ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧನಾರೀಶ್ವರರು ನಾವು

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ಸಪ್ತಪದಿ ತುಳಿದು ಯಜಮಾನರ ಮನೆಮನಗಳನ್ನು ತುಂಬಲು ಬಂದ ಕೆಲವೇ ದಿನಗಳಲ್ಲಿ ನನಗೆ ಗೊತ್ತಾಯಿತು, ನಮ್ಮ ಯಜಮಾನರು ತಮ್ಮ ನಿರ್ಧಾರಗಳ ಮೇಲೆ ಅಚಲವಾಗಿರುವುದಿಲ್ಲ ಅಂತ. ಅವರಿಗೆ ಎಲ್ಲಿ ತಾನು ತಪ್ಪು ನಿರ್ಧಾರ ತೆಗೆದುಕೊಂಡೆನೋ ಎನಿಸುತ್ತಿತ್ತು. ಅವರಲ್ಲಿ ವಿಶ್ವಾಸ ತುಂಬುವುದೇ ಆಗ ನನ್ನ ಗುರಿಯಾಗಿತ್ತು.

ಅವರು ಮದುವೆಯಾದ ಹೊಸದರಲ್ಲಿ ನನ್ನ ಕೈಯಲ್ಲಿ ಎಂಟು ಸಾವಿರ ದುಡ್ಡು ಕೊಟ್ಟು ‘ನಿನ್ನ ಹತ್ತಿರ ಇರಲಿ’ ಎಂದಿದ್ದರು. ಒಂದು ತಿಂಗಳ ನಂತರ ಅವರು ‘ಆ ದುಡ್ಡಿಂದ ಏನು ಮಾಡಿದೆ’ ಎಂದಾಗ ನನ್ನ ಪರ್ಸಿನಿಂದ ಅದೇ ದುಡ್ಡು ತೆಗೆದುಕೊಟ್ಟೆ. ಅವರಿಗೆ ಆಶ್ಚರ್ಯ. ಇನ್ನೊಮ್ಮೆ ಹಬ್ಬಕ್ಕೆ ತವರು ಮನೆಗೆ ಹೋಗುವುದೋ ಅಥವಾ ಯಜಮಾನರ ಜೊತೆಗೆ ಅವರ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದೋ ಎಂಬ ಪ್ರಶ್ನೆ ನನ್ನ ಮುಂದೆ ಇಟ್ಟಾಗ ನಾನು ಸಂತೋಷದಿಂದ ದೃಢವಾಗಿ ಅವರೊಂದಿಗೆ ಹೋಗುವ ನಿರ್ಧಾರ ತೆಗೆದುಕೊಂಡೆ. 

ಅನೇಕ ಸನ್ನಿವೇಶ ಹಾಗೂ ಸಂದರ್ಭಗಳಲ್ಲಿ ಅವರಿಗೆ ಎಲ್ಲರಿಗಿಂತ ಹೆಚ್ಚಿನ ಆದ್ಯತೆ ನೀಡುತ್ತಿದ್ದ ನಾನು ಅವರ ನಿರೀಕ್ಷೆಯಂತೆ ಅವರ ಅರ್ಧಾಂಗಿ ಇದ್ದಾಳೆ ಅಂತ ತೋರಿಸಿ ಕೊಟ್ಟೆ. ಅಂದಿನಿಂದ ಇಂದಿನವರೆಗೂ ಒಂದು ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ನಿರ್ಧಾರಗಳ ಬಗ್ಗೆ ನನ್ನ ಅಭಿಪ್ರಾಯ ಕೇಳುತ್ತಾರೆ. ಎಷ್ಟೋ ಸಲ ನನ್ನ ಸಲಹೆಗಳನ್ನೇ ಅಂತಿಮ ನಿರ್ಧಾರ ಮಾಡಿದ್ದಾರೆ.

ಆಗೆಲ್ಲ ನನಗೆ ನನ್ನ ಮೇಲೆ ಹೆಮ್ಮೆ ಎನಿಸಿದ್ದು ಸುಳ್ಳಲ್ಲ. ಯಾವುದೋ ಒಂದು ನಿರ್ಧಾರದಲ್ಲಿ  ಇಬ್ಬರ ಅಭಿಪ್ರಾಯಗಳು ಬೇರೆ ಇದ್ದರೆ ಇಬ್ಬರ ನಿರ್ಧಾರಗಳ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಯೇ ಕೊನೆಗೆ ನಿರ್ಣಯ ತೆಗೆದುಕೊಂಡಿದ್ದಿದೆ. ಒಂದಂತೂ ಸಂತೋಷದ ಸಂಗತಿಯೆಂದರೆ ಅವರು ನನ್ನ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಿದ್ದಾರೆ. ಹೆಣ್ಣು ಇವಳು ಇವಳಿಗೇಕೆ ಕೇಳಬೇಕು ಅಂತ ಯಾವತ್ತೂ ಸ್ವಾಭಿಮಾನಕ್ಕೆ ಕಟ್ಟುಬಿದ್ದಿಲ್ಲ.

ಸರ್ಕಾರಿ ಉದ್ಯೋಗಕ್ಕೆ ಸೇರುವ ಸದಾವಕಾಶ ನನಗೆ ಒದಗಿ ಬಂದಾಗ ಅವರು ನನ್ನ ಆಸೆ ಕನಸುಗಳಿಗೇ ಮಹತ್ವ ಕೊಟ್ಟರು. ಅವಶ್ಯವಿಲ್ಲದಿದ್ದರೂ ಉದ್ಯೋಗಕ್ಕೆ ಸೇರುವ ನನ್ನ ಆಸೆಯನ್ನು ಅವರೊಂದಿಗೆ ಹೇಳಿಕೊಂಡಾಗ ‘ನಿನ್ನಿಷ್ಟದಂತೆ ಮಾಡು’ ಎಂದಿದ್ದರು. ಈಗ ನಾನು ಅವರೊಂದಿಗೆ ಜೀವನವನ್ನು ಹಂಚಿಕೊಂಡಿದ್ದಲ್ಲದೇ  ಜೊತೆಗೆ ಕರ್ತವ್ಯಗಳನ್ನೂ ಹಂಚಿಕೊಂಡಿದ್ದೇನೆ.

ನನ್ನ ಮುಂದೆ ಹೇಳದಿದ್ದರೂ ಅವರಿಗೆ ನನ್ನ ಬಗ್ಗೆ ಹೆಮ್ಮೆ ಇದೆ. ಒಬ್ಬ ಮಹಿಳೆ ತನ್ನ ಗಂಡನಿಂದ ಬಯಸುವುದು ಸ್ನೇಹ, ವಿಶ್ವಾಸ, ಪ್ರೀತಿಗಳ ಜೊತೆಗೆ ಗೌರವ ಕೂಡ. ನನಗೆ ನಾನು ಬಯಸಿದ್ದ ಗೌರವ ಸಿಗುತ್ತಿದೆ ಎಂದು ಹೇಳಲು ತುಂಬಾ ಸಂತೋಷ ಎನಿಸುತ್ತದೆ.

ಯಾವಾಗಲೂ ಅವರು ನನಗೆ ಅರ್ಧಾಂಗಿ ಅಂತಲೇ ಸಂಬೋಧನೆ ಮಾಡುತ್ತಾರೆ. ಶಿವ ತನ್ನ ಸತಿಯಾದ ಪಾರ್ವತಿಗೆ ಸಮಾನ ಗೌರವ ಕೊಡುವುದಕ್ಕಾಗಿಯೇ ಅರ್ಧನಾರೀಶ್ವರ ರೂಪ ತಳೆದಿದ್ದು ನಿಜವಲ್ಲವೇ? ಅದೇ ರೀತಿ ಪ್ರತಿಯೊಬ್ಬ ಪತಿಯೂ ತನ್ನ  ಸತಿಯನ್ನು ಅರ್ಧಾಂಗಿ ಎಂದು ಗೌರವ ಕೊಟ್ಟರೆ ಗಂಡ ಹೆಂಡಿರ ಜಗಳವೇ ಬರುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT