ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಸರಹದ್ದು

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಮನುಷ್ಯ ಹಲವು ವೈರುಧ್ಯಗಳ ಕಂತೆ. ತಾನು ತಿಳಿದುಕೊಂಡಂತೆ ಮನುಷ್ಯನೇನೂ ಸ್ವತಂತ್ರನಲ್ಲ. ಮನುಷ್ಯ ತನಗೆ ಅರ್ಥವಾಗಿದೆ ಎಂದುಕೊಂಡದ್ದು ನಿಜವಾಗಿಯೂ ಆರ್ಥವಾಗಿರುವುದಿಲ್ಲ. ಮನುಷ್ಯನಿಗೆ ಹೇಳಿದ್ದೆಲ್ಲ ಅರ್ಥವಾಗುತ್ತದೆ ಎಂದು ತಿಳಿದುಕೊಂಡು ಬೋಧಕ ತನ್ನ ಶಿಷ್ಯಂದಿರಿಗೆ ಬೋಧನೆಯಲ್ಲಿ ತೊಡಗಿಕೊಳ್ಳುತ್ತಾನೆ. ಆದರೆ ಅರ್ಥವಂತಿಕೆಯೆನ್ನುವುದು ವೈಯಕ್ತಿಕ ಅನುಭವವಾಗಿರುತ್ತದೆ.

ಆಂತರಿಕ ಪರಿಶುದ್ಧತೆಯನ್ನು ಪಾಲಿಸದೆ ಜ್ಞಾನವನ್ನು ಸ್ವೀಕರಿಸುವುದು ಸಾಧ್ಯವಿಲ್ಲ. ನಾಲ್ಕು ಮುಖ್ಯವಾದ ಜ್ಞಾನದ ಹಂತಗಳನ್ನು ಶುದ್ಧರೂಪದಲ್ಲಿ ತಿಳಿದುಕೊಳ್ಳುವ ಮೂಲಕ ಈ ಪರಿಶುದ್ಧತೆಯನ್ನು ಪಾಲಿಸುವುದು ಸಾಧ್ಯ.
1. ದೇವರನ್ನು ತಿಳಿಯುವುದು.
2. ತನ್ನ ದೇಹ(ನಫ್ಸ್)ವನ್ನು ತಿಳಿದುಕೊಳ್ಳುವುದು.
3. ಸಾವು ಇದೆ ಎಂಬುದನ್ನು ಮನವರಿಕೆಮಾಡಿಕೊಳ್ಳುವುದು.
4. ಸಾವಿನ ನಂತರ ಎದುರಿಸಲಿರುವ ವಾಗ್ದಾನಗಳು ಮತ್ತು ಎಚ್ಚರಿಕೆಯನ್ನು ತಿಳಿಯುವುದು.
ದೇವರನ್ನು ತಿಳಿದಿರುವವ  ಅವನ ಹಕ್ಕುಗಳ ಅರಿವನ್ನು ಸಾಧಿಸುತ್ತಾನೆ. ದೇವರು ತನ್ನಿಂದ ಏನನ್ನು ಅಪೇಕ್ಷಿಸುತ್ತಾನೆನ್ನುವುದನ್ನು ದೇವರನ್ನು ಅರ್ಥಮಾಡಿಕೊಂಡವನು ತಿಳಿದುಕೊಂಡಿರುತ್ತಾನೆ. ದೇವರ ಇಷ್ಟ ಅನಿಷ್ಟಗಳನ್ನು ಅರ್ಥಮಾಡಿಕೊಂಡಿರುತ್ತಾನೆ.
ತನ್ನ ದೇಹವನ್ನು ತಿಳಿದಾತ ಅದನ್ನು ತನ್ನ ಹಿಡಿತದೊಳಗೆ ಇಟ್ಟುಕೊಳ್ಳುತ್ತಾನೆ, ಆಸೆಗಳಿಗೆ ಕಡಿವಾಣವನ್ನು ಹಾಕಿಕೊಳ್ಳುತ್ತಾನೆ. ದೇಹ ತನ್ನ ಅವಶ್ಯಕತೆಯನ್ನು ಆಗಾಗ ವ್ಯಕ್ತಗೊಳಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ದೇಹದ ಆಸೆಗಳು ಯಾವುವು ಎಂಬುದನ್ನು ಅರಿತುಕೊಳ್ಳುವುದು ಮತ್ತು ಎಚ್ಚರವಹಿಸಿಕೊಂಡಿರುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಪಂಜಾಬಿನ ಸೂಫಿ ಸಂತ ಬಾಬ ಫರೀದ್, ತನ್ನ ದೇಹದ ಅವಶ್ಯಕತೆಗಳು ಮಿತಿಮೀರಿದೆಯೆಂದು ಕಂಡುಕೊಂಡಾಗಲೆಲ್ಲ ದೇಹ ದಂಡನೆಯ ಕಠಿಣವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದ. ಉಪವಾಸ, ಸತತವಾದ ಇಬಾದತ್(ದೇವೋಪಾಸನೆ), ಹಠಯೋಗಗಳು ಅದರಲ್ಲಿ ಶಾಮೀಲಾಗಿದ್ದವು.
ಸಾವು ಇದೆ ಎಂದು ಎಚ್ಚರದಿಂದ ಇರುವವನು ಅದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಲೇ ಇರುತ್ತಾನೆ. ಸೂಫಿ ಸಂತನಿಗೆ ತನ್ನ ಪರಮಾಪ್ತನೆನಿಸಿದ ಸೃಷ್ಟಿಕರ್ತನನ್ನು ಸೇರುವ ಸಂಭ್ರಮದ ಹಾದಿ ಸಾವು ಎಂದೆನಿಸಲ್ಪಟ್ಟರೂ ಅವನ ಭೇಟಿಗೆ ಸಾಕಷ್ಟು ತಯಾರಿಯ ಅಗತ್ಯವಿದೆ. 
ದೇವರು ನೀಡಿದ ಎಚ್ಚರಗಳನ್ನು ಅರಿತವನು ನಿಷೇಧಿಸಿದ ಸಂಗತಿಗಳನ್ನು ದೂರಮಾಡುವ ಮೂಲಕ ಅವನಿಗೆ ನೀಡಿದ ವಾಗ್ದಾನಗಳನ್ನು ಪಾಲಿಸುತ್ತಾನೆ.
ಮೇಲಿನ ಈ ವಿಷಯಗಳು ಮೂರು ಸ್ತಂಭಗಳ ಮೇಲೆ ನಿಂತಿವೆ.
1. ನಿಯತ್ತು (ವಫಾ)
2. ಸಭ್ಯತೆ (ಅದಬ್)
3. ಗೌರವದ(ಇಝ್ಝತ್) ನಡತೆ
ನಿಯತ್ತು ಎಂದರೆ ದೇವರ ಜೊತೆಗಿನ ಏಕಾಂತ(ಫರ್ದಾನಿಯಾ), ಏಕದೇವೋಪಾಸನೆಯ ದೃಢನಿಶ್ಚಯ (ವಹ್ದಾನಿಯಾ), ಅವನು ಆದಿಯೆಂಬ ತಿಳುವಳಿಕೆಗೆ ಬದ್ಧನಾಗಿರುವುದು(ಅವ್ವಲಿಯಾ) ಸಭ್ಯತೆಯು ನಡವಳಿಕೆಯನ್ನು ತಿದ್ದುತ್ತದೆ, ಯೋಚನೆಯನ್ನು ತೀಡಿ ಕಾಪಾಡುತ್ತದೆ.
ಗೌರವದ ನಡತೆ ಪರಿಶುದ್ಧ ನಾಮಸ್ಮರಣೆಯ ಕ್ರಮ(ಜಿಕ್ರ್)ವನ್ನು, ಉಚ್ಛಾರ, ನಡವಳಿಕೆ, ಕ್ರಿಯೆ, ಆಪ್ತತೆಯನ್ನು ಪರಿಶುದ್ಧಗೊಳಿಸುತ್ತದೆ.  ಇವೆಲ್ಲ ಗುಣಗಳನ್ನು ಹೊಂದಿದವನು ದೇವರ ಮಿಲನದ ಸವಿಯನ್ನು ಅನುಭವಿಸುತ್ತಾನೆ. ಸಹನೆಯ ಶಾಂತ ಸ್ಥಿತಿಯನ್ನು ಹೃದಯದಲ್ಲಿ ಅನುಭವಿಸುತ್ತಾನೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT