ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನಂಚಿನಲ್ಲಿ ರಣಹದ್ದು ಸಂತತಿ

ರಾಮನಗರ ವನ್ಯಜೀವಿ ಧಾಮದಲ್ಲಿಯೇ ನಿರಂತರ ಬೇಟೆ: ಪರಿಸರ ಪ್ರೇಮಿಗಳ ಆತಂಕ
Last Updated 24 ಅಕ್ಟೋಬರ್ 2014, 9:12 IST
ಅಕ್ಷರ ಗಾತ್ರ

ರಾಮನಗರ: ತನ್ನ ವಿಶಾಲವಾದ ರೆಕ್ಕೆಗಳನ್ನು ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ, ಕಣ್ಣಿನ ತೀಕ್ಷ್ಣ ನೋಟದಿಂದಲೇ ಆಹಾರವನ್ನು ಹುಡುಕುವ ‘ಉದ್ದ ಕೊಕ್ಕಿನ ರಣಹದ್ದು‘ಗಳ (ಲಾಂಗ್‌ ಬಿಲ್ಡ್‌ ವಲ್ಚರ್ಸ್) ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದ್ದು, ವಿನಾಶದ ಅಂಚು ತಲುಪಿವೆ. ಜಗತ್ತಿನ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಇವೂ ಸ್ಥಾನವನ್ನೂ ಪಡೆದಿವೆ.

ಸಾಮಾನ್ಯವಾಗಿ ಆಫ್ರಿಕಾ ಮತ್ತು ಏಷ್ಯಾ ಖಂಡದ ಕೆಲವೇ ದೇಶಗಳಲ್ಲಿ ಕಂಡು ಬರುವ ಈ ಹದ್ದುಗಳು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ರಾಮನಗರದಲ್ಲಿ ಕಂಡು ಬರುತ್ತವೆ. ರಣಹದ್ದುಗಳ ರಕ್ಷಣೆ ಸಲುವಾಗಿ ರಾಮದೇವರ ಬೆಟ್ಟ ಪ್ರದೇಶವನ್ನು ರಣಹದ್ದು ವನ್ಯ ಜೀವಿ ಧಾಮವನ್ನಾಗಿಸಲಾಗಿದೆ.

ಆದರೆ ವನ್ಯಜೀವಿ ಧಾಮದಲ್ಲಿಯೇ ರಣಹದ್ದುಗಳು ಬೇಟೆಯ ಹೊಡೆತಕ್ಕೆ ಸಿಲುಕಿವೆ ಎಂಬ ಸಂಗತಿ ಇದೀಗ ಬಯಲಾಗಿದೆ. ದುಷ್ಕರ್ಮಿಗಳು ಜೀವಂತ ಕೋಳಿಯನ್ನು ಕೊಂದು, ಅದಕ್ಕೆ ಕ್ರಿಮಿನಾಶ ಬೆರೆಸಿ , ರಣಹದ್ದುಗಳನ್ನು ಕೊಲ್ಲುವ ಅಥವಾ ಅದನ್ನು ಹಿಡಿಯುವ ಯತ್ನ ನಡೆಯುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ದಿಗ್ಭ್ರಮೆ ಉಂಟುಮಾಡಿದೆ.

ಆತಂಕದಲ್ಲಿ ರಣಕಾಟಿ ಹದ್ದುಗಳು: ರಮಣೀಯ ಬೆಟ್ಟ-ಗುಡ್ಡಗಳಿಂದಲೇ ಸುತ್ತುವರೆದಿರುವ ರಾಮನಗರದಲ್ಲಿ ಈ ಅಪರೂಪದ ಉದ್ದ ಕತ್ತು ಮತ್ತು ಬಲಿಷ್ಠ ಕೊಕ್ಕಿನ ರಣಹದ್ದುಗಳು (ಈ ಭಾಗದಲ್ಲಿ ‘ರಣಕಾಟಿ’ ಹದ್ದು ಎಂದೇ ಪ್ರಸಿದ್ಧಿ) ನೂರಾರು ವರ್ಷಗಳಿಂದ ನೆಲೆ ಕಂಡು ಕೊಂಡಿವೆ. ನೂರಾರು ಸಂಖ್ಯೆಯಲ್ಲಿ ಇದ್ದ ಅವುಗಳ ಸಂತತಿ ಇದೀಗ ಬೆರಳೆಣಿಕೆಯಷ್ಟಾಗಿವೆ!

‘ಇಲ್ಲಿರುವ ಕೆಲವೇ ಕೆಲವು ರಣಕಾಟಿ ಹದ್ದುಗಳು ಆತಂಕ, ಭಯದಲ್ಲಿ ಜೀವನ ಸಾಗಿಸುತ್ತಿರುವಂತೆ ಗೋಚರಿಸುತ್ತವೆ. ನೀರು ಮತ್ತು

ರಣಕಾಟಿ ಹದ್ದುವಿನ ವೈಶಿಷ್ಟ್ಯ
ಬೋಳು ತಲೆ, ಉದ್ದನೆಯ ಕತ್ತು ಹೊಂದಿರುವ, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಮೈ ಬಣ್ಣ ಇರುವ ಈ ರಣಹ­ದ್ದುಗಳು ತನ್ನ ಹರಿತವಾದ ಉದ್ದನೆಯ ಕೊಕ್ಕಿನಿಂದ ಮಾಂಸವನ್ನು ಹೆಕ್ಕಿ ತಿನ್ನುವ ಶಕ್ತಿಯನ್ನು ಹೊಂದಿವೆ.
ಈ ಹದ್ದುಗಳು ಸುಮಾರು 4ರಿಂದ 8 ಕೆ.ಜಿ ತೂಕ, 95 ಸೆ.ಮೀನಷ್ಟು ಉದ್ದ, 220 ಸೆ.ಮೀನಷ್ಟು ವಿಶಾಲವಾದ ರೆಕ್ಕೆ ಹೊಂದಿರುತ್ತವೆ. ಅವುಗಳ ಕತ್ತು ಮತ್ತು ಕೊಕ್ಕಿನ ಉದ್ದ 15ರಿಂದ 18 ಸೆಂ.ಮೀ ನಷ್ಟು ಇರಬಹುದು ಎನ್ನಲಾಗಿದೆ.

ಆಹಾರಕ್ಕಾಗಿ ಕಿ.ಮೀ ಗಟ್ಟಲೆ ಸಂಚರಿಸಬೇಕಾದ ಸ್ಥಿತಿ ಅವುಗಳಿಗೆ ಬಂದೆರಗಿದೆ. ತನ್ನ ಜತೆಗಾರರನ್ನು ಕಳೆದುಕೊಂಡಿರುವುದು ಈ ಹದ್ದುಗಳಲ್ಲಿ ಭೀತಿ ಹುಟ್ಟಿಸುವಂತೆ ಮಾಡಿದೆ. ಹಿಂದೊಮ್ಮೆ ದಷ್ಟಪುಷ್ಟವಾಗಿದ್ದ ಹದ್ದುಗಳ ದೇಹ ಈಗ ಬಡಕಲಾಗಿವೆ. ಸಣ್ಣ ಶಬ್ದವಾದರೂ ಬೆಚ್ಚಿ ಬಿಳುತ್ತಿದ್ದು, ಸಣ್ಣ ಹಕ್ಕಿಗಳ ರೀತಿಯಲ್ಲಿ ‘ಪುರ್‌’ಎಂದು ಹಾರಿ ಹೋಗುತ್ತಿವೆ’ ಎಂದು ಪರಿಸರವಾದಿ ಪ್ರೊ. ಎಂ. ಶಿವನಂಜಯ್ಯ ಆತಂಕ ವ್ಯಕ್ತಪಡಿಸುತ್ತಾರೆ.

‘ರಾಮನಗರದ ರಾಮದೇವರ ಬೆಟ್ಟ, ಹಂದಿಗುಂದಿ ಬೆಟ್ಟ, ಶಿವನಗಿರಿ ಬೆಟ್ಟ, ಚನ್ನೇನಹಳ್ಳಿ ಬೆಟ್ಟ, ಕೋಲುಮುರುಕನಕಲ್ಲು ಬೆಟ್ಟ, ಬೋಳುಗುಡ್ಡೆ ಸೇರಿದಂತೆ ಹಲವೆಡೆ ವಂಶಪಾರಂಪರ್ಯವಾಗಿ ರಣಕಾಟಿ ಹದ್ದುಗಳು ನೆಲೆಸಿದ್ದವು. ಗುಂಪು ಗುಂಪಾಗಿ ಇರುತ್ತಿದ್ದ ಈ ರಣಹದ್ದುಗಳನ್ನು ಈಗ ಒಂಟಿ ಒಂಟಿಯಾಗಿವೆ. ಅವುಗಳ ಮಿಲನ, ಮೊಟ್ಟೆ, ಮರಿಗಳ ಪೋಷಣೆಯ ಕಲರವ ಮಾಯವಾಗಿವೆ. ರಣಕಾಟಿ ಹದ್ದುಗಳ ಗೂಡು ಮತ್ತು ಅವುಗಳ ಹಿಕ್ಕೆಗಳ ಗುರುತು ಮಾತ್ರ ಈಗ ಉಳಿದಿವೆ’ ಎಂದು ಅವರು ತಿಳಿಸುತ್ತಾರೆ.

ಚಿತ್ರೀಕರಣದ ಹೊಡೆತ: ‘ರಾಮದೇವರ ಬೆಟ್ಟದಲ್ಲಿ ‘ಶೋಲೆ’ ಹಾಗೂ ‘ಪ್ಯಾಸೇಜ್‌ ಟು ಇಂಡಿಯಾ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ (ಬೆಟ್ಟವನ್ನು ಕೊರೆದು ಗುಹೆಗಳನ್ನು ನಿರ್ಮಿಸಲಾಗಿತ್ತು) ಈ ಭಾಗದಲ್ಲಿದ್ದ ಬಹುತೇಕ ರಣಕಾಟಿ ಹದ್ದುಗಳು ಬೇರೆಡೆಗೆ ವಲಸೆ ಹೋಗಿದ್ದವು. ಆಗ ಹೋಗಿದ್ದ ರಣಕಾಟಿ ಹದ್ದುಗಳ ಪೈಕಿ ಕೆಲವೇ ಕೆಲವು ಎಂಟು ವರ್ಷ­ದಿಂದೀಚೆಗೆ ಪುನಃ ರಾಮದೇವರ ಬೆಟ್ಟದ ತನ್ನ ಮೂಲ ನೆಲೆಗಳಿಗೆ ಹಿಂದಿರುಗಿದ್ದವು. ಛಾಯ­ಗ್ರಾಹಕ ದೀಪಕ್‌ ಆರ್ಯ ಅವರು ಈ ಹದ್ದು­ಗಳು ಪುನಃ ಮೂಲ ಸ್ಥಾನಕ್ಕೆ ಬಂದಿದ್ದರ ಕುರಿತು ಚಿತ್ರಗಳನ್ನು ತೆಗೆದು, ಬಹಿರಂಗ ಪಡಿ­ಸಿದ್ದರು. ಆಗ ಸುಮಾರು 30ರಿಂದ 40 ಇದ್ದ ಹದ್ದುಗಳ ಸಂಖ್ಯೆ ಈಗ 8 ರಿಂದ 12ಕ್ಕೆ ಇಳಿದಿದೆ’ ಎಂದು ಅವರು ಕಳವಳ ವ್ಯಕ್ತಪಡಿ­ಸುತ್ತಾರೆ.

ಆದರೆ, ಅರಣ್ಯ ಇಲಾಖೆ ಪ್ರಕಾರ ಈಗಲೂ ರಾಮದೇವರ ಬೆಟ್ಟದ ಸುತ್ತಮುತ್ತ 20ರಿಂದ 25 ರಣಕಾಟಿ ಹದ್ದುಗಳಿವೆ. ಅವು ಆಹಾರ­ಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶ, ಕಾವೇರಿ ವನ್ಯ ಜೀವಿಧಾಮ ಹಾಗೂ ಭದ್ರಾ ಅಭಯಾ­ರಣ್ಯದ ಕಡೆ ಹೋಗುತ್ತವೆ. ಹಾಗಾಗಿ ಅವುಗಳ ನಿತ್ಯ ದರ್ಶನ ರಾಮನಗರದಲ್ಲಿ ಆಗುವುದಿಲ್ಲ. ಆದರೆ ಕೆಲ ದಿನಗಳಲ್ಲಿಯೇ ಅವು ಮತ್ತೆ ಮರಳಿ ಗೂಡಿನತ್ತ (ರಾಮನಗರದತ್ತ) ಬರುತ್ತವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ.

ಮಾರಕವಾಗಿರುವ ‘ಡೈಕ್ಲೊಫಿನಾಕ್‌’: ರಣಹದ್ದುಗಳ ಸಂತತಿ ಅಳಿಯಲು ‘ಡೈಕ್ಲೊಫಿನಾಕ್’ ಎಂಬ ವಿಷಕಾರಿ ರಾಸಾಯನಿಕವೇ ಕಾರಣ ಎಂಬುದು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಯಿಂದ ದೃಢಪಟ್ಟಿದೆ. ಜಾನುವಾರುಗಳನ್ನು ಕಾಡುವ ಉರಿಯೂತ, ಮೂಳೆನೋವು ಹಾಗೂ ಜ್ವರ ಮತ್ತಿತರ ಕಾಯಿಲೆಗಳಿಗೆ ‘ಡೈಕ್ಲೊಫಿನಾಕ್’ ರಾಸಾಯನಿಕವಿರುವ ಔಷಧಿಗಳನ್ನು ವ್ಯಾಪಕ­ವಾಗಿ ಬಳಸಲಾಗುತ್ತಿದೆ. ಈ ಔಷಧಿಯಿಂದ ಉಪಚರಿಸಲ್ಪಟ್ಟ ಜಾನು­ವಾರು­ಗಳ ಕಳೇಬರ­ಗಳನ್ನು ತಿನ್ನುವ ರಣಹದ್ದುಗಳ ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗಗಳು ವೈಫಲ್ಯ­ಗೊಳ್ಳುತ್ತವೆ. ನೋವಿನಿಂದ ಅವು ನರಳಿ ಸಾವ­ನ್ನ­ಪ್ಪುತ್ತಿವೆ. ಹೀಗಾಗಿ ಅವುಗಳ ಸಂತತಿ ಕ್ಷೀಣಿ­ಸುತ್ತಿದೆ ಎಂದು ಅವರು ನೀಡುತ್ತಾರೆ.

ಈ ವಿಷಯ ಗೊತ್ತಾದ ನಂತರ ಜಾನುವಾ­ರುಗಳಿಗೆ ನೀಡುವ ‘ಡೈಕ್ಲೊಫಿನಾಕ್’ ಔಷಧಿ­ಯನ್ನು ಸರ್ಕಾರ ನಿಷೇಧಿಸಿದೆ. ಆದರೆ ಕೆಲ ಖಾಸಗಿ ಔಷಧಿ ವ್ಯಾಪಾರಿಗಳು ಇದನ್ನು ಅಕ್ರಮವಾಗಿ ಮಾರುತ್ತಿದ್ದಾರೆ. ನೋವು ನಿವಾರಕ ಔಷಧಿಗಳಾದ ಇವುಗಳನ್ನು ಗೊತ್ತಿಲ್ಲದೆ ರೈತರು ಜಾನುವಾರುಗಳಿಗೆ ನೀಡುತ್ತಿದ್ದಾರೆ ಎಂದು ವಿವರಿಸುತ್ತಾರೆ.

ರೆಸಾರ್ಟ್‌ ಕಿರಿಕಿರಿ: ಅಪರೂಪದ ರಣಕಾಟಿ ಹದ್ದುಗಳು ನೆಲೆಸಿರುವ ಈ ಪ್ರದೇಶದಲ್ಲಿ 2009–10ರಲ್ಲಿ ರೆಸಾರ್ಟ್‌ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದಕ್ಕೆ ಪರಿಸರ ಪ್ರೇಮಿಗಳ ವಿರೋಧ ವ್ಯಕ್ತವಾಗಿ ಹೋರಾಟದ ರೂಪ ಪಡೆದಿತ್ತು. ಅಗ ಅರಣ್ಯ ಇಲಾಖೆಯು ತನ್ನ ಭೂಮಿಯ ರಕ್ಷಣೆಗೆ ಮುಂದಾಯಿತು. ಆ ಪ್ರಕರಣ ನ್ಯಾಯಾಲಯದಲ್ಲಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

‘ರಣಹದ್ದು ವನ್ಯ ಜೀವಿಧಾಮ’: ಈ ನಡುವೆ ಅಳಿವಿನ ಅಂಚಿನಲ್ಲಿ ಇರುವ ರಣಹದ್ದುಗಳನ್ನು ಸಂರಕ್ಷಿಸಿ, ಪೋಷಿಸುವ ಮಹತ್ವದ ಉದ್ದೇಶದಿಂದ ರಾಮದೇವರ ಬೆಟ್ಟದ 3.46 ಚ.ಕಿ.ಮೀ ಸೇರಿದಂತೆ ಒಟ್ಟು 856 ಎಕರೆ ಪ್ರದೇಶವನ್ನು ‘ರಣಹದ್ದು ವನ್ಯ ಜೀವಿಧಾಮ’ ಎಂದು ಸರ್ಕಾರ 2012ರ ಜನವರಿ 30ರಂದು ಘೋಷಿಸಿದೆ. ಈ ಪ್ರದೇಶವನ್ನು ರಕ್ಷಿ­ಸುವ ಉದ್ದೇಶದಿಂದ ಸುತ್ತಲೂ ತಂತಿ ಬೇಲೆ ಹಾಕಲಾಗಿದೆ. ನೀರಿಗಾಗಿ ಹೊಂಡ ನಿರ್ಮಿಸ­ಲಾಗಿದೆ ಎಂದು ರಾಮನಗರದ ಪ್ರಭಾರ ವಲಯ ಅರಣ್ಯಾಧಿಕಾರಿ ಕಿರಣ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರಣಹದ್ದು ವನ್ಯ ಜೀವಿಧಾಮ ಆದ ನಂತರ ಇಲ್ಲಿನ ರಣಹದ್ದುಗಳಿಗೆ ರಕ್ಷಣೆ ದೊರೆತಿದೆ ಎಂದು ಪರಿಸರ ಪ್ರೇಮಿಗಳು ಭಾವಿಸಿದ್ದರು. ಹದ್ದುಗಳಲ್ಲಿನ ಆತಂಕ ದೂರವಾಗಿ, ಸಂತಾ­ನ್ಪೋ­ತ್ಪತ್ತಿ ನಡೆದು, ಅವುಗಳ ಸಂಖ್ಯೆ ಹೆಚ್ಚಳ­ವಾಗುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ವನ್ಯ ಜೀವಿ­ಧಾಮವನ್ನು ನಾಶಪಡಿಸಲು ಸಂಚು ರೂಪಿ­ಸಿ­ದ್ದಾರೆ ಎಂಬ ಅನುಮಾನಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಪರಿಸರ ವಾದಿಗಳಿಗೆ ಬಂದಿದೆ.

‘10 ವರ್ಷಗಳಿಂದ ಕಣ್ಮರೆ’
‘ನನ್ನ ತಾತ, ಮುತ್ತಾತ ಕಾಲದಿಂದಲೂ ಕೋಲು ಮುರುಕನಕಲ್ಲು ಬೆಟ್ಟದಲ್ಲಿ ರಣಕಾಟಿ ಹದ್ದುಗಳು ವಾಸವಾಗಿದ್ದವು. ಹಳ್ಳಿಗಳಲ್ಲಿ ಜಾನುವಾರುಗಳು ಸತ್ತಾಗ ಅವುಗಳನ್ನು ಹಳ್ಳ, ಕೊಳ್ಳಗಳಲ್ಲಿ ಎಸೆಯಲಾಗುತ್ತಿತ್ತು. ಅವುಗಳನ್ನು 30ರಿಂದ40 ಹದ್ದುಗಳ ಗುಂಪು ಗುಂಪಾಗಿ ಬಂದು ತಿನ್ನುತ್ತಿದ್ದವು. 10 ವರ್ಷದಿಂದೀಚೆಗೆ ಇವು ಈ ಭಾಗದಲ್ಲಿ ಕಣ್ಮರೆಯಾಗಿವೆ. ಕೆಲವರು ರಾಮದೇವರಬೆಟ್ಟದಲ್ಲಿ ನೆಲೆಸಿವೆ ಎನ್ನುತ್ತಾರೆ’ ಎಂದು ಪಾಲಭೋವಿದೊಡ್ಡಿಯ ನಿಂಗೇಗೌಡ ತಿಳಿಸಿದರು.

‘ಕಾಡು ನಾಶ, ಹದ್ದುಗಳು ಮಾಯ’
‘ಹಿಂದೆ ಮಳೆ ಚೆನ್ನಾಗಿ ಆಗುತ್ತಿತ್ತು. ಕಾಡು ಮೇಡು ಜೋರಾಗಿತ್ತು. ಕಾಡು ಪ್ರಾಣಿಗಳು ಆಡು, ಕುರಿಗಳನ್ನು ಹಿಡಿದು ಅರ್ಧ ತಿಂದು ಉಳಿದ ದೇಹವನ್ನು ಬಿಟ್ಟು ಹೋಗುತ್ತಿದ್ದವು. ಅವುಗಳನ್ನು ಈ ರಣಕಾಟಿ ಹದ್ದುಗಳು ತಿನ್ನುತ್ತಿದ್ದವು. ಈಗ ಮಳೆ ಕಡಿಮೆ, ಕಾಡು ನಾಶವಾಗಿದೆ, ಹದ್ದುಗಳು ಮಾಯವಾಗಿವೆ’ ಎಂದು ರಾಮನಗರದ ಚಿಕ್ಕಹೊಂಬಯ್ಯ ಪ್ರತಿಕ್ರಿಯಿಸಿದರು.

‘ನೀರಿನ ಕೊರತೆ’
‘ರಾಮದೇವರ ಬೆಟ್ಟ, ಕೋಲು ಮುರುಕನಕಲ್ಲು ಬೆಟ್ಟ, ಹಂದಿಗುಂದಿ ಬೆಟ್ಟ, ಬೋಳುಗುಡ್ಡೆ ಬೆಟ್ಟಗಳ ಬಳಿ ಹಿಂದೆ ಸದಾ ನೀರು ನಿಲ್ಲುತ್ತಿತ್ತು. ರಣಹದ್ದುಗಳು ಈ ನೀರನ್ನು ಕುಡಿಯುತ್ತಿದ್ದವು. ಈಗ ಮಳೆ ಸರಿಯಾಗಿ ಆಗದ ಕಾರಣ ಇಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ನೀರಿಲ್ಲದ್ದರಿಂದ ಹದ್ದುಗಳು ಬೇರೆಡೆ ಹೋಗಿವೆ’ ಎಂದು ರಾಮನಗರದ ಮಾಗಡಿ ರಸ್ತೆಯ ದೊಡ್ಡತಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT