ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಶಾ ಐಟಂ ಪ್ರೀತಿ–ನೀತಿ

Last Updated 10 ಮೇ 2016, 19:30 IST
ಅಕ್ಷರ ಗಾತ್ರ

ಐಟಂ ಡಾನ್ಸ್‌ಗೆ ಹೊಸ ವ್ಯಾಖ್ಯಾನ ನೀಡಲು ಬಯಸಿರುವವರು ಅಲಿಶಾ ಆಂದ್ರಡೆ. ನಾಯಕಿಯಾಗಬೇಕು ಎಂಬ ಕನಸು ಹೊತ್ತಿರುವವರ ನಡುವೆ ‘ಐಟಂ ಡಾನ್ಸರ್‌’ ಆಗಿಯೇ ಹೆಸರು ಮಾಡಬೇಕೆಂಬ ಅಲಿಶಾ ವಿಭಿನ್ನವಾಗಿ ಕಾಣಿಸುತ್ತಾರೆ.

‘ಐಟಂ ಸಾಂಗ್‌ಗಳಿಗೆ ಅದರದ್ದೇ ವೈಶಿಷ್ಟ್ಯವಿದೆ. ಅದು ಅಶ್ಲೀಲವಲ್ಲ. ನೃತ್ಯ ಒಂದು ಕಲೆ. ಅದರಲ್ಲಿ ಐಟಂ ನೃತ್ಯವೂ ಒಂದು. ಗ್ಲಾಮರ್‌, ಎಕ್ಸ್‌ಪ್ರೆಷನ್ಸ್‌, ನೃತ್ಯ, ಎಲ್ಲದರ ಪ್ಯಾಕೇಜ್‌ ಅದು. ಹೀಗಾಗಿ ಐಟಂ ಎಂದರೆ ಸುಲಭದ ಮಾತಲ್ಲ’. ಸಿನಿಮಾಗಳಲ್ಲಿ ಐಟಂ ಸಾಂಗ್‌ ಎಂದರೆ ಹಳೆಯ ಸಿನಿಮಾಗಳ ಕ್ಯಾಬರೆ ನೃತ್ಯದ ಮತ್ತೊಂದು ಹೆಸರು ಎನ್ನುವರಿಗೆ ಐಟಂ ಬೆಡಗಿ ಅಲಿಶಾ ಆಂದ್ರಡೆ ನೀಡುವ ಉತ್ತರವಿದು.

ಐಟಂ ಸಾಂಗ್‌ಗಳ ಅಗತ್ಯ, ಅವುಗಳನ್ನು ಪ್ರಸ್ತುತಪಡಿಸುವ ಬಗೆಯ ಕುರಿತು ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ನಾಯಕಿಯರೇ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕೆಲವರು ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಾರೆ ಎಂದು ಸುದ್ದಿಯಾಗುತ್ತಿದ್ದಾರೆ. ಇವುಗಳ ನಡುವೆ ಐಟಂ ಸಾಂಗ್‌ಗಳನ್ನೇ ನೆಚ್ಚಿಕೊಂಡಿರುವ ಅನೇಕ ನರ್ತಕಿಯರಿದ್ದಾರೆ. ಅವರಲ್ಲಿ ಹೆಚ್ಚಿನವರು ನಟಿಯಾಗುವ ಬಯಕೆ ಈಡೇರದೆಯೇ ಉಳಿದವರು. ನಟಿಯಾಗಲೇಬೇಕೆಂದಿಲ್ಲ, ಐಟಂ ಸಾಂಗ್‌ಗಳೇ ಸಾಕು ಎನ್ನುವವರು ವಿರಳಾತಿವಿರಳ. ಅವರಲ್ಲಿ ಅಲಿಶಾ ಒಬ್ಬರು.

ಸಿನಿಮಾಕ್ಕೆ ಅಗತ್ಯವಿಲ್ಲದಿದ್ದರೂ ಈಗಿನ ಪ್ರೇಕ್ಷಕರೂ ಆಕರ್ಷಿತರಾಗುತ್ತಾರೆ ಎಂಬ ಭರವಸೆಯೊಂದಿಗೆ ಐಟಂ ಸಾಂಗ್‌ಗಳನ್ನು ಸಿನಿಮಾ ಮಧ್ಯೆ ತುರುಕುವವರಿದ್ದಾರೆ. ದಶಕಗಳ ಹಿಂದಿನ ಕಾಲದ ಸಿನಿಮಾಗಳಲ್ಲಿನ ಕ್ಯಾಬರೆ ಹಾಡುಗಳಂತೆ. ಆ ಯುಗ ಮರಳಿ ಬರಬೇಕು. ಸಿಲ್ಕ್‌ ಸ್ಮಿತಾ, ಡಿಸ್ಕೊ ಶಾಂತಿ ಮುಂತಾದ ನರ್ತಕಿಯರು ಮೂಡಿಸಿದ ಛಾಪನ್ನು ತಾನೂ ಮೂಡಿಸಬೇಕು ಎನ್ನುತ್ತಾರೆ ಅಲಿಶಾ. ಚಿತ್ರರಂಗಕ್ಕೆ ಕಾಲಿಟ್ಟ 5 ವರ್ಷದಲ್ಲಿ ಸುಮಾರು 70 ಸಿನಿಮಾಗಳಿಗೆ ಬಣ್ಣಹಚ್ಚಿದ್ದಾರೆ. ಅವುಗಳಲ್ಲಿ ಐಟಂ ಸಾಂಗ್‌ ಪಾಲು ಹಿರಿದು.

ಕುವೈತ್‌ನಿಂದ ಬೆಂಗಳೂರುವರೆಗೆ
ಅಲಿಶಾ ಹುಟ್ಟಿದ್ದು ಕುವೈತ್‌ನಲ್ಲಿ. ತಂದೆಯ ತವರು ಮುಂಬೈ. ಪ್ರಾಥಮಿಕ ಶಿಕ್ಷಣ ಮುಂಬೈನಲ್ಲಿ ಮುಗಿಸಿ ಮಂಗಳೂರಿಗೆ ಬಂದ ಅವರು ಅಲ್ಲಿಯೇ ಮಾನವ ಸಂಪನ್ಮೂಲ ವಿಷಯದಲ್ಲಿ ಪದವಿಯನ್ನು ಪೂರೈಸಿದರು. ಚಿಕ್ಕಂದಿನಿಂದಲೂ ನೃತ್ಯದ ಹುಚ್ಚು. ಕಾಲೇಜಿಗೆ ಬಂದಾಗ ಮಾಡೆಲಿಂಗ್‌ ಕೂಡ ಹವ್ಯಾಸದೊಂದಿಗೆ ಸೇರಿಕೊಂಡಿತು. ತನ್ನ ಹಣವನ್ನು ತಾನೇ ಸಂಪಾದಿಸಿಕೊಳ್ಳುವ ಸ್ವಾವಲಂಬನೆಯ ಮಂತ್ರವೂ ಓದಿನ ನಡುವೆ ನಿರಂತರ ಡಾನ್ಸ್‌ ಷೋ ಮತ್ತು ಮಾಡೆಲಿಂಗ್‌ನಲ್ಲಿ ತೊಡಗಿಕೊಳ್ಳುವಂತೆ ಮಾಡಿತು.

ಅಲಿಶಾ ಅವರನ್ನು ಐಟಂ ಡಾನ್ಸ್‌ ಕಡೆ ಒಲವು ತೋರುವಂತೆ ಮಾಡಿದ್ದು ಅವರ ಸ್ನೇಹಿತೆ. ‘ಹೇಗಿದ್ದರೂ ಚೆನ್ನಾಗಿ ಡಾನ್ಸ್‌  ಮಾಡುತ್ತಿ. ಐಟಂ ಡಾನ್ಸ್‌ಗಳಲ್ಲಿ ಮಾಡು’ ಎಂದು ಸಲಹೆ ನೀಡಿದರು. ಬಳಿಕ ಅದೇ ವೃತ್ತಿಯೂ ಆಯಿತು. ಹೀಗೆ ‘ಮಾಯಾವಿ’ ಎಂಬ ಚಿತ್ರದೊಂದಿಗೆ ಶುರುವಾದ ಐಟಂ ನಂಟು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗಗಳಿಗೂ ದಾಟಿದೆ. ಮಲಯಾಳಂ, ತುಳು, ಕೊಂಕಣಿ, ಉರ್ದು ಚಿತ್ರಗಳಲ್ಲಿಯೂ ಅಲಿಶಾ ಬಣ್ಣಹಚ್ಚಿದ್ದಾರೆ.

ಐಟಂ ಸಾಂಗ್‌ ಜತೆಗೆ ನಟಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ‘ಅಮಾನುಷ’ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ. ‘ಗಜಕೇಸರಿ’, ‘ಕೊಳ್ಳೇಗಾಲ’, ‘ಮತ್ತೆ ಬಂದ ವೀರಪ್ಪನ್‌’, ‘ಲಯನ್‌ ಈಸ್‌ ಬ್ಯಾಕ್‌’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಬಣ್ಣದ ಹಂಗಿನ ಮಧ್ಯೆ ಓದುವ ತುಡಿತ ಕುಂದಿಲ್ಲ. ದೂರಶಿಕ್ಷಣದಲ್ಲಿ ಎಂಎಸ್‌ಡಬ್ಲ್ಯು ಪದವಿ ಮಾಡುತ್ತಿರುವ ಅವರು, ಸಿನಿಮಾವನ್ನು ಸಂಪೂರ್ಣ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರಂತೆ.

‘ಐಟಂ’ನಲ್ಲೇ ಖುಷಿ
ಐಟಂ ಸಾಂಗ್‌ಗಳಿಂದ ಗುರುತಿಸಿಕೊಂಡು, ಅವುಗಳಿಗೇ ಸೀಮಿತವಾಗುವರನ್ನು ಜನ ಬೇರೆ ದೃಷ್ಟಿಯಿಂದ ನೋಡುತ್ತಾರಲ್ಲವೇ? ಎಂದರೆ, ತಮಗೆ ಅಂತಹ ಅನುಭವ ಆಗಿಲ್ಲ ಎನ್ನುತ್ತಾರೆ ಅಲಿಶಾ. ತಂತ್ರಜ್ಞರು, ಸಿನಿಮಾ ತಂಡಗಳು ಮತ್ತು ಜನರಿಂದ ಅವರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆಯಂತೆ. ಐಟಂ ಸಾಂಗಾ? ಎಂದು ವ್ಯಂಗ್ಯವಾಡಿದವರಿಲ್ಲ.

ಯಾರೂ ಟೀಕಿಸಿಲ್ಲ. ಬದಲಾಗಿ ಒಳ್ಳೆಯ ಕಲಾವಿದೆ ಎಂದು ಗುರುತಿಸುತ್ತಾರೆ, ಗೌರವಿಸುತ್ತಾರೆ. ನೃತ್ಯ ಯಾವ ಪ್ರಕಾರದ್ದಾದರೂ ಅದೊಂದು ಕಲೆ. ಒಳ್ಳೆಯ ನೃತ್ಯಪಟು ಆಗಿರುವ ಕಾರಣಕ್ಕೆ ಇಷ್ಟು ಅವಕಾಶ ಬರುತ್ತಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಈಗಿನ ಕಾಲದ ಜನರು ವಿಶಾಲವಾಗಿ ಯೋಚಿಸುತ್ತಾರೆ. ಎಲ್ಲ ವೃತ್ತಿಗಳನ್ನು ಗೌರವಿಸುತ್ತಾರೆ. ಐಟಂ ಸಾಂಗ್‌ ಎಂಬುದನ್ನು ಕೀಳಾಗಿ ನೋಡುವುದಿಲ್ಲ. ಅದು ಕೆಟ್ಟದ್ದಲ್ಲ, ಸೃಜನಶೀಲ ಕಲೆ.

ಎಲ್ಲರಿಗೂ ಅದು ಒಲಿಯುವುದಿಲ್ಲ ಎನ್ನುವ ಅಲಿಶಾ, ಮಹಿಳೆಯರೂ ತಮ್ಮನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಇದು ಬದಲಾದ ಕಾಲದ ಸೂಚಕ ಎನ್ನುತ್ತಾರೆ. ಐಟಂ ಸಾಂಗ್‌ ಒಂದು ವರ್ಗಕ್ಕೆ ಸೀಮಿತವಲ್ಲ. ಮುಜುಗರ ಪಡುವಂಥದ್ದೂ ಅಲ್ಲ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ನೋಡುವಂಥದ್ದು. ಈ ಕಾರಣಕ್ಕಾಗಿಯೇ ಸಿನಿಮಾಗಳಲ್ಲಿ ಅವು ಮಹತ್ವ ಪಡೆಯುತ್ತಿವೆ ಎನ್ನುತ್ತಾರೆ ಅವರು.

ಟಾಪ್‌ ಡಾನ್ಸರ್‌ ಗುರಿ
‘ಐಟಂ ಡಾನ್ಸ್‌  ನನಗೆ ಊಟ ಕೊಡುತ್ತಿರುವಾಗ ಬೇರೆಯದರ ಅಗತ್ಯವಿಲ್ಲ. ನಟಿಯಾಗಬೇಕೆಂಬ ಹಪಹಪಿ ಅವರಿಗಿಲ್ಲ. ಚಿತ್ರರಂಗದಲ್ಲಿ ಡಿಸ್ಕೊ ಶಾಂತಿ, ಸಿಲ್ಕ್‌ ಸ್ಮಿತಾರಂತಹ ನೃತ್ಯಪಟುಗಳು ಉತ್ತುಂಗದಲ್ಲಿದ್ದ ಕಾಲವಿತ್ತು. ಆ ಕಾಲ ಮರಳಿ ತರಬೇಕು. ನಾನು ಟಾಪ್‌ ಐಟಂ ಡಾನ್ಸರ್‌ ಆಗಬೇಕು’ ಎಂಬ ಕನಸು ಬಿಚ್ಚಿಡುತ್ತಾರೆ ಅಲಿಶಾ.

‘ಐಟಂ ಡಾನ್ಸ್‌ನಲ್ಲಿ ಗ್ಲಾಮರ್‌ ಮತ್ತು ಎಕ್ಸ್‌ಪ್ರೆಷನ್‌ ಎರಡನ್ನೂ ತುಂಬಬೇಕು. ಅದಕ್ಕೆ ಅಗತ್ಯವಾದ ಪ್ರತಿಭೆ ನನ್ನಲ್ಲಿದೆ’ ಎಂದು ಹೇಳಿಕೊಳ್ಳುವ ಅವರು, ‘ನನ್ನ ನಸೀಬು ಈ ಕ್ಷೇತ್ರದಲ್ಲಿಯೇ ಎಂದಿದ್ದರೆ ಹೀಗೆಯೇ ಇರಲಿ. ನಾನು ಐಟಂ ಡಾನ್ಸರ್‌ ಆಗಬೇಕೆಂದೇ ಬೆಳೆದವಳು. ಒಳ್ಳೆ ಪ್ರತಿಭೆ ಎಂದು ಗುರುತಿಸುತ್ತಾರೆ. ನನಗೆ ಅದೇ ಮುಖ್ಯ. ಅಷ್ಟೇ ಸಾಕು’ ಎನ್ನುವುದು ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT