ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿತು ಬೆಳೆಯಿರಿ ಅಜೋಲಾ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಮಿಳುನಾಡು ಮತ್ತು ಕೇರಳದಲ್ಲಿ ಪ್ರಾರಂಭಗೊಂಡ ಅಜೋಲಾ ಕರ್ನಾಟಕಕ್ಕೂ ಕಾಲಿಟ್ಟು ಕೃಷಿ ಕ್ಷೇತ್ರದಲ್ಲಿ ದಾಖಲೆ ಹೆಜ್ಜೆ ಇಟ್ಟಿದೆ. ಇತರ ಮೇವಿನ ಬೆಳೆಗಳಿಗೆ ಪರ್ಯಾಯವಾಗಿ ರೈತರಿಗೆ ಲಾಭ ತಂದು ಕೊಡುತ್ತಿದೆ. ಒಂದು ಕೆ.ಜಿ. ಪಶು ಆಹಾರಕ್ಕೆ ಸುಮಾರು 12 ರೂಪಾಯಿಗಳಾದರೆ, ಅಜೋಲಾಕ್ಕೆ 50 ಪೈಸೆ ತಗಲುತ್ತದೆ. ಹೀಗೆ ಬಹು ಉಪಕಾರಿಯಾಗಿರುವ ಅಜೋಲಾದ ಪ್ರಯೋಜನ, ಬೆಳೆಯುವ ವಿಧಾನದ ಬಗ್ಗೆ ಕೃಷಿ ಇಲಾಖೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

* ಏನಿದು ಅಜೋಲಾ?
ಅಜೋಲಾ ನೀರಿನ ಮೇಲೆ ಬೆಳೆಯುವ ಹಸಿರು ಪಾಚಿ. ಇದು ಹಸಿರೆಲೆ ಗೊಬ್ಬರವಾಗಿದ್ದು, ಪಶುಗಳಿಗೆ ಉತ್ತಮವಾಗಿರುವ ಸಿದ್ಧ ಆಹಾರ. ಇದನ್ನು ಇತರ ಮೇವಿನ ಜೊತೆಯಲ್ಲಿಯೂ ನೀಡಬಹುದು ಅಥವಾ ಪ್ರತ್ಯೇಕವಾಗಿಯೂ ನೀಡಬಹುದು. ಬೇಸಿಗೆ ಕಾಲದಲ್ಲಿ ಮೇವಿನ ಕೊರತೆಯನ್ನು ಇದು ನೀಗಿಸಬಲ್ಲದು. ಈ ಆಹಾರವನ್ನು ಕೋಳಿ, ಹಂದಿ, ಮೀನು, ಮೊಲಗಳಿಗೂ ಕೊಡಬಹುದು. ಇದನ್ನೇ ಮೂಲ ಆಹಾರವಾಗಿ ಕೊಡುವ ಬದಲು ವಿವಿಧ ಪಶು ಆಹಾರಗಳ ಜೊತೆಗೆ ನೀಡುವುದರಿಂದ ಜಾನುವಾರುಗಳ ಶಕ್ತಿ ವೃದ್ಧಿಸುತ್ತದೆ.

*ಅಜೋಲಾದಿಂದ ಉಳಿತಾಯ ಸಾಧ್ಯವೇ?
ಖಂಡಿತವಾಗಿಯೂ. ಅಜೋಲಾ ಬೆಳೆಯಲು ಯಾವುದೇ ರಸಗೊಬ್ಬರಗಳ ಅವಶ್ಯಕತೆ ಇಲ್ಲ, ಔಷಧಗಳೂ ಬೇಡ. ಉತ್ಪಾದನಾ ವೆಚ್ಚವೂ ಕಡಿಮೆ. ಸಾಮಾನ್ಯವಾಗಿ ರೈತರು ತಮ್ಮ ಲಾಭದ ಪ್ರತಿಶತ 60ರಿಂದ 70ರಷ್ಟನ್ನು ಪಶು ಆಹಾರಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಅಜೋಲಾ ಬೆಳೆದರೆ ಇದಾವುದರ ಅಗತ್ಯ ಇರುವುದಿಲ್ಲ.

*ಇದರ ಮಹತ್ವದ ಬಗ್ಗೆ ತಿಳಿಸಿ.
ಅಜೋಲಾದಲ್ಲಿ ಶೇ 25ರಿಂದ 35ರಷ್ಟು ಪ್ರೊಟೀನ್, ಶೇ 10ರಿಂದ 15ರಷ್ಟು ಮಿನರಲ್ಸ್, ಶೇ 7 ರಿಂದ 10ರಷ್ಟು ಅಮಿನೋ ಆ್ಯಸಿಡ್ ಅಂಶಗಳಿವೆ. ಸುಲಭದಲ್ಲಿ ಜೀರ್ಣವಾಗುವ ಆಹಾರವಿದು. ಹಸು- ಎಮ್ಮೆಗಳಿಗೆ ಒಂದೂವರೆಯಿಂದ ಎರಡು ಕೆ.ಜಿಯಷ್ಟು ಅಜೋಲಾ ಕೊಡುವುದರಿಂದ
ಶೇ 15ರಿಂದ 20ರಷ್ಟು ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಎಮ್ಮೆಗಳ ಹಾಲಿನಲ್ಲಿ ಕೊಬ್ಬಿನಾಂಶವು 0.3ರಿಂದ 0.7ರಷ್ಟು ಹೆಚ್ಚಳವಾಗುತ್ತದೆ. ಹಿಂಡಿ ಯಲ್ಲಿರುವಷ್ಟೇ ಪೌಷ್ಟಿಕಾಂಶ ಇದರಲ್ಲಿರುವ ಕಾರಣ,  ಹಿಂಡಿಗೆ ಮಾಡುವ ಖರ್ಚನ್ನು ಉಳಿಸಬಹುದು.

*ಕೋಳಿ, ಮೀನುಗಳಿಗಾಗುವ ಪ್ರಯೋಜನವೇನು?
ಮಾಂಸದ ಕೋಳಿಯ ದೇಹದ ತೂಕ, ಮೊಟ್ಟೆ ಕೋಳಿಯಲ್ಲಿ ಮೊಟ್ಟೆ ಪ್ರಮಾಣ ಅಧಿಕ ಗೊಳ್ಳುತ್ತದೆ. ಮೀನಿನ ಕೊಳದಲ್ಲಿ ಬೆಳೆಯುವುದರಿಂದ ಮೀನಿನ ಉತ್ಪಾದನೆಯಲ್ಲಿ ಶೇ 30ರಷ್ಟು ಹೆಚ್ಚಳವಾಗುವುದು. ಭತ್ತದ ಹೊಲದಲ್ಲಿ ಬೆಳೆಯುವುದರಿಂದ ಭತ್ತದ ಇಳುವರಿಯಲ್ಲಿ ಶೇ 20ರಷ್ಟು ಹೆಚ್ಚುತ್ತದೆ.

*ಅಜೋಲಾ ಬೆಳೆಯುವ ವಿಧಾನದ ಬಗ್ಗೆ ತಿಳಿಸಿ.
ಅಜೋಲಾವನ್ನು ಸಿಲ್ಫಾಲಿನ್ ಶೀಟ್ ವಿಧಾನ ಹಾಗೂ ಸಿಮೆಂಟ್ ತೊಟ್ಟಿ ವಿಧಾನಗಳಲ್ಲಿ ಬೆಳೆಯಬಹುದು. ಎರಡರಲ್ಲೂ ಬೆಳೆಯುವ ವಿಧಾನ ಒಂದೇ ತೆರನಾಗಿದೆ. ಆದರೆ ಸಿಮೆಂಟ್ ತೊಟ್ಟಿ ವಿಧಾನ ದುಬಾರಿ. ಸಿಲ್ಫಾಲಿನ್ ಶೀಟ್ ವಿಧಾನದಲ್ಲಿ ಬೆಳೆಯುವುದು ಹೀಗೆ: ಸೂರ್ಯನ ಕಿರಣಗಳು ನೇರವಾಗಿ ಬೀಳದಂಥ ಸ್ಥಳದಲ್ಲಿ ಉದಾ: ತೋಟ, ಮನೆಯಂಗಳ, ಮನೆಯ ಹಿತ್ತಿಲಿನಲ್ಲಿ ಇದನ್ನು ಬೆಳೆಯಬಹುದಾಗಿದೆ.

ಮೊದಲು ಭೂಮಿಯನ್ನು ಸ್ವಚ್ಛ ಮಾಡಿ ಸಮತಟ್ಟಾಗಿ ಮಾಡಿಕೊಳ್ಳಬೇಕು. 2.25 ಮೀಟರ್ ಉದ್ದ ಹಾಗೂ 1.5 ಮೀ ಅಗಲ ಅಳತೆ ಇರುವ ಗುಂಡಿ ತೆಗೆಯಬೇಕು (ಉದ್ದಗಲವನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು). ಒಂದು ಅಂಗುಲದವರೆಗೆ ಮರಳು ಹಾಕಿ ಇದರ ಮೇಲೆ 120 ರಿಂದ 150 ಜಿಸಿಎಂ ಸಿಲ್ಫಾಲಿನ್ ಶೀಟನ್ನು ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ ಹರಡಬೇಕು. ನಂತರ ಸುಮಾರು 30 ರಿಂದ 35 ಕೆ.ಜಿಯಷ್ಟು ಫಲವತ್ತಾದ ಮೆತ್ತನೆ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡಬೇಕು. 5 ದಿನದಷ್ಟು ಹಳೆಯದಾದ 3 ರಿಂದ 5ಕೆ.ಜಿ ಸೆಗಣಿಯನ್ನು40 ಗ್ರಾಂನಷ್ಟು ಖನಿಜ ಮಿಶ್ರಣದಲ್ಲಿ ಸೇರಿಸಿ, ಇದನ್ನು ನೀರಿನಲ್ಲಿ ಕಲಸಿ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ನಂತರ, ಸುಮಾರು 7 ರಿಂದ10 ಸೆಂ.ಮಿ ಎತ್ತರದವರೆಗೆ ನೀರು ಹಾಯಿಸಿ ಅದಕ್ಕೆ ಒಂದು ಕೆ.ಜಿಯಷ್ಟು ಅಜೋಲಾ ಕಲ್ಚರ್ ಅಥವಾ ಹೆಪ್ಪನ್ನು ಮೇಲುಗಡೆ ಸಮಾನವಾಗಿ ಬೀಳುವಂತೆ ಹಾಕಬೇಕು. ಹೀಗೆ ಹರಡಿದ ಅಜೋಲಾ ಮೇಲೆ ನೀರನ್ನು ಚಿಮುಕಿಸಬೇಕು. ಹೀಗೆ ಮಾಡಿದರೆ ಅಜೋಲಾ ಬಹುಬೇಗನೆ ಬೆಳೆಯುತ್ತದೆ.

*ಕಟಾವಿನ ಬಗ್ಗೆ ತಿಳಿಸಿ.
ಏಳು ದಿನಗಳ ನಂತರ ಮೊದಲ ಇಳುವರಿ ಪಡೆಯಬಹುದು. ನಂತರ ಪ್ರತಿ 2 ದಿನಗಳಿಗೆ ಒಮ್ಮೆ ಅಜೋಲಾವನ್ನು ಕಟಾವು ಮಾಡಬಹುದು. ಪ್ರತಿ 10 ದಿನಕ್ಕೊಮ್ಮೆ ಒಂದು ಕೆ.ಜಿ ಸೆಗಣಿಯನ್ನು 20 ಗ್ರಾಂ ಮಿನರಲ್ ಮಿಕ್ಸರ್ ಜೊತೆ 5 ಲೀಟರ್‌ನಷ್ಟು ನೀರಿನಲ್ಲಿ ಕಲಸಿ ಅಜೋಲಾದೊಂದಿಗೆ ಸೇರಿಸುತ್ತಿರಬೇಕು. 28 ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇದು ಉತ್ತಮವಾಗಿ ಬೆಳೆಯಬಲ್ಲದು. 4.5 ಚ.ಮೀಗೆ 1 ಕೆ.ಜಿ. ಅಜೋಲಾವನ್ನು ಪ್ರತಿನಿತ್ಯ ಪಡೆಯಬಹುದು. ಇದಕ್ಕೆ ಅನುಗುಣವಾಗಿ ಗುಂಡಿ ನಿರ್ಧರಿಸಬಹುದು.

*ಉತ್ತಮ ಇಳುವರಿಗೆ ಏನು ಮಾಡಬೇಕು?
ಇದನ್ನು ಬೆಳೆಯುವ ಗುಂಡಿಯ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿಗೆ ಇರಬಾರದು. ಸೂರ್ಯನ ಕಿರಣ ನೇರವಾಗಿ ಬೀಳುವ ಜಾಗದಲ್ಲಿ ಅಥವಾ ತೀವ್ರವಾಗಿ ನೆರಳು ಇರುವ ಜಾಗದಲ್ಲೂ ಇದನ್ನು ಬೆಳೆಯಬಾರದು. ಉಷ್ಣಾಂಶ 35 ಡಿಗ್ರಿಗಿಂತ ಹೆಚ್ಚಿಗೆ ಇದ್ದರೆ ಸೂರ್ಯನ ಕಿರಣ ನೇರವಾಗಿ ಬೀಳದಂತೆ ನೋಡಿಕೊಳ್ಳಬೇಕು. ಪೋಷಕಾಂಶದ ಕೊರತೆ ಬಾರದಂತೆ ನೋಡಿಕೊಳ್ಳುವುದೂ ಮುಖ್ಯ. ಇದನ್ನು ಒತ್ತೊತ್ತಾಗಿ ಬೆಳೆಯಲು ಬಿಡಬಾರದು. ದಿನ ಬಿಟ್ಟು ದಿನ ಕಟಾವು ಮಾಡಬೇಕು. ಎರಡು ತಿಂಗಳಿಗೊಮ್ಮೆ 5 ಕೆ.ಜಿಯಷ್ಟು ಹೊಸ ಮಣ್ಣು ಹಾಕಿ ಅಷ್ಟೇ ಪ್ರಮಾಣದ ಹಳೆಯ ಮಣ್ಣನ್ನು ತೆಗೆಯಬೇಕು. 10 ದಿನಕ್ಕೊಮ್ಮೆ ಕಾಲು ಭಾಗದಷ್ಟು ನೀರು ತೆಗೆದು, ಹೊಸ ನೀರು ಹಾಕಬೇಕು. ಪಿಎಚ್.5.5ಕ್ಕಿಂತ ಕಡಿಮೆ, 7ಕ್ಕಿಂತ ಹೆಚ್ಚಿಗೆ ಇರಬಾರದು. ಗುಂಡಿಯೊಳಗೆ ಯಾವುದೇ ಕಾರಣಕ್ಕೂ ಇಳಿಯಬಾರದು.

*ತೊಟ್ಟಿಯಿಂದ ಅಜೋಲಾ ತೆಗೆಯುವುದು ಹೇಗೆ?
ತೊಟ್ಟಿಯಿಂದ ಅಜೋಲಾ ತೆಗೆದು ಇದರಿಂದ ಅತಿ ಸಣ್ಣವುಗಳನ್ನು ಬೇರ್ಪಡಿಸಿ ಪುನಃ ಅದನ್ನು ತೊಟ್ಟಿಯಲ್ಲಿ ಹಾಕುವುದರಿಂದ ಅವು ಬೆಳೆಯುತ್ತವೆ. ಬೇರ್ಪಡಿಸಿದ ಅಜೋಲಾವನ್ನು ಬಕೆಟ್‌ನಲ್ಲಿ ಹಾಕಿ 2 ರಿಂದ 3 ಬಾರಿ ತೊಳೆದು ಅದನ್ನು ಜಾನುವಾರುಗಳಿಗೆ ನೀಡಬೇಕು. ಮೊದಲು ಪಶುಗಳಿಗೆ ಅವು ದಿನನಿತ್ಯ ಸೇವಿಸುವ ಆಹಾರದ ಜೊತೆ ಸೇರಿಸಿ ಕೊಡಬೇಕು. ಅವುಗಳಿಗೆ ಇದರ ಪರಿಚಯವಾದ ನಂತರ, ನೇರವಾಗಿ ಕೊಡಬಹುದು. ಅಜೋಲಾ ಕಲ್ಚರ್ ಹಾಗೂ ಇತರ ಮಾಹಿತಿಗೆ ಸಮೀಪದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT