ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿ–ಇಲ್ಲಿ ಅಂಗೈಯಲ್ಲೇ ಖರೀದಿ

Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ನನಗೆ ಶಾಪಿಂಗ್‌ ಇಷ್ಟವಿಲ್ಲ’ ಎಂದು ಹೇಳುವ ಹೆಣ್ಣುಮಕ್ಕಳ ಸಂಖ್ಯೆ ಬಹಳ ಕಡಿಮೆ. ಅನೇಕರು ಹವ್ಯಾಸವೇನು ಎಂದರೆ ‘ಶಾಪಿಂಗ್‌’ ಎಂದುಬಿಡುತ್ತಾರೆ. ಇನ್ನು ಭಾರತದಲ್ಲಿ ಹೆಣ್ಣುಮಕ್ಕಳಿಗೆ ಶಾಪಿಂಗ್‌ ಮಾಡಲೆಂದೇ ಹಬ್ಬಗಳು ಹುಟ್ಟಿಕೊಂಡಿವೆಯೇನೋ ಎಂಬಷ್ಟು ಹಬ್ಬಗಳು. ಎಲ್ಲವೂ ಹೆಣ್ಣುಮಕ್ಕಳು ಸಂಭ್ರಮಿಸುವ ಹಬ್ಬಗಳೇ. ಮದುವೆಯಾದ ಹೆಣ್ಣಿಗೆ ಅತ್ತ ತವರಿನ ಉಡುಗೊರೆ. ಇತ್ತ ಗಂಡನ ಕೊಡುಗೆ. ಇಷ್ಟೇ ಅಲ್ಲ ತಾನು ಕೂಡಿಟ್ಟ ಕಾಸಿಂದ ಮತ್ತೂ ಒಂದು ಕೊಳ್ಳುವ ಆಸೆ. ಹೆಣ್ಣಿನ ಈ ಗುಣವೇ ವ್ಯಾಪಾರಿಗಳಿಗೆ ಲಾಭದ ಬಾಬತ್ತು ಎಂದರೆ ತಪ್ಪಲ್ಲ. ಹಬ್ಬಕ್ಕೆ ತಿಂಗಳಿರುವಾಗಲೇ ಇನ್ನಿಲ್ಲದ ರಿಯಾಯಿತಿ ಭರಾಟೆ ಶುರುವಾಗುತ್ತದೆ.

ಗೃಹಿಣಿಯರಿಗೆ ಕೆಲಸದ ತುರ್ತು, ಮಕ್ಕಳ ಪೋಷಣೆ, ಶಾಲೆ, ಹೋಮ್‌ವರ್ಕ್‌, ಮನೆಗೆಲಸ ಹೀಗೆ ಹತ್ತಾರು ಜವಾಬ್ದಾರಿಗಳು.  ಹಬ್ಬ ಬಂದರೆ ನಾಲ್ಕಾರು ಕೈಗಳಿದ್ದರೂ ಸಾಲದೇನೋ. ಹಬ್ಬದ ಶಾಪಿಂಗ್‌ ತಿಂಗಳ ಮುನ್ನವೇ ಮುಗಿಸಿದರೆ ಸರಿ. ಆದರೆ, ಈಗ ಶಾಪಿಂಗ್‌ನ ರೀತಿ ಬದಲಾಗಿದೆ. ಅದು ಇನ್ನಷ್ಟು ಸುಲಭವಾಗಿದೆ. ನಮ್ಮ ಆಯ್ಕೆಯ ವಸ್ತುಗಳನ್ನು ಮಾಮೂಲಿ ಬೆಲೆಗಿಂತ ಕಡಿಮೆ ಬೆಲೆಗೆ ಮನೆ ಬಾಗಿಲಿಗೆ ತಲುಪಿಸುತ್ತಿವೆ ಹತ್ತಾರು ಆನ್‌ಲೈನ್‌ ಸ್ಟೋರ್‌ಗಳು.

ಹಬ್ಬಕ್ಕೆ ರಿಯಾಯಿತಿ ನೀಡುವುದರಲ್ಲಿ ಆನ್‌ಲೈನ್‌ ಸ್ಟೋರ್‌ಗಳೂ ಹಿಂದೆ ಬಿದ್ದಿಲ್ಲ. ದೀಪಾವಳಿಯ ಧಮಾಕ ಈಗಾಗಲೇ ಶುರುವಾಗಿದೆ. ಎಂಆರ್‌ಪಿಗಿಂತ ಕಡಿಮೆ ಬೆಲೆ, ಸರ್ವಿಸ್‌ ಚಾರ್ಜ್‌ ಇಲ್ಲದಿರುವುದು, 30 ದಿನಗಳಲ್ಲಿ ಹಿಂದಿರುಗಿಸುವ ಅಥವಾ ಬದಲಾಯಿಸಿಕೊಳ್ಳುವ ಅವಕಾಶ, ವಸ್ತು ಕೈಸೇರಿದ ನಂತರ ಹಣ ಪಾವತಿ ಇದೆಲ್ಲವೂ ಆನ್‌ಲೈನ್‌ ಸ್ಟೋರ್‌ನ ಬಗ್ಗೆ ನಂಬಿಕೆ ಹೆಚ್ಚಲು ಕಾರಣವಾಗಿದೆ. 30 ದಿನದಲ್ಲಿ ವಸ್ತುಗಳ ಗುಣಮಟ್ಟ ಪರೀಕ್ಷಿಸಲು ಅವಕಾಶವಿದೆ.  ಮಳಿಗೆಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಹೆಚ್ಚೆಂದರೆ ಒಂದು ವಾರದೊಳಗೆ ಎಕ್ಸ್‌ಚೇಂಜ್‌ಗೆ ಮಾತ್ರ ಅವಕಾಶ ಇರುತ್ತದೆ. ಅದೂ ಸ್ಥಿರ ಗ್ರಾಹಕರಿದ್ದರೆ ಮಾತ್ರ.

ಕುಳಿತಲ್ಲೇ ಶಾಪಿಂಗ್‌ !
ಮಾಮೂಲಿ ಶಾಪಿಂಗ್‌ಗೆಂದು ಹೋದರೆ  ಊಟ ತಿಂಡಿ, ಆಟೊ ಎಂದು ಮತ್ತೊಂದಷ್ಟು ಖರ್ಚು. ಆದರೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಈ ಚಿಂತೆಯೇ ಇಲ್ಲ. ಇಲ್ಲಿ ಸಮಯವೂ ಉಳಿಯುತ್ತದೆ, ಹಣ ಪೋಲು ತಪ್ಪುತ್ತದೆ. ಕೈಯಲ್ಲೊಂದು ಮೊಬೈಲ್‌, ಅದರಲ್ಲಿ ಇಂಟರ್‌ನೆಟ್‌ ಸಂಪರ್ಕವಿದ್ದರೆ ಸಾಕು ಬೇಕಿರುವ ವಸ್ತು ಮನೆ ಬಾಗಿಲಿಗೆ ಬರುತ್ತದೆ. ಆನ್‌ಲೈನ್‌ ಮಾರುಕಟ್ಟೆ ಶುರುವಾಗಿ ಎರಡು ದಶಕಗಳೇ ಕಳೆದಿದ್ದರೂ ಅಂಥದ್ದೊಂದು ಸಂಚಲನ ಸೃಷ್ಟಿಸಿರಲಿಲ್ಲ. ಯಾವಾಗ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಯಾಯಿತೋ ಮಾರುಕಟ್ಟೆಯ ಅದೃಷ್ಟವೇ ಬದಲಾಯಿತು.

ಆನ್‌ಲೈನ್‌ ಸ್ಟೋರ್‌ಗಳು ದಿನಕ್ಕೆ ಕೋಟಿಗಟ್ಟಲೆಯ ವ್ಯಾಪಾರ ನಡೆಸುತ್ತಿವೆ. ಹೆಣ್ಣುಮಕ್ಕಳು ಮನೆಯಲ್ಲಿಯೋ, ಕಚೇರಿಯಲ್ಲಿಯೋ ಕೆಲಸದ ಮಧ್ಯೆ ಇಂಟರ್‌ನೆಟ್‌ ಪ್ರವೇಶಿಸಿ ಶಾಪಿಂಗ್‌ ಮಾಡುತ್ತಿದ್ದಾರೆ. ಅಮ್ಮನಿಗೆ ಬೇಕಿರುವ ವಸ್ತುವನ್ನು ಮಗಳೇ ಬುಕ್‌ ಮಾಡುತ್ತಾಳೆ. ಗೆಳೆಯನೂ ಅಷ್ಟೇ ಗೆಳತಿಗೊಂದು ಸರ್‌ಪ್ರೈಸ್‌ ಗಿಫ್ಟ್‌ ಕಚೇರಿಗೆ ತರಿಸುತ್ತಾನೆ. ಒಳ ಉಡುಪಿನಿಂದ ಹಿಡಿದು ಜೀನ್ಸ್‌, ಟಾಪ್‌, ಸೀರೆ, ಚಪ್ಪಲಿ, ಪ್ರಸಾಧನ ಸಾಮಗ್ರಿ, ಓಲೆ, ಬಳೆ, ಡ್ರೆಸ್‌ ಮೆಟೀರಿಯಲ್‌, ಪರ್ಸ್‌, ವಾಚು, ಕೃತಕ ಆಭರಣ, ಅಂದದ ಬ್ಯಾಗುಗಳು, ಮನೆ ಬಳಕೆಯ ವಸ್ತುಗಳು, ಮಕ್ಕಳ ಉಡುಪು–ಡೈಪರ್‌, ಪಾತ್ರೆ– ಪಗಡೆ ಎಲ್ಲವನ್ನೂ ಖರೀದಿಸುತ್ತಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಆನ್‌ಲೈನ್‌ ಶಾಪಿಂಗ್‌ ಮೇನಿಯಾ ಶುರುವಾಗಿದೆ. ಇಂಟರ್‌ನೆಟ್‌ ಸಂಪರ್ಕವಿಲ್ಲದ ಮಹಿಳೆ ಗೆಳತಿಯ ಮನೆಗೆ ಹೋಗಿ ಶಾಪಿಂಗ್‌ ನಡೆಸುತ್ತಾಳೆ. ಕಾಲೇಜು ಹುಡುಗಿಯರು ಕ್ಯಾಂಟೀನಿನಲ್ಲಿ ಕುಳಿತು ಮೊಬೈಲ್‌ನಲ್ಲೋ, ಲ್ಯಾಪ್‌ಟಾಪ್‌ನಲ್ಲೋ  ಚಿತ್ರ ನೋಡಿ ಗೆಳತಿಯರೆಲ್ಲ ಚರ್ಚಿಸಿ ಚಂದದ ಟಾಪ್‌, ಮ್ಯಾಚಿಂಗ್‌ ಚಪ್ಪಲಿ ತರಿಸುತ್ತಾರೆ.

ಮನೆ ಮಂದಿಯೆಲ್ಲ ಸೇರಿ ತಮಗೆ ಬೇಕಿರುವ ಟೀವಿ, ವಾಷಿಂಗ್‌ ಮಷೀನ್‌, ಮಿಕ್ಸಿ, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮಳಿಗೆಗಳಲ್ಲಿ ಸಿಗದೇ ಇರುವ ಪುಸ್ತಕಗಳನ್ನು ಆನ್‌ಲೈನ್‌ ಸ್ಟೋರ್‌ಗಳು ತಲುಪಿಸುತ್ತಿವೆ. ನಗರದ ಟ್ರಾಫಿಕ್‌ ಕಿರಿಕಿರಿಯ ನಡುವೆ, ಮಳಿಗೆಗಳಲ್ಲಿ ಗಿಜಿಗುಡುವ ಜನರ ಮಧ್ಯೆ ಬೇಕಾದ್ದು ಕೊಳ್ಳಲಾಗದೆ ನೀರಸವಾಗಿ ಕೊನೆಗೊಳ್ಳುವ ಶಾಪಿಂಗ್‌ಗಿಂತ ಆನ್‌ಲೈನ್‌ ಶಾಪಿಂಗ್‌ ಹೆಣ್ಣುಮಕ್ಕಳಿಗೆ ಖುಷಿ ನೀಡಿದೆ ಎಂದರೆ ತಪ್ಪಲ್ಲ.

ತಾರೆಯರಿಗೂ ಖುಷಿ
ಚಿತ್ರತಾರೆಯರು, ಇನ್ನಿತರ ಸಾರ್ವಜನಿಕ ಕ್ಷೇತ್ರದಲ್ಲಿರುವ ಮಹಿಳೆಯರು ಆನ್‌ಲೈನ್‌ ಮಾರುಕಟ್ಟೆಗೆ ಮನಸೋತಿದ್ದಾರೆ. ಅಭಿಮಾನಿಗಳ ಕಾಟದಿಂದಾಗಿ ಅನೇಕ ಸಿನಿ ತಾರೆಯರು ಶಾಪಿಂಗ್‌ ಸುಖದಿಂದ ವಂಚಿತರಾಗಿದ್ದರು. ತಮ್ಮ ಪರವಾಗಿ ಸಹಾಯಕರೇ ಶಾಪಿಂಗ್‌ ಮಾಡುತ್ತಿದ್ದರು. ಈಗ ಇದಕ್ಕೆಲ್ಲ ಪರಿಹಾರ ಸಿಕ್ಕಿದೆ. ಮನಸೋ ಇಚ್ಛೆ ಶೂಟಿಂಗ್‌ ಬ್ರೇಕ್‌ನಲ್ಲೂ ಶಾಪಿಂಗ್‌ ಮಾಡುವುದು ಸಾಧ್ಯವಾಗಿದೆ.

ಮಹಿಳೆಯರದೇ ಮೇಲುಗೈ
2013ರಲ್ಲಿ ‘ಇಂಟರ್‌ನೆಟ್‌ ಅಂಡ್‌ ಮೊಬೈಲ್‌ ಅಸೋಸಿಯೇಷನ್‌್ಸ’ ನಡೆಸಿದ ಸಮೀಕ್ಷೆಯಂತೆ ಆನ್‌ಲೈನ್‌ ಶಾಪಿಂಗ್‌ ಮಾಡುವುದರಲ್ಲಿ ಮಹಿಳೆಯರೇ ಮುಂದಿದ್ದಾರೆ. ಅದರಲ್ಲೂ ಆಭರಣ ಮತ್ತು ಆರೋಗ್ಯ ಸಂಬಂಧಿ ವಸ್ತುಗಳನ್ನು ಮಹಿಳೆಯರು ಹೆಚ್ಚು ಖರೀದಿಸುತ್ತಾರಂತೆ. 
‘ಭಾರತದಲ್ಲಿ 15 ಕೋಟಿ ಇಂಟರ್‌ನೆಟ್‌ ಬಳಕೆದಾರರಲ್ಲಿ 6 ಕೋಟಿ ಮಹಿಳೆಯರಿದ್ದಾರೆ. ಅದರಲ್ಲಿ 2.4 ಕೋಟಿ ಮಹಿಳೆಯರು ಪ್ರತಿದಿನ ಅಂತರ್ಜಾಲ ಬಳಸುತ್ತಿದ್ದಾರೆ’ ಎಂದು ಗೂಗಲ್‌ ಇಂಡಿಯಾದ ಸಮೀಕ್ಷೆ ಹೇಳುತ್ತದೆ.

‘ಆನ್‌ಲೈನ್‌ನಲ್ಲಿ ಸಾವಕಾಶವಾಗಿ ಗಂಟೆಗಟ್ಟಲೆ ಹುಡುಕಾಡಿ, ತಮಗೆ ಬೇಕಾದ ಆಭರಣಗಳನ್ನು ಆಯ್ಕೆ ಮಾಡಿ ಖರೀದಿ ಮಾಡಲು ಅವಕಾಶವಿದೆ. ತಮ್ಮ ಬಜೆಟ್‌ಗೆ ಸರಿಹೊಂದುವ ಆಭರಣ ಆಯ್ಕೆಯ ಸ್ವಾತಂತ್ರ್ಯವಿದೆ. ಇದು ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಅಷ್ಟೊಂದು ಸರಳವಾಗಿಲ್ಲ. ಹಾಗಾಗಿ ಆನ್‌ಲೈನ್‌ ಮಾರುಕಟ್ಟೆ ಮಹಿಳೆಯರಿಗೆ ಮೆಚ್ಚು’ ಎನ್ನುವುದು ಬ್ಲೂಸ್ಟೋನ್‌ ಡಾಟ್‌ಕಾಂನ ಸ್ಥಾಪಕ ಗೌರವ್‌ಸಿಂಗ್‌ ಕುಸ್ಟಾ ಅವರ ಅಭಿಪ್ರಾಯ.

‘ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಕ್ರೆಡಿಟ್‌ ಕಾರ್ಡ್‌ ಬಳಕೆಯಲ್ಲಿಯೂ ಮಹಿಳೆಯರು ಮುಂದಿದ್ದಾರೆ. ಎರಡೂ ಕಡೆ ದುಡಿಯುವುದರಿಂದ ಶಾಪಿಂಗ್‌ ಸುಖದಿಂದ ವಂಚಿತರಾದ ಮಹಿಳೆಯರು ಸುಲಭವಾಗಿ ಕೊಳ್ಳುವ ಅವಕಾಶವನ್ನು ಆನ್‌ಲೈನ್‌ ಸ್ಟೋರ್‌ ಕಲ್ಪಿಸಿದೆ. ಇವೆಲ್ಲ ಕಾರಣದಿಂದಾಗಿ ಮಹಿಳೆಯರು ಹೆಚ್ಚು ಆನ್‌ಲೈನ್‌ ಶಾಪಿಂಗ್‌ ನೆಚ್ಚಿಕೊಂಡಿದ್ದಾರೆ’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ.

‘ಈ ದೀಪಾವಳಿಗೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ರೂ10 ಸಾವಿರ ಕೋಟಿ ವ್ಯವಹಾರ ನಡೆಯಲಿದೆ’ ಎಂದು ಅಸೋಸಿಯೇಟೆಡ್‌ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿ ಆಫ್‌ ಇಂಡಿಯಾ (ಅಸೋಚಂ) ಸಮೀಕ್ಷೆ ಹೇಳಿದೆ.

ಇರಲಿ ಎಚ್ಚರ
* ದುಬಾರಿ ಆಭರಣಗಳನ್ನು ಅಥವಾ ಇನ್ಯಾವುದೋ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ನಂಬಿಕೆಗೆ ಅರ್ಹವಾದ ತಾಣವನ್ನೇ ಆಯ್ಕೆ ಮಾಡಿಕೊಳ್ಳಿ.
* ಬೇರೆ ಬೇರೆ ತಾಣಗಳಲ್ಲಿ ಬೆಲೆಯನ್ನು ಹೋಲಿಕೆ ಮಾಡಿ.
* ಈ ಮೊದಲೇ ಖರೀದಿ ಮಾಡಿದವರ ಅಭಿಪ್ರಾಯ ಪಡೆಯಿರಿ.
* ನಿರ್ದಿಷ್ಟ ತಾಣದ ಪ್ರಾಮಾಣಿಕತೆ ಬಗ್ಗೆ ತಿಳಿದುಕೊಳ್ಳಿ.
* ನಿಮ್ಮಲ್ಲಿರುವ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಿ. ಯಾಕೆಂದರೆ ನಂಬಿಕೆಗೆ ಅರ್ಹವಾದ ಮಾರುಕಟ್ಟೆಯ ಪ್ರತಿನಿಧಿಗಳು ಗ್ರಾಹಕರ ಸಂಶಯ ಪರಿಹರಿಸಲು ಉತ್ಸುಕರಾಗಿರುತ್ತಾರೆ.
* ಕೊಂಡ ವಸ್ತು ತೃಪ್ತಿಕರವಾಗಿಲ್ಲದ ಪಕ್ಷದಲ್ಲಿ 30 ದಿನದೊಳಗೆ ಹಿಂದಿರುಗಿಸಿದರೆ ಸಂಪೂರ್ಣ ಹಣ ಹಿಂದಕ್ಕೆ ಕೊಡುವ ಭರವಸೆಯನ್ನು ಕೆಲ ಕಂಪೆನಿಗಳು ನೀಡುತ್ತವೆ. (ಟರ್ಮ್ಸ್‌ ಅಂಡ್‌ ಕಂಡೀಷನ್‌್ಸ ಅಪ್ಲೈ– ಅಡಿ ಬರಹ ಇದ್ದೇ ಇರುತ್ತದೆ. ಅವನ್ನೆಲ್ಲ ಸ್ಪಷ್ಟ ಪಡಿಸಿಕೊಂಡು ಮುಂದುವರಿಯಿರಿ.) ಆದರೆ ಅದು ನಿಜವೇ ಎಂದು ಖಾತ್ರಿಪಡಿಸಿಕೊಳ್ಳಿ. ನಂತರ ಭಾಗಶಃ ಹಣ ನೀಡಿ ಮೋಸ ಮಾಡುವ ಕಂಪೆನಿಗಳೂ ಇರುತ್ತವೆ.
* * *

ಸುಲಭ ಖರೀದಿಗೆ ಆಯ್ಕೆ

ಸಮಯ ಉಳಿತಾಯ, ಜೊತೆಗೆ ಕುಂತಲ್ಲೇ ಖರೀದಿ ಮಾಡಬಹುದಾದ್ದರಿಂದ ಆನ್‌ಲೈನ್ ಖರೀದಿಯೇ ನನ್ನ ಆದ್ಯತೆ. ಆಫೀಸ್‌ಗೆ ಹೋಗಿ ಮನೆಗೆ ಬರುವಷ್ಟರಲ್ಲಿ ಸಂಜೆ ಆಗಿರುತ್ತದೆ. ಆಗ ಆನ್‌ಲೈನ್ ಖರೀದಿ ಒಳ್ಳೆ ಆಯ್ಕೆಯಾಗಿ ಕಾಣುತ್ತದೆ. ಯಾವುದೇ ವಿಶೇಷ ಸಂದರ್ಭದಲ್ಲೂ, ತುರ್ತು ಇದ್ದಾಗಲೂ ಈ ಖರೀದಿ ಒಳ್ಳೆಯದು. ಎರಡು ಮೂರು ದಿನಗಳಲ್ಲಿ ಮನೆ ಬಾಗಿಲಿಗೇ ತಂದು ಕೊಡುತ್ತಾರೆ. ಖರೀದಿಯದ್ದೂ ಸುಲಭ ವಿಧಾನವಾದ್ದರಿಂದ ಅಷ್ಟೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಒಂದೊಂದು ಬಾರಿ ಉತ್ಪನ್ನದ ನಿಜರೂಪ ಗೊತ್ತಾಗುವುದಿಲ್ಲ. ವಾಪಸ್ ಕಳಿಸಬೇಕಾಗುವ ಸಾಧ್ಯತೆಯೂ ಇರುತ್ತದೆ. ಅವೆಲ್ಲ ಸಹಜ. ನಾನು ಕೆಲಸ ಮಾಡಲು ಆರಂಭಿಸಿದಾಗಿನಿಂದ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದೇನೆ. ಇದುವರೆಗೂ ನಾಲ್ಕು ಬಾರಿ ಖರೀದಿ ಮಾಡಿದ್ದೇನೆ. ಬ್ಯಾಗು, ಬಟ್ಟೆ, ಚಪ್ಪಲಿಯನ್ನೇ ಹೆಚ್ಚು ಕೊಂಡುಕೊಂಡಿದ್ದು. ಈ ಆನ್‌ಲೈನ್ ಖರೀದಿಯಿಂದ ಹೊರಗೆ ಸುತ್ತಾಡಿ ಅನಗತ್ಯ ಹಣ, ಸಮಯ ಖರ್ಚಾಗುವುದೂ ತಪ್ಪುತ್ತದೆ.
–ಅಶ್ವಿನಿ

ಕುಟುಂಬದೊಂದಿಗೆ ಶಾಪಿಂಗ್ ಚೆಂದ


ಆನ್‌ಲೈನ್ ಖರೀದಿ ಇಂದಿನ ಬಿಝಿ ಜೀವನಶೈಲಿಗೆ ತುಂಬಾ ಸಹಾಯಕ. ಎರಡು ಮೂರು ವರ್ಷದಿಂದಲೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದೇನೆ. ಬೇಕಾದ್ದನ್ನು ನೋಡಿ, ಒಂದಿಷ್ಟು ಸಮಯ ತೆಗೆದುಕೊಂಡು ಆಯ್ಕೆ ಮಾಡಿ, ಬೇಡಿಕೆ ಇಡಬಹುದು. ಅಲ್ಲಿ ಝೂಮ್ ಮಾಡುವ, ಅಳತೆ, ಬಣ್ಣ, ಎಲ್ಲಾ ಆಯ್ಕೆಗಳನ್ನು ಸ್ಪಷ್ಟವಾಗಿ ನೀಡಿರುವುದರಿಂದ ಅಂಗಡಿಗೆ ಹೋಗಿ ಕೊಂಡಂಥ ಅನುಭವವನ್ನೇ ನೀಡುತ್ತದೆ. ಹಬ್ಬದ ಸಮಯದಲ್ಲಿ ರಿಯಾಯಿತಿ ಮಾರಾಟವೂ ಇರುತ್ತದೆ. ಆದರೆ ಕುಟುಂಬದೊಂದಿಗೆ ಹೊರಗೆ ತಿರುಗಾಡಿ ಖರೀದಿ ಮಾಡುವ ಖುಷಿಯೇ ಬೇರೆ. ಪರಸ್ಪರ ಚರ್ಚಿಸಿ, ನಗಾಡುತ್ತ ಖರೀದಿಸಲು ಅಂಗಡಿ ಖರೀದಿಯೇ ಸರಿ. ಆದರೆ ಇಂದಿನ ಜೀವನಕ್ಕೆ ಆನ್‌ಲೈನ್‌ ಖರೀದಿ ಅನಿವಾರ್ಯ.
–ಸ್ವಾತಿ

ಹೆಚ್ಚು ರಿಯಾಯಿತಿ

ಆನ್‌ಲೈನ್ ಶಾಪಿಂಗ್‌ನಿಂದ ಎಲ್ಲವೂ ಸುಲಭ. ನಾನು, ನನ್ನ ಸ್ನೇಹಿತರೆಲ್ಲಾ ಆನ್‌ಲೈನ್ ಖರೀದಿ ಇಷ್ಟಪಡುತ್ತೇವೆ. ಬೇಗ ಶಾಪಿಂಗ್ ಮುಗಿಸಬಹುದು. ಕೆಲವೊಮ್ಮೆ ಎಲ್ಲರೂ ಆನ್‌ಲೈನ್‌ನಲ್ಲಿ ನೋಡಿ, ಚರ್ಚಿಸಿ ಆರ್ಡರ್ ಮಾಡುತ್ತಿದ್ದೆವು. ಉತ್ಪನ್ನ ಸರಿ ಇಲ್ಲ ಎಂದು ಹಿಂತಿರುಗಿಸಿ ಹಣ ಪಡೆದ ಸಂದರ್ಭವೂ ಇದೆ.
ಅಂಗಡಿಯಲ್ಲಿ ಹೋಗಿ ಅದೆಷ್ಟು, ಇದೆಷ್ಟು ಎಂದು ಒಂದೊಂದರ ಬೆಲೆ ಕೇಳುವುದಕ್ಕಿಂತ ನಮ್ಮ ಅಗತ್ಯಕ್ಕೆ ತಕ್ಕಂತೆ ಆರಿಸಲು ಆನ್‌ಲೈನ್ ಉತ್ತಮ ಆಯ್ಕೆ. ಹಬ್ಬಗಳ ಸಮಯದಲ್ಲಂತೂ ಕುರ್ತಾ, ಟಾಪ್‌ಗಳಿಗೆ ತುಂಬಾ ರಿಯಾಯಿತಿ ನೀಡುತ್ತಾರೆ. ಒಮ್ಮೊಮ್ಮೆ ಒಳ್ಳೆ ಸಂಗ್ರಹ ಇರುತ್ತವೆ. ಆದರೆ ಇದರಲ್ಲಿ ಕೆಲವು ಅನನುಕೂಲಗಳೂ ಇವೆ. ಈ ಖರೀದಿಯಲ್ಲಿ ಬಿಲ್ ಕೊಟ್ಟರೂ ವಾರೆಂಟಿ ಕಾರ್ಡ್ ಕೊಡುವುದಿಲ್ಲ.
–ದಿವ್ಯಾ

ನಿರೂಪಣೆ: ಸುಮಲತಾ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT