ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿದ್ದರೂ ಇಲ್ಲಿನ ನಂಟು ಶ್ರೀನಿವಾಸ್‌

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಮೂಲತಃ ಬೆಂಗಳೂರಿನವರಾದ ಸಿಡ್ನಿ ಶ್ರೀನಿವಾಸ್‌ ಕನ್ನಡದ ಕಥೆಗಾರರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಇ ಪದವಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಎಂ.ಇ ಹಾಗೂ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ‘ಏರೋಸ್ಪೇಸ್‌ ಅಂಡ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌’ ವಿಭಾಗದ ಪ್ರಾಧ್ಯಾಪಕರಾಗಿ ಮೂರು ದಶಕಕ್ಕಿಂತ ಹೆಚ್ಚುಕಾಲ ಶ್ರೀನಿವಾಸ್‌ ಕೆಲಸ ಮಾಡಿ ನಿವೃತ್ತರಾದವರು.

ಆಸ್ಟ್ರೇಲಿಯಾ ಮಾತ್ರವಲ್ಲದೇ ಜರ್ಮನಿ, ಜಪಾನ್‌, ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿರುವುದಲ್ಲದೇ ಅಲ್ಲಿ ಸಂಶೋಧನೆಗಳನ್ನೂ ಮಾಡಿದ್ದಾರೆ. ‘ಫ್ಲೂಯಿಡ್‌ ಮೆಕ್ಯಾನಿಕ್‌’, ‘ಆಫ್ಟಿಮೈಜೇಶನ್‌’ ವಿಷಯಗಳಲ್ಲಿ ಪರಿಣತರು. ಅವರ ಸುಮಾರು 100 ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಪ್ರಸ್ತುತ ರಕ್ತಪರಿಚಲನೆಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಂಡಿದ್ದಾರೆ. ‘ಶ್ರೀನಿವಾಸ ರಾಮಾನುಜನ್‌’, ‘ಗೆಲಿಲಿಯೊ’, ‘ನ್ಯೂಟನ್‌’, ‘ಅಲ್ಬರ್ಟ್‌ ಐನ್‌ಸ್ಟೈನ್‌’ ಈ ನಾಲ್ಕು ವಿಜ್ಞಾನಿಗಳ ಕುರಿತ ಪುಸ್ತಕಗಳು ಕನ್ನಡ, ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ.

ಇಂಗ್ಲಿಷ್‌ನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಐದು ತಾಂತ್ರಿಕ ಪುಸ್ತಕಗಳನ್ನು ಅವರು ಪ್ರಕಟಿಸಿ ದ್ದಾರೆ. ಆಸ್ಟ್ರೇಲಿಯಾದಲ್ಲೇ ವಾಸವಾಗಿರುವ ಶ್ರೀನಿವಾಸ್‌ ತಮ್ಮ ಹುಟ್ಟೂರಾದ ಬೆಂಗಳೂರಿಗೆ ವರ್ಷಕ್ಕೆ ಎರಡು ಬಾರಿ ಭೇಟಿ ನೀಡುತ್ತಿರುತ್ತಾರೆ. ಸಿಡ್ನಿಯಲ್ಲಿ ಕನ್ನಡದ ಕೆಲಸಗಳಲ್ಲಿ ಕ್ರಿಯಾ ಶೀಲರಾಗಿರುವ ಅವರು ತಮ್ಮ ಅಲ್ಲಿನ ಚಟುವಟಿಕೆ, ಬೆಂಗಳೂರಿನೊಂದಿಗಿನ ನಂಟನ್ನು ಹಂಚಿಕೊಂಡಿದ್ದಾರೆ.

* ಸಿಡ್ನಿಯಲ್ಲಿ ಬಹುಕಾಲದಿಂದ ವಾಸವಾಗಿದ್ದೀರಿ. ಅಲ್ಲಿ ನೀವು ನಡೆಸುತ್ತಿರುವ ಕನ್ನಡ ಚಟುವಟಿಕೆಗಳ ಬಗ್ಗೆ, ಅಲ್ಲಿನ ಕನ್ನಡ ವಾತಾವರಣದ ಬಗ್ಗೆ ಹೇಳಿ?
‘ಸಿಡ್ನಿ ಕನ್ನಡ ಸಂಘ’ 25–30 ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ‘ಸುಗಮ ಕನ್ನಡ ಕೂಟ’ 5–6 ವರ್ಷಗಳಿಂದ ಕ್ರಿಯಾಶೀಲವಾಗಿದೆ. ಈ ಎರಡು ಸಂಘಗಳ ಸಹಯೋಗದಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದೀಪಾವಳಿ, ಯುಗಾದಿ, ದಸರಾ, ರಾಜ್ಯೋತ್ಸವದಂತಹ ಹಬ್ಬಗಳನ್ನು ಕೂಡ ಮಾಡುತ್ತೇವೆ. ಭಾವಗೀತೆ, ಹಾಸ್ಯ, ಮಿಮಿಕ್ರಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತವೆ. ಇದರಲ್ಲಿ ಸಿಡ್ನಿ ಕನ್ನಡ ಸಂಘ ಸಿಡ್ನಿ ನಗರಕ್ಕೆ ಹತ್ತಿರ. ಸುಗಮ ಕನ್ನಡ ಕೂಟ ಲಿವರ್‌ಪೂಲ್‌ನಲ್ಲಿದೆ. ವಾರಾಂತ್ಯದಲ್ಲಿ ಕನ್ನಡ ಕಾರ್ಯಕ್ರಮಗಳು ಇದ್ದೇ ಇರುತ್ತವೆ.

ಇದಕ್ಕಿಂತ ಮುಖ್ಯವಾಗಿ ‘ಸುಗಮ ಕನ್ನಡ ಕೂಟ’ದವರು ಲಿವರ್‌ಪೂಲ್‌ನಲ್ಲಿ ಸುಮಾರು ಐದು ವರ್ಷದ ಹಿಂದೆ ಕನ್ನಡ ಶಾಲೆಯೊಂದನ್ನು ಶುರು ಮಾಡಿದ್ದಾರೆ. ಇಲ್ಲಿ 30 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಕನಕಾಪುರ ನಾರಾಯಣ ಅವರ ಮೇಲ್ವಿಚಾರಣೆ, ಮುತುವರ್ಜಿಯಲ್ಲಿ ಈ ಶಾಲೆ ನಡೆಯುತ್ತಿದೆ. ಕರ್ನಾಟಕದಿಂದ ಒಳ್ಳೆಯ ಕನ್ನಡ ಪುಸ್ತಕಗಳನ್ನು ತರಿಸಿಕೊಂಡು ಹಾಗೂ ಉತ್ತಮ ತಂತ್ರಜ್ಞಾನದ ನೆರವಿನೊಂದಿಗೆ ಇದನ್ನು ಮಾಡುತ್ತಿದ್ದಾರೆ. ಅದಕ್ಕೆ ಆಸ್ಟ್ರೇಲಿಯಾ ಸರ್ಕಾರದ ಆರ್ಥಿಕ ನೆರವು ಇಲ್ಲ.

* ಇದರ ಹೊರತಾಗಿ ಬೇರೆ ಯಾವ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ?
ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಎರಡು ರೇಡಿಯೊ ಕೇಂದ್ರಗಳಿವೆ. ಒಂದು ಎಸ್‌.ಬಿ.ಎಸ್‌ ಎಂಬ ರೇಡಿಯೊ ಕೇಂದ್ರ. ಇದು ಆಸ್ಟ್ರೇಲಿಯಾ ಸರ್ಕಾರದ ನೆರವಿನಿಂದ 30 ವರ್ಷಗಳಿಂದ ನಡೆಯುತ್ತಿದೆ. ಇನ್ನೊಂದು ನಾವು ಎಂಟು ತಿಂಗಳ ಹಿಂದೆ ಶುರುಮಾಡಿದ ‘ಸಿಡ್ನಿ ಕನ್ನಡ ವಾಣಿ’ ಎಂಬ ರೇಡಿಯೊ ಕೇಂದ್ರ. ಕರ್ನಾಟಕದಿಂದ ಸಿಡ್ನಿಗೆ ಬಂದ ಗಣ್ಯರ ಸಂದರ್ಶನ, ಇಲ್ಲಿ (ಬೆಂಗಳೂರು ಸೇರಿದಂತೆ ಇನ್ನಿತರ ಕಡೆ) ನಡೆದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅದರ ಬಗ್ಗೆ ತಿಳಿದವರು ರೇಡಿಯೋದಲ್ಲಿ ಮಾತನಾಡುತ್ತಾರೆ.

ಈ ಎರಡೂ ಕೇಂದ್ರಗಳು ವಾರಕ್ಕೆ ತಲಾ ಒಂದು ಗಂಟೆಯ ಕಾರ್ಯಕ್ರಮ ಪ್ರಸಾರ ಮಾಡುತ್ತವೆ. ಎಸ್‌.ಬಿ.ಎಸ್‌ ರೇಡಿಯೊ ಪ್ರತಿ ಮಂಗಳವಾರ ಬೆಳಗ್ಗೆ 2 ಗಂಟೆಗೆ ತನ್ನ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ, ‘ಸಿಡ್ನಿ ಕನ್ನಡ ವಾಣಿ’ ಶನಿವಾರ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಪ್ರಸಾರ ಮಾಡುತ್ತದೆ. ನಾವೇ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇದಲ್ಲದೆ, ‘ಪುರಂದರ ಸಮಿತಿ’ 15 ವರ್ಷದಿಂದ ‘ಪುರಂದರ ದಾಸ ಆರಾಧನೆ’ಯನ್ನು ನಡೆಸಿಕೊಂಡು ಬರುತ್ತಿದೆ.

* ಬೆಂಗಳೂರಿಗೆ ಆಗಾಗ ಭೇಟಿ ಕೊಡುತ್ತಿರುತ್ತೀರಿ. ನೀವು ಗಮನಿಸಿದಂತೆ ಇಲ್ಲಿ ಆದ ಬಲಾವಣೆಗಳು ಯಾವುವು?
ಬೆಂಗಳೂರು ತುಂಬಾ ಬದಲಾಗಿದೆ. ಇಲ್ಲಿಗೆ ನಾವೇ ವಿದೇಶಿಗರಾಗಿದ್ದೇವೆ! ಬೆಂಗಳೂರಿನ ಕೆಲವು ಪ್ರದೇಶಗಳು ನನಗೆ ಗೊತ್ತಾಗುವುದಿಲ್ಲ. ಇಲ್ಲಿನ ಜನಸಂಖ್ಯೆ ಬಹಳ ಹೆಚ್ಚಾಗಿದೆ. ಇಡೀ ಆಸ್ಟ್ರೇಲಿಯಾ ಖಂಡದ ಜನಸಂಖ್ಯೆ 2.30 ಕೋಟಿ ಇದ್ದರೆ, ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಇದೆ. ಈ ದೃಷ್ಟಿಯಿಂದ ಆದ ಬದಲಾವಣೆ ಅಗಾಧ.

* ಕರ್ನಾಟಕ, ಕನ್ನಡದೊಂದಿಗೆ ನೀವು ಯಾವ ಬಗೆಯಲ್ಲಿ ನಂಟನ್ನು ಮುಂದುವರಿಸಿಕೊಂಡು ಬಂದಿದ್ದೀರಿ? ಅಲ್ಲಿನವರು ಕೂಡ ತಮ್ಮ ನಂಟನ್ನು ಹೇಗೆ ಇಟ್ಟುಕೊಂಡಿದ್ದಾರೆ?
ಎಲ್ಲರಿಗೂ ಇಲ್ಲಿ ಸಂಬಂಧಿಗಳು ಇದ್ದೇ ಇರುತ್ತಾರೆ. ಅವರೊಂದಿಗೆ ಪರಸ್ಪರ ಸಂವಾದ ಇರುತ್ತದೆ. ಈಗ ಫೋನ್‌, ಇ–ಮೇಲ್‌ ಇರುವುದರಿಂದ ಯಾವುದೂ ದೂರ ಅನ್ನಿಸುವುದಿಲ್ಲ. ನಮಗೆ ಬೆಂಗಳೂರಿನಲ್ಲಿ ಆದದ್ದು 15 ನಿಮಿಷದಲ್ಲಿ ಗೊತ್ತಾಗುತ್ತದೆ. ಕನ್ನಡ ಹಾಗೂ ಭಾರತೀಯ ವಾಹಿನಿಗಳ ಕಾರ್ಯಕ್ರಮಗಳನ್ನು ಅಲ್ಲೂ ನೋಡುತ್ತಾರೆ.

* ಸಿಡ್ನಿಯ ಲಿಂಡ್‌ ಕೆಫೆಯ ಮೇಲೆ ಭಯೋತ್ಪಾದಕರ ದುರಾಕ್ರಮಣದ ಬಗ್ಗೆ ಆಸ್ಟ್ರೇಲಿಯಾ ದವರ ಪ್ರತಿಕ್ರಿಯೆ ಹೇಗಿತ್ತು?
ಈ ಘಟನೆಯ ಬಳಿಕ ಜನರು ತುಂಬಾ ಹೆದರಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇಂಥದ್ದೆಲ್ಲ ಆಗುವುದಿಲ್ಲ ಎಂದು ಜನರು ಅಂದುಕೊಂಡಿದ್ದರು. ಆದರೆ, ಆಸ್ಟ್ರೇಲಿಯಾ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇತ್ತು, ಅದಕ್ಕೆ ಅದರು ಸಿದ್ಧರಾಗಿದ್ದರು. ಈ ದುರಾಕ್ರಮಣ ಆದ ಬಳಿಕ ಜನರು ಎಚ್ಚೆತ್ತುಕೊಂಡಿದ್ದಾರೆ.

ಮಾರ್ಟಿನ್‌ ಪ್ಲೇಸ್‌ನಲ್ಲಿರುವ ಕೆಫೆ ಲಿಂಡ್ ಚಾಕೊಲೆಟ್‌ ಎದುರು ಇರುವ ಬ್ಯಾಂಕ್‌ನಲ್ಲಿ ನನ್ನ ಮಗ ಗೌತಮ್‌ ಕೆಲಸ ಮಾಡುತ್ತಾನೆ. ಅವನು ಮೆಕ್ವಾರಿ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಾನೆ. ಈ ಆಕ್ರಮಣ ಆದಾಗ ಅವನು ತನ್ನ ಕಚೇರಿಯ ಕಿಟಕಿಯಿಂದ ಅದನ್ನು ನೋಡುತ್ತಿದ್ದ. ದುರದೃಷ್ಟವಶಾತ್‌ 38 ವರ್ಷದ ವಕೀಲೆ, ಮೂರು ಮಕ್ಕಳ ತಾಯಿ ಕ್ಯಾಟ್ರಿನಾ ಈ ಘಟನೆಯಲ್ಲಿ ಮೃತಳಾದಳು.

* ನೀವು ಕಥೆಗಾರರೂ ಹೌದು. ಕನ್ನಡ ಸಾಹಿತ್ಯದೊಂದಿಗಿನ ಒಡನಾಡವನ್ನು ಹೇಗೆ ಇಟ್ಟುಕೊಂಡಿದ್ದೀರಿ?
ಇಲ್ಲಿಗೆ ಬಂದಾಗ ಕನ್ನಡ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತೇನೆ. ಸಮಯ ಸಿಕ್ಕಾಗ ಓದುವುದು, ಬರೆಯುವುದು ಮಾಡುತ್ತೇನೆ. ವಿಜ್ಞಾನದಲ್ಲಿ ಆದ ಬೆಳವಣಿಗೆಯನ್ನು ಎರಡೂ ಭಾಷೆಯಲ್ಲಿ ಬರೆಯುತ್ತೇನೆ. ಪ್ರಿಸಂ ಹಾಗೂ ವಸಂತ ಪ್ರಕಾಶನದವರು ಏನಾದರೂ ಬರೆದುಕೊಡಲು ಕೇಳುತ್ತಾರೆ. ಈಗ ವಿಜ್ಞಾನಿ ಐಸಾಕ್ ನ್ಯೂಟನ್ ಕುರಿತ ಪುಸ್ತಕ ಸಿದ್ಧವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ‘ಇಂಡಿಯನ್‌ ಲಿಂಕ್‌’ ಎಂಬ ಪಾಕ್ಷಿಕ ಪತ್ರಿಕೆ ಇದೆ. ಆ ಪತ್ರಿಕೆಯಲ್ಲಿ ಬರೆಯುತ್ತಿರುತ್ತೇನೆ. ಕನ್ನಡದ ಪತ್ರಿಕೆಗಳಿಗೂ ಆಗಾಗ ಬರೆಯುತ್ತೇನೆ.

* ಎರಡೂ ದೇಶಗಳಲ್ಲಿ ನೀವು ನೋಡಿದಂತಹ ಪ್ರಮುಖ ಬದಲಾವಣೆ ಯಾವುದು?
ಆಸ್ಟ್ರೇಲಿಯಾದಲ್ಲಿ ವ್ಯಕ್ತಿಪೂಜೆ ಇಲ್ಲ. ಅಲ್ಲಿ, ಕಾಲೇಜು, ರಾಜಕಾರಣಿಗಳಲ್ಲಿ ವ್ಯಕ್ತಿಪೂಜೆ ಕಾಣಿಸುವುದಿಲ್ಲ. ಅಲ್ಲಿನ ಪ್ರಧಾನಿ ಲಿಫ್ಟ್‌ನಲ್ಲಿ ಜನಸಾಮಾನ್ಯರಂತೆ ಬರುತ್ತಾರೆ. ರಸ್ತೆಯಲ್ಲಿ ಅವರು ಸಿಕ್ಕರೆ ಜನರು ಅವರನ್ನು ಮಾತನಾಡಿಸುತ್ತಾರೆ. ಅವರಿಗೆ ಯಾವುದೇ ಸಮಾರಂಭಗಳಲ್ಲಿ ಬಾಜಾಭಜಂತ್ರಿ ಇಲ್ಲ. ಸಮಾರಂಭಗಳಲ್ಲಿ ಅವರು ಮಾತನಾಡುವುದು ಎರಡರಿಂದ ಮೂರು ನಿಮಿಷವಷ್ಟೆ. 6.30ರ ಸಮಯಕ್ಕೆ ಬರಬೇಕು ಎಂದರೆ ಅಷ್ಟು ಹೊತ್ತಿಗೆ ಅವರು ಅಲ್ಲಿರುತ್ತಾರೆ. ಅಲ್ಲಿ ತಪ್ಪದೇ ಸಮಯಪಾಲನೆ ಮಾಡುತ್ತಾರೆ. ಇದ್ಯಾವುದೂ ಇಲ್ಲಿ, ನಮ್ಮಲ್ಲಿ ಕಾಣಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT