ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನತ್ತ ಜೀವಜಲ

Last Updated 15 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೇಸಿಗೆಯ ಧಗೆ ಶುರುವಾಗುತ್ತಿದ್ದಂತೆ ದೇಶದೆಲ್ಲೆಡೆ ನೀರಿಗಾಗಿ ಹಾಹಾಕಾರ ಪ್ರಾರಂಭ. ನಗರಗಳಲ್ಲಿ ಟ್ಯಾಂಕರ್‌ನಿಂದ ನೀರು ಒದಗಿಸುವ ದೃಶ್ಯ ಸಾಮಾನ್ಯ. ಇನ್ನು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ನೀರಿಗಾಗಿ ಮೈಲುಗಟ್ಟಲೆ ದಾರಿ ಸವೆಸಿ ಬಸವಳಿಯುತ್ತಿದ್ದಾರೆ. ವರ್ಷವರ್ಷವೂ ಇದೇ ಪರಿಸ್ಥಿತಿ ನಮಗೆ ಕಾಣುತ್ತದೆ. 

ಭೂಮಿಯ ಮೇಲೆ ಅಷ್ಟೊಂದು ನೀರಿದೆ, ಆದರೂ ಏಕೆ ನೀರಿನ ಅಭಾವ ಎನಿಸುವುದು ಸ್ವಾಭಾವಿಕ. ಆದರೆ ಭೂಮಿಯ ಮೇಲೆ ಮೂರನೇ ಎರಡು ಭಾಗದಷ್ಟು ನೀರಿದ್ದರೂ ಬಳಸಲು ಯೋಗ್ಯವಾದದ್ದು ತುಂಬಾ ಕಡಿಮೆ. ಶೇಕಡ 97 ಭಾಗ ಬಳಸಲು ಯೋಗ್ಯವಲ್ಲದ ಸಮುದ್ರ, ಸಾಗರಗಳ ಉಪ್ಪು ನೀರು. ಶೇಕಡ 2ರಷ್ಟು ಭಾಗ ನೀರ್ಗಲ್ಲು ಮತ್ತು ಮಂಜುಗಡ್ಡೆಯಲ್ಲಿ ಬಂದಿ. ಉಳಿದ ಶೇಕಡ 1 ಭಾಗ ಮಾತ್ರ ಬಳಸಲು ಲಭ್ಯ. ಇದು ನದಿ, ಸರೋವರ, ಅಂತರ್ಜಲಗಳಲ್ಲಿನ ನೀರು.

ಬೆಲೆ ಕಟ್ಟಲಾಗದ ಈ ನೀರು ಸಕಲ ಜೀವಿಗಳ ಪಾಲಿನ ಜೀವದ್ರವ್ಯ.ನೀವು ಲೋಟ ಹಿಡಿದು ನೀರು ಕುಡಿಯುವಾಗ ಈ ನೀರು ಎಲ್ಲಿಂದ, ಹೇಗೆ ಬಂದಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅದು ಪಶ್ಚಿಮಘಟ್ಟ ಪ್ರದೇಶದ ಬೆಟ್ಟಗುಡ್ಡಗಳು, ಕಣಿವೆಗಳು, ಹುಲ್ಲುಗಾವಲು, ಶೋಲಾ ಅರಣ್ಯ, ಮರ ಗಿಡಗಳು, ತರಗೆಲೆಗಳನ್ನು ಹೊದ್ದು ಮಲಗಿರುವ ಮಣ್ಣು... ಇವೆಲ್ಲದರ ಕೊಡುಗೆ. ನಡೆದಾಡುವ ಜೀವಿಗಳಿಗೆ ನಡೆದಾಡದ ಜೀವಿಗಳು ಪುಕ್ಕಟೆಯಾಗಿ ನೀಡುತ್ತಿರುವ ಬಳುವಳಿ.

ಮಳೆ ನೀರು, ಬೆಟ್ಟಗಳ ತುದಿಯ ಹುಲ್ಲುಗಾವಲುಗಳಿಂದ ಹರಿದು ಕಣಿವೆಗಳಲ್ಲಿರುವ ಶೋಲಾ ಅರಣ್ಯಗಳನ್ನು ಸೇರುತ್ತದೆ. ಅರಣ್ಯದ ಮರಗಿಡಗಳ ಅಸಂಖ್ಯಾತ ಬೇರುಗಳ ಜಾಲ ಸ್ಪಂಜಿನಂತೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿಂದ, ಶುದ್ಧಗೊಂಡ ಸ್ಫಟಿಕದಂತಹ ನೀರು ಹನಿ ಹನಿಯಾಗಿ ಜಿನುಗುತ್ತಾ, ಝರಿಯಾಗಿ, ತೊರೆಯಾಗಿ, ನದಿಯಾಗಿ ವರ್ಷಪೂರ್ತಿ ಹರಿಯುತ್ತದೆ, ಕೊಳವೆಗಳ ಮೂಲಕ ಮನೆಗಳನ್ನು ಸೇರುತ್ತದೆ.

ಒಂದು ಬಾಟಲ್ ನೀರಿಗೆ 20 ರೂಪಾಯಿಯಂತೆ ಲೆಕ್ಕ ಹಾಕಿದರೆ, ಅರಣ್ಯಗಳು ನೀಡುತ್ತಿರುವ ನದಿ ನೀರಿಗೆ ಲಕ್ಷ ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ಒಂದು ಪಕ್ಷ ಶೋಲಾ ಅರಣ್ಯಗಳು ನಶಿಸಿದರೆ, ನದಿ ಪಾತ್ರದಲ್ಲಿ ಮರಳು ಇಲ್ಲವಾದರೆ, ವರ್ಷಪೂರ್ತಿ ಹರಿಯುವ ಕಾವೇರಿ ನದಿ ಕೇವಲ ಮಳೆ ಬಿದ್ದಾಗ ಮಾತ್ರ ಒಂದೆರಡು ದಿನ ಹರಿಯುತ್ತದೆ. ನಂತರ ಹರಿವು ನಿಲ್ಲುತ್ತದೆ. ಮುಂದೊಂದು ದಿನ ಬತ್ತಿ ಹೋಗುವ ಅಪಾಯದ ಸಾಧ್ಯತೆ ಇದೆ.

ಕೇವಲ ಹತ್ತಾರು ವರ್ಷಗಳ ಹಿಂದೆ ಚೆನ್ನಾಗಿ ಹರಿಯುತ್ತಿದ್ದು ಈಗ ಬತ್ತಿ ಹೋಗಿರುವ ಅರ್ಕಾವತಿ, ಕೊಳಚೆ ನದಿಯಾಗಿ ಮಾರ್ಪಟ್ಟಿರುವ ವೃಷಭಾವತಿ ನದಿಗಳ ನಿದರ್ಶನ ನಮ್ಮ ಮುಂದಿದೆ.ನೀರಿನ ಅಭಾವಕ್ಕೆ ಕಾರಣಗಳು ಹಲವಾರು. ಹತೋಟಿಯಿಲ್ಲದ ಜನಸಂಖ್ಯೆ, ಹರಡುತ್ತಿರುವ ಕೈಗಾರಿಕೆಗಳು, ವ್ಯಾಪಕ ನಗರೀಕರಣ, ಜೀವನಮಟ್ಟ ಸುಧಾರಣೆ,  ವೈಭೋಗದ ಜೀವನಶೈಲಿಯಿಂದ ಆಗುತ್ತಿರುವ ನೀರಿನ ದುಂದುವೆಚ್ಚ, ವ್ಯಯ ಮತ್ತು ಸೋರಿಕೆ ಇವೆಲ್ಲ ಕಾರಣ. ಕ್ರಿಸ್ತಶಕೆಯ ಶುರುವಿನಲ್ಲಿ ಇದ್ದ ದೇಶದ 10 ಕೋಟಿ ಜನಸಂಖ್ಯೆ ಈಗ 125 ಕೋಟಿ ದಾಟಿ ಮುಂದೆ ಸಾಗಿದೆ. ಆದರೆ ನೀರು ಮಾತ್ರ ಅಂದಿಗಿಂತ ಹೆಚ್ಚಾಗಿಲ್ಲ.

ಭೂತಾಪಮಾನ ಏರಿಕೆಯಿಂದ ಆದ ಹವಾಮಾನ ಬದಲಾವಣೆಯಿಂದಾಗಿ ಮಳೆ ದಿನಗಳು ಕಡಿಮೆಯಾಗುತ್ತಿವೆ, ಬರಗಾಲ ಹಿಗ್ಗುತ್ತಿದೆ. ಜೀವನದಿಗಳು, ನೀರಿನ ಮೂಲಗಳು ಬತ್ತುತ್ತಿವೆ. ಪ್ಲಾಸ್ಟಿಕ್‌ ಎಲ್ಲೆಡೆ ನೀರಿನ ಹರಿವನ್ನು ತಡೆದು ಕೊಳಚೆ ನಿರ್ಮಿಸುತ್ತಿದೆ. ಗೃಹ, ಕೃಷಿ ಮತ್ತು ಕೈಗಾರಿಕೆಗಳ ವಿಷಕಾರಕ ರಾಸಾಯನಿಕ ತ್ಯಾಜ್ಯ ಮತ್ತು ಮಲ ಮೂತ್ರವು ನದಿ ನೀರು ಮತ್ತು ಅಂತರ್ಜಲವನ್ನು ಸೇರಿ ಕಲುಷಿತಗೊಳಿಸುತ್ತಿವೆ. ಯಾವ ನದಿಯಿಂದ ನಾವು ನೀರು ಕುಡಿಯುತ್ತೇವೋ ಅದೇ ನೀರಿಗೆ ವಿಷಪೂರಿತ ತ್ಯಾಜ್ಯ ತುಂಬುತ್ತಿರುವುದು ದುರಂತ.

ದಿನದಿಂದ ದಿನಕ್ಕೆ ನೀರಿನ ಬಳಕೆ ಮತ್ತು ಬೇಡಿಕೆ ಪ್ರಮಾಣ ಹೆಚ್ಚಾಗಿ ಲಭ್ಯತೆಯ ಪ್ರಮಾಣ ಕುಸಿಯುತ್ತಿದೆ. ಜಲಾಶಯಗಳಲ್ಲಿ ಹೂಳು ಹೆಚ್ಚಾಗಿ ನೀರಿನ ಸಂಗ್ರಹ ಪ್ರಮಾಣ ಇಳಿಕೆಯಾಗುತ್ತಿದೆ. ಭೂ ಒಡಲ ನೀರು ಖಾಲಿಯಾಗುತ್ತಾ ಅಂತರ್ಜಲ ಪಾತಾಳದತ್ತ ಮುಖ ಮಾಡುತ್ತಿದೆ. ನೀರಿನ ಅಳಿವಿನ ಕ್ಷಣಗಣನೆ ಶುರುವಾಗಿದೆ. ನೀರಿನ ಉಳಿವಿಗೆ ತ್ವರಿತ ಕ್ರಮಗಳ ಅಗತ್ಯವಿದೆ.

ನದಿಗಳ ಜೋಡಣೆ, ಅಣೆಕಟ್ಟುಗಳ ನಿರ್ಮಾಣ, ನದಿಗಳ ಪುನರುಜ್ಜೀವನ, ಅಂತರ್ಜಲ ಪುನಶ್ಚೇತನ, ಮಳೆನೀರು ಸಂಗ್ರಹ, ಕೆರೆ ಕಟ್ಟೆಗಳಲ್ಲಿ ನೀರು ತುಂಬಿಸಿ ಇಟ್ಟುಕೊಳ್ಳುವುದು, ತ್ಯಾಜ್ಯ ನೀರಿನ ಮರು ಬಳಕೆ, ಜಲಮಾಲಿನ್ಯ ನಿಯಂತ್ರಣ, ಸುಧಾರಿತ ನೀರಾವರಿ ಪದ್ಧತಿಗಳ ಅಳವಡಿಕೆ, ಕೃಷಿಯಲ್ಲಿ, ಗೃಹ ಉಪಯೋಗಗಳಲ್ಲಿ, ಕೈಗಾರಿಕೆಗಳಲ್ಲಿ ನೀರು ಪೋಲು ತಡೆಗಟ್ಟುವಿಕೆ, ಪಶ್ಚಿಮಘಟ್ಟಗಳ ಹುಲ್ಲುಗಾವಲು ಹಾಗೂ ಶೋಲಾ ಅರಣ್ಯಗಳ ಸಂರಕ್ಷಣೆ, ಕೊಳವೆಬಾವಿ ಕೊರೆತದ ಮೇಲೆ ನಿಯಂತ್ರಣದಂತಹ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ.

ನೀರಿನ ಮಹತ್ವ ಮತ್ತು ಸಮರ್ಪಕ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಕಾರ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಮತ್ತು ಪಾತ್ರ ಮಹತ್ವದ್ದು. ವೈಯಕ್ತಿಕ ಮಟ್ಟದಲ್ಲಿ ಪ್ರತಿ ನಾಗರಿಕರ ಪಾತ್ರ ಸಹ ಪ್ರಮುಖವಾದುದು. ಈ ನಿಟ್ಟಿನಲ್ಲಿ, ಜನ ಸ್ವಯಂಪ್ರೇರಿತರಾಗಿ ಸರಳ ಜೀವನ ರೂಢಿಸಿಕೊಳ್ಳಬೇಕಾದುದು ಅತ್ಯವಶ್ಯಕ.

ಮಹಾತ್ಮ ಗಾಂಧಿ ಹೇಳಿದ್ದ ಈ ಮಾತು ಈಗ ಹೆಚ್ಚು ಪ್ರಸ್ತುತವೆನಿಸುತ್ತಿದೆ: ‘ಭೂಮಿಯು ಪ್ರತಿ ಮನುಷ್ಯನ ಅಗತ್ಯ ಪೂರೈಸುವಷ್ಟು ನೀಡಬಲ್ಲದೇ ಹೊರತು ಆತನ  ದುರಾಸೆ ನೀಗುವಷ್ಟನ್ನಲ್ಲ. ಯಾವಾಗ ನಾವು ಅಗತ್ಯಕಿಂತ ಹೆಚ್ಚು ತೆಗೆದುಕೊಳ್ಳುತ್ತೇವೆಯೋ ಆಗ ಅದು ಬೇರೆಯವರ ಪಾಲಿನಿಂದ ಪಡೆದದ್ದಾಗಿರುತ್ತದೆ. ಮುಂದಿನ ಪೀಳಿಗೆಯಿಂದ ಎರವಲು ಪಡೆದದ್ದಾಗಿರುತ್ತದೆ ಅಥವಾ ಪರಿಸರ ಮತ್ತು ಇತರ ಜೀವಸಂಕುಲಗಳ ನಾಶದಿಂದ ಪಡೆದದ್ದಾಗಿರುತ್ತದೆ’.

ನೀರು ಎಷ್ಟು ತೆಗೆದರೂ ಸಿಗುವ, ಮಿತಿಯೇ ಇಲ್ಲದ ಸಂಪನ್ಮೂಲವಲ್ಲ. ಭೂಮಿಯೇನೂ ಅಕ್ಷಯ ಪಾತ್ರೆಯಲ್ಲ. ನೀರು ನವೀಕರಿಸಿಕೊಳ್ಳಬಹುದಾದ ಸಂಪನ್ಮೂಲ ಮಾತ್ರ. ಅದು ಬ್ಯಾಂಕ್ ಖಾತೆಯಲ್ಲಿ ಇಟ್ಟ ಹಣದ ಹಾಗೆ. ತೆಗೆಯಬಹುದು, ಆದರೆ ತೆಗೆದಷ್ಟನ್ನು ಮತ್ತೆ ಹಾಕುತ್ತಿರಬೇಕು. ಆಗ ಮಾತ್ರ ಸಾರ್ವಕಾಲಿಕವಾಗಿ ಉಪಯೋಗಿ ಸಬಹುದು. ಭವಿಷ್ಯಕ್ಕೆ ಉಳಿಸಿಕೊಳ್ಳಬಹುದು.

ಭೂಮಿ ತಾಯಿಯ ಒಡಲಿನಿಂದ ನೀರು ವೇಗವಾಗಿ ಖಾಲಿಯಾಗುತ್ತಿದೆ, ಕಾಲ ಮಿಂಚುವ ಮುನ್ನ, ಪರಿಸ್ಥಿತಿ ಕೈಜಾರುವ ಮುನ್ನ ಪ್ರತಿ ಹನಿ ನೀರನ್ನೂ ರಕ್ಷಿಸಬೇಕಾಗಿದೆ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಹೊಣೆ. ಏಕೆಂದರೆ ನಮ್ಮ ಕೈಯಲ್ಲಿ ಇಂದು ನಮ್ಮ ಭವಿಷ್ಯ ಮಾತ್ರವಲ್ಲ, ನಮ್ಮೊಂದಿಗೆ ಈ ಭೂಮಿಯನ್ನು ಹಂಚಿಕೊಂಡಿರುವ ಉಳಿದೆಲ್ಲ ಜೀವಜಂತುಗಳ ಭವಿಷ್ಯವೂ ಇದೆ.
(ಲೇಖಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT