ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ಕಳೆದುಕೊಂಡ ಗ್ರಾಮ ಸ್ವರಾಜ್ಯ

ಸರ್ಕಾರದ ವಿರುದ್ಧ ರಮೇಶಕುಮಾರ್‌ ಚಾಟಿ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ರಾಮ ಪಂಚಾಯ್ತಿ ಚುನಾವಣೆ ವ್ಯವಸ್ಥೆ ಸುಧಾರಣೆಗಾಗಿ ಗ್ರಾಮ ಪಂಚಾಯ್ತಿ ಸದಸ್ಯರ ಕೈಗೆ ಪರಮಾಧಿಕಾರ ಕೊಡುವಂತೆ ನೀಡಿದ ಸಲಹೆಗಳನ್ನು ಪರಿಗಣಿಸದೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಎಡವಿದ್ದಾರೆ. ಈಗ ಗ್ರಾಮ ಸ್ವರಾಜ್ಯದ ಮಾತಿಗೆ ಅರ್ಥವಿಲ್ಲದಂತಾಗಿದೆ’ ಎಂದು ಕಾಂಗ್ರೆಸ್‌ನ ಕೆ.ಆರ್‌. ರಮೇಶಕುಮಾರ್‌ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ರಾಜಕಾರಣಿಗಳಿಗೆ ಅವಕಾಶಗಳು ಸದಾ ಸಿಗುವುದಿಲ್ಲ. ಅವಕಾಶ ಸಿಕ್ಕಾಗ ನಾವು ಪ್ರತಿಪಾದಿಸಿದ ಸಿದ್ಧಾಂತಕ್ಕೆ ಹೊಂದಿಕೊಳ್ಳುವಂತೆ ಮಾಡಿ, ಸುಧಾರಣೆಗೆ ಯತ್ನಿಸಬೇಕು’ ಎಂದು  ಹೇಳಿದರು.

‘ಗ್ರಾಮ ಪಂಚಾಯ್ತಿಗಳಿಗೆ ಸಂಪೂರ್ಣ ಅಧಿಕಾರ ನೀಡಿದರೆ ಭ್ರಷ್ಟಾಚಾರ ಹೆಚ್ಚುತ್ತದೆ ಎಂಬ ಕಲ್ಪನೆ ಶಾಸಕರದ್ದಾಗಿದೆ. ಮೇಲಿನವರು ಶುದ್ಧರೇನೂ ಅಲ್ಲ. ತಾವು ಮಾಡುವ ಕೆಲಸವನ್ನು ಕೆಳ ಹಂತದವರು ಮಾಡಬಾರದು ಎಂದು ಬಯಸುವುದು ಎಷ್ಟು ಸೂಕ್ತ’ ಎಂದು ಅವರು ಪ್ರಶ್ನಿಸಿದರು.

'ಚುನಾವಣೆ ಪ್ರಕ್ರಿಯೆಯಿಂದ ದೇಶದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಹುಟ್ಟಿಕೊಂಡಿದ್ದೇ ಚುನಾವಣೆಯಿಂದಾಗಿ ಎಂದರು.
‘ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣ ಖರ್ಚು ಮಾಡದೆ ಸರ್ಕಾರವೇ ಭರಿಸುವಂತಾಗಬೇಕು. ಈ ಕುರಿತು ನೀಡಿದ ಸಲಹೆಗಳನ್ನು ಅನುಸರಿಸಿದ್ದರೆ ಸಚಿವ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಎದುರು, ‘ಚುನಾವಣಾ ಸುಧಾರಣೆ ತಂದಿದ್ದೇವೆ’ ಎಂದು  ಎದೆ ತಟ್ಟಿ ಹೇಳಿಕೊಳ್ಳಬಹುದಿತ್ತು. ಆದರೆ, ಅವಕಾಶ ಮನೆ ಬಾಗಿಲಿಗೆ ಬಂದರೂ ನೀವು ಮಾಡಲಿಲ್ಲ’ ಎಂದು ಅವರು ಚುಚ್ಚಿದರು.

ರಾಜಕೀಯ ಗುರು
‘ನಿಮ್ಮ ತಂದೆ ಕೆ.ಎಚ್‌. ಪಾಟೀಲ ಅವರು ನನ್ನ ರಾಜಕೀಯ ಗುರು. ಅವರನ್ನು ನೆನಪಿಸಿಕೊಂಡ ಕೂಡಲೇ ಅವರು ನನ್ನ ಮೈಮೇಲೆ ಬರುತ್ತಾರೆ. ಅವರು ಆಹಾರ ಸಚಿವರಾಗಿದ್ದಾಗ ಅಕ್ಕಿ ಗಿರಣಿಗಳ ಮೇಲೆ ದಾಳಿ ಮಾಡಿ ನಡುಕ ಹುಟ್ಟಿಸಿದ್ದರು. ಆದರೆ, ನೀವು ನಡುಗುತ್ತ ಸದನಕ್ಕೆ ಬರುತ್ತೀರಿ. ಅವರು ನಿಮ್ಮ ಮೈಮೇಲೂ ಬರಬೇಕು ಎಂಬುದು ನನ್ನ ಆಶಯ’ ಎಂದು ರಮೇಶಕುಮಾರ್‌ ನುಡಿದರು.

ಗ್ರಾ.ಪಂ ಚುನಾವಣೆಯಲ್ಲಿ ಬಹು ಸದಸ್ಯತ್ವದ ವಾರ್ಡ್‌ಗಳ ವಿಂಗಡಣೆಗೆ ನೀಡಿದ್ದ ಸಲಹೆಯನ್ನೇ ತಳ್ಳಿಹಾಕಲಾಯಿತು. ನಾಲ್ಕು ಜನ ಸ್ಪರ್ಧಿಸಿದಲ್ಲಿ ಮೀಸಲಾತಿಗೆ ಅನ್ವಯವಾಗಿ ಪರಿಶಿಷ್ಟ ಜಾತಿಯ ಅಭ್ಯರ್ಥಿ ಸಾಮಾನ್ಯ ಅಭ್ಯರ್ಥಿಗಿಂತ ಕಡಿಮೆ ಮತ ಗಳಿಸಿದರೂ ಗೆದ್ದಿದ್ದಾರೆ. ಈ ರೀತಿ ಆಗಬಾರದಲ್ಲವೆ ಎಂದು ಅವರು ಹೇಳಿದರು.

ಮುಖ್ಯಾಂಶಗಳು
* ಗ್ರಾ.ಪಂಗೆ ಹೆಚ್ಚು ಅಧಿಕಾರ ಕೊಟ್ಟರೆ ಭ್ರಷ್ಟಾಚಾರ ಹೆಚ್ಚುವ ಭೀತಿ ಶಾಸಕರಿಗೆ

* ಸಮಿತಿ ಶಿಫಾರಸು ಪಾಲಿಸದ ಸರ್ಕಾರ- ಟೀಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT