ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಬೇಡ ಪಾಪಚ್ಚಿ ನೀನು

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನನ್ನಂಥವರಿಗೆಲ್ಲಾ ಹೀಗೇ ಆಗುತ್ತೇನೋ...? ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ತೊಂಬತ್ತೊಂಬತ್ತೋ ನೂರೋ ಬರುತ್ತಿತ್ತು. ಗೆಳೆಯರಿಗೆಲ್ಲಾ ಸಿಕ್ಕಂತೆ ನನಗೆ ಟೆನ್ ಔಟ್ ಆಫ್ ಟೆನ್ ಗ್ರೇಡಿಂಗ್ ಸಿಗುತ್ತಿತ್ತು. ಅಪ್ಪ ಕನ್ನಡ ದೀಕ್ಷೆ ಕೊಟ್ಟಿದ್ದರು. ಕನ್ನಡ ಮೀಡಿಯಂ ಅಲ್ಲದೇ ಇದ್ದರೂ ಸ್ಟೇಟ್ ಸಿಲೆಬಸ್. ಹಾಗಾಗಿ ತೊಂಬತ್ತೆಂಟಕ್ಕೆ ಸುಸ್ತಾಯಿತು. ಪಿಯುಸಿಯಲ್ಲೂ ಅಷ್ಟೇ. ಬೆಳಿಗ್ಗೆ ಸ್ಪೆಷಲ್ ಕ್ಲಾಸು, ಸಂಜೆ ಟ್ಯೂಷನ್ನು ಎಲ್ಲಾ ಆಗಿ ಸಿಕ್ಕಿದ್ದು ತೊಂಬತ್ತೈದು.

ಸಿಇಟಿ ಮಾರ್ಕ್ಸ್ ಸೇರಿಸಿಕೊಂಡಾಗ ಟಾಪ್ ಟೆನ್‌ನಲ್ಲಿ ರ್‍ಯಾಂಕ್ ಇತ್ತು. ಬೇಕಿದ್ದ ಕಾಲೇಜು ಸಿಕ್ಕಿತು. ಈ ವಿವರಗಳನ್ನೆಲ್ಲಾ ನೋಡೋ ನಿಮಗೆ ‘ಬಡ್ಡಿ ಮಗ ಲಕ್ಕಿ’ ಅನ್ನಿಸುತ್ತಾ ಇರಬಹುದು. ಆದ್ರೆ ನಾನು ‘ಅನ್ ಲಕ್ಕಿ’. ಯಾಕೆ ಅಂತ ಕೇಳ್ತಿದ್ದೀರಾ...? ಅದು ಬಹಳ ಸಿಂಪಲ್ಲು. ಈ ವರ್ಷ ನನ್ನ ಪೋಸ್ಟ್ ಗ್ರಾಜ್ಯುಯೇಷನ್ ಮುಗಿಯುತ್ತೆ. ಆದರೆ ಇವತ್ತಿನ ತನಕ ಒಬ್ಬಳೇ ಒಬ್ಬಳು ಹುಡುಗಿ ನನ್ನ ಕಣ್ಣೆತ್ತಿ ನೋಡಿಲ್ಲ ಕಣ್ರೀ...

‘ಹುಡುಗಿಯರು ಕಣ್ಣೆತ್ತಿ ನೋಡಲ್ಲ. ನಿನ್ಗೆ ಲೈನ್ ಹೊಡ್ಯೋಕೆ ಬರ್‍ಲಿಲ್ವಾ’ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ ಅಂತ ಗೊತ್ತು. ನಮ್ಮಂಥ ಮಿಡ್ಲ್ ಕ್ಲಾಸ್ ಕುಡುಮಿಗಳ ಕಷ್ಟ ನಿಮಗೆ ಹೇಗೆ ಅರ್ಥ ಆಗಬೇಕು? ಹೈಸ್ಕೂಲ್ ಮುಗಿಯೋವರೆಗೂ ಅದು ಹೇಗೋ ಆಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ತೊಂಬತ್ತೆಂಟು ಬಂದಿದ್ದೇ ದೊಡ್ಡ ಸಮಸ್ಯೆ ಆಯಿತು. ಪಿಯುಸಿಯಲ್ಲಿ ಕನಿಷ್ಠ ಅಷ್ಟಾದರೂ ಬರಬೇಕಲ್ಲ. ನನಗೆ ಗಣಿತ ಅರ್ಥ ಆಗಲ್ಲ ಅಂದ್ರೆ ಅಪ್ಪ ‘ಟ್ಯೂಷನ್‌ಗೆ ಹೋಗು’ ಅಂದರು.

ಭೌತಶಾಸ್ತ್ರ ಕಷ್ಟ ಅಂದರೆ ಅದಕ್ಕೂ ಟ್ಯೂಷನ್. ಇನ್ನು ರಸಾಯನಶಾಸ್ತ್ರ ಯಾಕೆ ಬಿಡೋದು ಅಂತ ನಾನೇ ಟ್ಯೂಷನ್‌ಗೆ ಹೋದೆ. ಟ್ಯೂಷನ್‌ಗೆ ಅಪ್ಪ ಇಷ್ಟೊಂದು ದುಡ್ಡು ಕೊಟ್ಟಿದ್ದಾರಲ್ಲಾ ಅಂತ ಹೆದರಿಕೆ ಆಗಿ ಸರಿಯಾಗಿ ಓದಿದೆ. ಕ್ಲಾಸಲ್ಲಿ ಎಲ್ಲಾ ಹುಡುಗಿಯರು ಸ್ಮೈಲ್ ಮಾಡಿ ನನ್ನ ನೋಟ್ಸ್ ಝೆರಾಕ್ಸ್ ಮಾಡಿಸಿಕೊಂಡರು. ಏನೋ ಸಣ್ಣ ಆಸೆ ಇತ್ತು. ಆದರೆ, ಅಪ್ಪ ಸಾಲ ಮಾಡಿದ್ದು ನೆನಪಾಗಿ ಸುಮ್ಮನಾದೆ. ಇದು ತಪ್ಪಾ...?
***
ವಿಜ್ಞಾನ ಅಂದರೆ ವಿಶೇಷವಾದ ಜ್ಞಾನ. ಎಂ.ಆರ್. ಸರ್, ಹುಬ್ಬು ಗಂಟು ಹಾಕಿಕೊಂಡು ಹೇಳುತ್ತಾ ಇದ್ರು. ಅದಕ್ಕೇ ನಾನು ವಿಶೇಷವಾದ ಜ್ಞಾನಾನ ಹೈಸ್ಕೂಲಲ್ಲೇ ಬಿಟ್ಟು ಬಿಟ್ಟೆ. ಅಂತೂ ಇಂತೂ ಪಾಸಾದೆ. ಉರು ಹಚ್ಚಿದ್ದಕ್ಕೆ ಐವತ್ತು ಮಾರ್ಕ್ಸ್ ಬಂದಿತ್ತು. ಅದರಲ್ಲಿ ನನ್ನ ತಪ್ಪೇನೂ ಇಲ್ಲ. ಅಮ್ಮ ಎರಡು ದಿನ ಮುನಿಸಿಕೊಂಡಿದ್ದಳು. ‘ನೀನು ಟೈಲರಿಂಗ್ ಕ್ಲಾಸ್‌ಗೆ ಹೋಗು’ ಅಂದಳು. ಅಪ್ಪನದ್ದು ವಿಶಾಲ ಹೃದಯ. ‘ಸೈನ್ಸಲ್ಲಿ ಏನಿರುತ್ತೆ ಮಣ್ಣಾಂಗಟ್ಟಿ. ನೀನು ಆರ್ಟ್ಸ್ ತಗೋ. ಎಲ್ಲಾ ಸರಿಯಾಗುತ್ತೆ’ ಅಂದ್ರು. ಅದೇನೋ ಸರಿ ಆಯ್ತು. ಆದ್ರೆ ಕಾಲೇಜು ಇಷ್ಟೊಂದು ಬೋರಾದ್ರೆ...

ಯೂನಿಫಾರ್ಮ್ ಇಲ್ಲದೇ ಸ್ಕೂಲಿಗೆ ಹೋಗಿದ್ದೇ ಇಲ್ಲ. ಮೊದಲನೇ ದಿನ ಕಾಲೇಜಿಗೆ ಕಲರ್ ಡ್ರೆಸ್ಸಲ್ಲಿ ಹೋದಾಗ ಎಂಥಾ ಖುಷಿಯಾಗಿತ್ತು. ಸೀನಿಯರ್ ಹುಡುಗರ ತಿನ್ನುವ ಕಣ್ಣು ನೋಡಿದಾಗ ‘ಥೂ, ನಾಳೆಯಿಂದ ಬುರ್ಖಾ ಹಾಕ್ಕೊಂಡು ಬರೋದೇ ಒಳ್ಳೆಯದು’ ಅನ್ನಿಸಿತ್ತು. ಈ ಕಣ್ಣುಗಳೆಲ್ಲಾ ಹಳತಾಗಿ, ಧೈರ್ಯವಾಗಿ ಅವುಗಳ ಮೂತಿ ನೋಡಿ ಹುಬ್ಬು ಹಾರಿಸಿದ್ರೆ ಸೀನಿಯಾರಿಟಿ ನೀರಾಗಿ ಉತ್ತರವೇ ಇಲ್ಲದೆ ಕರಗಿ ಹೋಗುತ್ತಿತ್ತು.

ಸೈನ್ಸ್ ಬ್ಲಾಕ್‌ನಲ್ಲಿದ್ದ ನನ್ನ ಕುಡುಮಿ ಗೆಳತಿ ಹೇಳುವ ಭಾವಿ ಎಂಜಿನಿಯರ್‌, ಡಾಕ್ಟರು, ವಿಜ್ಞಾನಿಗಳ ಕಥೆ ಕೇಳಿ ಅತ್ತ ಹೋದರೆ ಹೆಚ್ಚಿನವು ಕಣ್ಣೆತ್ತಿಯೂ ನೋಡಲೊಲ್ಲದ ಸೈನ್ಟಿಸ್ಟುಗಳು. ತಲೆ ಎತ್ತುವ ಪ್ರಾಣಿಗಳಿಗೆ ಆಕಾರವೇ ಇರಲಿಲ್ಲ. ಮಹಾ ಕುಡುಮಿಯೆಂದು ಹೆಸರಾಗಿದ್ದ ಮಹಾನುಭಾವನ ಬಳಿ ನೋಟ್ಸ್ ಕೊಡು ಎಂದು ಕೇಳಿದರೆ ಸಬ್ಜೆಕ್ಟ್ ಯಾವುದು ಎಂದೂ ಕೇಳದೆ ಕೊಟ್ಟುಬಿಡುವುದೇ. ಕ್ಲಾಸಿನಲ್ಲಿ ಒಂದೇ ಒಂದು ದಿನವೂ ಕಾಣಿಸಿಕೊಳ್ಳದ ಜೀವಿಯೊಂದಕ್ಕೆ ನೋಟ್ಸ್ ಕೊಡುವ ಈ ಪ್ರಾಣಿಯನ್ನು ಏನೆಂದು ಬಣ್ಣಿಸಲಿ.
***

ಹುಡುಗರ ಹ್ಯಾಂಡ್ ರೈಟಿಂಗ್ ಚೆನ್ನಾಗಿ ಇರಬಾರದು. ನೀಟಾಗಿ ನೋಟ್ಸ್ ಬರೆದುಕೊಳ್ಳುವ ಅಭ್ಯಾಸ ಇರಲೇಬಾರದು. ಅದೆಲ್ಲಾ ಇದ್ದರೆ ನನ್ನ ನೋಟ್ಸ್ ಯಾರಿಗೂ ಕೊಡುವುದಿಲ್ಲ ಅನ್ನುವ ಧೈರ್ಯವನ್ನಾದರೂ ಆ ದೇವರು ಕೊಟ್ಟಿರಬೇಕು. ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಸೇರಿ ಬೆಳಿಗ್ಗೆ ಬೇಗ ಎದ್ದು ಓದಬೇಕು. ಪಾಠ ಸರಿಯಾಗಿ ಕೇಳಿಕೊಳ್ಳಬೇಕು, ಕ್ಲಾಸ್ ತಪ್ಪಿಸಬಾರದು ಎಂದೆಲ್ಲಾ ಹೇಳಿಕೊಟ್ಟಿದ್ದರೇ ಹೊರತು ನೀಟಾಗಿ ಬರೆದ ನೋಟ್ಸನ್ನು ಯಾರಿಗೂ ಕೊಡಬೇಡ ಎಂಬುದನ್ನು ಯಾವತ್ತೂ ಹೇಳಿರಲಿಲ್ಲ. ಅದೇ ಸಮಸ್ಯೆಯಾಗಿಬಿಟ್ಟಿತು.

ಆ ನೋಟ್ಸ್ ಕೇಳಿದವರ ಮುಖವನ್ನೂ ಸರಿಯಾಗಿ ನೋಡಿಕೊಳ್ಳಲಿಲ್ಲ. ಈ ಹುಡುಗಿಯರೆಲ್ಲಾ ಒಂದೇ ಥರಾ ಇದ್ದಾರೋ ಏನೋ? ಅವಳು ಎಲ್ಲೋ ಕಾರಿಡಾರಿನಲ್ಲಿ ಕಾಣಿಸಿದ್ದಳು. ನಮ್ಮ ಕ್ಲಾಸಿನವಳೇ ಇರಬೇಕು. ಇಲ್ಲಾ ಅಂದರೆ ಅವಳಿಗ್ಯಾಕೆ ನೋಟ್ಸ್ ಬೇಕಿತ್ತು. ಟ್ಯೂಷನ್ ವ್ಯವಸ್ಥೆಯೂ ಇರೋ ಈ ಕಾಲೇಜಿನಲ್ಲಿ ಕ್ಲಾಸಿಗೆ ಎಪ್ಪತ್ತು ಜನ ಇದ್ದೀವಿ. ನನಗಂತೂ ನನ್ನ ಬೆಂಚಿನ ಐವರ ಹೆಸರು ಬಿಟ್ಟರೆ ಉಳಿದ ಯಾರೂ ಗೊತ್ತಿಲ್ಲ. ಇವಳನ್ನು ಹುಡುಕೋದು ಹೇಗೆ? ಅಥವಾ ನನ್ನ ನೋಟ್ಸ್ ನಾನೇ ಝೆರಾಕ್ಸ್ ಮಾಡಿಸಿಕೊಳ್ಳುವ ಸ್ಥಿತಿ ಬಂತು.
***

ಎಷ್ಟು ಮುದ್ದಾಗಿ ಬರೆದುಕೊಂಡಿದೆ ಇದು. ಹಿಂದಿನ ಜನ್ಮದಲ್ಲಿ ಹುಡುಗಿಯಾಗಿತ್ತೋ ಏನೋ? ಒಂದು ಚಿತ್ತಿಲ್ಲ, ಒಂದು ಕಾಟಿಲ್ಲ. ಅದನ್ನು ನೋಡ್ದಾಗ ಇದೊಂದು ಪಾಪಚ್ಚಿ ಅನ್ನಿಸಿತು. ಬೆಳಿಗ್ಗೆ ಫಸ್ಟ್ ಅವರ್‌ನಲ್ಲಿ ಸೈನ್ಸ್ ಬ್ಲಾಕ್‌ಗೆ ಹೋದೆ. ಪಾಪಚ್ಚಿಯ ಮುಖ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆದರೆ ಅದನ್ನು ಅದಕ್ಕೆ ತಿಳಿಸೋದು ಹೇಗೆ?

ಏನೋ ಒಂದು ಥರಾ ಟೆನ್ಷನ್. ಪಾಪಚ್ಚಿ ಬಂತು. ಕೊಟ್ಟೆ. ಅಲ್ಲಲ್ಲ ಅದು ಕಿತ್ಕೊಳ್ತು ಅನ್ನೋದೇ ಸರಿ ಏನೋ... ಪಾಪ. ಆಮೇಲೆ ಅದೇನೋ ಸೈನು, ಕಾನು ಅಂತೆಲ್ಲಾ ಹೇಳಿತು. ನಾನು ತಲೆಯಲ್ಲಾಡಿಸಿದೆ. ಅದು ಏನೋ ಕೇಳಿತು. ನಾನು ಹೆಸರು ಹೇಳಿದೆ. ಕ್ಲಾಸ್‌ಗೆ ಲೇಟಾಗುತ್ತೆ ಅಂದು ಹೊರಟು ಹಿಂದಕ್ಕೆ ತಿರುಗಿ ನೋಡಿದಾಗ ನಾನಲ್ಲೇ ನಿಂತಿದ್ದೆ. ಅದು ಸ್ವಲ್ಪ ನಿಂತು ಮತ್ತೆ ಹೊರಟು ಹೋಯಿತು.
***

ಫಿಸಿಕ್ಸ್ ಕ್ಲಾಸಲ್ಲೂ ಇರಲಿಲ್ಲ. ಬಾಟ್ನಿಗೂ ಬರಲಿಲ್ಲ. ಕೆಮಿಸ್ಟ್ರಿ ಕ್ಲಾಸಲ್ಲೂ ಕಾಣಿಸಲಿಲ್ಲ. ಅವತ್ತೂ ಅಂತ ಅಲ್ಲ. ಮತ್ತೆ ಯಾವತ್ತೂ ಕಾಣಿಸಲೇ ಇಲ್ಲ. ಅವತ್ತೊಂದಿನ ಕಾಲೇಜಿನ ಗೇಟಿನೊಳಗೆ ಬರುವಾಗ ಆರ್ಟ್ಸ್ ಹುಡುಗಿಯರ ಜೊತೆ ನಿಂತಿದ್ದು ನೋಡಿದೆ. ಅವತ್ತೂ ಕ್ಲಾಸಿಗೆ ಬರಲಿಲ್ಲ.
ಮತ್ತೆ ಕಣ್ಣಿಗೆ ಕಂಡದ್ದು ಡಿಬೇಟಿಂಗ್ ಕಾಂಪಿಟಿಷನ್‌ನಲ್ಲಿ. ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದವರ ಥರಾ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದಳು.

ನನಗೆ ಉರು ಹಚ್ಚಿರುವ ಈಕ್ವೇಷನ್‌ಗಳನ್ನೂ ಅಷ್ಟು ಸ್ಪೀಡಾಗಿ ಹೇಳೋಕೆ ಬರುತ್ತಿರಲಿಲ್ಲ. ಅಷ್ಟು ಸಾಕಾಗದು ಅನ್ನುವಂತೆ ಅಡಿಗ, ಬೇಂದ್ರೆ, ಶರ್ಮ, ಡಿಆರ್ ಹೀಗೆ ಯಾರು ಯಾರದ್ದೋ ಕನ್ನಡದ ಸಾಲುಗಳನ್ನು ಹೇಳಿ ಅದನ್ನು ಇಂಗ್ಲಿಷಿಗೆ ಅನುವಾದಿಸಿಕೊಂಡು ಮಾತನಾಡುತ್ತಿದ್ದಳು. ನನಗೆ ಗೊತ್ತಿದ್ದ ಇಂಗ್ಲಿಷ್ ಮರೆತು ಹೋಯಿತು. ಮುಂದಿನ ಸಾರಿ ಅವಳ ಹತ್ತಿರ ಮಾತಾಡಲೇಬೇಕಾದರೆ ಕನ್ನಡದಲ್ಲಷ್ಟೇ ಅಂದುಕೊಂಡೆ.
***

ಕಾಲೇಜ್ ಡೇ ದಿನ ಆದ್ರೂ ಪಾಪಚ್ಚೀನ ಮಾತಾಡಿಸಿ ಆಟೋಗ್ರಾಫ್‌ನಲ್ಲಿ ಏನಾದ್ರೂ ಬರೆಯಿಸಿಕೊಳ್ಳೋಣ ಅಂದುಕೊಂಡಿದ್ದೆ. ಅದು ಯಾವುದೋ ಎಂಟ್ರೆನ್ಸ್ ಗಡಿಬಿಡಿಯಲ್ಲಿ ಇತ್ತೋ ಏನೋ ಅವತ್ತು ಕಾಣಿಸಲೇ ಇಲ್ಲ. ಪರೀಕ್ಷೆ ನಡೆಯುವಾಗಲೂ ನೋಡ್ತಾನೇ ಇದ್ದೆ. ಕಾಣಿಸಲೇ ಇಲ್ಲ. ಅವತ್ತೊಂದಿನ ಕಾಣಿಸಿಕೊಂಡಾಗ ಸುತ್ತಾ ಸೈಂಟಿಸ್ಟುಗಳೇ ಇದ್ದರು. ನಾಳೆ ಬರಬಹುದು ಅಂದುಕೊಂಡಿದ್ದೆ. ಪಾಪಚ್ಚಿ ಮತ್ತೆ ಕಾಣಿಸಿಕೊಂಡಿದ್ದು ಸಿಇಟಿ ರಿಸಲ್ಟ್ ಬಂದಾಗ. ಪೇಪರ್‌ನಲ್ಲಿ ಪಾಪಚ್ಚಿ ಫೋಟೊ ಬಂದಿತ್ತು. ನಮ್ಮ ಕಾಲೇಜಿನವರು ಪಾಪಚ್ಚಿಯದ್ದೊಂದು ದೊಡ್ಡ ಫೋಟೊ ಹಾಕಿದ ಅಡ್ವರ್ಟೈಸ್‌ಮೆಂಟೂ ಅವತ್ತಿನ ಪೇಪರ್‌ನಲ್ಲಿ ಇತ್ತು.

ಅವತ್ತೇ ಅಂದುಕೊಂಡೆ. ಇದು ಕೈ ತಪ್ಪಿದ ಕೂಸು. ಇದು ಎಂಜಿನಿಯರಿಂಗ್ ಮಾಡಿ ಎಂ.ಎಸ್. ಮಾಡೋಕೆ ಯು.ಎಸ್.ಗೆ ಹೋಗುತ್ತೆ. ಇಲ್ಲಿ ಅಪ್ಪ–ಅಮ್ಮ ಹುಡುಕಿಟ್ಟ ಗೌರಮ್ಮನ್ನ ಕಟ್ಟಿಕೊಂಡು, ಬೆಂಗಳೂರಲ್ಲಿ ಒಂದೆರಡು ಸೈಟು, ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಂಡು ಭಾರತೀಯ ಸಂಸ್ಕೃತಿ ಬಗ್ಗೆ ಭಾರತ–ಭಾರತಿ ಪುಸ್ತಕ ಓದಿ ತಿಳಿದುಕೊಂಡು ಮಾತಾಡೋದಕ್ಕೆ ಲಾಯಕ್ಕು.
***

ಎಂಜಿನಿಯರಿಂಗ್ ಮುಗಿದಾಗ ಅಮ್ಮನಿಗೆ ನಾನು ಅಮೆರಿಕಕ್ಕೆ ಹೋದರೇ ಒಳ್ಳೆಯದಿತ್ತು ಅನ್ನಿಸಿತ್ತು. ಅಪ್ಪನಿಗೆ ಮಾತ್ರ ಯಾಕೋ ಅದಿಷ್ಟ ಇರಲಿಲ್ಲ. ಅವರ ಕನ್ನಡ ದೀಕ್ಷೆಯ ಪರಿಣಾಮ ನನ್ನ ಮೇಲೂ ಆಗಿತ್ತು ಅನ್ನಿಸುತ್ತೆ. ಎಂ.ಟೆಕ್. ಮಾಡುವಾಗ ಆ ಹುಡುಗಿ ಅರ್ಥವಾದಳು. ಅವಳು ಪಿಯುಸಿಯಲ್ಲಿ ಮಾತಾಡುತ್ತಿದ್ದ ಡಿ.ಆರ್., ಅಡಿಗ, ಶಿವಪ್ರಕಾಶ್, ಶರ್ಮ, ಅನಂತಮೂರ್ತಿ ಎಲ್ಲರೂ ಅರ್ಥವಾಗತೊಡಗಿದರು. ನಾನು ಓದಿದೆ. ಅಮ್ಮನಿಗೆ ಸಿಟ್ಟು ಬರುತ್ತಿತ್ತು. ಅಪ್ಪನಿಗೆ ತನ್ನ ಲೈಬ್ರರಿ ಮೇಲೆ ಮಗನಿಗೆ ಆಸಕ್ತಿ ಹುಟ್ಟಿರೋದೇ ಖುಷಿಯಾಗಿತ್ತು.

ನಾನೂ ಒಂದು ಪದ್ಯ ಬರೆದೆ. ಅಪ್ಪ ಕೇಳಿದ್ದೇನು ಗೊತ್ತಾ? ‘ಏನೋ... ಕೋರ್ಸ್ ಮುಗಿಯೋ ಮೊದಲೇ ಲವ್ವಲ್ಲಿ ಬಿದ್ದಿದ್ದೀಯಾ...?’
ನನಗೆ ಎಷ್ಟು ಸಿಟ್ಟು ಬಂತು ಗೊತ್ತಾ? ಒಂದೇ ಒಂದು ಗರ್ಲ್ ಫ್ರೆಂಡ್ ಸಿಗದೇ ಇರೋ ಥರಾ ಮಗನನ್ನ ಬೆಳೆಸಿ ಈಗ ಲವ್ವಿನ ವಿಷಯ ಕೇಳ್ತೀರಾ ಅನ್ನುವಷ್ಟು ಸಿಟ್ಟು ಬಂತು. ಆದರೆ ನನಗೆ ನಗು ಬಂತು. ಅಪ್ಪ ಅಷ್ಟೊತ್ತಿಗೆ ಪದ್ಯ ಓದಿದ್ದರು ಅನ್ನಿಸುತ್ತೆ. ಅವರೇ ಹೇಳಿದರು ‘ಇದೇನೋ ಇದು... ವಿಜ್ಞಾನ ಭೈರವನೇ ತುಂಬಿಕೊಂಡಿದ್ದಾನಲ್ಲೋ...’ ನನ್ನ ಪದ್ಯಕ್ಕೆ ಯಾವ ಹುಡುಗಿಯೂ ಸಿಗುವುದಿಲ್ಲ ಅನ್ನುವುದು ಖಾತ್ರಿಯಾಯಿತು. ಅಕಸ್ಮಾತ್ ಅವಳೇ ಸಿಕ್ಕಿದರೆ ಈ ಪದ್ಯ ಓದಿ ಚೈಲ್ಡಿಶ್ ಅನ್ನುತ್ತಾಳೋ ಏನೋ?
***

ಅದ್ಯಾಕೋ ಪಾಪಚ್ಚಿ ಮನಸ್ಸಿನಿಂದ ಹೋಗಲೇ ಇಲ್ಲ. ಹೈಡೆಗರ್, ಮಾರ್ಕ್ಸ್, ವೆಬೆರ್, ಬೆಥೆ, ನರಸಿಂಹಸ್ವಾಮಿ, ದೇವನೂರು, ಎಂ.ಎನ್. ಶ್ರೀನಿವಾಸ್, ಅನಂತಮೂರ್ತಿ ಹೀಗೆ ಎಲ್ಲೆಲ್ಲೋ ನನ್ನ ಓದು ಸಾಗುತ್ತಲೇ ಇತ್ತು. ಆಗೀಗ ಮನದಂಗಳಕ್ಕೆ ಪಾಪಚ್ಚಿಯದ್ದೊಂದು ವಿಸಿಟ್ ಇದ್ದೇ ಇರುತ್ತಿತ್ತು. ಒಂದು ದಿನ ಅದು ನಮ್ಮ ಯೂನಿವರ್ಸಿಟೀಗೆ ಬಂತು. ಅವತ್ತು ಮೆಟೀರಿಯಲ್ ಸೈನ್ಸ್ ಡಿಪಾರ್ಟ್‌ಮೆಂಟಿನ ಎದುರು ಗ್ರೀಕ್ ಅಂಡ್ ಲ್ಯಾಟಿನ್‌ನಲ್ಲಿ ಬರೆದಿದ್ದ ವಿಷಯವೊಂದಕ್ಕೆ ಸಂಬಂಧಿಸಿದ ಸೆಮಿನಾರ್ ಇತ್ತು. ಅದರ ಬ್ಯಾನರ್ ಕೆಳಗೇ ನಿಂತಿದ್ದ ಪಾಪಚ್ಚಿ ಹತ್ತಿರ ಹೋದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT