ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳ ಪರ ದನಿ ಎತ್ತಬೇಕಿದೆ

ವಾರದ ಸಂದರ್ಶನ: ಲಕ್ಷ್ಮಣ್ ಗಾಯಕವಾಡ್ ಮರಾಠಿ ಕಾದಂಬರಿಕಾರ
Last Updated 19 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಅಲೆಮಾರಿ ಸಮುದಾಯದವರ ಹಿತಾಸಕ್ತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿರುವವರು ಮಹಾರಾಷ್ಟ್ರದ ಲಕ್ಷ್ಮಣ್ ಗಾಯಕವಾಡ್. ಮರಾಠಿ ಕಾದಂಬರಿಕಾರರಾಗಿ 1980ರ ದಶಕದ ಕೊನೆಯಲ್ಲಿಯೇ ಸಂಚಲನ ಮೂಡಿಸಿದ್ದ ಇವರ ‘ಉಚಲ್ಯಾ’ ಕೃತಿ ಇಂದಿಗೂ ಮಾರಾಟವಾಗುತ್ತಲೇ ಇದೆ. ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ‘ಪ್ರಜಾವಾಣಿ’  ಜೊತೆ ಮಾತನಾಡಿದರು.

* ನಾಲ್ಕು ದಶಕಗಳಿಂದ ಅಲೆಮಾರಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದೀರಿ. ಆ ಸಮುದಾಯದವರ ಸ್ಥಿತಿ ಈಗ ಹೇಗಿದೆ?
ಬದಲಾವಣೆ ಆಗುತ್ತಿರುವುದಂತೂ ನಿಜ. ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಪರಿವರ್ತನೆ, ಸುಧಾರಣೆ ಹಂತಹಂತವಾಗಿ ಆಗುತ್ತಿದೆ. ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಲೆಮಾರಿ ಜನಾಂಗದವರೇ ಲಾತೂರ್‌ನಲ್ಲಿ  ಆರು ಒಡವೆ ಮಾರಾಟದ ಅಂಗಡಿಗಳನ್ನು ಇಡುವಂತಾಗಿದ್ದಾರೆ. ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ಆದರೆ, ಬಹುಸಂಖ್ಯಾತರು ಸಮಸ್ಯೆಯ ಸುಳಿಯಲ್ಲಿಯೇ ಇದ್ದಾರೆ.

* ಈಗ ಅವರು ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪವಾದರೂ ಎಂಥದ್ದು?
ಚೋರ ಅಲೆಮಾರಿಗಳಿಗೆ ಈಗಲೂ ನೆಲೆ ಇಲ್ಲ. ನಾಲ್ಕೆಂಟು ದಿನಗಳಿಗಿಂತ ಹೆಚ್ಚಾಗಿ ಯಾವ ಹಳ್ಳಿಯಲ್ಲೂ ಇರುವಂತಿಲ್ಲ. ಅದೂ ಹಳ್ಳಿಗಳಿಂದಾಚೆಯೇ ಇರಬೇಕು. ಹುಟ್ಟಿದ ಹಳ್ಳಿಯಲ್ಲಿ ಎಲೆಕ್ಷನ್ ಕಾರ್ಡ್ ಏನೋ ಸಿಗುತ್ತದೆ. ಮತ ಹಾಕಿಸಲು ನೇತಾರರೇ ಹಣ, ಹೆಂಡ ಕೊಟ್ಟು ಇವರನ್ನು ಕರೆದೊಯ್ಯುತ್ತಾರೆ. ಆದರೆ, ಅವರ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಸಿಡಿಲು ಬಡಿದು ಈ ಸಮುದಾಯದ ಒಬ್ಬ ಮೃತಪಟ್ಟ. ಹೀಗೆ ದುರಂತದಲ್ಲಿ ಮೃತಪಡುವ ವ್ಯಕ್ತಿಯ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅದನ್ನು ಕೊಡಿಸಲು ನಾನು ಯತ್ನಿಸಿದೆ.

ಸಿಡಿಲಿನಿಂದ ಮೃತಪಟ್ಟ ಎನ್ನುವುದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅವನು ಸಿಡಿಲಿನಿಂದ ಮೃತಪಟ್ಟಿದ್ದೇ ನಿಜ ಎಂದು ಆ ಪಂಚಾಯಿತಿಯವರಿಂದ ಬರೆಸಿಕೊಂಡು ಬರುವಂತೆ ಹೇಳಿದರು. ಯಾವ ಪಂಚಾಯಿತಿಯವರೂ ಚೋರ ಅಲೆಮಾರಿಗಳಿಗೆ ಅಂಥ ಪತ್ರ ಬರೆದುಕೊಡಲು ಒಪ್ಪುವುದಿಲ್ಲ. ಕೊನೆಗೂ ಸತ್ತವನ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಸಿಗಲೇ ಇಲ್ಲ. ಅಲೆಮಾರಿಗಳು ಸತ್ತರೆ ಅಂತಿಮ ಸಂಸ್ಕಾರ ಮಾಡಲು ಜಾಗಕ್ಕಾಗಿಯೂ ಹೋರಾಡಬೇಕಾದ ಸ್ಥಿತಿ ಈಗಲೂ ಇದೆ.

* ಯಾವ ಯಾವ ರಾಜ್ಯಗಳಲ್ಲಿ ಈ ಸಮಸ್ಯೆ ಇಂಥ ಸ್ವರೂಪದಲ್ಲಿದೆ?
ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಎಲ್ಲ ರಾಜ್ಯಗಳಲ್ಲಿ ಇದೆ. ವಿಶ್ವವಿದ್ಯಾಲಯಗಳಲ್ಲಿ ಕಾನೂನು ಕಲಿಯುವವರಿಗೆ ಚೋರ ಅಲೆಮಾರಿಗಳ ಕುರಿತ ಒಂದು ಅಧ್ಯಾಯವೇ ಇದೆ. ಈ ಅಲೆಮಾರಿಗಳು ನೋಡಲು ಹೇಗೆ ಇರುತ್ತಾರೆ, ಕಳ್ಳತನವನ್ನು ಮಾಡುವ ಕ್ರಮವೇನು ಎನ್ನುವುದನ್ನೆಲ್ಲಾ ವಿವರಿಸಲಾಗಿದೆ. ಇನ್ನು ಪೊಲೀಸರಿಗೆ ಬಡ್ತಿ ಸಿಗುವುದೇ ಇಂಥ ಜಾತಿಯವರ ಮೇಲೆ ಹೆಚ್ಚು ಪ್ರಕರಣಗಳನ್ನು ದಾಖಲಿಸುವುದರಿಂದ. ಪ್ರಕರಣ ದಾಖಲು ಮಾಡುವುದರಲ್ಲಿ ಯಾವ ಪೊಲೀಸ್ ಸ್ಥಿರ ಪ್ರದರ್ಶನ ತೋರುವನೋ ಅವನಿಗೆ ಬಡ್ತಿ. ಅದಕ್ಕೇ ಹುಡುಕಿ ಹುಡುಕಿ ಪ್ರಕರಣಗಳನ್ನು ದಾಖಲಿಸುವ ಪರಿಪಾಠವಿದೆ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಸಮೀಪಿಸುತ್ತಿದ್ದರೂ ಇಂಥ ಪರಿಸ್ಥಿತಿ ಇರುವುದನ್ನು ನೋಡಿದರೆ ಏನನ್ನಬೇಕು?

* ಇದುವರೆಗೆ ಚೋರ ಅಲೆಮಾರಿ ಸಮುದಾಯಗಳನ್ನು ಸುಧಾರಿಸಲು ಏನೇನೆಲ್ಲ ಆಗಿವೆ?
ನಮ್ಮ ದೇಶದಲ್ಲಿ ಒಟ್ಟು 15 ಕೋಟಿ ಅಲೆಮಾರಿಗಳಿದ್ದಾರೆ. 1990ರಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕಲ್ಯಾಣ ಕಾರ್ಯಕ್ರಮಗಳು ಶುರುವಾದವು. ಅಲೆಮಾರಿ ಸಮುದಾಯಗಳ ಸುಧಾರಣೆಯ ಹಿನ್ನೆಲೆಯಲ್ಲೇ ‘ಸೆಟಲ್‌ಮೆಂಟ್‌’ಗಳು ಶುರುವಾದವು. ಲಾಹೋರ್, ದೆಹಲಿ, ಅಹಮದಾಬಾದ್, ಮುಂಡವಾ, ಧಾರವಾಡ, ಕಲಬುರ್ಗಿ, ಹೈದರಾಬಾದ್ ಸೇರಿದಂತೆ 52 ಕಡೆ ಈ ಮುಕ್ತ ಕಾರಾಗೃಹಗಳು ಪ್ರಾರಂಭವಾದವು. ಅಲೆಮಾರಿ ಸಮುದಾಯದವರಿಗೆ ಶಿಕ್ಷಣ ಕೊಡುವುದು ಇವುಗಳ ಉದ್ದೇಶವಾಗಿತ್ತು. ಸ್ವಾತಂತ್ರ್ಯಾ ನಂತರ ಅವು ಪ್ರಾರಂಭವಾದವು. ಅಲ್ಲಿಯೂ ಕಳ್ಳತನ ಮಾಡುವ ಅಲೆಮಾರಿ ಸಮುದಾಯಗಳಿಗೆ ಅವಕಾಶ ಸಿಗಲೇ ಇಲ್ಲ. ಸಂವಿಧಾನದಲ್ಲಿಯೂ ನಮ್ಮಂಥವರಿಗೆ ಯಾವ ಅವಕಾಶವೂ ಇಲ್ಲ.

* ಯಾಕೆ ಹೀಗಾಯಿತು?
1871ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಜಾರಿಗೆ ಬಂದ ಕಾನೂನಿನ ಪ್ರಕಾರ ನಮ್ಮ ಸಮುದಾಯದಲ್ಲಿ ಹುಟ್ಟುವ ಮಗುವೇ ಅಪರಾಧಿ. ಅದೇ ಕಾನೂನನ್ನು ಸ್ವಾತಂತ್ರ್ಯ ಬಂದಮೇಲೂ ಬಳಸುತ್ತಿರುವುದು ಎಷ್ಟು ಸರಿ? ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಐದು ವರ್ಷ ಹದಿನಾರು ದಿನಗಳ ನಂತರ ನಮಗೆ ಸ್ವಾತಂತ್ರ್ಯ ದೊರೆತದ್ದು. ಜವಾಹರಲಾಲ್ ನೆಹರೂ ಸಂವಿಧಾನದಲ್ಲಿ ‘ವಿಶೇಷ ಮುಕ್ತ ಕರಾರು’ ಜಾರಿಗೊಳಿಸಿದ್ದು 1952ರಲ್ಲಿ. ‘ಸ್ವಾತಂತ್ರ್ಯ ದಕ್ಕಿಸಿಕೊಡಲು ಹೋರಾಡಿದ ನೀವು ಇನ್ನು ವಿಮುಕ್ತರು’ ಎಂದು ನೆಹರೂ ಘೋಷಿಸಿದರು. ಆದರೆ, ಯಾವುದೇ ವರ್ಗಕ್ಕೆ ನಮ್ಮ ಸಮುದಾಯದವರನ್ನು ಸೇರಿಸಲಿಲ್ಲ. ‘ವಿಮುಕ್ತ್ ಘುಮಂತು ಆದಿವಾಸಿ’ ಎಂದುಬಿಟ್ಟರು.

ಈ ವಿಷಯದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ದೇಶದಲ್ಲಿ ಐವರು ಪ್ರಧಾನಿಗಳನ್ನು ಭೇಟಿ ಮಾಡಿದ ಏಕೈಕ ಲೇಖಕ, ಕಾರ್ಯಕರ್ತ ನಾನೇ ಇರಬೇಕು. ರಾಜೀವ್ ಗಾಂಧಿ ಅವರನ್ನು ಮೂರು ಸಲ ಭೇಟಿ ಮಾಡಿದೆ. ಪಿ.ವಿ.ನರಸಿಂಹ ರಾವ್, ಮನಮೋಹನ್ ಸಿಂಗ್ ಅವರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟೆ. ವಿ.ಪಿ.ಸಿಂಗ್ ಅವರಂತೂ ತುಂಬಾ ಹತ್ತಿರದವರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಎರಡು ಸಲ ಅವರನ್ನೂ ಕಂಡೆ. 1998-99ರಲ್ಲಿ ‘ವಿಮುಕ್ತ್ ಘುಮಂತು ಆಯೋಗ’ ರಚನೆಯಾಯಿತು. ಕರ್ನಾಟಕದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅದರ ನೇತೃತ್ವ ವಹಿಸಿದ್ದರು. ದಲಿತರಿಗಿಂತ ದಲಿತರಾದ, ಕೆಳಜಾತಿಯ ಅನೇಕ ಸಮುದಾಯಗಳಿಗಿಂತ ಹೆಚ್ಚು ಶೋಷಣೆ ಅನುಭವಿಸುತ್ತಿರುವವರು ಇವರು ಎಂದು ವೆಂಕಟಾಚಲಯ್ಯ ಬರೆದರು.

‘ಡಿನೋಟಿಫೈಡ್ ನೊಮ್ಯಾಡಿಕ್ ಟ್ರೈಬ್ಸ್’ ಎಂದು ನಮ್ಮನ್ನೆಲ್ಲಾ ಕರೆದು, ಕಲ್ಯಾಣ ಯೋಜನೆಗಳ ಅಗತ್ಯವಿದೆ ಎಂದರು. ಆಗ ವಾಜಪೇಯಿ ಅವರನ್ನು ಭೇಟಿ ಮಾಡಿ ನಾನು ಕಣ್ಣೀರು ಸುರಿಸಿದೆ. ಬ್ರಿಟಿಷರು ನಮ್ಮನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸುತ್ತಿದ್ದರು, ಹೀಗೆ ನಿತ್ಯ ಹಿಂಸೆ ಅನುಭವಿಸುವ ಬದಲು ಮಿಲಿಟರಿಯವರನ್ನು ಕರೆಸಿ, ನಮ್ಮನ್ನು ಒಂದೇ ಏಟಿಗೆ ಮುಗಿಸಿಬಿಡಿ ಎಂದೆ. ಅದನ್ನು ಕೇಳಿ ವಾಜಪೇಯಿ, ‘ಇವರು ಏನು ಹೇಳುತ್ತಿದ್ದಾರೆ’ ಎಂದು ಬೆರಗಿನಿಂದ ಕೇಳಿದರು. ಆಗ ಜಾರ್ಜ್ ಫರ್ನಾಂಡಿಸ್ ಕೂಡ ನನ್ನ ಮಾತನ್ನು ಅನುಮೋದಿಸಿದರು. ಅಷ್ಟೆಲ್ಲಾ ಪರದಾಡಿದರೂ ಏನೂ ಆಗಲಿಲ್ಲ. ಕರ್ನಾಟಕದಲ್ಲಿ ದೇವರಾಜ ಅರಸು ಪುಣ್ಯಾತ್ಮ. ಅವರು ನಮ್ಮ ಸಮುದಾಯದವರನ್ನು 1976ರಲ್ಲಿಯೇ ಪರಿಶಿಷ್ಟ ಜಾತಿ/ಪಂಗಡಗಳ ಗುಂಪಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು.

ಉಳಿದ ರಾಜ್ಯಗಳಲ್ಲಿ ಅದು ಆಗಲೇ ಇಲ್ಲ. ನಾವು ಎಸ್.ಸಿ./ಎಸ್.ಟಿ. ವರ್ಗಕ್ಕೆ ಸೇರಿಯೇ ಇಲ್ಲ. ಆದ್ದರಿಂದ ಕಲ್ಯಾಣ ಯೋಜನೆಗಳು ಮರೀಚಿಕೆಗಳು. ಚೋರ ಸಮುದಾಯಗಳಲ್ಲಿಯೂ ಕೆಲವು ರಿವಾಜುಗಳು ಈಗಲೂ ಇವೆ. ನಮ್ಮ ಈ ಜನ ಚಪ್ಪಲಿಗಳನ್ನು ಮೆಟ್ಟುವುದಿಲ್ಲ. 12 ಕಿ.ಮೀ.ವರೆಗೆ ದೀಪ ಕಾಣದೇ ಆಮೇಲೆ ಎಲ್ಲಿ ಅದು ಕಾಣುವುದೋ ಅಂಥ ಮನೆಯನ್ನು ಲೂಟಿ ಮಾಡಬೇಕೆಂಬ ರಿವಾಜು ಈಗಲೂ ಕೆಲವು ಕಡೆ ಮುಂದುವರಿದಿದೆ. ಸಾಗುವ ರೈಲಿನ ಮೇಲೆ ದಾಳಿ ಇಡುತ್ತಾರೆಂಬ ಭಯ ಇದೆ. ಪುಣೆಯಿಂದ ರೈಲು ಹೊರಟರೆ ಕೆಲವು ಕಡೆ ‘ಪಾರದಿಗಳು ದಾಳಿ ಇಡುವ ಭೀತಿ ಇದೆ, ಕಿಟಕಿಗಳನ್ನು ಮುಚ್ಚಿಕೊಳ್ಳಿ’ ಎಂದು ಎಚ್ಚರಿಕೆ ಕೊಡುತ್ತಾರೆ. ಸಾಗುವ ರೈಲಿನ ಮೇಲೆ ತುತ್ತೂಟಕ್ಕಾಗಿ ದಾಳಿ ಇಡುವಂಥ ಸಾಹಸವನ್ನು ಯಾರೇ ಆಗಲಿ ಯಾಕೆ ಮಾಡುತ್ತಾರೆ ಹೇಳಿ? ಅಂಥ ಸಾಮಾಜಿಕ ದುಸ್ಥಿತಿ ಇದೆ ಎಂದೇ ಅರ್ಥ.

* ರಾಜಕೀಯ ನಾಯಕರಾಗುವ ಮಟ್ಟಕ್ಕೆ ಈ ಸಮುದಾಯಗಳ ಒಬ್ಬರೂ ಬೆಳೆಯಲಿಲ್ಲವೇಕೆ?
ಅರಿವಿನ ಕೊರತೆ. ಈ ಸಮುದಾಯದವರ ಕುರಿತು ಸಮಗ್ರ ಅಧ್ಯಯನಗಳೂ ಆಗಿಲ್ಲ. ಯಾವುದೇ ಮೀಸಲಾತಿ ಇಲ್ಲದೇ ಇರುವುದು ಕಾರಣ. ಸಂಸತ್‌ನಲ್ಲಿ ನಮ್ಮ ಪರವಾಗಿ ದನಿಯೆತ್ತಲು ಯಾರೂ ಇಲ್ಲ. ನನ್ನಂಥವರು, ಕರ್ನಾಟಕದಲ್ಲಿ ಡಾ. ಬಾಲ ಗುರುಮೂರ್ತಿ ಅವರಂಥವರು ಒಂದಿಷ್ಟು ಬರೆಯುತ್ತಾ ಇರುವುದರಿಂದ ಈ ಸಮುದಾಯದವರ ಬಗೆಗೆ ಅಲ್ಲಿ ಇಲ್ಲಿ ದನಿ ಕೇಳಿ ಬರುತ್ತಿದೆಯಷ್ಟೆ. 

* ನಿಮ್ಮ ‘ಉಚಲ್ಯಾ’ ಮರಾಠಿ ಕೃತಿ ಅಷ್ಟು ಜನಪ್ರಿಯವಾಯಿತು. 1987ರಲ್ಲಿ ಪ್ರಕಟವಾದ ಅದು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು ಹತ್ತು ವರ್ಷಗಳ ನಂತರ. ಇಷ್ಟು ಕಾಲ ಹಿಡಿದದ್ದು ಯಾಕೆ?
ಬಹುಶಃ ಉಚ್ಚ ಜಾತಿಯವರಿಗೆ ಈ ಸಮಸ್ಯೆ ಆಸಕ್ತಿಕರ ಎಂದು ಅಷ್ಟು ವರ್ಷಗಳ ನಂತರ ಅನ್ನಿಸಿರಬೇಕು. ಆದ್ದರಿಂದ ಅದು ಅನುವಾದಗೊಂಡಿತು. 50 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು.

* ಬರೆಯಬೇಕು ಎಂದು ನಿಮಗೆ ಅನ್ನಿಸಿದ್ದು ಯಾವಾಗ?
ವಸತಿ ಶಾಲೆಯಲ್ಲಿ ಓದುತ್ತಿದ್ದಾಗ ಮೂರನೇ ಇಯತ್ತೆಯಲ್ಲೇ ಪುಸ್ತಕದ ಕೊನೆಯ ಹಾಳೆಗಳ ಮೇಲೆ ತೋಚಿದ್ದನ್ನು ಬರೆಯುತ್ತಿದ್ದೆ. ಐದಾರನೇ ಇಯತ್ತೆ ಹೊತ್ತಿಗೆ ಮುನ್ನುಗ್ಗಿ ಭಾಷಣ ಮಾಡುವ ಹುಮ್ಮಸ್ಸು ಬಂತು. ಹದಿನೇಳನೇ ವಯಸ್ಸಿಗೆ ಹತ್ತಿ ಗಿರಣಿಯಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ಹೋರಾಟ ಮಾಡಿದ್ದೇ ಮೂರು ರೂಪಾಯಿ ಇದ್ದ ಸಂಬಳ ಆರು ರೂಪಾಯಿಗೆ ಏರಿತು. ಬರೆಯುವುದು ಬಾಲ್ಯದಿಂದ ಅಂಟಿಕೊಂಡ ಗೀಳು. ಅದೇ ಬಹುಶಃ ನನಗೆ ಒಂದು ಅಸ್ತಿತ್ವ ತಂದುಕೊಟ್ಟಿತು.

* ‘ಚೋರ ಅಲೆಮಾರಿಗಳು’– ಈ ಹಣೆಪಟ್ಟಿ ಅಂಟಿಕೊಂಡಿದ್ದಾದರೂ ಹೇಗೆ?
ಬ್ರಿಟಿಷರ ಮೇಲೆ ಅವರು ದಾಳಿ ಇಡುತ್ತಿದ್ದರು. ಅವರನ್ನು ಲೂಟಿ ಮಾಡಿ, ಆ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆಂದು ಕೊಡುತ್ತಿದ್ದರು. ಯಾರುಯಾರಿಗೆಲ್ಲಾ ಅವರು ಸಂಪತ್ತನ್ನು ಕೊಟ್ಟರೋ ಅವರೆಲ್ಲಾ ರಾಜಕಾರಣಿಗಳಾಗಿ ಗದ್ದುಗೆ ಏರಿದರು. ಇವರು ಈಗಲೂ ಕತ್ತೆಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ಅಲೆಮಾರಿಗಳಾಗಿಯೇ ಉಳಿದಿದ್ದಾರೆ. ನಮ್ಮ ಈ ಅಲೆಮಾರಿಗಳು ಸರಕು ಹೊತ್ತು ಎಲ್ಲಿಯಾದರೂ ಸಾಗಲೆಂದು ಕತ್ತೆಗಳನ್ನು ಸಾಕುತ್ತಿದ್ದರು. ಮುಸ್ಲಿಮರ ದಾಳಿಯಿಂದ ರಕ್ಷಣೆಗೆಂದು ಹಂದಿಗಳನ್ನು ಸಾಕುತ್ತಿದ್ದರು.

ಯಾರಾದರೂ ಮುಸ್ಲಿಮರು ದಾಳಿ ಇಡಲು ಬಂದರೆ ಹಂದಿಗಳನ್ನು ಹಿಂಸಿಸಿ ಅವುಗಳಿಂದ ಕೆಟ್ಟ ಶಬ್ದ ಹೊಮ್ಮಿಸುತ್ತಿದ್ದರು. ಅದನ್ನು ಕೇಳಿಯೇ ದಾಳಿಕೋರರು ಓಡಿಹೋಗುತ್ತಿದ್ದರು. ಹಂದಿಯ ರಕ್ತವನ್ನು ಮುಖಕ್ಕೆ ಮೆತ್ತಿಕೊಂಡವರನ್ನು ಕೊಲ್ಲಲು ಮುಸ್ಲಿಮರು ಹಿಂದೇಟು ಹಾಕುತ್ತಿದ್ದರು. ಹೋರಾಟದ ನಿಮಿತ್ತ ಪ್ರಾರಂಭವಾದ ಲೂಟಿ ಮಾಡುವ ದಾಳಿ ಶಾಶ್ವತವಾಗಿ ಚೋರರೆಂಬ ಪಟ್ಟ ಕಟ್ಟಿಬಿಟ್ಟಿತು. ಈಗಲೂ ಪೊಲೀಸರಿಂದ ಪಡೆದ ಚೀಟಿಯನ್ನು ತೋರಿಸಿ, ಹಳ್ಳಿಯ ಪಟೇಲನಿಂದ ಅನುಮತಿ ಪತ್ರ ಪಡೆದೇ ಈ ಸಮುದಾಯದವರು ಸಂಚರಿಸುವ ಅನಿವಾರ್ಯತೆ ಇದೆ.

* ಜೆಎನ್‌ಯು ಪ್ರಕರಣ ನೋಡಿದರೆ ನಿಮಗೆ ಏನನ್ನಿಸುತ್ತದೆ. ಮುಂದೆ ದೇಶದ ರಾಜಕೀಯ ಸ್ಥಿತ್ಯಂತರಗಳಿಂದ ನಿಮ್ಮ ಸಮಸ್ಯೆಗಳೂ ಬಗೆಹರಿಯುವ ನಿರೀಕ್ಷೆಯೇನಾದರೂ ಇದೆಯೇ?
ಚಡ್ಡಿ ಕಳಚಿ, ಪ್ಯಾಂಟ್ ಹಾಕಿಕೊಂಡರೆ ಬದಲಾವಣೆ ಆಗುವುದಿಲ್ಲ. ಹೃದಯ ಬದಲಾಗಬೇಕು. ಜೆಎನ್‌ಯು ಪ್ರಕರಣದಲ್ಲಿ ದನಿ ಎತ್ತಿರುವ ಹುಡುಗ ಅದೆಷ್ಟೋ ನೊಂದವರ ಪ್ರತಿನಿಧಿಯಷ್ಟೆ. ಅಂಥ ಕ್ಷೀಣ ದನಿಗಳು ಎಲ್ಲೆಲ್ಲಿಯೋ ಕೇಳುತ್ತಿವೆ. ಇನ್ನು ರಾಜಕೀಯ ಸ್ಥಿತ್ಯಂತರದ ಮಾತು. ಅದು ಭರವಸೆಗಳನ್ನು ಇಟ್ಟುಕೊಳ್ಳುವಂತೇನೂ ಇಲ್ಲ. ಹಿಂದೆ ರಾಜ ಮಹಾರಾಜರು, ಅವರ ಮಕ್ಕಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಿದ್ದರು. ಈಗಲೂ ಅದೇ ಪರಿಸ್ಥಿತಿ ಬರುತ್ತಿದೆ. ಭ್ರಷ್ಟಾಚಾರದ ಮೂಲಕ ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೆ.

ಆಮೇಲೆ ದೇವರಿಗೂ ಅದರಲ್ಲಿ ಕಾಣಿಕೆ ಕೊಟ್ಟು ಪಾಪ ತೊಳೆದುಕೊಳ್ಳುವುದಾಗಿ ಹೇಳುತ್ತಾರೆ. ದಿನಕ್ಕೆ ಹತ್ತು ಹದಿನೈದು ಲಕ್ಷ ರೂಪಾಯಿ ದೇವಸ್ಥಾನದಲ್ಲಿ ಸಂಗ್ರಹವಾಗುತ್ತದೆ ಎನ್ನುವುದೇ ವ್ಯಂಗ್ಯ. ಹೊತ್ತೂಟಕ್ಕೂ ಪರದಾಡುತ್ತಿದ್ದ ಸಾಯಿಬಾಬ ಅವರ ಸ್ವರ್ಣ ಮೂರ್ತಿ ಮಾಡಿ ಸುಖಿಸುತ್ತಾರೆ. ನಮಗೆ ನ್ಯಾಯ ಕೊಡದೇ ಇದ್ದರೆ ಅಂಥ ಯಾವುದಾದರೂ ಸಂಪದ್ಭರಿತ ದೇವಸ್ಥಾನವನ್ನೇ ಕೊಳ್ಳೆಹೊಡೆದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನಾನು ಪದೇ ಪದೇ ಹೇಳುತ್ತಲೇ ಇರುತ್ತೇನೆ.

* ನಿಮ್ಮ ಮುಂದಿನ ಕೃತಿಗಳು ಯಾವುವು?
ಇದುವರೆಗೆ ಹನ್ನೊಂದು ಕೃತಿಗಳನ್ನು ಬರೆದಿದ್ದೇನೆ. ಮುಂಬೈ ಕುರಿತು ಒಂದು ಕಾದಂಬರಿ ಬರೆಯುತ್ತೇನೆ. ಇತ್ತೀಚೆಗಷ್ಟೇ ಸಣ್ಣ ಕತೆಗಳ ಸಂಗ್ರಹವೊಂದು ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT