ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಕ್ಸಾಂಡ್ರಿಯ – ಗ್ರೀಕ್‌ ವೀರನ ಕನಸು, ಕ್ಲಿಯೋಪಾತ್ರಳ ನೆನಪು

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಮೆಡಿಟರೇನಿಯನ್ ಸಮುದ್ರವನ್ನು ನೋಡುತ್ತಾ ಬೀಸುವ ತಂಗಾಳಿಗೆ ಮುಖವೊಡ್ಡಿ ನಿಂತಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಬಹುಶಃ ಈ ಆಹ್ಲಾದಕರ ವಾತಾವರಣವೇ ಗ್ರೀಕ್ ವೀರ ಅಲೆಕ್ಸಾಂಡರ್‌ನಿಗೆ ತನ್ನ ಹೆಸರಿನ ನಗರವನ್ನು ಅಲ್ಲಿ ನಿರ್ಮಿಸಬೇಕೆಂಬ ಸಂಕಲ್ಪ ಮೂಡಿಸಿರಬೇಕು.

ಈಜಿಪ್ಟ್‌ನ ಅಲೆಕ್ಸಾಂಡ್ರಿಯ ಒಂದು ಪರಿಪೂರ್ಣವಾದ ರೇವು. ಅಲ್ಲಿ ನವಿಲುಬಣ್ಣದ ಸಮುದ್ರ ದಿಂದ ಅಲೆಗಳು ಒಂದರ ಮೇಲೊಂದರಂತೆ ರಭಸದಿಂದ ಉರುಳುತ್ತಾ ಬರುತ್ತಿರುತ್ತವೆ. ಪ್ರಾಚೀನ ಕಾಲದಲ್ಲಿ ಫೆರೋಗಳ ಆಳ್ವಿಕೆಯ ಈಜಿಪ್ಟಿನ ಈ ಸಣ್ಣ ದ್ವೀಪದ ಮೇಲೆ ಕ್ರಿ.ಪೂ. 290ರಲ್ಲಿ ಸಾಸ್ಟ್ರಟಸ್ ಬಿಳಿಯ ಅಮೃತಶಿಲೆಯಿಂದ ಮಹಾನ್ ದೀಪಗೃಹವನ್ನು ನಿರ್ಮಿಸಿದ್ದ.

ಐದುನೂರು ಅಡಿ ಎತ್ತರದ ಈ ಲೈಟ್‌ಹೌಸ್ ಮೆಡಿಟರೇನಿಯನ್ ಸಮುದ್ರದಲ್ಲಿ ಪುರಾತನ ಕಾಲದ ಎಲ್ಲ ನಾವಿಕರಿಗೂ ದಾರಿದೀಪವಾಗಿ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿ ನಿಂತಿತ್ತು. ಉರುಳಿದ ಕಾಲ ಮತ್ತು ಭೂಕಂಪನಗಳು ಅದನ್ನು ಕೊಚ್ಚಿ ಕರಗಿಸಿತು. ಅಲೆಕ್ಸಾಂಡ್ರಿಯಾ ರಾಜ್ಯದ ಬಾವುಟದಲ್ಲಿ ಮತ್ತು ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಚಿಹ್ನೆಯಲ್ಲಿ ಮಾತ್ರ ಈಗ ಈ ಲೈಟ್‌ಹೌಸ್ ಉಳಿದಿದೆ.

ಅಲ್ಲಿನ ಸೌಂದರ್ಯಕ್ಕೆ ಮಾರುಹೋದ ಜಗದ್ವಿಖ್ಯಾತ ವೀರ ಅಲೆಕ್ಸಾಂಡರ್ ತನ್ನ ಹೆಸರಿನ ನಗರವನ್ನು ನಿರ್ಮಿಸಲು ಆದೇಶಿಸಿದ. ಬಹುಭಾಷಾ ಸಂಪತ್ತಿನ ಸುಂದರ ನಗರ ಅಲೆಕ್ಸಾಂಡ್ರಿಯಾ ಸ್ಥಾಪನೆಯಾಗಲು ಕಾರಣನಾದ. ಲಿಬಿಯಾದ ಗಡಿಯಲ್ಲಿರುವ ಸಿವಾ ಓಯಸಿಸ್‌ನ ಪ್ರಖ್ಯಾತ ಅಮುನ್ ದೇವಾಲಯದಲ್ಲಿ ಈಜಿಪ್ಟ್‌ನ ಫೆರೋ ಆಗಿ ಪಟ್ಟಾಭಿಷೇಕ ಮಾಡಿಸಿಕೊಂಡ. ಆ ವೇಳೆಗಾಗಲೇ ಪರ್ಷಿಯನ್ನರ ಹಿಡಿತದಲ್ಲಿದ್ದ ಈಜಿಪ್ಟನ್ನು ಮುಕ್ತಗೊಳಿಸಲು ತಾನು ಬಂದುದಾಗಿ ಹೇಳಿಕೊಂಡ. ಅಲೆಕ್ಸಾಂಡರನ ಮೂಲಕ ಈಜಿಪ್ಟ್ ಪರ್ಷಿಯನ್ನರಿಂದ ಗ್ರೀಕರ ವಶವಾಯಿತು. ನಂತರ ಜೂಲಿಯಸ್ ಸೀಸರನ ಕಾಲದಲ್ಲಿ ರೋಮನ್ನರ ವಶವಾಯ್ತು.

ಅಲೆಕ್ಸಾಂಡ್ರಿಯಾ ನಗರವನ್ನು ಈಜಿಪ್ಟಿನ ರಾಜಧಾನಿ ಎಂದು ಘೋಷಿಸಿ ಹೊರಟ ಅಲೆಕ್ಸಾಂಡರ್ ಲಿಬಿಯಾ, ಪರ್ಷಿಯಾ ಮೂಲಕ ಬ್ಯಾಬಿಲೋನಿಯಾಕ್ಕೆ ಹೋದ. ಕ್ರಿ.ಪೂ. 323 ಜೂನ್ 13ರಂದು ಅತ್ಯಂತ ಕಿರಿಯ ವಯಸ್ಸಿನಲ್ಲಿ ಬ್ಯಾಬಿಲೋನ್(ಇರಾಕ್)ನಲ್ಲಿ ಮಲೇರಿಯಾದಿಂದ ಮೃತಪಟ್ಟ. ಅವನ ದೇಹವನ್ನು ಅಲೆಕ್ಸಾಂಡ್ರಿಯಾಗೆ ತಂದು ಚಿನ್ನದ ಶವಸಂಪುಟದಲ್ಲಿಟ್ಟು ಸಮಾಧಿ ಮಾಡಿದರು. ಒಂದನೇ ಶತಮಾನದಲ್ಲಿ ರೋಮನ್ ಚಕ್ರವರ್ತಿ ಅಗಸ್ಟಸ್ ಮತ್ತು ಕ್ರಿ.ಶ. 215 ರಲ್ಲಿ ರೋಮನ್ ಚಕ್ರವರ್ತಿ ಕರಕಲ್ಲ ಈ ಸಮಾಧಿಗೆ ಗೌರವ ಸಲ್ಲಿಸಿರುವುದಾಗಿ ಇತಿಹಾಸದ ದಾಖಲೆಗಳಿವೆ. ಆದರೆ ನಂತರ ಅಲೆಕ್ಸಾಂಡರ್ ಸಮಾಧಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೆಲವರು ಅದನ್ನು ಸ್ಥಳಾಂತರಿಸಿ ರಬಹು ದೆಂದರೆ, ಕೆಲವರು ಅದು ನಾಶವಾಗಿರಬಹುದೆನ್ನುತ್ತಾರೆ.

ಅಲೆಕ್ಸಾಂಡ್ರಿಯಾ ನಗರದ ಅಡಿಯಲ್ಲೇ ಅಲೆಕ್ಸಾಂಡರನ ಸಮಾಧಿ ಇರಬಹುದೆಂದು ಬಹು ತೇಕರು ನಂಬುತ್ತಾರೆ. ಯಾರಿಗೆ ಗೊತ್ತು, ನೆಲದಾಳದಲ್ಲಿರುವ ಅಲೆಕ್ಸಾಂಡರನ ಶವಸಂಪುಟ ಉತ್ಖನನ ಶಾಸ್ತ್ರಜ್ಞನೊಬ್ಬನ ಸನಿಕೆಗೆ ಠಣ್ ಎಂದು ಮುಂದೆಂದೋ ತಾಕಲೂಬಹುದು.

ಅಲೆಕ್ಸಾಂಡರ್‌ನ ಉತ್ತರಾಧಿಕಾರಿ ಟಾಲೆಮಿ ಅಲೆಕ್ಸಾಂಡ್ರಿಯಾ ಬಗ್ಗೆ ಅಲೆಕ್ಸಾಂಡರ್ ಕಂಡಿದ್ದ ಕನಸುಗಳನ್ನೆಲ್ಲಾ ಸಾಕಾರಗೊಳಿಸಿದ. ಆ ಕಾಲಕ್ಕೆ ಜಗತ್ತಿನಲ್ಲೇ ಅತ್ಯಂತ ಭವ್ಯವಾದ ನಗರವೊಂದು ಮೆಡಿಟರೇನಿಯನ್ ಕಡಲ ತೀರದಲ್ಲಿ ನಿರ್ಮಾಣವಾಯಿತು. ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಲೈಟ್‌ಹೌಸ್ ಅಲೆಕ್ಸಾಂಡ್ರಿಯಾದ ಕಡಲಲ್ಲಿ ಎದ್ದು ನಿಂತಿತು. ಅಲೆಕ್ಸಾಂಡರ್‌ನ ಆಶಯದಂತೆ ಟಾಲೆಮಿ ಅಲೆಕ್ಸಾಂಡ್ರಿಯಾದಲ್ಲಿ ಒಂದು ಗ್ರಂಥಾಲಯ ಕಟ್ಟಿಸಿದ. ಜಗತ್ತಿನ ಪ್ರಖ್ಯಾತ ಬರಹಗಾರರು, ತತ್ವಜ್ಞಾನಿಗಳು, ವಿಜ್ಞಾನಿಗಳು ಜ್ಞಾನವನ್ನರಸಿ ಅಲ್ಲಿಗೆ ಬಂದರು. ಒಂದು ಕಾಲದಲ್ಲಿ ಸುಮಾರು ಏಳು ಲಕ್ಷ ಕೃತಿಗಳು ಅಲ್ಲಿದ್ದುವಂತೆ. ಅಲೆಕ್ಸಾಂಡ್ರಿಯಾವನ್ನು ವಿಶ್ವದ ಜ್ಞಾನ ಕಾಶಿಯನ್ನಾಗಿಸಿದ್ದ, ಅಪರೂಪದ ಗ್ರಂಥಗಳಿಂದ ಪ್ರಸಿದ್ಧವಾಗಿದ್ದ ಗ್ರಂಥಾಲಯ ಸುಮಾರು ಒಂದು ಸಾವಿರ ವರ್ಷಗಳ ನಂತರ ಸುಟ್ಟು ಬೂದಿಯಾಯಿತು. ಜ್ಯೂಲಿಯಸ್ ಸೀಸರ್‌ನ ಯುದ್ಧ, ರೋಮ್‌ನ ಆರೇಲಿಯನ್‌ನ ಆಕ್ರಮಣ, ಕ್ರಿಶ್ಚಿಯನ್ ವಕ್ತಾರ ಥಿಯೋಫಿಲಸ್ ಇಟ್ಟ ಬೆಂಕಿ ಮುಂತಾದವುಗಳಿಂದ ಹಂತಹಂತವಾಗಿ ಜ್ಞಾನ ಭಂಡಾರವು ಭಸ್ಮವಾಯಿತು. ಅದೇ ಸ್ಥಳದಲ್ಲಿ 1600 ವರ್ಷಗಳ ನಂತರ ಹೊಸ ಗ್ರಂಥಾಲಯ ತಲೆಯೆತ್ತಿ ನಿಂತಿದೆ. 2002 ರಲ್ಲಿ ವಿಶ್ವಕ್ಕೆ ಅರ್ಪಿಸಲ್ಪಟ್ಟ  ಆ ಗ್ರಂಥಾಲಯವನ್ನು ಈಜಿಪ್ಟಿಯನ್ನರು ಹೆಮ್ಮೆಯಿಂದ ‘ನಾಲ್ಕನೇ ಪಿರಮಿಡ್’ ಎಂದು ಕರೆದುಕೊಳ್ಳುತ್ತಾರೆ.

ಪ್ರಸಿದ್ಧ ಮೂರು ಗೀಜಾ ಪಿರಮಿಡ್ಡುಗಳ ಜೊತೆ ಅದನ್ನು ಹೋಲಿಕೆ ಮಾಡುತ್ತಾರೆ. ಭಾರತ ಸರ್ಕಾರ ಈ ಲೈಬ್ರರಿಯ ಪ್ರಾರಂಭೋತ್ಸವಕ್ಕೆ ಉಡುಗೊರೆಯಾಗಿ ಗಾಂಧೀಜಿ ಪ್ರತಿಮೆ ನೀಡಿರುವುದನ್ನು ಅಲ್ಲಿ ನೋಡಬಹುದು. 80 ಲಕ್ಷ ಪುಸ್ತಕಗಳನ್ನಿರಿಸಲು ಇಲ್ಲಿ ಸ್ಥಳಾವಕಾಶವಿದ್ದು, ಪ್ರಸ್ತುತ10 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿಲ್ಲಿವೆ. ಲೈಬ್ರರಿಯ ಸೆಲ್ಲಾರಿನಲ್ಲಿನರುವ ವಸ್ತು ಸಂಗ್ರಹಾಲಯದಲ್ಲಿ ಹಳೆಯ ವಸ್ತುಗಳಲ್ಲದೆ, ವಸ್ತ್ರಗಳು, ಆಭರಣಗಳು, ವಿವಿಧ ಕಲಾವಿದರ ಚಿತ್ರಗಳು ಇವೆ. ಲೈಬ್ರರಿಯ ಛಾವಣಿಯನ್ನು ಕಣ್ಣಿನ ರೆಪ್ಪೆಯಂತೆ ರೂಪಿಸಿದ್ದಾರೆ. ಹೊರಗೋಡೆಯ ಮೇಲೆ ವಿಶ್ವದ ಎಲ್ಲಾ ಭಾಷೆಗಳ ಒಂದೊಂದು ಅಕ್ಷರವನ್ನು ಕೆತ್ತಿದ್ದಾರೆ.

ಈಜಿಪ್ಟ್‌ನಲ್ಲಿ ಗ್ರೀಕರ ನಂತರ ರೋಮನ್ನರು ಬಂದರು. ಈಜಿಪ್ಟ್‌ನ ಕಡೆಯ ರಾಣಿಯಾದ ಜಗದ್ವಿಖ್ಯಾತ ಕ್ಲಿಯೋಪಾತ್ರ ಅಧಿಕಾರ ಉಳಿಸಿಕೊಳ್ಳಲು ರೋಮ್‌ನ ಜ್ಯೂಲಿಯಸ್ ಸೀಸರ್‌ನನ್ನು ಕೂಡಿದಳು. ನಂತರ ಆತನನ್ನು ಕೊಂದು ಅಧಿಕಾರಕ್ಕೆ ಬಂದ ಆಂಟನಿಯನ್ನು ವರಿಸಿದಳು. ಆಕ್ಟೇವಿಯಸ್‌ನಿಂದ ಆಂಟನಿ ಸೋಲು ಅನುಭವಿಸಿದ ಸುದ್ದಿ ಕೇಳಿ ವಿಷಸರ್ಪದಿಂದ ಕಚ್ಚಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

‘ಕಾರ್ತೂಷ್’ ಎಂದು ಕರೆಯುವ ಆಯತಾಕಾರದ ಬಿಲ್ಲೆಯನ್ನು ಈಜಿಪ್ಟ್‌ನ ಅರಸರು ಮಾತ್ರ ಕುತ್ತಿಗೆಯ ಸರಕ್ಕೆ ಅಳವಡಿಸಿಕೊಂಡು ಧರಿಸುತ್ತಿದ್ದರು. ಅದರಲ್ಲಿ ಈಜಿಪ್ಟ್‌ನ ಹೈರೋಗ್ಲಿಫ್‌ ಭಾಷೆಯಲ್ಲಿ ಅವರ ಹೆಸರು ಮುಂತಾದವನ್ನು ಬರೆದಿರುತ್ತಿದ್ದರು. ಈಜಿಪ್ಟ್‌ನ ಕಡೆಯ ರಾಣಿಯಾದ ಕ್ಲಿಯೋಪಾತ್ರಳ ಕಾರ್ತೂಷ್‌ನಲ್ಲಿ ಎರಡು ರಾಜ್ಯದ ಒಡೆಯಳೆಂದು ಬರೆದಿದ್ದಾರೆ. ಅದು ಉತ್ತರ ಮತ್ತು ದಕ್ಷಿಣ ಎರಡೂ ಈಜಿಪ್ಟ್‌ ಆಳಿದ ಕ್ಲಿಯೋಪಾತ್ರಳಿಗೆ ಸೂಕ್ತವಾಗಿದೆ.
ರೋಮನ್ನರ ನಂತರ ತುರ್ಕಿಗಳು, ತದನಂತರ ಬ್ರಿಟಿಷರು, ಫ್ರೆಂಚರು ಈ ನೆಲಕ್ಕಾಗಿ ಬಡಿದಾಡಿದರು. ಅಲೆಕ್ಸಾಂಡ್ರಿಯಾದಲ್ಲಿ ಇಸ್ಲಾಮ್ ವಾಸ್ತುಶಿಲ್ಪದ ಕೈತ್ ಬೇ ಕೋಟೆ, ಅಬು ಅಲ್ ಅಬ್ಬಾಸ್ ಅಲ್ ಮುರ್ಸಿ ಮಸೀದಿ, ಮೊಂತಾಜ ಅರಮನೆ ಇದ್ದರೆ, ರೋಮನ್ ವಾಸ್ತುಶಿಲ್ಪದ ಕುರುಹಾಗಿ ಪಾಂಪೆ ಸ್ತಂಭ, ರೋಮನ್ ಆಂಫಿ ಥಿಯೇಟರ್‌ಗಳಿವೆ. ಇಲ್ಲಿನ ಹಲವಾರು ಕಟ್ಟಡಗಳು ರೋಂ, ಪ್ಯಾರಿಸ್, ಪರ್ಷಿಯಾ, ಟರ್ಕಿ ವಾಸ್ತುಶಿಲ್ಪದಿಂದ ಕೂಡಿದ್ದು ಹೈಬ್ರಿಡ್ ನಗರದಂತೆ ಗೋಚರಿಸುತ್ತದೆ.

ಸಿಟಾಡೆಲ್‌ಗೆ ಎಂದು ಕರೆಯುವ ಕೈತ್ ಬೇ ಕೋಟೆ ಮೆಡಿಟರೇನಿಯನ್ ಸಾಗರದ ದಂಡೆಯ ಮೇಲಿದೆ. ಈ ಕೋಟೆ ಮೇಲೆ ಈಜಿಪ್ಟ್ ಬಾವುಟ ಹಾರಾಡುತ್ತಿರುತ್ತದೆ. ಮುಂಬೈನ ಮೆರೀನ್‌ ಡ್ರೈವ್‌ನಂತೆ ಅಲ್ಲಿನ ರಸ್ತೆಯ ಒಂದು ಬದಿಯಲ್ಲಿ ಕಟ್ಟಡಗಳಿದ್ದರೆ ಮತ್ತೊಂದು ಬದಿಯಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಅಬು ಅಲ್ ಅಬ್ಬಾಸ್ ಅಲ್ ಮುರ್ಸಿ ಮಸೀದಿಗೆ ಪ್ರವಾಸಿಗರ ಪ್ರವೇಶವಿದೆ. ಅಲ್ಲಿನ ಕುಸುರಿ ಕೆಲಸ ಚೆನ್ನಾಗಿದೆ. ಮಸೀದಿಯ ಮುಂದೆ ರಸ್ತೆಯ ನಡುವೆ ಕೇವಲ ಎರಡು ಬೋಗಿಗಳಿರುವ, ಬಹಳ ಹಳೆಯದಾದ ಟ್ರಾಮ್ ಹೋಗುವುದನ್ನು ಕಂಡಾಗ ಕೋಲ್ಕೊತ್ತಾ ನೆನಪಾಗುತ್ತದೆ.

‘ಮೊಂತಾಜ ಪ್ಯಾಲೆಸ್ ಗಾರ್ಡನ್‌’ ಮೆಡಿಟರೇನಿಯನ್ ದಂಡೆಯಲ್ಲಿ ರಾಜ ಫಾರುಕ್ ನಿರ್ಮಿಸಿರುವ ಅರಮನೆ ಮತ್ತು ಉದ್ಯಾನವನ. ಪಾಂಪೆಯ ಪಿಲ್ಲರ್ ನಮ್ಮ ಅಶೋಕ ಸ್ತಂಭದಂತೆ 82 ಅಡಿ ಎತ್ತರಕ್ಕೆ ನಿಂತಿರುವ ಗ್ರಾನೈಟ್ ಸ್ತಂಭ. ಕ್ರಿ.ಶ. 297ರಲ್ಲಿ ನಿರ್ಮಿಸಲಾದ ಈ ಕಂಬವನ್ನು ಡಯೋಕ್ಟೇಟನ ಸ್ತಂಭ ಎಂದೂ ಕರೆಯುತ್ತಾರೆ. ಗ್ರೀಕರು ಮತ್ತು ರೋಮನ್ನರು ಈಜಿಪ್ಟಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರ ಸಂಕೇತವೆಂಬಂತೆ ಈ ಸ್ತಂಭದ ಎದುರು ಎರಡು ಮುದ್ದಾದ ಸ್ಫಿಂಕ್ಸ್‌ಗಳೂ ಕಾಣುತ್ತವೆ.
ಅಲೆಕ್ಸಾಂಡರ್‌ ತನ್ನ 16ನೇ ವಯಸ್ಸಿನಲ್ಲಿ ಸೇನೆಯ ಮುಖ್ಯಸ್ಥನಾಗಿದ್ದ. 20ರಲ್ಲಿ ರಾಜನಾದ. ತನ್ನ 30ನೇ ವರ್ಷಕ್ಕೆ ಹಲವಾರು ದೇಶಗಳನ್ನೇ ಗೆದ್ದು, ಜಗತ್ತನ್ನು ಗೆಲ್ಲಲು ಹೊರಟಿದ್ದ.

ಕೇವಲ 33 ವರ್ಷಕ್ಕೆ ಸಾವಿಗೀಡಾದ ಈ ವೀರ ಯೂರೋಪ್‌, ಏಷಿಯಾ ಮತ್ತು ಆಫ್ರಿಕಾ ಖಂಡಗಳ ಹಲವಾರು ದೇಶಗಳಲ್ಲಿ ಗ್ರೀಕ್‌ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದ. ಇಷ್ಟು ವ್ಯಾಪಕವಾದ ದಿಗ್ವಿಜಯ ಸಾಧಿಸಿದ ಏಕೈಕ ವ್ಯಕ್ತಿಯೆಂದು ಚರಿತ್ರೆಯಲ್ಲಿ ದಾಖಲಾದ ಅಲೆಕ್ಸಾಂಡರ್‌ ಹೆಸರಿನಲ್ಲಿ ಪ್ರಪಂಚಾದ್ಯಂತ ಹಲವಾರು ನಗರಗಳಿವೆ. ಆದರೆ ಆತ ಇಷ್ಟಪಟ್ಟು ಹೆಸರಿಟ್ಟ ನಗರ ಅಲೆಕ್ಸಾಂಡ್ರಿಯಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT