ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರು ಆತಂಕಪಡುವ ಅಗತ್ಯವಿಲ್ಲ

ಎಫ್‌ಕೆಸಿಎ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿ ಅಭಯ
Last Updated 1 ಫೆಬ್ರುವರಿ 2015, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಅಲ್ಪಸಂಖ್ಯಾತರ ಭಾವನೆಗಳಿಗೆ ಗೌರವ ನೀಡುವ ಜತೆಗೆ ಅವರ ಹಕ್ಕುಗಳ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ನೋಡ­ಲಾಗುತ್ತದೆ ಎನ್ನುವ ಭಾವನೆಯನ್ನು ತೆಗೆದು­ಹಾಕ­ಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರು ಹೇಳಿದರು.

ಕೊಂಕಣಿ ಕ್ಯಾಥೊಲಿಕ್ ಸಂಘಗಳ ಒಕ್ಕೂಟ (ಎಫ್‌ಕೆಸಿಎ) ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿ­ಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಮುಖ್ಯ ವಾಹಿನಿಯಲ್ಲಿರುವ ಕ್ರಿಶ್ಚಿಯನ್ನರು ನಾವು ಅಲ್ಪಸಂಖ್ಯಾತರು ಎಂದು ಆತಂಕಪಡುವ ಅಗತ್ಯವಿಲ್ಲ. ಭಾಷೆ, ಧರ್ಮ ಯಾವುದೇ ಆದರೂ ಮನುಷ್ಯರಾಗಿ ಬದುಕಬೇಕು ಎನ್ನುವುದನ್ನು ಎಲ್ಲ ಧರ್ಮಗಳು ಪ್ರತಿಪಾದಿಸುತ್ತವೆ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜತೆಗೆ ಭ್ರಾತೃತ್ವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕ್ರಿಶ್ಚಿಯನ್‌ ಸಮುದಾಯದ ಬೇಡಿಕೆಗಳನ್ನು ಈಡೇ­ರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗು­ತ್ತದೆ. ಒಕ್ಕೂ­ಟದ ಕಟ್ಟಡಕ್ಕಾಗಿ ಅಗತ್ಯವಾದ ನಿವೇಶನ ಒದಗಿ­ಸಲು ಸಹಕಾರ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಆರ್ಚ್ ಬಿಷಪ್ ಬರ್ನಾರ್ಡ್‌ ಮೊರಾಸ್  ಮಾತನಾಡಿ, ‘ಈ ಹಿಂದಿನ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇ 75ರಷ್ಟು ಅಲ್ಪಸಂಖ್ಯಾತ ಮಕ್ಕಳು ಇರಬೇಕು ಎಂದು ಕಡ್ಡಾಯಗೊಳಿಸಿತ್ತು. ಅದನ್ನು ಈಗಿನ ಸರ್ಕಾರ ಶೇ 25ಕ್ಕೆ ನಿಗದಿಪಡಿಸಿದೆ. ಶೇ 2.5ರಷ್ಟು ಜನಸಂಖ್ಯೆ ಇರುವ ಕ್ರಿಶ್ಚಿಯನ್‌ ಸಮು­ದಾಯದವರು ಶೇ 25 ಅಲ್ಪಸಂಖ್ಯಾತರನ್ನು ಎಲ್ಲಿಂದ ತರು­ವುದು. ಇದನ್ನು ನಾವು ಗಂಭೀರವಾಗಿ ತೆಗೆದು­ಕೊಳ್ಳ­ಬೇಕು. ಇಲ್ಲದಿದ್ದರೆ ನಮ್ಮ ವಿದ್ಯಾಸಂಸ್ಥೆಗಳು ಸವ­ಲತ್ತು­ಗಳಿಂದ ವಂಚಿತವಾಗುತ್ತವೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಘರ್‌ ವಾಪಸಿ ಮತಾಂತರ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಭಾರತ ಹಿಂದೂಗಳಿಗಾಗಿದೆ ಎನ್ನುವ ಘೋಷಣೆಗಳು ಕೇಳಿಬರುತ್ತಿವೆ. ಪಠ್ಯಕ್ರಮವನ್ನು ಕೇಸರಿಕರಣ­ಗೊಳಿ­ಸುತ್ತ ಮಕ್ಕಳ ಮನಸ್ಸನ್ನು ಅಡ್ಡ ಸೆಳೆಯುವ ಪ್ರಯತ್ನ­ಗಳು ನಡೆಯುತ್ತಿವೆ. ಇವು ದೂರಗಾಮಿ ಪರಿಣಾಮ ಬೀರುವ ಚಟುವಟಿಕೆಗಳು. ಇವುಗಳಿಂದ ಎಚ್ಚೆತ್ತು­ಕೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ಕ್ರಿಶ್ಚಿಯನ್ನರು ಅನ್ಯ ಸಮುದಾಯಗಳೊಂದಿಗೆ ಬೆರೆಯುವದರೊಂದಿಗೆ ರಾಜಕೀಯದಲ್ಲಿ ಮುಂದೆ ಬರಬೇಕು. ಸಾರ್ವಜನಿಕ ಆಡಳಿತ ಸೇವೆಗಳಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕುಗ್ಗುತ್ತಿದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಸೇಂಟ್‌ ಅಲೋಶಿಯಸ್‌ ಕಾಲೇಜಿನ ಕೊಂಕಣಿ ಸಂಸ್ಥೆಯ ಕಾರ್ಯನಿರ್ವಾಹಕ  ನಿರ್ದೇಶಕ ಎಡ್ವಿನ್‌ ಜೊಸೆಫ್ ಫ್ರಾನ್ಸಿಸ್‌ ಡಿಸೋಜ ಅವರಿಗೆ ‘ಜೀವಮಾನದ ಸಾಧನೆ’, ಉದ್ಯಮಿ ಜೆ.ಕ್ರಾಸ್ತಾ ಅವರಿಗೆ ‘ವೃತ್ತಿ ಶ್ರೇಷ್ಠತೆ’ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿ ಆಸ್ಟಿನ್ ರೋಚ್ ಅವರಿಗೆ ‘ವರ್ಷದ ಉದ್ಯಮಿ’  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ತಿನ ಸದಸ್ಯ ಐವಾನ್‌ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ಟೆಲಿನೊ, ಒಕ್ಕೂಟದ ಅಧ್ಯಕ್ಷ ವಿಕ್ಟರ್‌ ಎಡ್ವರ್ಡ್‌ ಡಿಸೋಜ, ಮಾಜಿ ಅಧ್ಯಕ್ಷೆ ಐಯ್ಡಾ ಮಾರ್ಗೆರೇಟ್‌ ಡಿಕೋನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT