ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಕ್ ಸಸ್ಪೆಂಡ್‌

ಅಕ್ರಮ ಲಾಟರಿ ದಂಧೆ ಆರೋಪಿ ಪಾರಿ ರಾಜನ್‌ ಜತೆ ಸಂಪರ್ಕ
Last Updated 23 ಮೇ 2015, 19:44 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಲಾಟರಿ ಮಾರಾಟ ದಂಧೆಯ ರೂವಾರಿ ಪಾರಿ ರಾಜನ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಐಜಿಪಿ ದರ್ಜೆಯ ಅಧಿಕಾರಿ, ಬೆಂಗಳೂರು ಕಾನೂನು–ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ತಕ್ಷಣ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಜೊತೆ ಚರ್ಚಿಸಿ ಸಿಐಡಿ ನೀಡಿರುವ ಮಧ್ಯಂತರ ವರದಿ ಬಗ್ಗೆ ಮಾಹಿತಿ ಪಡೆದರು. ನಂತರ, ಅಲೋಕ್ ಕುಮಾರ್ ಅಮಾನತು ಆದೇಶದ ಕಡತಕ್ಕೆ ಅನುಮೋದನೆ ನೀಡಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಲೋಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದೆ.

ರಾಜನ್‌ ಜೊತೆ ಅಲೋಕ್‌ ಕುಮಾರ್ ಅವರು ತಮ್ಮ ವೈಯಕ್ತಿಕ ಮೊಬೈಲ್ ದೂರವಾಣಿ ಹಾಗೂ ಮನೆಯ ದೂರವಾಣಿಯಿಂದ ನೂರಕ್ಕೂ ಹೆಚ್ಚು ಬಾರಿ ಕರೆ ಮಾಡಿರುವುದು ಸಿಐಡಿ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಅಲ್ಲದೆ, ವಾಟ್ಸ್‌ಆ್ಯಪ್‌ ಮೂಲಕ ಶುಕ್ರವಾರ ಹೇಳಿಕೆ ನೀಡಿದ್ದ ಅಲೋಕ್ ಕುಮಾರ್, ‘ರಾಜನ್ ನನ್ನ ಹಿತೈಷಿ. ಆತ ಅಕ್ರಮ ಲಾಟರಿ ಮಾರಾಟ ದಂಧೆಯಲ್ಲಿ ಇರುವ ಬಗ್ಗೆ ಗೊತ್ತಿರಲಿಲ್ಲ. ಈ ವಿಚಾರವಾಗಿ ತನಿಖೆಗೆ ಸಿದ್ಧ’ ಎಂದು ಹೇಳಿಕೆ ನೀಡಿದ್ದರು.

ಸಿ.ಎಂ ಕೋಪ: ಅಲೋಕ್ ಕುಮಾರ್ ಅವರು ನೀಡಿದ ಈ ಹೇಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದೆ. ‘ಐಜಿಪಿ ದರ್ಜೆಯಲ್ಲಿರುವ ಪೊಲೀಸ್‌ ಅಧಿಕಾರಿಯೊಬ್ಬರಿಗೆ ರಾಜನ್ ಪೂರ್ವಾಪರ ಗೊತ್ತಾಗಲಿಲ್ಲವೇ? ಆತನನ್ನು ಈ ಅಧಿಕಾರಿ ತಮ್ಮ ಹಿತೈಷಿ ಎಂದು ಭಾವಿಸಿದ್ದು ಹೇಗೆ?’ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ನೂರಕ್ಕೂ ಹೆಚ್ಚು ಕರೆ:  ‘ಅಲೋಕ್ ಅವರು ರಾಜನ್‌ಗೆ ನೂರಕ್ಕೂ ಹೆಚ್ಚು ಬಾರಿ ಕರೆ ಮಾಡಿರುವುದು ಮೊಬೈಲ್ ಕರೆ ವಿವರಗಳ (ಸಿಡಿಆರ್‌) ಪರಿಶೀಲನೆಯಿಂದ ಗೊತ್ತಾಗಿದೆ. ಅಲ್ಲದೆ, ಈ ಹಿಂದೆ ರಾಜನ್‌ನ ಬಂಧನಕ್ಕೆ ತೆರಳಿದ್ದ ಸ್ಥಳೀಯ ಪೊಲೀಸರಿಗೂ ಕರೆ ಮಾಡಿದ್ದ ಇದೇ ಅಧಿಕಾರಿ, ಆತನನ್ನು ಬಂಧಿಸದಂತೆ ಸೂಚಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ. ಪಾರಿ ರಾಜನ್ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಹೆಚ್ಚಿನ ವಿಚಾರಣೆಗೆ ಈತನನ್ನು ವಶಕ್ಕೆ ಪಡೆಯಲು ಸಿಐಡಿ ಪೊಲೀಸರು ಯೋಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳನ್ನು ರಕ್ಷಿಸುವುದಿಲ್ಲ:  ‘ಲಾಟರಿ ಹಗರಣದಲ್ಲಿ ಯಾವುದೇ ಅಧಿಕಾರಿಯನ್ನು ರಕ್ಷಿಸುವುದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈಗಾಗಲೇ ಅಲೋಕ್‌ಕುಮಾರ್‌, ಧರಣೇಶ್‌ ಅವರನ್ನು ಅಮಾನತು ಮಾಡಲಾಗಿದೆ. ಕುಮಾರಸ್ವಾಮಿ ಆರೋಪ ಮಾಡಿದಂತೆ ಎಸ್‌ಪಿ ಚಂದ್ರಕಾಂತ್‌ ಅವರ ಕೈವಾಡ ಇದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಾಗ ಜಾತಿ ಅಡ್ಡ ಬರುವುದಿಲ್ಲ. ಸಿಐಡಿ ಮಧ್ಯಂತರ ವರದಿ ಪರಿಶೀಲಿಸಿ ­ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

* ಪಾರಿ ರಾಜನ್‌ ಜತೆ ಲಾಟರಿ ದಂಧೆ ವಿಚಾರವಾಗಿ ಎಂದಿಗೂ ಮಾತನಾಡಿಲ್ಲ. ಆತನನ್ನು ಬಂಧಿಸದಂತೆ ಪೊಲೀಸರಿಗೂ ಒತ್ತಡ ಹೇರಿಲ್ಲ. ಈ ಆರೋಪಗಳ ಬಗ್ಗೆ ಯಾವುದೇ ತನಿಖೆಗೂ ಸಿದ್ಧ.
-ಅಲೋಕ್ ಕುಮಾರ್, ಐಜಿಪಿ

* ಯಾವ ಜೈಲಿನ ಕೊಠಡಿಯಲ್ಲಿ ಪ್ರಮುಖ ಆರೋಪಿ ಪಾರಿ ರಾಜನ್ ಇದ್ದಾನೋ ಅದೇ ಕೊಠಡಿಯಲ್ಲಿ ಈ ಪೊಲೀಸ್‌ ಅಧಿಕಾರಿಗಳೂ ಇರಬೇಕಲ್ಲವೇ?  ಸರ್ಕಾರ ಏಕೆ ಕಣ್ಣುಮುಚ್ಚಿ ಕುಳಿತಿದೆ?
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT