ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಇಲ್ಲದಿದ್ದರೆ ಮೀಸಲಾತಿ ಮರೀಚಿಕೆ

ಜಿಲ್ಲಾಡಳಿತದಿಂದ ಅರಸು ಜನ್ಮ ದಿನಾಚರಣೆ
Last Updated 21 ಆಗಸ್ಟ್ 2014, 7:09 IST
ಅಕ್ಷರ ಗಾತ್ರ

ಮೈಸೂರು: ‘ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಲ್ಲದಿದ್ದರೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕುತ್ತಿರಲಿಲ್ಲ’ ಎಂದು ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ೯೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ತಂದುಕೊಟ್ಟವರು ಅರಸು. ರಾಜಕೀಯ ಕ್ಷೇತ್ರದಲ್ಲೂ ಅತ್ಯಂತ ಹಿಂದುಳಿದ ಜನಾಂಗದವರನ್ನು ಗುರುತಿಸಿ ಬೆಳೆಸಿದರು. ಶಾಸನ ಸಭೆ, ವಿದ್ಯಾಭ್ಯಾಸದಲ್ಲಿ ಸಮಾನತೆ ತಂದರು. ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ನಡೆಸಿದರು. ಹಿಂದುಳಿದ ವರ್ಗಕ್ಕೆ ರಾಜ್ಯದಲ್ಲಿ ಮೀಸಲಾತಿ ತಂದ ಮಾದರಿಯಲ್ಲಿ ಕೇಂದ್ರ ಸರ್ಕಾರವು ದೇಶದಾದ್ಯಂತ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಿತು’ ಎಂದು ತಿಳಿಸಿದರು.

ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ‘ಅರಸು ಅವರು ಬಡವರ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದರು. ಹಿಂದೆ ಎಸ್‌ಸಿ, ಎಸ್‌ಟಿಗಳಿಗೆ ಮಾತ್ರ ಮೀಸಲಾತಿ ಇತ್ತು. ಬೇರೆಯವರಿಗೆ ಯಾವುದೇ ರೀತಿಯ ಮೀಸಲಾತಿ ಇರಲಿಲ್ಲ. ಇದನ್ನು ಮನಗಂಡ ಅರಸು ಅವರು ಹಿಂದುಳಿದ ವರ್ಗಕ್ಕೆ ಮೀಸಲಾತಿ ತಂದರು’ ಎಂದು ಸ್ಮರಿಸಿದರು.

ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ
ಡಾ.ಸಿ. ನಾಗಣ್ಣ, ಅರಸು ಅವರನ್ನು ಕುರಿತು ಉಪನ್ಯಾಸ ನೀಡಿದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ. ಕುಮಾರ್, ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿ.ಪಂ. ಸಿಇಒ
ಪಿ.ಎ. ಗೋಪಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ಇದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಟಿ. ಜವರೇಗೌಡ ಸ್ವಾಗತಿಸಿದರು.

ಶಾಸಕ ಚಿಕ್ಕಮಾದು ಅಸಮಾಧಾನ
‘ದೇವರಾಜ ಅರಸು ಅವರ ಬಗ್ಗೆ ಗಂಟೆಗಟ್ಟಲೆ ಮಾತನಾಡುವವರು ಈ ಕಾರ್ಯಕ್ರಮದಲ್ಲಿ ಕಾಣುತ್ತಿಲ್ಲ’ ಎಂದು ಶಾಸಕ ಎಸ್. ಚಿಕ್ಕಮಾದು ಅಸಮಾಧಾನ ವ್ಯಕ್ತಪಡಿಸಿದರು. ‘ಅರಸು ಜನ್ಮ ದಿನಾಚರಣೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೆ, ಬದ್ಧತೆಯಿಂದ, ಅರ್ಥಪೂರ್ಣವಾಗಿ ಜನ್ಮ ದಿನ ಆಚರಿಸಬೇಕು. ಕಾಟಾಚಾರಕ್ಕೆ ಮಾಡ ಬಾರದು.

ಜನ್ಮದಿನ ಆಚರಿಸುವಂತೆ ಅರಸು ಅವರು ಎಂದೂ ಕೇಳಿಕೊಂಡವರಲ್ಲ. ನದಿ ದಾಟಿದ ಮೇಲೆ ಅಂಬಿಗನ ಮರೆಯುವಂತೆ, ಅರಸು ಅವರಿಂದ ಸೌಲಭ್ಯ ಅನುಭವಿಸುತ್ತಿರುವವರು ಅವರನ್ನು ಸ್ಮರಿಸದಿರುವುದು ಶೋಚನಿಯ’ ಎಂದು ವಿಷಾದ ವ್ಯಕ್ತಪಡಿಸಿದರು. ‘ಅರಸು ಅವರಿಂದ ಉಪಕಾರ ಪಡೆದ ಜನ ಈಗ ಅವರಿಂದ ದೂರ ಇರುವುದು ಸರಿಯಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಜನಪ್ರತಿನಿಧಿಗಳ ಗೈರು
ದೇವರಾಜ ಅರಸು ಜನ್ಮ ದಿನಾಚರಣೆ ಉದ್ಘಾಟಿಸಬೇಕಿದ್ದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಮೇಯರ್ ಎನ್.ಎಂ. ರಾಜೇಶ್ವರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್, ಸಂಸದರಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ, ಸಿ.ಎಸ್. ಪುಟ್ಟರಾಜು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಅವರೇ ಕಾರ್ಯಕ್ರಮ ಉದ್ಘಾಟಿಸಿದರು.

ವೈದ್ಯಕೀಯ ಕಾಲೇಜಿಗೆ ಅರಸು ಹೆಸರು ನಾಮಕರಣ: ಸಂಸದ
ಮೈಸೂರು: ‘ಚಾಮರಾಜನಗರದಲ್ಲಿ ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿಗೆ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಹೆಸರು ನಾಮಕರಣ ಮಾಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಜತೆ ಚರ್ಚಿಸುತ್ತೇನೆ’ ಎಂದು ಚಾಮರಾಜನಗರ ಕ್ಷೇತ್ರದ ಸಂಸದ ಆರ್‌. ಧ್ರುವನಾರಾಯಣ ತಿಳಿಸಿದರು.

ಅರಸು ಪ್ರತಿಭಾ ಬಳಗ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ೯೯ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ   ಮಾತನಾಡಿದರು.

‘ಉಳುವವನೇ ಭೂಮಿ ಒಡೆಯ ಎಂಬ ಮಹತ್ತರವಾದ ಭೂ ಸುಧಾರಣಾ ಕಾಯ್ದೆ ಮತ್ತು ಹಾವನೂರ ವರದಿಯನ್ನು ಜಾರಿ ಮಾಡುವ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದರು. ಇದರಿಂದ ಭೂಮಿ ಇಲ್ಲದ ಅನೇಕ ಬಡ ಜನರಿಗೆ ಭೂಮಿ ಸಿಕ್ಕಿತು. ರಾಜ್ಯದ ಸಣ್ಣ ಜಾತಿಯಲ್ಲಿ ಜನ್ಮತಳೆದು ಅತ್ಯುನ್ನತ ಪದವಿಯಾದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ, ಜನಸಾಮಾನ್ಯರಿಗೆ ಅನೇಕ ಮಹತ್ತರ ಕೆಲಸಗಳನ್ನು ಮಾಡಿದ್ದಾರೆ. ಅವರ ತತ್ವ–ಆದರ್ಶಗಳನ್ನು ಜನರು ಮೈಗೂಡಿಸಿಕೊಂಡು, ಪಾಲಿಸಬೇಕು’ ಎಂದರು.

‘ಅರಸು ಅವರನ್ನು ಸರಿಗಟ್ಟುವ ಮತ್ತೊಬ್ಬ ವ್ಯಕ್ತಿ ಇಲ್ಲ. ರಾಜಕಾರಣದಲ್ಲಿ ಜಾತಿ ಬೇರೂರಿದೆ. ಅದು ತೊಲಗಬೇಕು. ರಾಜಕೀಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಮೇಲೆ ಬರುವುದು ಕಷ್ಟ. ಆದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ಮುಟ್ಟಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ಅವರು ಕೆಲಸ ಮಾಡಿದ್ದಾರೆ. ನೊಂದವರು, ಬೆಂದವರ ಪರ ಇದ್ದರು. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಪಿಯು ಓದುತ್ತಿದ್ದೆ. ಅವರಿಂದ ನಾನು ಪ್ರಭಾವಿತನಾಗಿದ್ದೆ’ ಎಂದು ಹೇಳಿದರು.

ಕಾಂಗ್ರೆಸ್‌ ವಕ್ತಾರ ಎಚ್‌.ಎ. ವೆಂಕಟೇಶ್‌ ಮಾತನಾಡಿ, ‘ಮೈಸೂರು ನಗರದಲ್ಲಿ ಇದುವರೆಗೂ ದೇವರಾಜ ಅರಸು ಪುತ್ಥಳಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಆಸಕ್ತಿ ತಾಳಿ ಪುತ್ಥಳಿ ನಿರ್ಮಾಣಕ್ಕೆ ಪಣ ತೊಡಬೇಕು. ಅರಸು ಅವರು ೯ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದರು. ಅವರಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಂಡರು.

ಆದರೆ, ಅವರು ಜೀವಿತಾವಧಿ ಇರುವವರೆಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ರಾಜಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಯಾವ ವಿಶ್ವವಿದ್ಯಾಲಯವೂ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಇಲ್ಲವೆ, ಮರಣೋತ್ತರ ಡಾಕ್ಟರೇಟ್‌ ಪದವಿ ನೀಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌, ಅಮೋಘ ವಾಹಿನಿ ಪ್ರಧಾನ ಸಂಪಾದಕ ಬಿಳಿಗಿರಿ ರಂಗನಾಥ್‌, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಎ.ಎಸ್‌. ಸತೀಶ್‌ ಮತ್ತು ಎಚ್.ಎ. ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು.

ಅರಸು ಪ್ರತಿಭಾ ಬಳಗ ಅಧ್ಯಕ್ಷ ಎಂ. ಮಲ್ಲರಾಜೇ ಅರಸ್‌, ಮಧುವನ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷ
ಡಿ.ಟಿ. ಪ್ರಕಾಶ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಸ. ಲಿಂಗಯ್ಯ ಇದ್ದರು. ಡಾ.ಎಂ.ಜಿ.ಆರ್‌. ಅರಸ್‌ ಪ್ರಾಸ್ತಾವಿಕ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT