ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಯ ಸಿನಿ ಯಾನ...

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಡುಗಡೆಗೂ ಮುನ್ನವೇ ತಮ್ಮ ಮೊದಲ ಸಿನಿಮಾ ‘ಬೆಂಕಿಪಟ್ಣ’ದ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಯುವ ನಿರ್ದೇಶಕ ಟಿ.ಕೆ.ದಯಾನಂದ. ಪತ್ರಿಕೋದ್ಯಮ, ಸಾಹಿತ್ಯ, ಸಾಮಾಜಿಕ ಚಳವಳಿ– ಹೀಗೆ ಹಲವು ಧಾರೆಗಳಲ್ಲಿ ಹರಿದುಕೊಂಡು ಬಂದಿರುವ ಇವರು ಈಗ ದೊಡ್ಡ ಪರದೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಯೋಗರಾಜ್‌ ಭಟ್ಟರ ಸರ್ಕಸ್‌ ಕಂಪೆನಿಯಿಂದ ಪಾರಾಗಿರುವ ವಿಶಿಷ್ಟ ಸಾಹಸಿಯಂತೆ ಕಾಣಿಸುವ ದಯಾನಂದ್‌ ಕಿರಿಕ್‌ ಪ್ರಶ್ನೆಗಳಿಗೆ ಚುರುಕಾಗಿಯೇ ಉತ್ತರಿಸಿದ್ದಾರೆ.

* ಇಷ್ಟು ದಿನ ಪೌರಕಾರ್ಮಿಕ ಸಮಸ್ಯೆ, ಸಣ್ಣ ಕತೆ, ಅಭಿವೃದ್ಧಿ ಪತ್ರಿಕೋದ್ಯಮ ಅಂತ ಭಗಭಗ ಉರಿತಿದ್ದೋರು ಸಿನಿಮಾದ ಜಗಮಗ ಜಗತ್ತಿಗೆ ಜಂಪ್‌ ಮಾಡ್ಬಿಟ್ಟಿದ್ದೀರಾ, ಏನ್‌ ಕತೆ?
ಬೇಸಿಕಲಿ ಈ ಕಪ್ಪೆಜಾತಿಗೆ ಸೇರಿದವರಿರ್ತಾರಲ್ಲಾ, ಅವ್ರನ್ನು ಹಿಡಿದು ನೀವು ಯಾವ ತಕ್ಕಡಿಗೆ ಕೂಡಿಸಕ್ಕೂ ಆಗಲ್ಲ. ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಹಾರ್ತಾನೆ ಇರ್ತಾವೆ. ನಾನು ಅದೇ ಜಾತಿಗೆ ಸೇರಿದವನು. ನಂಗೆ ನಿಂತಲ್ಲಿ ನಿಂತು ಅಭ್ಯಾಸ ಇಲ್ಲ. ಪೌರಕಾರ್ಮಿಕ ಕೆಲಸ ಅಂದ್ರಲ್ಲ. ಅದಕ್ಕಿಂತ ಹಿಂದೆ ಮೂರ್ನಾಲ್ಕು ಬೇರೆ ಬೇರೆ ಕೆಲಸ ಮಾಡ್ತಿದ್ದೆ. ಗೋಡೆ ಪತ್ರಿಕೆ ಮಾಡ್ತಿದ್ದೆ, ಎನ್‌ಜಿಒ ಒಂದರಲ್ಲಿ ಕೆಲಸ ಮಾಡ್ತಿದ್ದೆ, ವಿಡಿಯೊ ಎಡಿಟಿಂಗ್‌ ಮಾಡ್ತಿದ್ದೆ. ಏನೋ ಒಂದು ಕಲೀಬೇಕು ಎಂಬ ಸಣ್ಣದೊಂದು ಹಂಬಲ ಶುರುವಾಗುತ್ತೆ. ಕಲಿತು ಮುಗಿದ ತಕ್ಷಣ ಅದ್ರ ಬಗ್ಗೆ ಬೇಜಾರಾಗಿ ಮತ್ತೇನೋ ಹುಡುಕ್ಕೊಂಡು ಹೊರಡುವುದು.

* ನಾನು ಕೇಳಿದ್ದು ನಿಮ್ಮ ಕತೆ ಅಲ್ಲ, ‘ಬೆಂಕಿಪಟ್ಣ’ ಸಿನಿಮಾ ಕತೆ ಬಗ್ಗೆ ಮಾರಾಯ್ರೇ..
ಅದ್ರ ಕತೆ ಈಗ್ಲೇ ಹೇಳಿದ್ರೆ ಥಿಯೇಟರ್‌ಗೆ ಯಾರ್ರೀ ಬರ್ತಾರೆ? ಬೀಗ ಹಾಕ್ಕೊಂಡು ಮನೆಲೇ ಕೂತ್ಕೋತಾರಷ್ಟೇ.

* ನಿಮ್ಮ ಹೆಸರಲ್ಲೇ ‘ಟೀಕೆ’ ಇದ್ಯಲ್ಲ, ಮಾಡೋಕೆ ಫೇಮಸ್ಸಾ? ಮಾಡಿಸ್ಕೊಂಡ ಎಕ್ಸ್‌ಪೀರಿಯನ್ಸೇ ಹೆಚ್ಚಾ?
ಕಾಲೆಳೆಯೋದಕ್ಕಿಂತ ಕಾಲೆಳೆಸಿಕೊಳ್ಳೋದ್ರಲ್ಲೇ ಜಾಸ್ತಿ ಖುಷಿ.

* ‘ಹೊಸ ಹುಡುಗ್ರು ಕತೆ ಕಾದಂಬರಿ ಕಡೆ ತಲೆ ಹಾಕಿಯೂ ಮಲಗಲ್ಲ’ ಎಂದು ಮೊನ್ನೆ ಫೇಸ್‌ಬುಕ್‌ನಲ್ಲಿ ಮಲಗಿದ್ದೋರನ್ನೆಲ್ಲ ಎಬ್ಬಿಸೋ ಹಾಗೆ ಬೊಬ್ಬೆ ಹೊಡಿತಿದ್ರೀ?
ಅದು ಹೆಂಗಾಗಿದೆ ಅಂದ್ರೆ, ಕಾವ್ಯ ಅರ್ಜೆಂಟಿಗುಟ್ಟುತ್ತೆ ಅಂದ್ಕೊಂಡು ಹೊಸ ಹುಡುಗ್ರೆಲ್ಲ ಕಾವ್ಯದ ಬೆನ್ನಿಗೆ ಬಿದ್ದಿದ್ದಾರೆ. ಅರ್ಧ ಗಂಟೆ ಮುಕ್ಕಾಲು ಗಂಟೆಯಲ್ಲಿ ಬ್ಯೂಟಿಫುಲ್‌ ಕಾವ್ಯ ಬರೆದುಬಿಡಬಹುದು. ಆದರೆ ಕತೆ ಬರೀಬೇಕು ಅಂದ್ರೆ ವಸ್ತು, ವಿವರ, ಪಾತ್ರಗಳು.. ಹೀಗೆ ಒಂದು ಸಿನಿಮಾ ಮಾಡುವುದಕ್ಕಿಂತ ಹೆಚ್ಚಿನ ತಯಾರಿ ಕತೆಗೆ ಬೇಕಾಗುತ್ತದೆ. ಅದ್ರಲ್ಲಿ ತನ್ಮಯರಾಗಲಿಕ್ಕೆ ಪುರಸೊತ್ತಿರದವರು ಕತೆ ಬರಿಯಲಿಕ್ಕೆ ಹೋಗಲ್ಲ. ನನ್ನ ಮಟ್ಟಿಗೆ ಈ ಕತೆ ಹುಟ್ಟಿಸೋ ಪ್ರಕ್ರಿಯೆ ಪ್ರತಿಭೆ ಮಣ್ಣು ಮಸಿ ಏನಲ್ಲ. ತೆವಲು ಅದು. ಜಗತ್ತಿನಲ್ಲಿನ ಯಾವುದೇ ಮಾದಕ ವಸ್ತುವೂ ಕೊಡದಷ್ಟು ದೊಡ್ಡ ಕಿಕ್‌ ಕತೆಯೊಂದರ ವಸ್ತು ಹುಡುಕುವುದರಲ್ಲಿದೆ. ಆದ್ರೆ ಕತೆ ಬರೆದು ಮುಗಿಸ್ತಿದ್ದಂಗೆ ಯಾಕಾದ್ರೂ ಬರೆದ್ನೋ ಅನ್ಸಕ್ಕೆ ಶುರು ಆಗ್ತದೆ.

* ತಲೆಮೇಲೆ ‘ಡೈರೆಕ್ಟರ್‌ ಟೋಪಿ’ ಬಿದ್ದಮೇಲೆ ಹವಾಮಾನ ಹೆಂಗಿದೆ?
ಶೂಟಿಂಗ್‌ ಮಾಡುವಾಗ ಬಿಸಿಲು ದೂಳು ಇವುಗಳಿಂದ ಟ್ಯಾನ್‌ ಆಗುತ್ತೆ, ಕಲರ್‌ ಹೋಗಿ ಕಪ್ಪಗಾಗಿಬಿಡ್ತೀವಂತ ಡೈರೆಕ್ಟರ್‌ಗಳು ಟೋಪಿ ಹಾಕ್ಕೋತಾರೆ. ಆದ್ರೆ ನಾವು ಬಾರ್ನ್‌ ಬ್ಲಾಕ್‌. ಹಿಂಗಾಗಿ ಆಲ್‌ರೆಡಿ ಕಪ್ಪಾಗಿರೋದನ್ನ ಮತ್ತೆ ಕಪ್ಪು ಮಾಡಕ್ಕಾಗಲ್ಲ. ಆದ್ದರಿಂದ ನಾನು ಶೂಟಿಂಗ್‌ ಸ್ಪಾಟ್‌ನಲ್ಲಿ ಟೋಪಿನೇ ಹಾಕ್ಕೋತಿರ್ಲಿಲ್ಲ.

* ಪ್ರಕಾಶ ಬೆಳವಾಡಿ, ಬಿ. ಸುರೇಶ್‌ ಅವರಂತಹ ಘಟಾನುಘಟಿಗಳಿಗೆಲ್ಲ ಮದ್ದು ಹಚ್ಚಿ ಕಡ್ಡಿ ಗೀರ್‍ತಿದ್ದೀರಿ? ಕಿಡಿ ಹೊತ್ತಿಸೋ ನಂಬಿಕೆ ಇದ್ಯಾ?
ಅಯ್ಯೋ, ಅವ್ರಿಗೆಲ್ಲ ಕಡ್ಡಿ ಗೀರಕ್ಕಾಗತ್ತಾ? ಒಬ್ಬೊಬ್ರೂ ಎಕ್ಸ್‌ಪ್ಲೋಡ್‌ ಆಗೋಕೆ ಕಾಯ್ತಾ ಇರೋ ಡೈನಮೆಟ್‌ಗಳು. ಬ್ಲಾಸ್ಟ್‌ ಆಗೋವಾಗ ಹತ್ರ ಇದ್ದೋರು ಛಿದ್ರ ಛಿದ್ರ ಆಗೋಗ್ತಾರೆ. ಅವ್ರಿಗೆ ಕಡ್ಡಿ ಗೀರೋದಿರಲಿ, ಅವ್ರಿಡೋ ಬೆಂಕಿಯಿಂದ ನಾವು ಬಚಾಯಿಸ್ಕೋಬೇಕು ಮೊದಲು.

* ನಿಮ್ಮ ಸಿನಿಮಾ ಮತ್ತೆ ಕಥಾಸಂಕಲನ ಒಟ್ಟೊಟ್ಟಿಗೆ ಬಿಡುಗಡೆ ಆಗ್ತಿದೆ. ಎರಡು ದೋಣಿ ಮೇಲೆ ಕಾಲಿಟ್ಕೊಂಡು ನದಿ ದಾಟೋ ಆಟಾನಾ?
ದೋಣಿ ಒಂದೇ, ಹುಟ್ಟು ಎರಡಿದೆ. ಈ ಕಡೆ ಒಂದ್ಸಲ ನೀರು ತಳ್ತೀನಿ, ಆ ಕಡೆ ಒಂದ್ಸಲ. ದೋಣಿ ಮುಂದೆ ಹೋಗತ್ತೆ.

* ಮಾರ್ಕೆಟ್‌ನಲ್ಲಿ ಮನುಷ್ಯತ್ವದ ರೇಟು ಈಗ ಹೆಂಗಿದೆ?
ತುಂಬಾ ಚೀಪ್‌ರೇಟಿಗೆ ಬಿದ್ದೋಗಿದೆ. ಫ್ರೀಯಾಗಿ ಕೊಟ್ರೂ ತಗೋಳಕ್ಕೆ ಯಾರೂ ರೆಡಿ ಇಲ್ಲ.

* ಈ ಗ್ಯಾಪ್‌ನಲ್ಲಿ ಇನ್ನೂ ಏನೇನು ಮಾಡ್ಬೇಕು ಅಂತ ಐಡಿಯಾ ಹಾಕ್ಕೊಂಡಿದ್ದೀರಿ?
ವೈಲ್ಡ್‌ಲೈಫ್‌ ಮತ್ತು ನೇಚರ್‌ನಲ್ಲಿ ಯಾರಿಗೂ ಅರ್ಥವಾಗದ ಒಂದಷ್ಟು ವಿಷಯಗಳಿರ್ತವಲ್ಲ, ಅವುಗಳನ್ನು ಹುಡುಕ್ಕೊಂಡು ತಿರುಗಾಡ್ತಾ ಇದ್ದೀನಿ. ಭೂಮಿ ಮೇಲೆ ಮನುಷ್ಯ ಹೇಗೆ ಹುಟ್ಟಿದ ಎನ್ನುವುದರ ಬಗ್ಗೆ ಎಲ್ಲರೂ ಹೇಳ್ತಾರೆ. ಆದ್ರೆ ನಂಗೆ ಭೂಮಿ ಮೇಲೆ ಹುಟ್ಟಿದ ಮೊದಲ ಹೂವು ಯಾವ್ದು ಅಂತ ಅನುಮಾನ ಬಂತು. ಅದನ್ನು ಹುಡುಕ್ಕೊಂಡು ಹೋಗ್ತಾ ಇದ್ದೀನಿ. ಅದನ್ನು ಆಲ್‌ರೆಡಿ ಚೀನಾದ ಒಂದು ಕಣಿವೆಯಲ್ಲಿ ಒಬ್ಬ ಸಸ್ಯವಿಜ್ಞಾನಿ ಪತ್ತೆ ಮಾಡಿಬಿಟ್ಟವ್ನೆ. ಆ ಹೂವಿನ ಹಿಂದೆ ಬಿದ್ದು ಅದನ್ನು ಅರ್ಥ ಮಾಡ್ಕೊಳ್ಳಕೆ ಟ್ರೈ ಮಾಡ್ತಾ ಇದ್ದೀನಿ. ಪ್ರಕೃತಿ ಮಾಡಿದಂತ ಮೊಟ್ಟ ಮೊದಲನೇ ತಪ್ಪು ಆ ಹೂವು.

* ಈ ತಿಕ್ಕಲುಗಳನ್ನೆಲ್ಲ ಬಿಟ್ಟು ಒಳ್ಳೆ ಹುಡುಗನಾಗಿ ಲೈಫಲ್ಲಿ ಸೆಟಲ್ ಆಗಬೇಕು ಅಂತ ಅನಿಸಲ್ವಾ?
ಲೈಫಲ್ಲಿ ಸೆಟ್ಲ್‌ ಆಗುವುದಕ್ಕಿಂತ ನೇಣಾಕ್ಕೊಂಡು ಸತ್ತೋಗ್ಬಿಡೋದು ಭಾರಿ ಒಳ್ಳೇದು. ಸೆಟ್ಲಾದ್ರೆ ಲೈಫ್‌ ಅಲ್ಲೇ ಬಿದ್ದೋಗುತ್ತೆ. ಬದುಕಲ್ಲಿ ಕೊರತೆಗಳಿರಬೇಕು. ಏನೋ ಇಲ್ಲ ಅದನ್ನು ಹುಡುಕಬೇಕು ಅನ್ನೋ ತಾಕಲಾಟಗಳು... ಪುಟ್ಟ ಪುಟ್ಟ ಪ್ರಾಬ್ಲಂಗಳನ್ನು ಎದುರಿಸಿ ಗೆಲ್ಲಬೇಕು. ನಂತರ ಇನ್ನೊಂದು ಪ್ರಾಬ್ಲಂ ನೋಡ್ಬೇಕು. ಪ್ರಾಬ್ಲಮ್ಮೇ ಇಲ್ಲಾಂದ್ರೆ ಫುಲ್‌ ಬೋರ್‌ ಹೊಡಿಯುತ್ತೆ. ಆಗ ನಾನೇ ಕೈಯಾರೆ ಹೊಸ ಪ್ರಾಬ್ಲಂ ಹುಟ್ಟಿಸಿಕೋತೀನಿ. ಗುದ್ದಾಡಕ್ಕೆ ಎದುರಿಗೊಂದೇನಾದ್ರೂ ಇರ್ಲೇ ಬೇಕಲ್ಲ. ಇಲ್ಲಾಂದ್ರೆ ಮಜಾ ಇರಲ್ಲ ಲೈಫು.

* ಭಟ್ರ ಜತೆಗಿನ ‘ರಿಲೇಷನ್ನು’ ಡೀಪಾಗಿರೋ ಹಾಗೆ ಕಾಣ್ತದೆ?
ತುಂಬಾ ಗಂಭೀರವಾಗಿ ಪ್ರೀತಿಯಾಗಿಬಿಟ್ಟಿದೆ. ಇಬ್ರಲ್ಲಿ ಒಬ್ಬರು ಹುಡುಗಿಯಾಗಿದ್ರೆ ಇಷ್ಟೊತ್ತಿಗೆ ಮದ್ವೆಯಾಗಿಬಿಡ್ತಿದ್ವಿ. ಅವ್ರು ನಂಗೆ ತಾಳಿ ಕಟ್ಟಿರೋರು, ಇಲ್ಲಾ ನಾನೇ ಅವ್ರಿಗೆ ತಾಳಿ ಕಟ್ಟಿಬಿಡ್ತಿದ್ದೆ. ಯಾಮಾರಿ ಇಬ್ರೂ ಗಂಡಸರಾಗಿದ್ದೀವಿ.

* ಕಟ್ಟಕಡೆಯದಾಗಿ ಈ ನಾಡಿನ ಯುವಬಾಂಧವರಿಗೆ ನಿಮ್ಮ ಹಿತ ಉಪದೇಶಾಮೃತ ಏನಾದ್ರೂ ಇದ್ರೆ ಹೇಳ್ಬಿಡಿ.
ಹ್ಹಹ್ಹಹ್ಹ.. ಆ ಪಾಟಿ ವಯಸ್ಸಾಗಿಲ್ಲ ನಂಗೆ. ಏನು ಹೇಳಲಿ.? ಟಿವಿ, ಮೊಬೈಲ್‌, ಫೇಸ್‌ಬುಕ್‌, ಯೂಟ್ಯೂಬ್‌ ಇವೆಲ್ಲದರ ನಡುವೆಯೂ ನೂರೈವತ್ತು– ಎಪ್ಪತ್ತಡಿ ಅಗಲದ ದೊಡ್ಡ ಪರದೆಯ ಮೇಲೆ ಅವ್ರನ್ನು ನಂಬಿಕೊಂಡೇ ಒಂದಷ್ಟು ಹೊಸ ತಲೆಮಾರು ಸಿನಿಮಾ ಮಾಡ್ತಿದೆ. ಬಾಯಿ ಮುಚ್ಕಂಡ್‌ ಬಂದು ಸಿನಿಮಾ ನೋಡ್ಬೇಕು ಅವ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT