ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಾಡಿಸುವ ಕ್ರೌರ್ಯ ಕಥಾನಕ

ನಾವು ನೋಡಿದ ಚಿತ್ರ
Last Updated 17 ಜೂನ್ 2016, 11:44 IST
ಅಕ್ಷರ ಗಾತ್ರ

ಚಿತ್ರ: ಉಡ್ತಾ ಪಂಜಾಬ್‌ (ಹಿಂದಿ)

ನಿರ್ಮಾಣ: ಫ್ಯಾಂಟಮ್‌ ಫಿಲ್ಮ್ಸ್‌
ನಿರ್ದೇಶನ: ಅಭಿಷೇಕ್‌ ಚೌಬೆ
ತಾರಾಗಣ: ಶಾಹಿದ್‌ ಕಪೂರ್‌, ಅಲಿಯಾ ಭಟ್‌, ಕರೀನಾ ಕಪೂರ್‌, ದಲ್ಜಿತ್‌ ಸಿಂಗ್‌, ಸತೀಶ್‌ ಕೌಶಿಕ್‌
*

ಹಾಕಿ ಆಡುವ ಆಸೆ ಹೊತ್ತು ಬಿಹಾರದಿಂದ ಪಂಜಾಬ್‌ಗೆ ಬಂದ ಹೆಣ್ಣುಮಗಳು. ತನ್ನ ಕನಸು ಈಡೇರುವ ಗಳಿಗೆ ಬರಲೆಂದು ಎಸ್ಟೇಟ್‌ನಲ್ಲಿ ಕೂಲಿ ಕೆಲಸಕ್ಕೆ ಸೇರುತ್ತಾಳೆ. ಅಲ್ಲಿ ಅಕಸ್ಮಾತ್ತಾಗಿ ಅವಳಿಗೆ ದೊಡ್ಡದೊಂದು ಪೊಟ್ಟಣ ಸಿಗುತ್ತದೆ. ಅದರಲ್ಲಿರುವುದು ಮಾದಕದ್ರವ್ಯ ಎನ್ನುವುದು ಅವಳಿಗೆ ಗೊತ್ತಾಗುತ್ತದೆ. ಒಂದು ಕೋಟಿ ರೂಪಾಯಿ ಮಾಲು ಅದು. ಅವಳು ಮೂರೇ ಮೂರು ಸಾವಿರಕ್ಕೆ ಮಾರಲು ಮುಂದಾಗುತ್ತಾಳೆ; ಹಾಕಿ ಆಡುವ ತನ್ನ ಕನಸಿಗೆ ರೆಕ್ಕೆ ಸಿಲುಕಿಸಿಕೊಳ್ಳಲು. ಅದರ ಅಸಲಿ ಬೆಲೆ ಗೊತ್ತಿರದ ಮುಗ್ಧೆ ಅವಳು. ಸಂಕಷ್ಟಕ್ಕೆ ಸಿಲುಕುವ ಅವಳು ಮಾರುವುದು ಹಾಗಿರಲಿ, ಮಾದಕದ್ರವ್ಯವನ್ನು ಬಾವಿಗೆ ಸುರಿಯುತ್ತಾಳೆ. ಅವಳನ್ನು ಬಂಧನದಲ್ಲಿ ಇರಿಸುವ ಮಾದಕದ್ರವ್ಯ ಮಾರಾಟ ಜಾಲದ ಮುಖ್ಯಸ್ಥ ಹೇಳುತ್ತಾನೆ– ‘ಅದರಲ್ಲಿ ಒಂದು ಕೋಟಿ ಬೆಲೆ ಬಾಳುವ ಮಾಲ್‌ ಇತ್ತು ಮಗು... ಕದ್ದದ್ದೇನೋ ಆಯಿತು. ಬಾವಿಗೆ ಬಿಸಾಡುವುದೇ’! ಜಾಲಕೋರರ ಅಮಲಿನ ಲೋಕದಲ್ಲಿ ತನ್ನನ್ನೇ ತಾನು ತೇದುಕೊಳ್ಳುವ ಅವಳು ಹೋರಾಟವನ್ನಂತೂ ನಿಲ್ಲಿಸುವುದಿಲ್ಲ.
*

ಭ್ರಷ್ಟ ಪೊಲೀಸ್‌ ಅಧಿಕಾರಿ. ಮಾದಕದ್ರವ್ಯದ ಜಾಲ ಬೆಳೆಯುವಲ್ಲಿ ಅವನ ಪಾಲೂ ಇದೆ. ಅವನ ತಮ್ಮನೇ ಆ ದ್ರವ್ಯದ ವ್ಯಸನಿಯಾಗಿ ಮರಣದ ಮನೆಯ ಕದಿ ತಟ್ಟಿ, ಕೊನೆಗೆ ಬದುಕುತ್ತಾನೆ. ಅವನನ್ನು ಬದುಕಿಸುವ ವೈದ್ಯೆ ವ್ಯಸನಗಳ ಬಿಡಿಸುವ ಪ್ರಾಮಾಣಿಕತೆಯ ಮೂರ್ತಿ. ಅವಳು ಭಷ್ಟನಾಗಿದ್ದ ಆ ಪೊಲೀಸನಲ್ಲಿ ಕಿಚ್ಚು ತುಂಬುತ್ತಾಳೆ.
*

ಹೈಸ್ಕೂಲಷ್ಟೇ ಓದಿದ್ದು. ಟ್ಯಾಕ್ಸಿ ಚಾಲಕ ಆಗಿಯೇ ಬದುಕು ಸವೆಸಬೇಕಾದಂಥ ಬಡತನ. ಇದ್ದ ಸಂಗೀತದ ಹುಚ್ಚು ದಿಢೀರ್‌ ಖ್ಯಾತಿ ತಂದಾಗ ಅವನಿಗೆ ಇಪ್ಪತ್ತೊಂದಷ್ಟೆ ವಯಸ್ಸು. ಜನರಿಗೆ ಅವನು ತನ್ನ ಹಾಡಿನ ಅಮಲಿನ ಜೊತೆಗೆ ಮದ್ಯವ್ಯಸನವನ್ನೂ ವರ್ಷಗಟ್ಟಲೆ ಹಂಚುತ್ತಾ ಬಂದಿದ್ದಾನೆ. ಇಹಲೋಕದ ಜನರ ಕುರಿತು ದಿವ್ಯ ನಿರ್ಲಕ್ಷ್ಯದಿಂದಲೇ ಬದುಕಿದ ಅವನಿಗೆ ಜೈಲು ಸೇರಬೇಕಾದ ಅನಿವಾರ್ಯತೆ ಬರುತ್ತದೆ. ಆ ಜೈಲಿನಲ್ಲಿ ಜನರ ಮಧ್ಯೆ ಅವನನ್ನು ಬಂಧಿಸಿದಾಗ, ಅವನದ್ದೇ ಹಾಡನ್ನು ಅಲ್ಲಿನ ಕೆಲವು ಹುಡುಗರು ಅದೇ ಲಯದಲ್ಲಿ ಗುನುಗುತ್ತಾರೆ. ಅವರು ಇವನ ಹಾಡಿನ ಅಭಿಮಾನಿಗಳಷ್ಟೇ ಅಲ್ಲ; ವ್ಯಸನದ ಅಭಿಮಾನಿಗಳೂ ಹೌದು. ಆ ವ್ಯಸನದಿಂದಲೇ ಒಬ್ಬ ಹಣ ಕೊಡಲು ಒಪ್ಪದ ತಾಯಿಯನ್ನೇ ಕೊಂದು ಜೈಲು ಸೇರಿದ್ದಾನೆ. ಅವನ ಅಭಿಮಾನ ನೋಡಿ ಕಣ್ಣರಳಿಸದ ಹಾಡುಗಾರನಿಗೆ ಅವನು ತಾಯಿಯನ್ನೇ ಕೊಂದಿದ್ದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ.

ಈ ಮೂರೂ ಪ್ರಸಂಗಗಳು ನಡೆಯುವ ಜಾಗ ಪಂಜಾಬ್‌. ಅಲ್ಲಿನ ‘ನಾರ್ಕೊ ಪಾಲಿಟಿಕ್ಸ್‌’ ಹಿನ್ನೆಲೆಯಲ್ಲಿ ಅತಿವೇಗದ ಕಥಾನಕವನ್ನು ಅಭಿಷೇಕ್‌ ಚೌಬೆ ಹೆಣೆದಿದ್ದಾರೆ. ಸುದೀಪ್‌ ಶರ್ಮ ಕಚ್ಚಾ ಸಂಭಾಷಣೆ ಬರೆಯುವ ಮೂಲಕ ಮಾತಿಗೆ ಫಿಲ್ಟರ್‌ ಸಲ್ಲ ಎನ್ನುವಂತೆ ವಿಷಯ ಮಂಡಿಸಿದ್ದಾರೆ. ಪಾತ್ರಗಳ ವರ್ತನೆ, ಬೆಳಕಿನ ಬಳಕೆ, ಭಾವ ನಿಯಂತ್ರಣ ಎಲ್ಲದರಲ್ಲೂ ‘ಪರಮ ಕಚ್ಚಾ ರಿಯಲಿಸ್ಟಿಕ್‌’ ಎನ್ನಬಹುದಾದ ತಂತ್ರ ಎದ್ದುಕಾಣುತ್ತದೆ. ಇದೇ ಆಗೀಗ ಪ್ರೇಕ್ಷಕರ ಸಂಯಮ ಪರೀಕ್ಷಿಸುವುದೂ ಇದೆ. ವಿಷಯವಸ್ತು ಇಷ್ಟು ತೀವ್ರವಾಗಿರಬೇಕೆ ಎಂಬ ಪ್ರಶ್ನೆ ಹುಟ್ಟುಹಾಕುವಷ್ಟು ಕ್ರೌರ್ಯವನ್ನು ಅನೇಕ ದೃಶ್ಯಗಳು ತುಳುಕಿಸುತ್ತವೆ.

ದೃಶ್ಯವತ್ತಾಗಿ ಅಲ್ಲದಿದ್ದರೂ ಪರಿಣಾಮದ ದೃಷ್ಟಿಯಿಂದ ಇದು ನಿರ್ಮಾಪಕರಲ್ಲಿ ಒಬ್ಬರಾದ ಅನುರಾಗ್‌ ಕಶ್ಯಪ್‌ ಸಿನಿಮಾ ಚಿಂತನೆಯ ಹಾದಿ ಎನ್ನಬೇಕು. ಅವರ ಗರಡಿಯಲ್ಲೇ ಪಳಗಿದ ಅಭಿಷೇಕ್‌ ಚೌಬೆ, ಸಿದ್ಧ ಮಾದರಿಯನ್ನು 2010ರಲ್ಲಿ ‘ಇಷ್ಕಿಯಾ’ ಸಿನಿಮಾ ಮೂಲಕವೇ ಮುರಿದವರು. ಈ ಸಿನಿಮಾದಲ್ಲಿ ಅವರು ಸಂಕೇತಾತ್ಮಕ ಮಾರ್ಗವನ್ನು ಅನುಸರಿಸದೆ ವಾಚ್ಯ, ಮೆಲೋಡ್ರಾಮಾ ಹಾಗೂ ಅಲ್ಲಲ್ಲಿ ‘ಸ್ಲೋಮೋಷನ್‌’ ತಂತ್ರ ಬಳಸಿಕೊಂಡು ಶಾಟ್‌ಗಳನ್ನು ಪೋಣಿಸಿದ್ದಾರೆ. ಮೂರು ಉಪಕಥೆಗಳನ್ನು ಒಂದು ಸೂತ್ರದಲ್ಲಿ ಕಟ್ಟಿರುವ ಕ್ರಿಯೆಯಲ್ಲಿ ಕುಶಲತೆ ಇದೆ. ಮೇಘನಾ ಸೆನ್ ಸಂಕಲನದ ಕೆಲಸಕ್ಕೆ ಇದೇ ಸವಾಲೊಡ್ಡಿರುವ ಸಾಧ್ಯತೆ ಇದೆ.

ಪಂಜಾಬ್‌ನಲ್ಲಿ ‘ನಾರ್ಕೊ ಪಾಲಿಟಿಕ್ಸ್‌’ (ವ್ಯಸನಿಗಳ ಪೋಷಿಸುವ ರಾಜಕಾರಣ) ಇಷ್ಟು ಢಾಳಾಗಿದೆಯೇ ಎನ್ನುವ ಸಂಗತಿಯನ್ನೂ ಸಿನಿಮಾ ಗಾಢವಾಗಿ ತೋರಿಸಿದೆ. ಅದೇ ಕಾರಣಕ್ಕೆ ಇದು ಇಷ್ಟೆಲ್ಲ ವಿವಾದಕ್ಕೆ ಪಕ್ಕಾದದ್ದು.

ಕಥನದ ಉದ್ದೇಶಕ್ಕೆ ಅನಗತ್ಯ ಎನ್ನಹುದಾದ ಒಂದೂ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದು ಚಿತ್ರಕಥಾ ನೇಯ್ಗೆಯ ಕಸುಬುದಾರಿಕೆಗೆ ಸಾಕ್ಷಿ. ಅಮಿತ್‌ ತ್ರಿವೇದಿ ಹಾಡುಗಳಿಗೆ ಮಾಡಿರುವ ಸ್ವರ ಸಂಯೋಜನೆ ಹಾಗೂ ಬೆನೆಡಿಕ್ಟ್‌ ಟೇಲರ್‌ ಹಿನ್ನೆಲೆ ಸಂಗೀತ ಸಿನಿಮಾದ ವೇಗವನ್ನು ಇನ್ನಷ್ಟು ಹೆಚ್ಚುಮಾಡಿದೆ. ಅಭಿನಯದಲ್ಲಿ ಅಲಿಯಾ ಭಟ್‌ ಆರೇಳು ಮೆಟ್ಟಿಲು ಮೇಲೇರಿದ್ದಾರೆ. ಮೇಕಪ್‌ ಇಲ್ಲದ ಪಾತ್ರದಲ್ಲಿ ಅವರು ಕಳೆದುಹೋಗಿರುವ ಪರಿಯಿಂದಲೇ ಎಲ್ಲರನ್ನೂ ಆವರಿಸಿಕೊಳ್ಳಬಲ್ಲರು. ಅವರ ನಂತರದ ಸ್ಥಾನ ಅಭಿನಯದಲ್ಲಿ ದಲ್ಜಿತ್‌ ಸಿಂಗ್‌ಗೆ ಸಲ್ಲಬೇಕು. ಹಾಗೆ ನೋಡಿದರೆ ಶಾಹಿದ್‌ ಕಪೂರ್‌ ಪಾತ್ರಕ್ಕಿಂತ ಅಲಿಯಾ ಭಟ್‌ ಪಾತ್ರವೇ ತೂಕದ್ದು. ಕರೀನಾ ಕಪೂರ್‌ ಅವರನ್ನು ಪಾತ್ರ ನಿಭಾವಣೆಯಲ್ಲಿ ನಿರ್ದೇಶಕರು ನಿಯಂತ್ರಿಸಿರುವುದನ್ನೂ ಮೆಚ್ಚಿಕೊಳ್ಳಬಹುದು.

ರಾಜೀವ್‌ ರವಿ ಕ್ಯಾಮೆರಾ ಚಳಕದಲ್ಲಿ ಮಂದ ಬೆಳಕಿನ ಪಾತ್ರವೇ ಹಿರಿದು. ಇಷ್ಟಕ್ಕೂ ಕ್ರೌರ್ಯವನ್ನು ಇಷ್ಟು ವಾಚ್ಯವಾಗಿ ಯಾಕೆ ಹೇಳಬೇಕು ಎಂದು ಆರೋಗ್ಯಕರ ಸಂಕೇತಗಳನ್ನು ಒಪ್ಪಿಕೊಳ್ಳುವವರು ಚಿಂತಿಸುವಂತೆಯೂ ಸಿನಿಮಾ ಮಾಡುತ್ತದೆ. ಸಿನಿಮಾ ಹೀಗೂ ಕಾಡಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT