ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿ ನಿರ್ಜೀವ ಕಡತ; ಇಲ್ಲಿ ಜೀವನ್ಮುಖಿ ಸಮಾಜ

ವಾರದ ಸಂದರ್ಶನ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆಡಳಿತಾಧಿಕಾರಿಯಾಗಿ ನೇಮಕಗೊಂಡ ಟಿ.ಎಂ.ವಿಜಯಭಾಸ್ಕರ್, ತಮಗೆ ಸಿಕ್ಕ ಅಲ್ಪಾವಧಿಯಲ್ಲೇ ವ್ಯವಸ್ಥೆಯಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ್ದಾರೆ. ದಿವಾಳಿ ಅಂಚಿಗೆ ಹೋಗಿದ್ದ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಕಾರಣರಾಗಿದ್ದಾರೆ.

ಬಿಬಿಎಂಪಿಗೆ ಚುನಾವಣೆ ಘೋಷಣೆಯಾಗಿದೆ. ಚುನಾಯಿತ ಕೌನ್ಸಿಲ್‌ಗೆ ಅವರು ಅಧಿಕಾರ ಹಸ್ತಾಂತರಿಸಲು ಇನ್ನೇನು ಒಂದು ತಿಂಗಳು ಬಾಕಿಯಿದೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ವಿಜಯಭಾಸ್ಕರ್‌, ಆಡಳಿತದ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಬಿಬಿಎಂಪಿಗೆ ಆಡಳಿತಾಧಿಕಾರಿಯಾಗಿ ನಿಮ್ಮನ್ನು ಕಳುಹಿಸುವಾಗ ಮುಖ್ಯಮಂತ್ರಿ ಏನಾದರೂ ವಿಶೇಷ ಸೂಚನೆಗಳನ್ನು ನೀಡಿದ್ದರೆ?
ಬೆಂಗಳೂರಿಗೆ ಉತ್ತಮ ಆಡಳಿತ ನೀಡಬೇಕು ಮತ್ತು ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಮೂಡಿಸಬೇಕು ಎಂಬ ಎರಡು ಸೂಚನೆಗಳನ್ನಷ್ಟೇ ಮುಖ್ಯಮಂತ್ರಿ ಕೊಟ್ಟಿದ್ದರು.

ವಿಧಾನಸೌಧದಿಂದ ಪಾಲಿಕೆ ಅಂಗಳಕ್ಕೆ ಬಂದಾಗ ಎದುರಾದ ಮುಖ್ಯ ಸವಾಲು ಯಾವುದು?
ಬಿಬಿಎಂಪಿ ಅನುಭವಿಸಿದ ಆರ್ಥಿಕ ಸಂಕಷ್ಟಕ್ಕಿಂತ ದೊಡ್ಡ ಸವಾಲು ಬೇಕೆ? ಕಳೆದ 6–7 ವರ್ಷಗಳಿಂದ ಪಾಲಿಕೆಯಲ್ಲಿ ಇದೇ ಸ್ಥಿತಿ ಇದೆ. ನಾನು ಬಂದಾಗ ₹2,352 ಕೋಟಿ ಬಿಲ್‌ ಬಾಕಿ ಇತ್ತು. ₹1,600 ಕೋಟಿ ಮೊತ್ತದ ಮುಂದುವರಿದ ಕಾಮಗಾರಿಗಳು ನಡೆದಿದ್ದವು. ಅನುಮೋದನೆ ಪಡೆದು ಅನುಷ್ಠಾನಕ್ಕೆ ಸಿದ್ಧವಾಗಿದ್ದ ₹1,875 ಕೋಟಿ ಮೊತ್ತದ ಕಾಮಗಾರಿಗಳು ಆರಂಭ ಆಗಬೇಕಿದ್ದವು. ಅಂದರೆ ₹5,827 ಕೋಟಿ ಮೊತ್ತದ ಹೊರೆ ಇತ್ತು.

ದೈನಂದಿನ ಕಾರ್ಯಗಳ ನಿರ್ವಹಣೆಗೂ ಹಣಕಾಸಿನ ವ್ಯವಸ್ಥೆ ಆಗಬೇಕಿತ್ತು. ಘನತ್ಯಾಜ್ಯ, ಮರ ಮತ್ತು ಬೀದಿದೀಪ ನಿರ್ವಹಣೆ, ರಸ್ತೆ ದುರಸ್ತಿ, ಚರಂಡಿ ಹೂಳೆತ್ತುವುದು, ಸಂಬಳ, ಸಾರಿಗೆ, ಪಿಂಚಣಿ... ಇದಕ್ಕೆಲ್ಲ ಕಾಸು ಹೊಂದಿಸಬೇಕಿತ್ತು. ಆರ್ಥಿಕ ಹೊರೆ ನಿಜಕ್ಕೂ ಕಳವಳ ಉಂಟುಮಾಡಿತ್ತು.

ಇಷ್ಟೊಂದು ಆರ್ಥಿಕ ದುರವಸ್ಥೆಗೆ ಏನು ಕಾರಣ? ಸುಧಾರಣೆಗೆ ನೀವು ಕೈಗೊಂಡ ಕ್ರಮಗಳೇನು?
ಅವಾಸ್ತವಿಕ ಬಜೆಟ್‌ಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿವೆ. ಬಿಬಿಎಂಪಿ ತನ್ನ ಸ್ವಂತ ಬಲದಿಂದ ಸಂಗ್ರಹಿಸಲು ಸಾಧ್ಯವಿರುವುದು ₹ 4 ಸಾವಿರ ಕೋಟಿಯಷ್ಟು ವರಮಾನ ಮಾತ್ರ. ಅದರ ದುಪ್ಪಟ್ಟು ಮೊತ್ತದ ಯೋಜನೆ ಹಾಕಿಕೊಂಡರೆ ಹಣ ಹೊಂದಿಸುವುದು ಹೇಗೆ? ಬಾಕಿ ಬಿಲ್‌ಗಳ ಹೊರೆ ಬೆಳೆದುಬಂದಿದ್ದೇ ಹೀಗೆ.

ನಾನು ಮಾಡಿದ ಮೊದಲ ಕೆಲಸ ಬಜೆಟ್‌ ಗಾತ್ರವನ್ನು ವಾಸ್ತವಿಕ ಲೆಕ್ಕಾಚಾರಕ್ಕೆ ತಕ್ಕಂತೆ ಇಳಿಸಿದ್ದು. ಇದರಿಂದ ವೆಚ್ಚದ ಬಾಬತ್ತು ₹1300 ಕೋಟಿಯಷ್ಟು ತಗ್ಗಿತು. ಅನುಮೋದನೆ ಪಡೆದು ಅನುಷ್ಠಾನಕ್ಕೆ ಸಿದ್ಧವಾಗಿದ್ದ ₹1,875 ಕೋಟಿ ಮೊತ್ತದ ಕಾಮಗಾರಿಗಳನ್ನು ರದ್ದುಗೊಳಿಸಿದೆವು. ಒಂದೆಡೆ ವೆಚ್ಚ ತಗ್ಗಿಸಲು ಈ ಕ್ರಮ ಕೈಗೊಂಡರೆ, ಇನ್ನೊಂದೆಡೆ ಆದಾಯ ಹೆಚ್ಚಳಕ್ಕೂ ಯೋಜನೆ ರೂಪಿಸಿದೆವು. ಕಳೆದ ವರ್ಷದ ಏಪ್ರಿಲ್‌–ಮೇ ತಿಂಗಳಿಗೆ ಹೋಲಿಸಿದರೆ ಈ ಸಲ ಶೇ 30ರಷ್ಟು ಅಧಿಕ ತೆರಿಗೆ ಸಂಗ್ರಹಿಸಲು ಇದರಿಂದ ಸಾಧ್ಯವಾಯಿತು.

ಹದಗೆಟ್ಟ ವ್ಯವಸ್ಥೆ ಸ್ವಚ್ಛಗೊಳಿಸಲು ಇಷ್ಟು ಕ್ರಮಗಳು ಸಾಕೆ?
ಸುಧಾರಣೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಅದು ದಿನನಿತ್ಯ ನಡೆಯುತ್ತಲೇ ಇರಬೇಕು. ಬಿಬಿಎಂಪಿ ಆರ್ಥಿಕ ವ್ಯವಹಾರಗಳಲ್ಲಿ ಗರಿಷ್ಠ ಮಟ್ಟದ ಪಾರದರ್ಶಕತೆ ತಂದಿದ್ದೇವೆ. ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಿದ್ದೇವೆ. ಗುತ್ತಿಗೆದಾರರು ಈಗ ಮುಂಚಿನಂತೆ ಪಾಲಿಕೆ ಕಚೇರಿ ಸುತ್ತುವ ಅಗತ್ಯವಿಲ್ಲ. ಜೇಷ್ಠತೆ ಆಧಾರದ ಮೇಲೆ ಅವರ ಖಾತೆಗೆ ನೇರವಾಗಿ ಹಣ ವರ್ಗ ಆಗುತ್ತಿದೆ. ಎಲ್ಲ ಕಡತಗಳು ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ವ್ಯವಸ್ಥೆ ಕಲ್ಪಿಸಿದ್ದೇವೆ. ರಸ್ತೆ ಇತಿಹಾಸ ನಿರ್ಮಾಣ ಮಾಡುವುದು ನನ್ನ ಅಚ್ಚುಮೆಚ್ಚಿನ ಯೋಜನೆ. ಆಡಳಿತಾಧಿಕಾರಿ ಹುದ್ದೆಯಿಂದ ನಿರ್ಗಮಿಸುವ ಮುನ್ನ ಈ ವ್ಯವಸ್ಥೆ ಬಿಬಿಎಂಪಿಯಲ್ಲಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳುತ್ತೇನೆ. ಭ್ರಷ್ಟಾಚಾರ ತಡೆಗಟ್ಟಲು ರಸ್ತೆ ಇತಿಹಾಸ ತುಂಬಾ ಸಹಕಾರಿ.

ನೀವು ಅಂದುಕೊಂಡ ಯೋಜನೆಗಳು ಹೆಚ್ಚಿವೆ. ಅನುಷ್ಠಾನಕ್ಕೆ ಅಧಿಕಾರಾವಧಿ ಸಾಲದಾಗಿದೆ, ಅಲ್ಲವೆ?
ಆಡಳಿತಾಧಿಕಾರಿ ವ್ಯವಸ್ಥೆ ತಾತ್ಕಾಲಿಕ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೋರ್ಟ್‌ ನಿರ್ದೇಶನದಂತೆ ಈಗ ಚುನಾವಣೆ ಘೋಷಣೆಯಾಗಿದೆ. ಚುನಾಯಿತ ಕೌನ್ಸಿಲ್‌ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತದೆ ಎನ್ನುವ ವಿಶ್ವಾಸವಿದೆ.

ಬಿಬಿಎಂಪಿ ವ್ಯವಸ್ಥೆಗೆ ಇಷ್ಟೊಂದು ಜಡತ್ವ ಆವರಿಸಿದ್ದು ಏಕೆ? ಅದನ್ನು ಚಲನಶೀಲಗೊಳಿಸುವ ಬಗೆ ಹೇಗೆ?
ಬಿಬಿಎಂಪಿಯಲ್ಲಿ ತುಂಬಾ ಸಂಕೀರ್ಣ ವಿಧಾನಗಳು ಜಾರಿಯಲ್ಲಿವೆ. ಉದಾಹರಣೆಗೆ, ಕೆಲವು ಕೆಲಸಗಳಿಗೆ ಮಂಜೂರಾತಿ ದೊರೆಯಬೇಕಾದರೆ ಕಡತ 22 ಟೇಬಲ್‌ಗಳಿಗೆ ಓಡಾಡಬೇಕು. ಮಧ್ಯೆ ಬರುವ ರಜೆಗಳನ್ನೂ ಗಣನೆಗೆ ತೆಗೆದುಕೊಂಡರೆ ಒಂದು ಕಡತಕ್ಕೆ ಮಂಜೂರಾತಿ ಸಿಗಲು ಕನಿಷ್ಠ ತಿಂಗಳ ಕಾಲಾವಕಾಶ ಬೇಕು. ಹೀಗಾದರೆ ಜನರ ಕೆಲಸಗಳು ಆಗುವುದು ಹೇಗೆ? ಕ್ಲಿಷ್ಟಕರ ವಿಧಾನಗಳಿಗೆ ಕೊನೆಹಾಡಲು ಇ–ಆಡಳಿತ ಸಂಪೂರ್ಣವಾಗಿ ಜಾರಿಗೆ ಬರಬೇಕು. ಆ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ.

ಇನ್ನು ಸಮಯಪಾಲನೆ ವಿಚಾರ. ನಾನು ಮತ್ತು ಆಯುಕ್ತರು ಬೆಳಿಗ್ಗೆ 6ಕ್ಕೆ ರಸ್ತೆಗಿಳಿಯಲು ಆರಂಭಿಸಿದ ಮೇಲೆ ಉಳಿದ ಅಧಿಕಾರಿಗಳ ಮೇಲೂ ಒತ್ತಡ ಹೆಚ್ಚಾಯಿತು. ಅವರೂ ಬರೋದಕ್ಕೆ ಶುರು ಮಾಡಿದರು. ಜನರ ಕೆಲಸಗಳೂ ಆಗತೊಡಗಿದವು. ಕಸ ವಿಲೇವಾರಿ, ರಸ್ತೆ ಗುಂಡಿಗಳ ದುರಸ್ತಿ ತಂತಾನೆ ನಡೆಯತೊಡಗಿತು. ಮೇಲಿನಿಂದ ಹೀಗೆ ಒತ್ತಡ ನಿರ್ಮಾಣವಾದರೆ ವ್ಯವಸ್ಥೆಯಲ್ಲಿ ಹೆಚ್ಚಿನ ಚಲನಶೀಲತೆ ಮೂಡೀತು.

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಘೋಷಿಸಲು ಸಾಧ್ಯವಿದೆಯೇ?
ಆಡಳಿತ ಸುಧಾರಣೆಗೆ ಸಂಬಂಧಿಸಿದ ನಮ್ಮೆಲ್ಲ ಪ್ರಯತ್ನಗಳೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪಾರದರ್ಶಕ ವ್ಯವಹಾರ ನಡೆಯುವಂತೆ ನೋಡಿಕೊಳ್ಳುವುದೇ ಆಗಿದೆ. ಗುತ್ತಿಗೆದಾರರಿಗೆ ಬಿಲ್‌ ಪಾವತಿಯಿಂದ ಹಿಡಿದು ಜನಸಾಮಾನ್ಯರಿಗೆ ಬೇಕಾದ ನಕ್ಷೆ ಮಂಜೂರಾತಿ, ಜನನ ಪ್ರಮಾಣ ಪತ್ರ ವಿತರಣೆಯಂತಹ ಸಣ್ಣ–ಪುಟ್ಟ ಕೆಲಸಗಳವರೆಗೆ ಯಾರೂ ತೊಂದರೆ ಅನುಭವಿಸಬಾರದು ಎಂಬುದು ನಮ್ಮ ಕಳಕಳಿ. ಬೆಂಗಳೂರು ಒನ್‌ ಕೇಂದ್ರಗಳನ್ನು ಹೆಚ್ಚು ಮಾಡುತ್ತಿರುವ ಉದ್ದೇಶ ಕೂಡ ಅದೇ ಆಗಿದೆ.

ಪಾಲಿಕೆ ಆಸ್ತಿಗಳ ರಕ್ಷಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ?
ಆಸ್ತಿಗಳ ರಕ್ಷಣೆ ವಿಷಯವೂ ನಿರಂತರ ಪ್ರಕ್ರಿಯೆ. ನೂರಾರು ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಷರತ್ತು ಉಲ್ಲಂಘಿಸಿದವರಿಂದ ಆಸ್ತಿ ವಾಪಸ್‌ ಪಡೆಯಬೇಕು. ಗುತ್ತಿಗೆ ಅವಧಿ ಮುಗಿದವರಿಂದ ಆಸ್ತಿ ವಾಪಸ್‌ ಪಡೆಯುವುದೋ ಇಲ್ಲವೆ ಗುತ್ತಿಗೆ ನವೀಕರಿಸುವುದೋ ನಿರ್ಧಾರ ಆಗಬೇಕು. ಈ ಮಧ್ಯೆ ಕೆಲವರು ಕೋರ್ಟ್‌ ಮೊರೆ ಹೋಗಿದ್ದಾರೆ. ಅಂತಹ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ವಕೀಲರಿಗೆ ಸೂಚಿಸಲಾಗಿದೆ.

ಫೇಸ್‌ಬುಕ್‌, ಟ್ವಿಟರ್‌ ಬಳಕೆ ಮಾಡುವಂತೆ ಅಧಿಕಾರಿಗಳನ್ನು ಉತ್ತೇಜಿಸಿದ್ದೀರಲ್ಲ?
ಸಾರ್ವಜನಿಕ ದೂರುಗಳ ಕುರಿತಂತೆ ವೇಗದಲ್ಲಿ ಫಾಲೊಅಪ್‌ ಮಾಡಲು ಇದರಿಂದ ಸಾಧ್ಯವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲೂ ತಂತ್ರಜ್ಞಾನದ ಈ ಸೌಲಭ್ಯ ನೆರವಿಗೆ ಬಂದಿದೆ.

ಆಡಳಿತದಲ್ಲಿ ಸಚಿವರು ಹಾಗೂ ಶಾಸಕರ ಹಸ್ತಕ್ಷೇಪ ಇದೆಯೇ?
ಜನಪ್ರತಿನಿಧಿಗಳು ಇರುವುದೇ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು. ಅವರು ಅಂತಹ ಸಮಸ್ಯೆ ಹೊತ್ತು ತಂದರೆ ಅದನ್ನು ಹಸ್ತಕ್ಷೇಪ ಎನ್ನಲು ಆಗುವುದಿಲ್ಲ. ನಮ್ಮ ಅಧಿಕಾರಿಗಳು ಜನರ ಸಮಸ್ಯೆಗಳ ಬಗೆಗೆ ಹೇಳುವುದಿಲ್ಲ. ಹೀಗಾಗಿ ಜನರ ನೋವು ತಿಳಿಯಲು ಜನಪ್ರತಿನಿಧಿಗಳಿಂದ ಸಾಧ್ಯವಾಗಿದೆ. ಅವರ ಸಲಹೆಗಳನ್ನು ಅನ್ಯತಾ ಭಾವಿಸಿಲ್ಲ. ಯಾರಿಂದ, ಎಂತಹ ಸಲಹೆಗಳು ಬಂದರೂ ನಿಯಮ ಬಿಟ್ಟು ನಡೆದಿಲ್ಲ.

ಮುಖ್ಯಮಂತ್ರಿ ಅವರ ನಗರ ಸಂಚಾರದಿಂದ ಏನಾದರೂ ಪ್ರಯೋಜನ ಆಗಿದೆಯೆ?
ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳು ಸೇವೆ ನೀಡುತ್ತಿವೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ಬೆಂಗಳೂರು ಮೆಟ್ರೊ ನಿಗಮ, ಬಿಡಿಎ, ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದೈನಂದಿನ ಕಾರ್ಯದಲ್ಲಿ ಒಟ್ಟಾಗಿ ಸೇರಿ ಸಮನ್ವಯದಿಂದ ಕೆಲಸ ಮಾಡಿದ್ದು ಅಪರೂಪ. ಮುಖ್ಯಮಂತ್ರಿ ಬರಲಿದ್ದಾರೆ ಎನ್ನುವ ಕಾರಣಕ್ಕೆ ನಾವೆಲ್ಲ ಒಟ್ಟಿಗೆ ಸೇರಿದೆವು. ಸ್ಥಳದಲ್ಲೇ ಹಲವು ನಿರ್ಧಾರಗಳು ಆದವು. ಕಾಮಗಾರಿಗಳಿಗೆ ಚುರುಕು ಮುಟ್ಟಿಸಲಾಯಿತು. ಕೆಲಸಗಳು ಬೇಗ ಆಗತೊಡಗಿದವು. ಸಮನ್ವಯದ ಸಮಸ್ಯೆ ನೀಗಿಸಲು ಸಮಿತಿ ಸಹ ರಚನೆಯಾಯಿತು.

ಕಸದ ಸಮಸ್ಯೆ ಈಗ ಹೇಗಿದೆ?
ಈ ಹಿಂದೆ ಕಸ ವಿಲೇವಾರಿಗೆ ಟೆಂಡರ್‌ ಕರೆದಾಗ ವೈಜ್ಞಾನಿಕ ಅಂದಾಜು ಮಾಡಿರಲಿಲ್ಲ. ಜನಸಂಖ್ಯೆ ಲೆಕ್ಕಾಚಾರದಲ್ಲಿ ಅಪ್‌ಡೇಟ್‌ ಆಗಿರಲಿಲ್ಲ. ಉದಾಹರಣೆಗೆ ಹೇಳುವುದಾದರೆ 2011ರ ಜನಸಂಖ್ಯೆಯೇ ಹೆಚ್ಚಿನ ಟೆಂಡರ್‌ಗಳಿಗೆ ಆಧಾರವಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಶೇ 15ರಷ್ಟು ಹೆಚ್ಚಿದೆ. ನಾವೀಗ 35 ವಾರ್ಡ್‌ಗಳ ಕಸ ವಿಲೇವಾರಿ ಟೆಂಡರ್‌ ಕರೆದಿದ್ದೇವೆ. ಹೆಚ್ಚಿದ ಜನಸಂಖ್ಯೆ, ಪೌರಕಾರ್ಮಿಕರ ರಜೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಷರತ್ತು ವಿಧಿಸಿದ್ದೇವೆ. ತಳ್ಳುವ ಗಾಡಿಗಳ ಬದಲು ಟಿಪ್ಪರ್‌ಗಳನ್ನೇ ಬಳಸಲು ಸೂಚಿಸಲಾಗಿದೆ.

   ಇನ್ನೆರಡು ತಿಂಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳೂ ಆರಂಭ ಆಗಲಿದ್ದು, ಸಮಸ್ಯೆ ನೀಗಲಿದೆ. ಇದುವರೆಗೆ ಭೂಭರ್ತಿ ಕೇಂದ್ರಗಳಿಗೆ ಮಾತ್ರ ತ್ಯಾಜ್ಯ ಹೋಗುತ್ತಿತ್ತು. ಇನ್ನುಮುಂದೆ ಸಂಸ್ಕರಣೆ ಆಗಲಿದೆ. ಕಸ ವಿಂಗಡಣೆ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರುತ್ತೇವೆ.

ರಸ್ತೆಗಳ ಮೇಲೆ ಖರ್ಚು ಮಾಡಿದ ದುಡ್ಡು ನೋಡಿದರೆ ನಗರದ ರಸ್ತೆಗಳು ನೈಸ್‌ ಹೆದ್ದಾರಿಗಿಂತ ಚೆನ್ನಾಗಿರಬೇಕಿತ್ತಲ್ಲ?
ನಗರದ ರಸ್ತೆಗಳ ಮೇಲೆ ಸಂಚಾರದ ಒತ್ತಡ ಹೆಚ್ಚಿದೆ. ಕಾಮಗಾರಿ ನಡೆದಾಗ ಗುಣಮಟ್ಟ ಖಾತ್ರಿ ಮಾಡಿಕೊಳ್ಳಬೇಕಿರುವುದು ಪ್ರಾಥಮಿಕ ಕೆಲಸ. ನಿರ್ವಹಣೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳುವುದು ನಂತರದ ಹೊಣೆ. ಜಲಮಂಡಳಿಯಿಂದ ಒಳಚರಂಡಿ ಮತ್ತು ನೀರು ಪೂರೈಕೆ ಜಾಲದ ದುರಸ್ತಿಗೆ, ದೂರಸಂಪರ್ಕ ಸಂಸ್ಥೆಗಳಿಂದ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಕೆಗೆ, ಬೆಸ್ಕಾಂನಿಂದ ವಿದ್ಯುತ್‌ ಮಾರ್ಗದ ನಿರ್ವಹಣೆಗೆ ರಸ್ತೆಗಳ ಅಗೆತ ಸಾಮಾನ್ಯವಾಗಿದೆ. ಇದೆಲ್ಲದಕ್ಕೆ ಪರಿಹಾರ ಟೆಂಡರ್‌ ಶ್ಯೂರ್‌ ರಸ್ತೆಗಳ ನಿರ್ಮಾಣ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ.

ಪೌರಕಾರ್ಮಿಕರ ಜತೆ ಕಾಫಿ ಸಂವಾದದ ಲಾಭ ಏನು?
ಪೌರಕಾರ್ಮಿಕರ ಸಮಸ್ಯೆ ತಿಳಿಯಲು ಇದರಿಂದ ಸಾಧ್ಯವಾಗಿದೆ. ಅವುಗಳಿಗೆ ಪರಿಹಾರ ರೂಪಿಸುವಲ್ಲೂ ನಾವು ಮುಂದಡಿ ಇಟ್ಟಿದ್ದೇವೆ. ಜತೆಜತೆಗೆ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಕಾಫಿ ಸಂವಾದ ನೆರವಿಗೆ ಬಂದಿದೆ.

ಆಡಳಿತದ ಅನುಭವದಿಂದ ಹೇಳಿ, ಬೆಂಗಳೂರಿಗೆ ಎಷ್ಟು ಪಾಲಿಕೆಗಳಿದ್ದರೆ ಚೆನ್ನ?
ಚುನಾವಣೆ ಘೋಷಣೆಯಾಗಿದೆ, ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ.

ಬೆಳಿಗ್ಗೆ 6 ಗಂಟೆಗೆ ಮನೆ ಬಿಡುತ್ತೀರಿ, ತಡರಾತ್ರಿವರೆಗೆ ಪಾಲಿಕೆ ಕೆಲಸದಲ್ಲೇ ತೊಡಗಿರುತ್ತೀರಿ. ಯಾಕೆ, ಮನೆಯವರು ನಿಮ್ಮನ್ನು ಏನೂ ಕೇಳುವುದಿಲ್ಲವೆ?
(ನಸುನಗು) ಮನೆಯವರ ಸಂಪೂರ್ಣ ಸಹಕಾರ ಇರುವುದರಿಂದಲೇ ನಾನು ಕಚೇರಿಗೆ ಬೇಗ ಬರಲು, ಕೆಲಸ ಮಾಡಲು ಸಾಧ್ಯವಾಗಿದೆ.

ಪಾಲಿಕೆ ಹೊಣೆ, ವಿಧಾನಸೌಧದ ಕಾರ್ಯ ಯಾವುದು ಇಷ್ಟ?
ವಿಧಾನಸೌಧದಲ್ಲಿ ನಾನು ಹೆಚ್ಚಾಗಿ ನಿರ್ಜೀವ ಕಡತಗಳ ಜತೆ ವ್ಯವಹರಿಸಬೇಕಿತ್ತು. ಇಲ್ಲಿ ಜೀವನ್ಮುಖಿ ಸಮಾಜದ ಜತೆ ನೇರ ಮುಖಾಮುಖಿ ಆಗುವ ಅದೃಷ್ಟ. ನೆಲಮಟ್ಟದಲ್ಲಿ ಕೆಲಸ ಮಾಡುವ, ವಿಷಯ ತಿಳಿದುಕೊಳ್ಳುವ ಅವಕಾಶ. ಬೆಂಗಳೂರಿನ ನಿವಾಸಿಯಾಗಿ ಇಲ್ಲಿನ ವ್ಯವಸ್ಥೆ ಸುಧಾರಣೆಗೆ ಕೆಲಸ ಮಾಡಿದ್ದು ನನಗೆ ಹೆಚ್ಚಿನ ಆತ್ಮಸಂತೋಷ ನೀಡಿದೆ. ಜನರ ಪ್ರೀತಿ ದೊಡ್ಡದಾಗಿದೆ. ಅವರ ಎಲ್ಲ ಆಶೋತ್ತರಗಳನ್ನು ಈಡೇರಿಸಲು ಆಗುತ್ತಿಲ್ಲ ಎಂಬ ಕೊರಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT