ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಪ್ತ ಜಾಲ: ಚರ್ಚೆಗೆ ಸಕಾಲ

Last Updated 24 ಜುಲೈ 2015, 19:41 IST
ಅಕ್ಷರ ಗಾತ್ರ

ಈ ವರ್ಷದ ಆರಂಭದಲ್ಲಿ ದೂರಸಂಪರ್ಕ ಇಲಾಖೆ ನೀತಿ ನಿರೂಪಣೆಯ ದೃಷ್ಟಿಯಲ್ಲಿ ‘ಅಲಿಪ್ತ ಜಾಲ’ ಅಥವಾ ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಸಾಧಕ ಮತ್ತು ಬಾಧಕಗಳನ್ನು ಅರಿಯುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿತು. ಹಲವಾರು ತಿಂಗಳುಗಳ ಕಾಲ ದೂರಸಂಪರ್ಕ ಮತ್ತು ಇಂಟರ್ನೆಟ್‌ ಆಧಾರಿತ ಸೇವೆಗಳ ಕ್ಷೇತ್ರದ ವಿವಿಧ ಪಾಲುದಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಕ್ರೋಡೀಕೃತ  ವರದಿಯೊಂದನ್ನು ಸಮಿತಿ ಜುಲೈ 16ರಂದು ಇಲಾಖೆಗೆ ಸಲ್ಲಿಸಿತು. ಇದೇ ವೇಳೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೂಡಾ ಸ್ವತಂತ್ರವಾಗಿ ಮತ್ತೊಂದು ಪ್ರಯತ್ನವನ್ನೂ ನಡೆಸಿತ್ತು.

ಅದು ಸಾರ್ವಜನಿಕ ಚರ್ಚೆಯ ಉದ್ದೇಶದಿಂದ ಪ್ರಕಟಿಸಿದ್ದ ದಾಖಲೆಗೆ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದವು. ಇದೊಂದು ದಾಖಲೆಯೇ ಸರಿ. ಇದರ ಹಿಂದೆ ‘ಸೇವ್ ದ ಇಂಟರ್‌ನೆಟ್’ ಆಂದೋಲನವಿತ್ತು. ಟ್ರಾಯ್ ಇನ್ನೂ ತನ್ನ ವರದಿ ಮತ್ತು ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಟ್ರಾಯ್‌ನ ಶಿಫಾರಸುಗಳನ್ನು ಪಡೆದುಕೊಂಡ ನಂತರ ಸರ್ಕಾರ ಅಲಿಪ್ತ ಜಾಲ ಪರಿಕಲ್ಪನೆ ಮತ್ತು ಕೆಲವು ಇಂಟರ್ನೆಟ್‌ ಆಧಾರಿತ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ದೂರಸಂಪರ್ಕ ಇಲಾಖೆ ವರದಿಯ ಪಠ್ಯದಲ್ಲಿ ಕೆಲವೆಡೆ ‘ನಾಗರಿಕ ಸಮಾಜ’ದ ಪ್ರತಿನಿಧಿಗಳ ಹೇಳಿಕೆಗಳ ಸಾರಾಂಶವನ್ನು ಒದಗಿಸುವ ತಪ್ಪುಗಳಾಗಿವೆ. ಹೀಗೆ ನಾಗರಿಕ ಸಮಾಜದ ಪ್ರತಿನಿಧಿಯಾಗಿ ಸಮಿತಿಯೆದುರು ಮೌಖಿಕ ಹೇಳಿಕೆ ನೀಡಿದವರಲ್ಲಿ ನಾನೂ ಒಬ್ಬ. ವರದಿಯ ಒಂದು ಭಾಗದಲ್ಲಿ ‘ಇಂಟರ್ನೆಟ್‌ ಆಧಾರಿತ ಧ್ವನಿ ಸೇವೆಗಳನ್ನು ನೀಡುವುದರಲ್ಲಿ ನಡೆಯುತ್ತಿರುವ ಮೇಲಾಟ ಸರ್ಕಾರ ಮತ್ತು ಟೆಲಿಕಾಂ ಸೇವೆ ನೀಡುವ ಕಂಪೆನಿಗಳಿಗೆ ನಷ್ಟವನ್ನುಂಟು ಮಾಡುತ್ತಿದೆ. ಹಾಗೆಯೇ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸಿ ಪ್ರತ್ಯಕ್ಷ ಮತ್ತು ಪರೋಕ್ಷ ನಷ್ಟಗಳಿಗೆ ಕಾರಣವಾಗಿದೆ’ ಎಂಬ ಸಾಲುಗಳನ್ನು ನಾಗರಿಕ ಸಮಾಜದ ಪ್ರತಿನಿಧಿಗಳು ಹೇಳಿದ್ದೆಂದು ಉಲ್ಲೇಖಿಸಲಾಗಿದೆ. ನನಗೆ ಗೊತ್ತಿರುವಂತೆ ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದ ಯಾರ ಮುಖ್ಯ ಕಾಳಜಿಯೂ ಇದಾಗಿರಲಿಲ್ಲ. ಆದರೂ ವರದಿಯ ವಿಶ್ಲೇಷಣೆ ಮತ್ತು ಶಿಫಾರಸುಗಳ ಮೇಲೆ ಇಂಥ ತಪ್ಪುಗಳು ಪರಿಣಾಮ ಬೀರಿಲ್ಲ ಎಂದು ಹೇಳುವುದಕ್ಕೇನೂ ಅಡ್ಡಿಯಿಲ್ಲ.

ಇಂಟರ್ನೆಟ್‌ ಆಧಾರಿತ ಸಂವಹನ ಸೇವೆಗಳು ಅಥವಾ ಟೆಲಿಕಾಂ ಕ್ಷೇತ್ರ ಗುರುತಿಸುವ ಓವರ್ ದಿ ಟಾಪ್ ಸೇವೆಗಳು (ಓಟಿಟಿ) ಅಂದರೆ ವಾಟ್ಸ್ ಆಪ್, ವೈಬರ್ ಮುಂತಾದ ಸೇವೆಗಳು ಸದ್ಯಕ್ಕೆ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಇಂಟರ್ನೆಟ್‌ ಆಧಾರಿತ ಸಂದೇಶ ಅಥವಾ ಧ್ವನಿ ಸಂವಹನ ಸೇವೆಗಳನ್ನು ನೀಡುವವರು ಅದಕ್ಕಾಗಿ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕಾದ ಅಗತ್ಯವಿಲ್ಲ. ದೂರವಾಣಿ ಸೇವೆ, ಎಸ್ಎಂಎಸ್ ಸೇವೆ ಮುಂತಾದವುಗಳನ್ನು ನೀಡುವವರು ಪಾಲಿಸಬೇಕಿರುವ ನಿಯಮಗಳನ್ನೂ ಇವರು ಪಾಲಿಸಬೇಕಾಗಿಲ್ಲ. ಅಂದರೆ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ನೀಡುವವರು ಜಾಹೀರಾತು ಕರೆಗಳು, ಮಾರ್ಕೆಟಿಂಗ್ ಕರೆಗಳು ಇತ್ಯಾದಿಗಳು ಗ್ರಾಹಕರನ್ನು ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ತಮ್ಮ ಗ್ರಾಹಕರು ‘ಡು ನಾಟ್ ಡಿಸ್ಟರ್ಬ್’ ವ್ಯವಸ್ಥೆಗೆ ನೋಂದಾಯಿಸಿಕೊಂಡಿದ್ದರೆ ಅವರಿಗೆ ಮಾರ್ಕೆಟಿಂಗ್ ಕರೆ ಅಥವಾ ಎಸ್ಎಂಎಸ್‌ಗಳು ಹೋಗದಂತೆ ನೋಡಿಕೊಳ್ಳಬೇಕು. ಇಂಟರ್ನೆಟ್‌ ಆಧಾರಿತ ಸಂದೇಶ ಮತ್ತು ಧ್ವನಿ ಸೇವೆಗಳನ್ನು ನೀಡುವವರಿಗೆ ಇಂಥ ಯಾವ ನಿಯಮಗಳೂ ಅನ್ವಯಿಸುವುದಿಲ್ಲ. ಟೆಲಿಕಾಂ ಸೇವೆಗಳನ್ನು ನೀಡುವವರು ಲೈಸೆನ್ಸ್ ಶುಲ್ಕದ ರೂಪದಲ್ಲಿ ತಮ್ಮ ವರಮಾನವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು. ವಾಟ್‌್ಸಆ್ಯಪ್‌, ವೈಬರ್‌ಗಳು ಇಂಥದ್ದೇನನ್ನೂ ಮಾಡಬೇಕಾಗಿಲ್ಲ. ಇಂಟರ್ನೆಟ್‌ ಸೇವೆಯನ್ನು ಒದಗಿಸುವ ನೆಟ್‌ವರ್ಕ್ ಕ್ಷೇತ್ರ ಮತ್ತು ಅದನ್ನು ಆಧಾರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುವ ಸೇವಾ ಕ್ಷೇತ್ರಗಳೆರಡನ್ನೂ ಪ್ರತ್ಯೇಕಿಸಿ ನೋಡುವ ವರದಿ ಎರಡಕ್ಕೂ ಭಿನ್ನ ನಿಯಂತ್ರಣ ವ್ಯವಸ್ಥೆಗಳಿರಬೇಕು ಎನ್ನುತ್ತದೆ. ಅಲಿಪ್ತ ಜಾಲ ಪರಿಕಲ್ಪನೆಯ ಮೇಲೆ ಈ ನಿಲುವು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದು ದೂರಗಾಮಿ ಪರಿಣಾಮಗಳನ್ನು ಬೀರಬಹುದು.

ಅಲಿಪ್ತ ಜಾಲ ಪರಿಕಲ್ಪನೆಯ ಮೂಲ ತತ್ವಗಳನ್ನು ಪಾಲಿಸಬೇಕು ಎಂದು ವರದಿ ಹೇಳುತ್ತದೆ. ಆದರೆ ಈ ಮೂಲತತ್ವಗಳು ಯಾವುವು ಎಂಬುದನ್ನು ವಿವರಿಸಿಲ್ಲ. ಕನಿಷ್ಠ ತಾನು ಸ್ವೀಕರಿಸಿದ ಹೇಳಿಕೆಗಳಲ್ಲಿರುವ ಅಲಿಪ್ತ ಜಾಲದ ವ್ಯಾಖ್ಯೆಯನ್ನು ಉಲ್ಲೇಖಿಸಲಾಗಿದೆಯಷ್ಟೆ. ಮುಂದಿನ ದಿನಗಳಲ್ಲಿ ಈ ಅಂಶ ಕಾನೂನಿನಲ್ಲಿ ಸ್ಥಾನವೊಂದನ್ನು ಪಡೆಯಬೇಕಾಗಿದೆ. ನಿರ್ದಿಷ್ಟ ವೆಬ್‌ಸೈಟ್ ಅಥವಾ ಸೇವೆಗಳಿಗೆ ಉಚಿತ ಇಂಟರ್ನೆಟ್‌ ಒದಗಿಸುವ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕೆ ವರದಿ ಸಲಹೆ ಮಾಡಿದೆ. ಆದರೆ ಅಗತ್ಯ ಸೇವೆಗಳಿಗೆ ಉಚಿತ ಇಂಟರ್ನೆಟ್‌ ಒದಗಿಸುವುದು ತಪ್ಪಲ್ಲ ಎಂದೂ ಹೇಳುತ್ತದೆ. ಇಂಟರ್ನೆಟ್‌ ಆಧಾರಿತ ಧ್ವನಿ ಸೇವೆಗೂ ಲೈಸೆನ್ಸಿಂಗ್ ವ್ಯವಸ್ಥೆಯನ್ನು ತರಬೇಕೆಂಬ ಸಲಹೆ ಅತ್ಯಂತ ಅಪಾಯಕಾರಿಯಾದುದು. ಇದರಿಂದಾಗಿ ಲೈಸೆನ್ಸ್ ಇಲ್ಲದೇ ಸೇವೆ ನೀಡುತ್ತಿರುವವರೆಲ್ಲ ಅಪರಾಧಿಗಳಾಗಿಬಿಡುವ ದುರಂತ ಇಲ್ಲಿದೆ.

ಒಂದು ವೇಳೆ ಇಂಟರ್ನೆಟ್‌ ಆಧಾರಿತ ಧ್ವನಿ ಕರೆಗಳ ಮೇಲೆ ನಿಯಂತ್ರಣವಿರುವುದು ರಾಷ್ಟ್ರೀಯ ಹಿತಾಸಕ್ತಿಯೇ ಆಗಿದ್ದರೂ ಇಂಥ ಸೇವೆ ನೀಡುವುದಕ್ಕೆ ಮೊದಲೇ

ಲೈಸೆನ್ಸ್ ಪಡೆಯಬೇಕೆಂಬ ನೀತಿಯನ್ನು ರೂಪಿಸುವುದು ಪ್ರಾಯೋಗಿಕವಲ್ಲ. ಇದರ ಬದಲಿಗೆ ಸೇವೆಯ ಮೇಲೆ ನಿಗಾ ಇರಿಸುವ ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸಬಹುದು. ಒಂದು ವೇಳೆ ಲೈಸೆನ್ಸಿಂಗ್ ವ್ಯವಸ್ಥೆಯನ್ನು ತಂದರೆ ಭಾರತೀಯ ಮೆಸೇಜಿಂಗ್ ಸೇವೆಗಳಾದ ‘ಹೈಕ್’ನಂತಹ ಕಂಪೆನಿಗಳಿಗೆ ಹೆಚ್ಚು ಅನುಕೂಲ ಒದಗಿಬಂದು ಇವುಗಳಿಗೆ ಸ್ಪರ್ಧೆ ಒಡ್ಡುತ್ತಿರುವ ‘ವೈಬರ್’ನಂಥ ಸೇವೆಗಳು ಲೈಸೆನ್ಸಿಂಗ್ ಕಾರಣದಿಂದ ಹಿನ್ನಡೆ ಅನುಭವಿಸಬಹುದು. ವರದಿ ಇಂಟರ್ನೆಟ್‌ ಆಧಾರಿತ ಸಂವಹನ ಸೇವೆ ಮತ್ತು ಆನ್ವಯಿಕ ಸೇವೆಗಳ ನಡುವಣ ವ್ಯತ್ಯಾಸವನ್ನು ಹೇಗೆ ಗುರುತಿಸಿದೆ ಎಂದು ಸ್ಪಷ್ಟವಿಲ್ಲ.

ಆನ್ವಯಿಕ ಸೇವೆಗಳಲ್ಲಿ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳಲು ಬಳಸುವ ಆ್ಯಪ್‌ಗಳಿರುವಂತೆಯೇ ಪಠ್ಯ ಸಂದೇಶಗಳನ್ನು ಕಳುಹಿಸುವ ಆ್ಯಪ್‌ಗಳೂ ಒಳಗೊಂಡಿವೆ. ಇಷ್ಟರ ಮೇಲೆ ಇಂಟರ್ನೆಟ್‌ ಆಧಾರಿತ ಧ್ವನಿ ಸೇವೆಯನ್ನು ಒಂದು ಕಂಪೆನಿಯೇ ಒದಗಿಸಬೇಕಾಗಿಲ್ಲ. ವ್ಯಕ್ತಿಯೊಬ್ಬ ತನ್ನ ಸ್ವಂತದ ಎಕ್ಸ್ ಎಂಪಿಪಿ (ಎಕ್ಸ್‌ಟೆನ್ಸಿಬಲ್ ಮೆಸೇಜಿಂಗ್ ಅಂಡ್ ಪ್ರೆಸೆನ್ಸ್ ಪ್ರೊಟೋಕಾಲ್) ಸರ್ವರ್ ಬಳಸಿ ಕೂಡಾ ಪಠ್ಯ, ವಿಡಿಯೊ ಅಥವಾ ಧ್ವನಿ ಸಂವಹನ ಸೇವೆಯೊಂದನ್ನು ಸೃಷ್ಟಿಸಿಕೊಳ್ಳಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ. ಇಂಥವರು ಕೂಡಾ ಲೈಸೆನ್ಸ್ ಪಡೆಯಬೇಕೆಂಬ ನಿಯಮವನ್ನು ರೂಪಿಸಬೇಕೇ, ಹಾಗೆಯೇ ಸಂವಹನ ಸೇವೆಗಳಲ್ಲಿ ವರಮಾನವನ್ನು ಹಂಚಿಕೊಳ್ಳುವ ವ್ಯವಸ್ಥೆ ಇರಬೇಕೇ ಎಂಬುದರ ಬಗ್ಗೆಯೂ ವರದಿಯಲ್ಲಿ ಸ್ಪಷ್ಟವಾಗಿಲ್ಲ.

ಈಗ ಟೆಲಿಕಾಂ ಸೇವೆಗಳಿಗೆ ಇರುವ ಲೈಸೆನ್ಸಿಂಗ್ ವ್ಯವಸ್ಥೆಯಲ್ಲಿ ವರಮಾನ ಹಂಚಿಕೆಗೆ ಸಂಬಂಧಿಸಿದ ಸೂತ್ರವಿದೆ. ಒಂದು ವೇಳೆ ವರಮಾನ ಹಂಚಿಕೆಯ ವ್ಯವಸ್ಥೆ ಇದೆ ಎಂದಾದರೆ ವಾಟ್ಸ್ಆ್ಯಪ್‌ನಂತ ಸೇವೆಯಲ್ಲಿ ವರಮಾನ ಹಂಚಿಕೆಯನ್ನು ಹೇಗೆ ನಿರ್ಧರಿಸುವುದು? ಏರ್‌ಟೆಲ್ ಮೊಬೈಲ್ ಬಳಸುವಾತ ಟಾಟಾ ಡೊಕೊಮ ಸೇವೆಯನ್ನು ಬಳಸುವಾತನಿಗೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬಹುದಲ್ಲವೇ? ಆಗ ಈ ಕಂಪೆನಿಗಳ ನಡುವಣ ವರಮಾನ ಹಂಚಿಕೆ ಹೇಗೆ ಎಂಬಂಥ ಪ್ರಶ್ನೆಗಳಿಗೆ ಉತ್ತರವಿಲ್ಲ.

ಸದ್ಯದ ಮಟ್ಟಿಗೆ ಈ ವರದಿ ಗ್ರಾಹಕನ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂದು ಹೇಳಬಹುದು. ಈ ವರದಿ ಆಹ್ವಾನಿತ ಸಾರ್ವಜನಿಕ ಮತ್ತು ಉದ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದವನ್ನು ಆಧಾರವಾಗಿಟ್ಟುಕೊಂಡು ಮಾಡಲಾದ ಶಿಫಾರಸುಗಳ ಪಟ್ಟಿಯೇ ಹೊರತು ಬೇರೇನೂ ಅಲ್ಲ. ಇದು ಅಲಿಪ್ತ ಜಾಲ ತತ್ವವನ್ನು ಎತ್ತಿ ಹಿಡಿಯುತ್ತದೆಯೇ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಬಹುದು. ಅಲಿಪ್ತ ಜಾಲ ಪರಿಕಲ್ಪನೆಯ ಮೂಲತತ್ವಗಳನ್ನು ಪಾಲಿಸಬೇಕು ಎಂದು ವರದಿ ಸ್ಪಷ್ಟವಾಗಿ ಹೇಳಿದೆ.

ಉಚಿತ ಇಂಟರ್ನೆಟ್‌ ಸೇವೆ ಒದಗಿಸುವ ವಿಷಯದಲ್ಲಂತೂ ಕೆಲವು ಸ್ಪಷ್ಟ ನಿಯಮಾವಳಿಗಳನ್ನೇ ವರದಿ ಶಿಫಾರಸು ಮಾಡಿದೆ. ಅದರಂತೆ ನಿರ್ದಿಷ್ಟ ಸೇವಾದಾತ ಕಂಪೆನಿಯೊಂದು ನಿರ್ದಿಷ್ಟ ತಾಣಗಳನ್ನು ಬಳಸುವವರಿಗೆ ಉಚಿತ ಇಂಟರ್ನೆಟ್‌ ಒದಗಿಸುವುದಾದರೆ ಅದರ ಪಟ್ಟಿಯೊಂದನ್ನು ದೂರಸಂಪರ್ಕ ಇಲಾಖೆಯ ಅಡಿಯಲ್ಲಿರುವ ತಜ್ಞರ ಸಮಿತಿಯೆದುರು ಮಂಡಿಸಿ ಅನುಮತಿ ಪಡೆಯಬೇಕು. ಈ ಬಗೆಯ ಸೇವೆಯಿಂದ ತೊಂದರೆಯಾಗುತ್ತಿದ್ದರೆ ಅದರ ಕುರಿತಂತೆ ಗ್ರಾಹಕರು ದೂರುವುದಕ್ಕೂ ಅವಕಾಶವಿರಬೇಕು. ಈ ಕುರಿತು ವಿಚಾರಣೆ ನಡೆಸಿ ಇಂಟರ್ನೆಟ್‌ ಸೇವಾದಾತ ಕಂಪೆನಿಗೆ ದಂಡ ಹಾಕುವ ಅವಕಾಶವೂ ವರದಿಯ ಶಿಫಾರಸುಗಳಲ್ಲಿದೆ.

ವಾಟ್ಸ್ಆ್ಯಪ್ ಅಥವಾ ವೈಬರ್‌ನಂಥ ಸೇವೆಗಳು ದುಬಾರಿಯಾಗುತ್ತವೆಯೇ? ವರದಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡರೆ ಈ ಬಗೆಯ ಸೇವೆಗಳಿಗೆ ಉಚಿತ ಇಂಟರ್ನೆಟ್‌ ದೊರೆಯುವುದಿಲ್ಲ. ಇದರಿಂದ ಸ್ಪರ್ಧಾತ್ಮಕತೆಗೆ ಅಡ್ಡಿಯಾಗುತ್ತದೆ ಎಂಬುದು ವರದಿಯ ನಿಲುವು. ಇಲ್ಲಿರುವ ಸಂಗತಿ ಅದಲ್ಲ. ವಾಟ್ಸ್ಆ್ಯಪ್‌ನಂಥ ಸೇವೆಗಳಿಗೂ ಲೈಸೆನ್ಸಿಂಗ್ ವ್ಯವಸ್ಥೆಯೊಂದನ್ನು ವರದಿ ಪ್ರಸ್ತಾಪಿಸಿದೆ. ಇದನ್ನು ಸರ್ಕಾರ ಒಪ್ಪಿಕೊಂಡರೆ ಈ ಸೇವೆಗಳನ್ನು ನೀಡುವವರು ವಿಧಿಸುವ ಶುಲ್ಕದ ಸ್ವರೂಪ ಬದಲಾಗುತ್ತದೆ. ಲೈಸೆನ್ಸಿಂಗ್‌ಗಾಗಿ ಅವರು ಪಾವತಿಸುವ ಮೊತ್ತದ ಹೊರೆ ಗ್ರಾಹಕರ ಮೇಲೆಯೇ ಬೀಳುತ್ತದೆ. ಒಂದು ವೇಳೆ 90ರ ದಶಕದಲ್ಲಿ ಇಂಟರ್ನೆಟ್‌ ಸೇವಾದಾತರಿಗೆ ನಗಣ್ಯ ಪ್ರಮಾಣದ ಶುಲ್ಕ ವಿಧಿಸಿದಂಥ ನಿರ್ಧಾರವನ್ನು ಈಗಲೂ ಕೈಗೊಂಡರೆ ವಾಟ್ಸ್ಆ್ಯಪ್ ಬಗೆಯ ಸೇವೆಗಳ ಶುಲ್ಕದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಲಾರದು.

ತಪ್ಪು ಕಲ್ಪನೆಗಳು: ಹಲವು ಮಾಧ್ಯಮ ವರದಿಗಳು ಇಂಟರ್‌ನೆಟ್ ಆಧಾರಿತ ಧ್ವನಿ ಸೇವೆಗಳನ್ನು ಸ್ಥಳೀಯ ಕರೆಗಳಿಗೆ ಬಳಸಿದಾಗ ದುಪ್ಪಟ್ಟು ಶುಲ್ಕ ವಿಧಿಸಲು ಶಿಫಾರಸು ಮಾಡಿದೆ ಎಂದು ಹೇಳಿವೆ. ಇದು ನಿಜವಲ್ಲ.  ಈ ಬಗೆ ಸೇವೆಗಳಿಗೆ ಅನುಕೂಲಕರವಾಗಿ ಪರಿಣಮಿಸಿರುವ ನಿಯಂತ್ರಣರಾಹಿತ್ಯ ಸ್ಥಿತಿಯ ಬಗ್ಗೆ ವರದಿ ಚರ್ಚಿಸಿದೆ, ನಿಯಂತ್ರಣದ ಅಗತ್ಯವನ್ನು ಹೇಳಿದೆ. ನಿಯಂತ್ರಣವೆಂದರೆ ಶುಲ್ಕ ವಿಧಿಸುವುದು ಎಂದು ಭಾವಿಸಬೇಕಾಗಿಲ್ಲ. ಔದ್ಯಮಿಕ ಸೇವೆಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಸೇವೆಗಳು ಅಥವಾ ಸರ್ಕಾರಿ ಸೇವೆಗಳನ್ನು ‘ಅಲಿಪ್ತ ಜಾಲ’ದ ಪರಿಮಿತಿಯಿಂದ ಹೊರಗಿಡುವ ಸಲಹೆಯ ದುರ್ಬಳಕೆಯ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಅನಗತ್ಯವಾದ ಆತಂಕ. ಔದ್ಯಮಿಕ ಸೇವೆಗಳು ಸಾರ್ವಜನಿಕ ಬಳಕೆಯ ಇಂಟರ್ನೆಟ್‌ನ ಭಾಗವಲ್ಲ. ತುರ್ತುಸೇವೆಗಳು ಮತ್ತು ಸರ್ಕಾರಿ ಸೇವೆಗಳೂ ಅಷ್ಟೇ. ಇಷ್ಟಕ್ಕೂ ಇದೊಂದು ವರದಿಯೇ ಹೊರತು ಕಾನೂನಲ್ಲ. ‘ಅಲಿಪ್ತ ಜಾಲ’ ಪರಿಕಲ್ಪನೆಯನ್ನು ಸಡಿಲಿಸಬೇಕಾದ ಸಂದರ್ಭಗಳನ್ನೆಲ್ಲ ವರದಿ ಸ್ಪಷ್ಟವಾಗಿಯೇ ಹೇಳಿದೆ. ನಿರ್ದಿಷ್ಟ ಸೇವೆಗಳಿಗೆ ಉಚಿತ ಇಂಟರ್ನೆಟ್‌ ಸೇವೆ ಒದಗಿಸಲು ವರದಿ ಒಪ್ಪಿಗೆ ನೀಡಿದೆ ಎಂಬುದು ಸುಳ್ಳು. ಸ್ಪರ್ಧೆ ಮತ್ತು ಮಾರುಕಟ್ಟೆಯನ್ನು ಹಾಳು ಮಾಡುವ ಯಾವುದಕ್ಕೂ ನಿಯಂತ್ರಣ ಪ್ರಾಧಿಕಾರಗಳು ಅನುಮತಿ ನೀಡಬಾರದು ಎಂದು ವರದಿ ಸ್ಪಷ್ಟವಾಗಿಯೇ ಹೇಳಿದೆ.

ಮುಂದೇನು?: ಅಲಿಪ್ತ ಜಾಲ ಪರಿಕಲ್ಪನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆ ಇನ್ನಷ್ಟು ಸೂಕ್ಷ್ಮಗಳನ್ನು ಒಳಗೊಳ್ಳಬೇಕಿದೆ. ಈಗಿನ ಚರ್ಚೆ ಅಲಿಪ್ತ ಜಾಲದ ಪರ ಇಲ್ಲವೇ ವಿರುದ್ಧ ಎನ್ನುವಂತೆ ಮುಂದುವರಿಯುತ್ತಿದೆ. ಈ ಪರಿಕಲ್ಪನೆಯ ತಳಹದಿಯಾಗಿರುವ ಸಂಕೀರ್ಣವಾದ ಸ್ಪರ್ಧಾತ್ಮಕ ವ್ಯಾಪಾರ ನೀತಿ, ಆವಿಷ್ಕಾರ ನೀತಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳೆಲ್ಲವೂ ಸಾಪೇಕ್ಷವಾದ ಪರಿಕಲ್ಪನೆಗಳು. ಆದ್ದರಿಂದ ಅಲಿಪ್ತ ಜಾಲ ಎಂಬ ಪರಿಕಲ್ಪನೆಯೂ ಸಾಪೇಕ್ಷವಾಗಿರಬಹುದು ಎಂಬುದು ನಮಗೆ ಅರಿವಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT