ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಆವರಣದಲ್ಲಿ ಮೆರವಣಿಗೆ

ತ್ರಿಷಿಕಾ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಇಂದು
Last Updated 28 ಜೂನ್ 2016, 22:30 IST
ಅಕ್ಷರ ಗಾತ್ರ

ಮೈಸೂರು: ನಗರದ ಅರಮನೆಯಲ್ಲಿ ಯದುವಂಶದ ನವಸೊಸೆ ತ್ರಿಷಿಕಾ ಕುಮಾರಿ ಅವರನ್ನು ಮನೆತುಂಬಿಸಿಕೊಳ್ಳುವ ಶಾಸ್ತ್ರ ಬುಧವಾರ ಮಧ್ಯಾಹ್ನ ನಡೆಯಲಿದೆ. ಪತಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಅತ್ತೆ ಪ್ರಮೋದಾದೇವಿ ಒಡೆಯರ್‌ ಹಾಗೂ ಕುಟುಂಬದವರ ಸಮ್ಮುಖದಲ್ಲಿ ತ್ರಿಷಿಕಾ ಮಧ್ಯಾಹ್ನ 2.45ಕ್ಕೆ ಮದನ ವಿಲಾಸ ಬಾಗಿಲು ಮೂಲಕ ಗೃಹ ಪ್ರವೇಶಿಸಲಿದ್ದಾರೆ.

ನಂತರ ನವದಂಪತಿಯ ಕಂಕಣ ವಿಸರ್ಜನೆ ನಡೆಯಲಿದೆ. ಅರಮನೆ ಆವರಣದಲ್ಲಿ ಕಾರಿನಲ್ಲಿ ಯದುವೀರ ಹಾಗೂ ತ್ರಿಷಿಕಾ ಅವರ ಮೆರವಣಿಗೆ ಜರುಗಲಿದೆ. ಮೆರವಣಿಗೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಬ್ಯಾರಿಕೇಡ್‌ ಹಾಕಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮತ್ತೆ ಮಾಂಗಲ್ಯ: ಯದುವಂಶದ ಸಂಪ್ರದಾಯದಂತೆ ಯದುವೀರ ಅವರು ಬುಧವಾರ ನಡೆಯಲಿರುವ ನಾಗೋಲಿ ಕಾರ್ಯಕ್ರಮದಲ್ಲಿ ತ್ರಿಷಿಕಾ ಅವರಿಗೆ ಮತ್ತೊಂದು ಮಾಂಗಲ್ಯ ಕಟ್ಟಲಿದ್ದಾರೆ. ಸಂಜೆ ಎಲೆ ಅಡಿಕೆ ಶಾಸ್ತ್ರ ಜರುಗಲಿದ್ದು, ವಧುವಿನ ಕಡೆಯವರು ನವದಂಪತಿಗೆ ತಾಂಬೂಲ ನೀಡಲಿದ್ದಾರೆ. ಮಂಗಳವಾರ ಬೆಳಿಗ್ಗೆ 9 ಹಾಗೂ ಸಂಜೆ 5.30ಕ್ಕೆ ಔಪಾಸನೆ ನಡೆಯಿತು. ಯದುವೀರ ಹಾಗೂ ತ್ರಿಷಿಕಾ ಅವರು ಹೋಮ ಹವನದಲ್ಲಿ ಭಾಗಿಯಾಗಿದ್ದರು.

ಯದುವೀರ ಮನೋಹರಿ: ವಯೋಲಿನ್‌ ವಾದಕರಾದ ಮೈಸೂರು ಮಂಜುನಾಥ ಮತ್ತು ಮೈಸೂರು ನಾಗರಾಜ್ ಸಹೋದರರು ಸೋಮವಾರ ರಾತ್ರಿ ಅರಮನೆಯ ದರ್ಬಾರ್‌ ಸಭಾಂಗಣದಲ್ಲಿ ಸುಮಾರು ಒಂದು ಗಂಟೆ ಸಂಗೀತ ಕಛೇರಿ ನಡೆಸಿಕೊಟ್ಟರು. ವಿವಾಹಕ್ಕೆಂದೇ ಹೊಸದಾಗಿ ರಚಿಸಿದ್ದ ‘ಕಾಂತಮಣಿ’ ಎಂಬ ಜನ್ಯರಾಗದ ‘ಯದುವೀರ ಮನೋಹರಿ’ ಸಂಗೀತ ರಸದೌತಣ ನೀಡಿದರು.

ಅತಿಥಿ ಬಳಿಗೆ ತೆರಳಿ ಕೈಮುಗಿದ ಯದುವೀರ–ತ್ರಿಷಿಕಾ
ಮೈಸೂರು: ಇಲ್ಲಿನ ಅರಮನೆಯ ದರ್ಬಾರ್‌ ಸಭಾಂಗಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರ ಆರತಕ್ಷತೆ ಸಮಾರಂಭ ವೈಭವದಿಂದ ಜರುಗಿತು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪತ್ನಿಯ ಕೈಹಿಡಿದು ಕೊಂಡು ಅತಿಥಿ, ಗಣ್ಯರ ಬಳಿಗೆ ತೆರಳಿದ ಯದುವೀರ ಅವರು ಎಲ್ಲರಿಗೂ ಕೈಮುಗಿದರು. ಆಗ ‘ಮಹಾ ರಾಜ್‌ ಕೀ ಜೈ’ ಎಂಬ ಘೋಷಣೆ ಮೊಳಗಿತು. ಕೆಲವರು ಉಡುಗೊರೆ ನೀಡಿ ನವದಂಪತಿಗೆ ಶುಭಾಶಯ ಕೋರಿದರು.

ಇನ್ನು ಕೆಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಪ್ರಮೋದಾದೇವಿ ಒಡೆಯರ್‌ ಕೂಡ ಜನರ ಬಳಿ ತೆರಳಿ ಸಮಾರಂಭಕ್ಕೆ ಬಂದಿದ್ದಕ್ಕೆ ಧನ್ಯವಾದ ಹೇಳಿದರು. ಸರಳವಾಗಿ ವಿನ್ಯಾಸಗೊಳಿಸಿದ್ದ ವೇದಿಕೆಯಲ್ಲಿ ಯದುವೀರ ಮತ್ತು ತ್ರಿಷಿಕಾ ಆಸೀನರಾಗುತ್ತಿದ್ದಂತೆ ಗಣ್ಯರು ಹಾಗೂ ಕುಟುಂಬದವರು ಶುಭಾಶಯ ಕೋರಿದರು. ಅರಸು ಕುಟುಂಬದ ಎಲ್ಲರೂ ಒಟ್ಟಾಗಿ ನಿಂತು ನವದಂಪತಿ ಜೊತೆ ಫೊಟೊ ತೆಗೆಸಿಕೊಂಡರು.

ಯದುವೀರ ಅವರು ಸ್ವರ್ಣ ವರ್ಣದ ಅಂಗರಕ (ಉದ್ದನೆಯ ಕೋಟ್‌) ಹಾಗೂ ಪೇಟ ಧರಿಸಿದ್ದರೆ, ತ್ರಿಷಿಕಾ ಹಸಿರು ಅಂಚಿನ ಗುಲಾಬಿ ಬಣ್ಣದ ರೇಷ್ಮೆ ಸೀರೆ ತೊಟ್ಟಿದ್ದರು. ಎಡ ಕೆನ್ನೆಗೆ ದೃಷ್ಟಿಬೊಟ್ಟು ಇಡಲಾಗಿತ್ತು. ಪ್ರಮೋದಾದೇವಿ ಅವರು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್‌ ಭಾವಚಿತ್ರದ ಮುಂದೆ ಆಸೀನರಾಗಿದ್ದರು.

ಸಭಾಂಗಣದಲ್ಲಿ ಸುಮಾರು ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು. ಅತಿಥಿಗಳು, ಗಣ್ಯರು ಹಾಗೂ ಕುಟುಂಬ ವರ್ಗದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಆವರಣದಲ್ಲಿ ಎರಡು ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡಲಾ ಯಿತು. ಪೊಲೀಸ್‌ ವಾದ್ಯವೃಂದ ದವರು ವಾದ್ಯಗೋಷ್ಠಿ ನಡೆಸಿಕೊಟ್ಟರು. 8 ಗಂಟೆಗೆ ಭೋಜನ ಆರಂಭವಾಯಿತು.

ಎಳನೀರು ಸೂಪು, ತರಕಾರಿ ಪಲಾವ್‌, ಇಡ್ಲಿ, ಅನ್ನ–ಸಾಂಬಾರು, ಪೂರಿ ಸಾಗು, ರೋಟಿ, ಅವರೆಕಾಳು ಸಾಗು, ಹಲ್ವಾ, ಜಿಲೇಬಿ ಬಡಿಸಲಾಯಿತು. ಅರಮನೆಯು ವಿದ್ಯುತ್‌ ದೀಪ ಗಳಿಂದ ಝಗಮಗಿಸುತ್ತಿತ್ತು. ಬುಧವಾರ ನವದಂಪತಿಯ ಮೆರ ವಣಿಗೆ ನಡೆಯಲಿದ್ದು, ಜುಲೈ 2ರಂದು ಬೆಂಗಳೂರಿನ ಅರಮನೆಯಲ್ಲಿ ಆರತಕ್ಷತೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT