂಪತಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರು ಹೂ ಚೆಂಡಿ ನಾಟವಾಡಿ ಗಣ್ಯರನ್ನು ರಂಜಿಸಿದರು.

ಸೋಮ ವಾರ ರಾತ್ರಿ ಅರಮನೆಯ ದರ್ಬಾರ್‌ ಸಭಾಂಗಣದಲ್ಲಿನ ಉಯ್ಯಾಲೆಯಲ್ಲಿ ಕುಳಿತ ಅವರು ಹೂವಿನಿಂದ ವಿನ್ಯಾಸಗೊಳಿಸಿದ್ದ ಚೆಂಡನ್ನು ಅತ್ತಿಂದಿತ್ತ ಉರುಳಾಡಿಸಿದರು. ಸಾವಿರಕ್ಕೂ ಅಧಿಕ ಗಣ್ಯರು ಹಾಗೂ ಕುಟುಂಬದವರು ಈ ಕ್ಷಣಕ್ಕೆ ಸಾಕ್ಷಿಯಾದರು. ವಯೋಲಿನ್‌ ವಾದಕರಾದ ಡಾ.ಮೈಸೂರು ಮಂಜುನಾಥ್‌, ಮೈಸೂರು ನಾಗರಾಜ್‌ ಸಹೋದ ರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಎರಡು ತಾಳಿ ಧಾರಣೆ
ಮೈಸೂರು:
ಒಡೆಯರ್‌ ಕುಟುಂಬದ ಸಂಪ್ರದಾಯದಂತೆ ಎರಡು ತಾಳಿ ಧಾರಣೆ ನಡೆಯುತ್ತದೆ. ಸೋಮ ವಾರ ನಡೆದ ಮುಹೂರ್ತದಲ್ಲಿ ಯದುವೀರ ಅವರು ತ್ರಿಷಿಕಾ ಅವರಿಗೆ ಚಿನ್ನದ ತಾಳಿ ಕಟ್ಟಿದರು.

‘ಇದು ಪೂರ್ಣವಾಗಿ ಚಿನ್ನದ ಸರ. ನಮ್ಮಲ್ಲಿ ದಾರ ಬಳಸುವುದಿಲ್ಲ. ಗಂಟು ಕೂಡ ಹಾಕುವುದಿಲ್ಲ. ವಧುವಿನ ಕೊರಳಿಗೆ ಚಿನ್ನದ ಸರ ಹಾಕಿ ಕೊಂಡಿ ಸಿಕ್ಕಿಸಲಾಗುತ್ತದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತ್ರಿಷಿಕಾ ಅವರಿಗೆ ಯದುವೀರ ಚಿನ್ನದ ಎರಡು ಕಾಲುಂಗುರ ತೊಡಿಸಿ ದರು. ಒಂದು ‘ಸುತ್ತು’, ಇನ್ನೊಂದು ‘ಮಿಂಚು’. ವಿವಾಹ ಮಹೋತ್ಸವದ ಕಡೆಯ ದಿನವಾದ ಬುಧವಾರ ಮತ್ತೊಮ್ಮೆ ತಾಳಿ ಧಾರಣೆ ನಡೆಯಲಿದೆ. ಅಂದು ಕರಿಮಣಿಯ ಮಾಂಗಲ್ಯ ಸರ ಕಟ್ಟಲಿದ್ದಾರೆ.

ನವ ಜೋಡಿಗೆ ಫಲಮಂತ್ರಾಕ್ಷತೆ
ಮೈಸೂರು:
ಮುಹೂರ್ತದ ಬಳಿಕ ಲಾಜ ಹೋಮ ನೆರವೇರಿಸಿದ ಯದುವೀರ, ತ್ರಿಷಿಕಾ ಅವರಿಗೆ ಅರ್ಚಕರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಅರಮನೆ ಆವರಣದಲ್ಲಿರುವ ದೇಗುಲಗಳು ಹಾಗೂ ಸುತ್ತಮುತ್ತಲಿನ ಪ್ರದೇಶದ ದೇವಸ್ಥಾನದ ಸುಮಾರು 30 ಅರ್ಚಕರು ವಿಶೇಷ ಪೂಜೆ ಮಾಡಿ ತಂದಿದ್ದ ಫಲಮಂತ್ರಕ್ಷತೆಯನ್ನು ನವ ಜೋಡಿಗೆ ನೀಡಿದರು.

ಸೇವಂತಿಗೆ, ಕಮಲದ ಘಮ
ಅರಮನೆಯ ಕಲ್ಯಾಣ ಮಂಟಪ ದಲ್ಲಿನ ವೇದಿಕೆಯನ್ನು ಮುಹೂರ್ತ ಕ್ಕಾಗಿ ಕಮಲದ ಹೂವು, ಸುಗಂಧರಾಜ, ಸೇವಂತಿಗೆ, ಮಲ್ಲಿಗೆಯಿಂದ ಶೃಂಗರಿಸಲಾಗಿತ್ತು.

‘ಈ ಮಂಟಪ ಸಿಂಗಾರ ಮಾಡಲು ಆರು ದಿನ ತೆಗೆದು ಕೊಂಡೆವು. ಸಾವಿರಕ್ಕೂ ಹೆಚ್ಚು ಕಮಲದ ಹೂವು ಬಳಸಲಾಗಿದೆ. ವಧು–ವರರಿಗೆಂದು ಖಾಸ್‌ ಸೆಟ್‌ ಲವಾ ಜಮಾ ಹಾರ ಮಾಡಿ ಸಲಾಗಿದೆ. ಹಾಗೆಯೇ, ಗಣ್ಯರಿಗೆ ಹಾಕಲು 150 ಹೂವಿನ ಹಾರ ತರಲಾಗಿದೆ’ ಎಂದು ಮಂಟಪ ಸಿದ್ಧಪ ಡಿಸಿದ ಬೆಂಗಳೂರು ಮೂಲದ ಧ್ರುವ ಕುಮಾರ್ ತಿಳಿಸಿದರು.

ಸಮರ್ಥವಾಗಿ ನಿಭಾಯಿಸಿದ್ದೇನೆ
‘ಮುಹೂರ್ತ ಕಾರ್ಯ ನೆರವೇರಿ ಸಲು ಲಭಿಸಿದ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಇದ್ದಿದ್ದರೆ ಸಮಾರಂಭದ ಸ್ವರೂಪವೇ ಬೇರೆ ರೀತಿ ಇರುತಿತ್ತು. ಅವರ ಸ್ಥಾನ ತುಂಬಲು ಯಾರಿಗೂ ಸಾಧ್ಯವಿಲ್ಲ’ ಎಂದು ರಾಜಾಚಂದ್ರ ತಿಳಿಸಿದರು.

ರಾಜಾಚಂದ್ರ ಅವರು ಶ್ರೀಕಂಠ ದತ್ತ ಸಹೋದರಿ ಇಂದ್ರಾಕ್ಷಿ ದೇವಿ ಪತಿ. ಈ ದಂಪತಿ ಮುಹೂರ್ತ ಕಾರ್ಯ ನಡೆಸಿಕೊಟ್ಟರು. ಯದುವೀರ ಅವರ ತಂದೆ ಸ್ವರೂಪ್ ಆನಂದ ಗೋಪಾಲರಾಜೇಅರಸ್ ಪ್ರತಿಕ್ರಿಯಿಸಿ, ‘ಪುತ್ರನ ಬಗ್ಗೆ ಹೆಮ್ಮೆ ಇದೆ. ನಿರೀಕ್ಷೆಯಂತೆ ವಿವಾಹ ಅದ್ದೂರಿಯಾಗಿ ನಡೆದಿದೆ. ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT