ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವಾಗದ ಜನ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅನಂತಮೂರ್ತಿ ಅವರ ನಿಧನಕ್ಕೆ ಕೆಲವರು ಪ್ರತಿ­ಕ್ರಿಯಿಸಿದ ರೀತಿ ಮಾನವೀಯತೆಯುಳ್ಳ ಯಾವುದೇ ಧರ್ಮ ಅಥವಾ ವಿವೇಕವುಳ್ಳ ಯಾರೇ ಆಗಲಿ  ಒಪ್ಪುವಂತಹ ವಿಚಾರವಲ್ಲ. ಅನಂತಮೂರ್ತಿ ಅವರ ಸಾಧನೆಗಳ ಬಗೆಗೆ ಕನಿಷ್ಠ ತಿಳಿವಳಿಕೆಯುಳ್ಳ ಯಾರೊಬ್ಬರೂ ಹೀಗೆ ವರ್ತಿ­ಸಲು ಸಾಧ್ಯವಿಲ್ಲ. ಸ್ವಂತ ಆಲೋಚನೆಗಳಿಲ್ಲದೆ ಯಾರೋ ಹೇಳಿದ್ದನ್ನು ಕೇಳಿ, ಕೊನೇಪಕ್ಷ ಅದನ್ನು ವಿಮರ್ಶಿಸುವ ಗೋಜಿಗೂ ಹೋಗದೆ ನಿರ್ಧಾ­ರ­ಗಳನ್ನು ತೆಗೆದುಕೊಂಡರೆ ಆಗುವುದೇ ಹೀಗೆ. ಆದರೆ ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಂಘಟನೆಯನ್ನು ದೂರುವುದು ಸಹ ತಪ್ಪು.

ಅನಂತಮೂರ್ತಿ ತಮ್ಮ ಬರಹಗಳ ಮೂಲಕ ಪ್ರತಿಪಾದಿಸಿದ ಜಾತ್ಯತೀತ, ಮಾನವೀಯ ಕಾಳ­ಜಿಯ ಗುಣಗಳು  ಗಮನಾರ್ಹವಾದವು. ಸಾಹಿತಿ ಎಂದರೆ ಕೇವಲ ಕಲ್ಪನೆಗಳನ್ನು ಬರೆದುಕೊಂಡು ಕೂಡುವವನಲ್ಲ, ಆತನಿಗೂ ಸಾಮಾಜಿಕ ಜವಾ­ಬ್ದಾರಿಗಳಿರುತ್ತವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು, ಅನೇಕ ಕನ್ನಡ ಪರ ಚಳವಳಿಗ­ಳಲ್ಲಿ ಪಾಲ್ಗೊಂಡಿದ್ದರು. ತಮ್ಮ  ವೈಚಾರಿಕ ಬರ­ಹಗಳ ಮೂಲಕ ಜನರಲ್ಲಿನ ಮೌಢ್ಯವನ್ನು ದೂರ ಮಾಡಲು ಶ್ರಮಿಸಿದರು. ಭಿನ್ನಾಭಿಪ್ರಾಯ­ಗಳಿ­ದ್ದಲ್ಲಿ  ಅವರೊಂದಿಗೆ ವಾಗ್ವಾದ ನಡೆಸಲು ಅವ­ಕಾಶ ಇರುತ್ತಿತ್ತು. ಕೆಲವೊಮ್ಮೆ ಅವರು ಕೂಡ ತಪ್ಪಿದ್ದು ಇಲ್ಲಿಯೇ ಅನಿಸುತ್ತದೆ. ವ್ಯಕ್ತಿಯೊಬ್ಬ ಒಂದು ಹಂತಕ್ಕೆ ಬೆಳೆದ ಬಳಿಕ ಆತನಿಗೆ ತಾನು ನಂಬಿದಂತಹ ತತ್ವ, ವಿಚಾರಗಳ ಮೇಲಿನ ನಂಬಿಕೆ ಪ್ರಬಲವಾಗಿಯೇ ಬೇರುಬಿಟ್ಟಿರುತ್ತದೆ. ಆ ಹಂತದಲ್ಲಿ ಕೆಲವು ವಿಚಾರಗಳನ್ನು ತನ್ನ ಆಲೋ­ಚನಾ ಪರಿಧಿಯೊಳಕ್ಕೆ  ತೆಗೆದುಕೊಳ್ಳದೇ  ಅಭಿ­ಪ್ರಾ­ಯಗಳನ್ನು  ಮಂಡಿಸಿಬಿಡುವ ಸಾಧ್ಯತೆ ಇರು­ತ್ತದೆ. ಬಹುಶಃ ಇಂತಹ ಸಂದರ್ಭದಲ್ಲೇ ಅವರು ಯಾವುದೋ ಪಕ್ಷದ ಹುಸಿ ಜಾತ್ಯತೀತ ನಿಲು­ವನ್ನೇ ಸತ್ಯ ಎಂದು  ಭಾವಿಸಿಕೊಂಡು, ಅದನ್ನು ಬೆಂಬಲಿಸುವ ಭರದಲ್ಲಿ ನರೇಂದ್ರ ಮೋದಿ ಅವರ  ವ್ಯಕ್ತಿತ್ವದ ಬಗ್ಗೆ ಲಘುವಾಗಿ ಮಾತನಾಡಿದ್ದಿರ­ಬಹುದು. ನಿಜಕ್ಕೂ ಆ ಹೇಳಿಕೆ ಖಂಡನಾರ್ಹ.

ಕಾದಂಬರಿಕಾರ ಎಸ್.ಎಲ್. ಭೈರಪ್ಪನ­ವ­ರನ್ನು  ‘ಅವರೊಬ್ಬ ಕಾದಂಬರಿಕಾರರೇ ಅಲ್ಲ’ ಎಂದ­ದ್ದು  ಕೂಡ ಒಪ್ಪುವಂತಹ ಮಾತಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇತ್ತೀಚಿನ ವರ್ಷಗಳಲ್ಲಿ ವಿಚಾರವಾದದ ಹೆಸರಿನಲ್ಲಿ  ಒಂದು ಕೋಮಿನ, ಒಂದು ಪಕ್ಷದ ಪರವಾಗಿ  ಇದ್ದಾರೇನೋ ಎನ್ನು­ವಂತಹ ರೀತಿಯಲ್ಲಿ ಅನಂತಮೂರ್ತಿ ತಮ್ಮನ್ನು ತೋರಿಸಿಕೊಂಡರು. ಆದರೆ ಯಾರೊಬ್ಬರೂ ಪರಿಪೂರ್ಣರಲ್ಲ ಎನ್ನುವ ಮಾತಿಗೆ  ಅವರೂ ಹೊರತಲ್ಲ.  ಅನಂತಮೂರ್ತಿ ಅವರ ನಿಧನಕ್ಕೆ ಸಂಭ್ರ­­ಮಿ­ಸಿದವರನ್ನು ಬೆಂಬಲಿಸುವ ರೀತಿಯಲ್ಲಿ ಸ್ವಾಮೀಜಿ­ಯೊಬ್ಬರು ನೀಡಿದ ಹೇಳಿಕೆ ಇಡೀ ಹಿಂದೂ ಧರ್ಮಕ್ಕೆ ಅವಮಾನ. ಇವರು ಸಂಕಲ್ಪ ಮಾಡಿಕೊಂಡಿದ್ದಕ್ಕೆ  ದೇವರು ಅವರನ್ನು ಕರೆದು­ಕೊಂಡರಂತೆ. ‘ಇದು ಎಲ್ಲರಿಗೂ ಪಾಠ­ವಾಗ­ಬೇಕು’ ಎಂದು ಮಾಧ್ಯಮದ ಮುಂದೆ ಸ್ವಾಮೀಜಿ ಘಂಟಾಘೋಷವಾಗಿ ಹೇಳಿದ್ದು ಪ್ರಜ್ಞಾ­ವಂತರು ತಲೆತಗ್ಗಿಸುವಂತಿತ್ತು. ನಮ್ಮ ಧರ್ಮ ಯಾವತ್ತೂ ಬೇರೆಯವರ ಸಾವಿನಲ್ಲಿ ಸಂಭ್ರ­ಮವನ್ನು ಕಂಡುಕೊಳ್ಳುವಂತಹ ವಿಕೃತಿ­ಯನ್ನು  ಬೋಧಿಸುವುದಿಲ್ಲ. ಇಂತಹ ಹೇಳಿಕೆ ಮೂಲಕ ಸಮಾಜಕ್ಕೆ ತಾವೇನು ಸಂದೇಶ ಸಾರಲು ಹೊರಟಿದ್ದಾರೆ ಎಂಬುದನ್ನು ಸ್ವಾಮೀಜಿಯೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT