ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಯನ ದೀಪಾವಳಿ!

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗಂದು ಖೋತಾ ರೂಪಾಯಿ, ಹೆಂಡತಿ ತವರಿಗೆ ಹೊರಡುವೆನೆಂದರೆ ನಾನು ಒಬ್ಬ ಸಿಪಾಯೀ...’ ಎಂದು ಹಾಡುತ್ತ ಸಿನಿಮಾ ಹೀರೊ ಸ್ಟೈಲಲ್ಲಿ ಕಾರಿನ ಕೀ ಚೈನ್ ತಿರುಗಿಸುತ್ತ ಮನೆಯೊಳಕ್ಕೆ ಬಂದ ಪರಮೇಶಿಗೆ... ಶಾಕ್! ಹೆಂಡತಿ ಪರಿಮಳ ಉರುಫ್ ಪಮ್ಮಿ ಇನ್ನೂ ಮನೆಯಲ್ಲೇ ಇದ್ದಾಳೆ! ಪ್ರತಿದಿನ ಸಂಜೆ ಇಷ್ಟೊತ್ತಿಗಾಗಲೇ ಲೇಡೀಸ್ ಕ್ಲಬ್‌ಗೆ ಹಾರಿಬಿಟ್ಟಿರುತ್ತಿದ್ದ ಇವಳು, ಇವತ್ತೇನು ಹಳೆ ಕುಕ್ಕರಿನ ತರ ಇನ್ನೂ ಇಲ್ಲೇ ಕುಕ್ಕರಿಸಿದ್ದಾಳೆ ಎಂದು ಯೋಚಿಸುತ್ತ ‘ಯಾಕೆ ಪಮ್ಮು? ಇವತ್ತು ಕ್ಲಬ್‌ಗೆ ರಜಾನಾ?’ ಎಂದು ವಿಚಾರಿಸಿದ.

ಪರಮೇಶಿಯ ಪ್ರಶ್ನೆಗೆ ಉತ್ತರಿಸದ ಪಮ್ಮಿ, ‘ಏನು ಸಾಹೇಬ್ರು ಬಹಳ ಖುಷಿಯಾಗಿದೀರಿ? ಹೆಂಡತಿ ತವರಿಗೆ ಹೋದ್ರೆ ನೀವು ಸಿಪಾಯಿನಾ? ಹೆಂಡತಿ ಮನೆಯೊಳಗೆ ಇದ್ರೆ ನಿಮಗೆ ರೂಪಾಯಿ ಖೋತಾನಾ?...’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದಳು. ತಬ್ಬಿಬ್ಬಾದ ಪರಮೇಶಿ ‘ಅದೂ... ಹಾಗಲ್ಲ ಕಣೆ, ಹೊಸ ಕಾರು ಆಫೀಸ್‌ಗೆ ತಗಂಡು ಹೋಗಿದ್ನಲ್ಲ, ಎಲ್ರು ಸಖತ್ತಾಗಿದೆ ಸಾ, ಪಾರ್ಟಿ ಯಾವಾಗ ಅಂತ ಕೇಳ್ತಿದ್ರು. ಖುಷಿಯಾಯ್ತು. ಡ್ರೈವಿಂಗ್ ಮೂಡ್‌ನಲ್ಲಿ ಏನೋ ಒಂದು ಹಾಡ್ತಿದ್ದೆ ಅಷ್ಟೆ. ಅದಿರ್‍ಲಿ, ನೀವೇನು ತಾಯಿ- ಮಗಳು ಭರ್ಜರಿ ಡ್ರೆಸ್ ಮಾಡ್ಕೊಂಡು ಎಲ್ಲಿಗೋ ಹೊರಟ ಹಾಗಿದೆ? ಕ್ಲಬ್‌ಗಾ?’ ಎಂದ.

ಪಮ್ಮಿ ಉತ್ತರಿಸಲಿಲ್ಲ. ಹೊರಡಲು ಎದ್ದು ನಿಂತು ‘ಕಾರಿನ ಕೀ ಕೊಡಿ ಇಲ್ಲಿ’ ಎಂದಳು. ಅಷ್ಟರಲ್ಲಿ ಕಿರಿಮಗಳು ಅಪ್ಪಿ ಉರುಫ್ ಅರ್ಪಣ ‘ಪಪ್ಪಾ ಮೈಸೂರಿನಿಂದ ಭಾವ ಫೋನ್ ಮಾಡಿದ್ರು. ದೀಪಾವಳಿಗೆ ನಾವೇ ಮೈಸೂರಿಗೆ ಹೋಗ್ಬೇಕಂತೆ, ಈ ಸಲ ಹಬ್ಬನ ಅಲ್ಲೇ ಆಚರಿಸ್ಬೇಕಂತೆ...’ ಹೆಡ್‌ಲೈನ್ಸ್ ಒಪ್ಪಿಸಿ ನ್ಯೂಸ್ ಇನ್ ಡೀಟೇಲ್‌ಗೆ ಅಮ್ಮನ ಮುಖ ನೋಡಿದಳು.

‘ಹೌದೇನೆ ಪಮ್ಮು? ಅದೇಗೆ ನಾವು ಅಲ್ಲಿ ಹಬ್ಬ ಮಾಡೋಕಾಗುತ್ತೆ? ಮಗಳಿಗೆ ಮದುವೆ ಮಾಡಿದ ಮೇಲೆ ಇದು ಅವರ ಮೊದಲ ದೀಪಾವಳಿ ಅಲ್ವಾ? ಸಂಪ್ರದಾಯದ ಪ್ರಕಾರ ಅಳಿಯ ಮಗಳು ನಮ್ಮನೆಗೇ ಬಂದು ಹಬ್ಬ ಮಾಡ್ಬೇಕು. ಅಳಿಯನಿಗೆ ನಾವು ಉಡುಗೊರೆ ಕೊಡಬೇಕು. ಅದು ಬಿಟ್ಟು ನಾವು ಅಳಿಯನ ಮನೆಗೆ ಹೋಗಿ ಹಬ್ಬ ಮಾಡೋದು ಅಂದ್ರೆ ಸರೀನಾ? ನೀನೇನು ಹೇಳಿದೆ?’ ಪರಮೇಶಿ ಪ್ರಶ್ನಿಸಿದ.

‘‘ನಮ್ಮ ಅಳಿಯ ಗ್ರೇಟ್ ಕಣ್ರಿ. ನಿಮ್ಮ ಹಾಗೆ ಗೊಡ್ಡು ಸಂಪ್ರದಾಯದವರಲ್ಲ. ಮಾವನ ಮನೆಗೆ ಅಳಿಯ ಬರೋದು, ದೀಪಾವಳಿ ಗಿಫ್ಟ್ ಇಂಥದ್ದೇ ಬೇಕು ಅಂತ ಡಿಮ್ಯಾಂಡ್ ಮಾಡಿ ಇಸ್ಕೊಳೋದು ಎಲ್ಲ ಹಳೇ ಸ್ಟೈಲ್. ‘ಈ ಸಲ ಮಾವನೇ ಅಳಿಯನ ಮನೆಗೆ ಬರಲಿ, ಹೋಳಿಗೆ ತಿಂದು, ಪಟಾಕಿ ಹೊಡೆದು ಅಳಿಯ ಕೊಡೋ ಗಿಫ್ಟ್ ತಗೊಂಡು ಆಶೀರ್ವಾದ ಮಾಡ್ಲಿ’ ಅಂದ್ರು. ಮಗಳೂ ಅಷ್ಟೆ, ‘ಹೇಗೂ ಹೊಸ ಕಾರು ಬಂದಿದೆ ಜಂ ಅಂತ ಬಂದು ಜಂ ಅಂತ ಹೋಗಿ’ ಅಂದ್ಲು. ನೀವೂ ಇದೀರಿ, ನನ್ನ ಮದುವೆಯಾದ ಹೊಸತರಲ್ಲಿ ಮಾವ ಹೊಸ ವಾಚ್ ಕೊಡಿಸ್ಲಿಲ್ಲ ಅಂತ ಹದಿನೈದು ದಿನ ಮುನಿಸ್ಕೊಂಡಿದ್ರಿ ನೆನಪಿದ್ಯಾ?’’ ಪಮ್ಮಿ ಮಾತಿನಲ್ಲೇ ತಿವಿದಾಗ ಪರಮೇಶಿಗೆ ಸಿಟ್ಟುಬಂತು. ‘ಹೌದೌದು, ನಿಮ್ಮಪ್ಪ ಕೊಡಿಸಿದ ಆ ಡಬ್ಬಾ ವಾಚು ಮ್ಯೂಸಿಯಂನಲ್ಲಿಡೋಕೇ ಲಾಯಕ್ಕು. ಒಳ್ಳೆ ಮಗಳು ಬೇಡ, ಒಂದು ಒಳ್ಳೆ ವಾಚ್‌ನಾದ್ರು ಕೊಡಿಸಬಾರದ ಪುಣ್ಯಾತ್ಮ?’ ಎಂದ.

ಪಮ್ಮಿಗೆ ಉರಿದು ಹೋಯಿತು. ‘ಏನ್ರೀ ಇವತ್ತು ಯಾವ ಮಗ್ಗುಲಲ್ಲಿ ಎದ್ದಿದೀರಿ? ಜಾಸ್ತಿ ಮಾತಾಡದೆ ಮೂವರದೂ ಬಟ್ಟೆ ಪ್ಯಾಕ್ ಮಾಡಿಡಿ. ಬೆಳಿಗ್ಗೆ ಮೈಸೂರಿಗೆ ಹೋಗ್ಬೇಕು. ಈಗ ನಾವಿಬ್ರು ಲೇಡಿಸ್ ಕ್ಲಬ್‌ಗೆ ಹೋಗ್ತಿದೀವಿ. ಫ್ರೆಂಡ್ಸ್‌ಗೆಲ್ಲ ಹೊಸ ಕಾರು ತೋರಿಸಿ ಹಾಗೇ ಅಜ್ಜಿಮನೆಗೆ ಹೋಗಿ ಊಟ ಮುಗಿಸ್ಕೊಂಡು ಬರ್ತೀವಿ. ನಿಮಗೆ ಮಧ್ಯಾಹ್ನದ ಚಿತ್ರಾನ್ನ ಇಟ್ಟಿದೀನಿ ತಿನ್ಕಳಿ’ ಎಂದಳು.
ಪರಮೇಶಿಗೆ ಅರ್ಥವಾಗಲಿಲ್ಲ. ‘ಅಜ್ಜಿ ಮನೇನಾ? ಯಾವುದೇ ಅದು ಅಜ್ಜಿ ಮನೆ?’

‘ನಿಮ್ಮಜ್ಜಿ ಮನೆ... ಹೋಟೆಲ್ ಹೆಸರು ಕಣ್ರಿ ಅದು, ಒಳ್ಳೆ ಪೆದ್ದು, ಊರಲ್ಲಿರೋ ಒಂದು ಹೋಟೆಲ್ ಹೆಸರೂ ಗೊತ್ತಿಲ್ಲ’ ಗೊಣಗುತ್ತ ಮಗಳೊಂದಿಗೆ ಹೊರ ನಡೆದಳು ಪಮ್ಮಿ.
ಸದ್ಯ ತೊಲಗಿದವು ಎಂದು ನಿಟ್ಟುಸಿರು ಬಿಟ್ಟ ಪರಮೇಶಿ ಸೋಫಾ ಮೇಲೆ ಕೂತು ಶೂ ಬಿಚ್ಚುತ್ತ ಟಿ.ವಿ. ಆನ್ ಮಾಡಿದ. ಅದರಲ್ಲೂ ಚಿತ್ರಾನ್ನ ಚಿತ್ರಾನ್ನ... ಹಾಡು! ‘ಥತ್, ಇಲ್ಲೂ ಅದೇನಾ’ ಎನ್ನುತ್ತ ಆಫ್ ಮಾಡಿ ಎದ್ದು ಒಳ ನಡೆದ.
***
ಕಾರಿನ ಹಾರನ್ ಶಬ್ದ ಕೇಳುತ್ತಿದ್ದಂತೆ ಮನೆಯಿಂದ ಹೊರ ಬಂದ ಪರಮೇಶಿಯ ಹಿರಿ ಮಗಳು ತಪ್ಪಿ ಉರುಫ್ ತರ್ಪಣ ಮತ್ತು ಅಳಿಯ ಸಿದ್ದು ‘ಸ್ವಾಗತ, ಸುಸ್ವಾಗತ’ ಎಂದು ಪರಮೇಶಿ ದಂಪತಿಗಳನ್ನು ಸ್ವಾಗತಿಸಿದರು. ಮಗಳು ತಪ್ಪಿಗಂತೂ ಹೊಸ ಕಾರು ನೋಡಿ ಸಂಭ್ರಮ. ಕಾರನ್ನು ಮುಟ್ಟಿ ಮುಟ್ಟಿ ನೋಡುತ್ತ ‘ಅಮ್ಮಾ ಎಷ್ಟ್ ಚೆನ್ನಾಗಿದೆ ಕಾರು! ಕಲರಂತೂ ಸೂಪರ್, ಎಷ್ಟ್ ಕೊಟ್ರಿ? ನಂಗಂತೂ ತುಂಬ ಇಷ್ಟ ಆಯ್ತು. ಹಾರನ್ ಎಷ್ಟು ಜೋರಾಗಿದೆ ಅಲ್ವಾ? ಆ ಕ್ರಾಸ್‌ನತ್ರ ಹಾರನ್ ಮಾಡಿದ್ದು ನಮ್ಮ ಅಡುಗೆ ಮನೆಗೂ ಕೇಳಿಸ್ತು ಗೊತ್ತಾ?’ ಎಂದಳು. ತಕ್ಷಣ ಪರಮೇಶಿ  ‘ಹೂನಮ್ಮ, ಹೊಸ ಕಾರಿನ ಹಾರನ್ನು, ಹಳೇ ಹೆಂಡ್ತಿ ಸೈರನ್ನು ಎರಡೂ ಜೋರಾಗೇ ಇರುತ್ತಂತೆ. ಎಂಟು ಲಕ್ಷದ ಕಾರಿಗೆ ತೀರಾ ಅಷ್ಟೂ ಸೌಂಡ್ ಬೇಡ್ವಾ?’ ಎಂದು ನಕ್ಕ. ಪಮ್ಮಿ ಕಣ್ಣಲ್ಲೇ ಕೆಕ್ಕರಿಸಿದಳು.

ಅಳಿಯ ಸಿದ್ಧಾರ್ಥ ಅಂತೂ ‘ಬನ್ನಿ ಮಾವ, ಬನ್ನಿ ಅತ್ತೆ’ ಎನ್ನುತ್ತ ಕಾರಿನ ಡೋರ್ ತೆಗೆದದ್ದೇನು, ಡಿಕ್ಕಿ ಎತ್ತಿ ಲಗೇಜ್ ಇಳಿಸಿದ್ದೇನು, ನಾದಿನಿಯ ಕೆನ್ನೆ ಹಿಂಡಿ ‘ಏನೇ ಅಪ್ಪಿ ಈ ವರ್ಷ ಡಿಗ್ರಿನಾ? ಚೆನ್ನಾಗಿ ಓದ್ತಾ ಇದೀಯಾ?’ ಎಂದು ವಿಚಾರಿಸಿಕೊಂಡದ್ದೇನು... ದೀಪಾವಳಿಯ ಫ್ಲವರ್‌ಪಾಟು, ಸುರ್ ಸುರ್ ಬತ್ತಿ ಎಲ್ಲ ಅಳಿಯನ ಮಾತಿನಲ್ಲೇ ಚಟಪಟಿಸಿದವು.

ಅತ್ತೆ ಮಾವನನ್ನು ಅಕ್ಷರಶಃ ಕೈ ಹಿಡಿದೇ ಮನೆ ಒಳಕ್ಕೆ ಕರೆದೊಯ್ದ ಅಳಿಯ ಸಿದ್ದು, ‘ಮಾವ, ಪ್ರಯಾಣ ಮಾಡಿ ಸುಸ್ತಾಗಿದೀರಿ, ಸ್ವಲ್ಪ ಹೊತ್ತು ರೆಸ್ಟ್ ಮಾಡಿ. ಆಮೇಲೆ ಎದ್ದು ಎಣ್ಣೆ ಸ್ನಾನ ಮಾಡಿ, ನಂತರ ಎಲ್ಲರೂ ಒಟ್ಟಿಗೇ ಊಟಕ್ಕೆ ಕೂರೋಣಂತೆ. ಲೇ ತರ್ಪಣಾ, ಈ ಲಗೇಜ್ ಎಲ್ಲ ಅವರ ಬೆಡ್ ರೂಂಗೆ ಇಡು’ ಎಂದ.

ಅಳಿಯನ ಉಪಚಾರ ಕಂಡು ಪರಮೇಶಿ ಕಕ್ಕಾಬಿಕ್ಕಿಯಾದ. ಏನಪ್ಪಾ ಇದೂ, ಎಲ್ಲ ಉಲ್ಟಾ ಆಗ್ತಿದೆಯಲ್ಲ, ಮಾವ ಅಳಿಯನಿಗೆ ಮಾಡಬೇಕಾದ ಉಪಚಾರನ ಅಳಿಯ ಮಾವನಿಗೆ ಮಾಡ್ತಾ ಇದಾನಲ್ಲ ಎಂದು ಮುಜುಗರಪಟ್ಟುಕೊಂಡ. ಪಮ್ಮಿಗಂತೂ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ಪರಮೇಶಿಯ ಮುಖ ನೋಡಿ ಕಣ್ಣಲ್ಲೇ ಹೆಂಗೆ ನಮ್ಮ ಅಳಿಯ? ಎನ್ನುವಂತೆ ಪ್ರಶ್ನಿಸಿದಳು. ಪರಮೇಶಿ ಪಿಟಿಕ್ಕೆನ್ನಲಿಲ್ಲ.

ಬೆಡ್‌ರೂಂ ಸೇರುತ್ತಿದ್ದಂತೆ ಪಮ್ಮಿಯ ಸಂತಸದ ಕಟ್ಟೆ ಒಡೆಯಿತು. ‘ರೀ... ನೋಡಿದ್ರಾ ಎಷ್ಟು ಒಳ್ಳೆಯವರು ನಮ್ಮ ಅಳಿಯಂದ್ರು... ನಾವು ಯಾವ ಜನ್ಮದ ಪುಣ್ಯ ಮಾಡಿದ್ವೋ ಏನೋ ಅಲ್ವಾ?’ ಎಂದಳು. ಪರಮೇಶಿಗೆ ಮುಜುಗರ. ‘ಅಲ್ವೆ, ಹೊಸ ಅಳಿಯನಿಗೆ ಮೊದಲ ದೀಪಾವಳಿಯಲ್ಲಿ ನಾವು ಮಾಡಬೇಕಾದ್ದನ್ನೆಲ್ಲ ಅಳಿಯಂದ್ರು ನಮಗೆ ಮಾಡ್ತಾ ಇದಾರಲ್ಲೇ, ಇದು ಯಾವ ನ್ಯಾಯ?’ ಎಂದ.
ಪರಮೇಶಿ ಮಾತಿಗೆ ಬ್ರೇಕ್ ಹಾಕಿದ ಪಮ್ಮಿ ‘ನಮ್ಮ ಅಳಿಯಂದ್ರು ವಿಚಾರವಾದಿಗಳು ಕಣ್ರಿ, ಬುದ್ಧಿಜೀವಿಗಳು. ಈ ಸಂಪ್ರದಾಯ ಗಿಂಪ್ರದಾಯ ಎಲ್ಲ ಅವರಿಗೆ ಹಿಡಿಸಲ್ಲ ಅನ್ಸುತ್ತೆ. ಸಮಾಜದಲ್ಲಿ ಈ ತರ ಬದಲಾವಣೆ ಆಗ್ತಿರಬೇಕು. ಅದು ನಮ್ಮ ನಮ್ಮ ಮನೆಗಳಿಂದ್ಲೇ ಶುರು ಆಗಬೇಕು. ಮೂಢ ನಂಬಿಕೆ ತೊಲಗಬೇಕು, ಹೊಸ ರಾಷ್ಟ್ರ ನಿರ್ಮಾಣ ಮಾಡಬೇಕು ಆಮೇಲೆ...’ ಎನ್ನುತ್ತ ಏನೋ ಮರೆತಂತೆ ತಲೆ ಕೆರೆದುಕೊಂಡಳು. ಅಷ್ಟರಲ್ಲಿ ಅಲ್ಲಿಗೆ ಬಂದ ಮಗಳು ತರ್ಪಣ ‘ಅಮ್ಮಾ ಲೇಡಿಸ್ ಕ್ಲಬ್ ಭಾಷಣ ಇಲ್ಲೂ ಶುರು ಮಾಡಿದ್ಯಾ? ಬೇಗ ಫ್ರೆಶ್ ಆಗಿ ಬನ್ನಿ, ಎಣ್ಣೆ ಸ್ನಾನ ಮಾಡುವಿರಂತೆ. ಇವತ್ತು ಪಪ್ಪಂಗೆ ನಾನೇ ಎಣ್ಣೆ ಹಚ್ತೀನಿ, ಪಪ್ಪಾ ಓ.ಕೆ.ನಾ?’ ಎಂದಳು. ‘ಓ.ಕೆ. ಡನ್ ಮಗಳೆ’ ಎಂದ ಪರಮೇಶಿ.

ಮಗಳು ಹೋದ ಮೇಲೆ ಪರಮೇಶಿ ‘ಅಲ್ವೆ ಪಮ್ಮು, ಮಗಳೇನೋ ನನಗೆ ಎಣ್ಣೆ ಹಚ್ತೀನಿ ಅಂದ್ಲು, ಓ.ಕೆ. ಅದೇ ತರ ಅಳಿಯಂದ್ರು ನಿನಗೆ ಎಣ್ಣೆ ಹಚ್ತೀನಿ ಅಂತ ಬಂದ್ರೆ ಏನ್ಮಾಡ್ತೀಯೆ?’ ಎಂದ ನಗುತ್ತ. ಪರಮೇಶಿಯ ಕೀಟಲೆ ಅವನಿಗೇ ಉಲ್ಟಾ ಹೊಡೆಯಿತು. ‘ನಿಜಾನಾ? ಹೌ ಸ್ವೀಟ್... ಆದ್ರೂ ನಂಗೆ ನಾಚ್ಕೆ ಆಗುತ್ತಪ್ಪ’ ಪಮ್ಮಿ ಕೂತಲ್ಲೇ ನುಲಿದಾಗ ಪರಮೇಶಿ ಢಮಾರ್!
    ***
ಎಣ್ಣೆ ಸ್ನಾನ ಮುಗಿಯುತ್ತಿದ್ದಂತೆ ಪಮ್ಮಿಗೆ ಹೊಸ ರೇಷ್ಮೆ ಸೀರೆ, ಪರಮೇಶಿಗೆ ಪ್ಯಾಂಟು-ಶರ್ಟು ಉಡುಗೊರೆ! ಪರಮೇಶಿ ಹೆಂಡತಿ ಮುಖ ನೋಡುತ್ತ ‘ಲೇ ಏನೇ ಇದೂ... ಹೊಸ ಅಳಿಯನಿಗೆ ನಾವು ಉಡುಗೊರೆ ಕೊಡಬೇಕು ಅಂಥದ್ರಲ್ಲಿ...’ ಗೊಣಗಿದಾಗ, ‘ಪಮ್ಮಿ ಶ್!... ಇದು ಬದಲಾವಣೆ, ಕ್ರಾಂತಿ.  ಸುಮ್ನೆ ಹಾಕ್ಕೊಳ್ರಿ’ ಎಂದು ಗದರಿದಳು.

ಊಟಕ್ಕೆ ಕೂತಾಗಲಂತೂ ಮಗಳು- ಅಳಿಯ ತಾವೇ ಖುದ್ದು ನಿಂತು ಇನ್ನೊಂದು ಇನ್ನೊಂದು ಎಂದು ಹೋಳಿಗೆ ಬಡಿಸಿದ್ದೇನು, ತುಪ್ಪ ಸುರಿದಿದ್ದೇನು... ಪರಮೇಶಿ ಮುಜುಗರಪಟ್ಟುಕೊಂಡು ಊಟ ಮಾಡಿದರೆ ಪಮ್ಮಿ ಚಪ್ಪರಿಸಿಕೊಂಡು ಗಡದ್ದಾಗಿ ಇಳಿಸಿ ಢರ್ ಎಂದು ತೇಗಿದಳು. ಮೇಲೆ ಮಜ್ಜಿಗೆ, ಬಾಳೆಹಣ್ಣು. ಆಮೇಲೆ ಮೈಸೂರಿನ ಚಿಗುರೆಲೆ, ಸುಗಂಧಭರಿತ ಅಡಿಕೆ, ಲವಂಗ, ಏಲಕ್ಕಿ... ಇತ್ಯಾದಿ.
ಸಂಜೆ ಪಟಾಕಿಗಳ ಆರ್ಭಟ. ಪರಮೇಶಿ ಹೆದರುತ್ತಲೇ ಹೂವಿನ ಕಡ್ಡೀನ ಮಾರು ದೂರ ಹಿಡಿದುಕೊಂಡು ಅಲ್ಲಾಡಿಸಿದರೆ, ಪಮ್ಮಿ ಯಾವ ಹೆದರಿಕೆ ಇಲ್ಲದೆ ಲಕ್ಷ್ಮಿ ಪಟಾಕಿ ಢಂ ಅನ್ನಿಸಿದಳು. ಅಪ್ಪಿ-ತಪ್ಪಿ ಇಬ್ಬರೂ ಫ್ಲವರ್ ಪಾಟ್ ಹೂ ಮಳೆ ಸುರಿಸಿದರು. ಅಳಿಯ ಸಿದ್ದು ರಾಕೆಟ್ ಉಡಾಯಿಸಿ ಸಂಭ್ರಮಿಸಿದ.

ರಾತ್ರಿ ಊಟವಾದ ಮೇಲೆ ತಾಂಬೂಲ ಮೆಲ್ಲುತ್ತ ಪರಮೇಶಿ ಮಗಳು -ಅಳಿಯ ಇಬ್ಬರನ್ನೂ ಕರೆದ. ‘ಸಿದ್ದೂ ಏನಪ್ಪ ಇದು, ನಿಮ್ಮಿಬ್ಬರಿಗೂ ಮೊದಲ ದೀಪವಾಳಿ ಇದು. ನೀವು ನಮ್ಮನೆಗೆ ಬಂದು ಹಬ್ಬ ಮಾಡಿ ಉಡುಗೊರೆ ಇಸ್ಕೋಬೇಕು. ಅದು ಬಿಟ್ಟು ನಮ್ಮನ್ನೇ ಇಲ್ಲಿಗೆ ಕರೆಸಿ ನಮಗೇ ಉಡುಗೊರೆ ಕೊಟ್ರೆ ಹೇಗೆ? ನೀವು ನಮ್ಮನೆಗೆ ಬಂದು ನಮ್ಮ ಕಡೆಯಿಂದ ಏನಾದ್ರು ಉಡುಗೊರೆ ತಗೊಳ್ಳಲೇಬೇಕು. ನಾವು ಬೆಳಿಗ್ಗೆ ಊರಿಗೆ ಹೊರಡ್ತೀವಿ ಆಯ್ತಾ?’ ಎಂದ.
‘ಅಯ್ಯೋ ಬಿಡಿ ಮಾವ, ಅದೆಲ್ಲ ಹಳೇ ಸಂಪ್ರದಾಯ. ನೀವು ನಮಗೆ ಉಡುಗೊರೆ ಕೊಡಬೇಕಾ? ನಾವೇ ತಗೋತೀವಿ ಬಿಡಿ...’ ಎಂದ ಸಿದ್ದು ಮುಗುಮ್ಮಾಗಿ.

‘ಇಲ್ಲ ಇಲ್ಲ, ನೀವು ಉಡುಗೊರೆ ತಗೊಳ್ಳಲೇಬೇಕು, ಇಲ್ಲಾಂದ್ರೆ ನಮ್ಮ ಮನಸ್ಸಿಗೆ ನೋವಾಗುತ್ತೆ’ ಪರಮೇಶಿ ಒತ್ತಾಯಿಸಿದ.
‘ಬಿಡು ಪಪ್ಪಾ, ನಿಮ್ಮದು ಬೇರೆ ನಮ್ಮದು ಬೇರೆನಾ? ನಾವೆಲ್ಲ ಒಂದೇ ಅಲ್ವಾ? ಈಗ ನಿಮ್ಮ ಈ ಹೊಸ ಕಾರನ್ನ ಉಡುಗೊರೆಯಾಗಿ ನಾವೇ ಇಟ್ಕೋತೀವಿ ಅಂದ್ರೆ ನೀವು ಬೇಡ ಅಂತೀರಾ?’ ಮಗಳು ತರ್ಪಣ ರಾಗ ಎಳೆದಾಗ ಪರಮೇಶಿ ತಲೆ ಗಿಮ್ ಅಂತು. ಎಂಟು ಲಕ್ಷದ ಕಾರು! ತಡವರಿಸುತ್ತ ‘ಏನೇ ತಪ್ಪಿ? ಕಾ... ಕಾರಾ? ನಾವು ಊರಿಗೆ ಹೋಗಬೇಕಲ್ವೆ?’ ಎಂದ.
ಅದಕ್ಕೆಲ್ಲ ಅರೇಂಜ್ ಮಾಡಿದೀನಿ ಮಾವ, ಬೆಳಿಗ್ಗೆ ವೋಲ್ವೋ ಬಸ್‌ಗೆ ಮೂರು ಟಿಕೆಟ್ ಬುಕ್ ಮಾಡ್ಸಿದೀನಿ. ಸೀದಾ ನಿಮ್ಮ ಮನೆ ಹತ್ರಾನೇ ಸ್ಟಾಪ್ ಕೊಡ್ತಾನೆ...’ ಅಳಿಯ ಬಸ್ ಟಿಕೆಟ್ ಮುಂದೆ ಹಿಡಿದಾಗ ಪರಮೇಶಿಗೆ ಶಾಕ್! ಖೆಡ್ಡಾಕ್ಕೆ ಬಿದ್ದ ಮಿಕದ ಹಾಗೆ ವಿಲವಿಲ ಒದ್ದಾಡಿದ. ಪಮ್ಮಿ ಬಾಯಿಂದ ಮಾತೇ ಹೊರಡಲಿಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT