ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶವಾದಿ ರಾಜಕಾರಣ...

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣಾ ಫಲಿತಾಂಶ ಹೊರಬಿದ್ದ ನಂತರದ ಬೆಳವಣಿಗೆಗಳಿಂದ ಅವಕಾಶವಾದಿ ರಾಜಕಾರಣದ ಮತ್ತೊಂದು ಮಜಲು ರಾಜ್ಯದಲ್ಲಿ ಅನಾವರಣಗೊಂಡಿದೆ. ಜನಾಭಿಪ್ರಾಯಕ್ಕೆ ವಿರುದ್ಧ ನೆಲೆಯಲ್ಲಿ ಕೂಡಿಕೆಯ ಕಸರತ್ತು ನಡೆದಿದೆ.

ವಿಧಾನಸಭೆಯಲ್ಲಿ ಸಂಖ್ಯಾಬಲ ಸಮೀಕರಣಕ್ಕೆ ಹಾಗೂ ತಮ್ಮ ಪಕ್ಷದ ಶಾಸಕರನ್ನು ಅನ್ಯರ ಸೆಳೆತದಿಂದ ದೂರ ಇಡಲು ವೇದಿಕೆಯಾಗುತ್ತಿದ್ದ ರೆಸಾರ್ಟ್‌ಗಳು, ಈಗ ಕಾರ್ಪೊರೇಟರುಗಳ ತಲೆಕಾಯುವ ತಾಣಗಳಾಗಿರುವುದು ವಿಪರ್ಯಾಸದ ಸಂಗತಿ. ಅಧಿಕಾರಕ್ಕಾಗಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಅಡ್ಡದಾರಿ ಹಿಡಿದಿವೆ.

ಬಿಬಿಎಂಪಿಯಲ್ಲಿ ಸರಳ ಬಹುಮತಕ್ಕೆ ಬೇಕಾದ ಸಂಖ್ಯೆ ದಕ್ಕಿಸಿಕೊಳ್ಳಲು ವಿಫಲವಾಗಿ ಹತಾಶರಾದ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಸಖ್ಯ ಬೆಳೆಸಲು ಮುಂದಾಗಿದ್ದಾರೆ. 198 ಸ್ಥಾನಗಳ ಪೈಕಿ 100 ಸ್ಥಾನ ಪಡೆದು ಗೆಲುವಿನ ಸಂಭ್ರಮದಲ್ಲಿ ಮೈಮರೆತ ಬಿಜೆಪಿ, ಕಾಂಗ್ರೆಸ್‌–ಜೆಡಿಎಸ್‌ ನಡುವಣ ಮೈತ್ರಿ ಕಸರತ್ತಿನಿಂದ ಕಂಗೆಟ್ಟು ಕಣ್ಣು ಬಿಡುತ್ತಿದೆ.

ಈ ಕಂಗಾಲು, ಕಸರತ್ತುಗಳ ನಡುವೆ ಪಕ್ಷೇತರರ ಕಿಮ್ಮತ್ತು ಇದ್ದಕ್ಕಿದ್ದಂತೆ ಏರಿಬಿಟ್ಟಿದೆ. ಆದರೆ ಪ್ರಧಾನ ಪಕ್ಷಗಳ ಅಭ್ಯರ್ಥಿಗಳನ್ನು ಉಪೇಕ್ಷಿಸಿ ಇವರನ್ನು ದಡ ಸೇರಿಸಿದ ಮತದಾರರ ವಿಶ್ವಾಸಕ್ಕೆ ಭಂಗ ಉಂಟಾಗಿದೆ. ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ರೆಸಾರ್ಟ್‌ ರಾಜಕಾರಣಕ್ಕೆ ಇಳಿದದ್ದು ಮತದಾರರಿಗೆ ಮಾಡಿದ ದ್ರೋಹವಲ್ಲದೆ ಬೇರೇನೂ ಅಲ್ಲ. ಪ್ರಧಾನ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗಿಂತ ಇವರು ಭಿನ್ನ ಎಂದು ನಂಬಿ ಮತ ಹಾಕಿದ ಜನರೇ ಇವರಿಗೆ ಬುದ್ಧಿ ಕಲಿಸಬೇಕು.

ರಾಜ್ಯ ರಾಜಕಾರಣಕ್ಕೆ ‘ಆಪರೇಷನ್‌’ (ಕಮಲ) ಎಂಬ ಹೊಸ ಪರಿಭಾಷೆಯನ್ನು ಪರಿಚಯಿಸಿದ ಬಿಜೆಪಿ, ನೂರು ಸ್ಥಾನ ಪಡೆದ ಸಂಭ್ರಮದಲ್ಲಿ ಮೈಮರೆತದ್ದು ಮತ್ತು ಅದನ್ನೇ ಮಹಾಸಾಧನೆ ಎಂದು ಬಿಂಬಿಸಿದ್ದು ಕಾಂಗ್ರೆಸ್‌ಗೆ ಚುಚ್ಚಿತು. ಬರೀ 14 ಸ್ಥಾನ ಪಡೆದು ಹತಾಶೆಗೆ ಒಳಗಾಗಿದ್ದ ಜೆಡಿಎಸ್‌ ಎದುರು ಅಸ್ತಿತ್ವದ ಪ್ರಶ್ನೆ ಇಟ್ಟಿತು. ಈ ಎರಡೂ ಪಕ್ಷಗಳ ಮುಖಂಡರ ಮನದಲ್ಲಿ ಮೈತ್ರಿಯ ಹೊಂಗನಸು ಮೂಡಲು ಈ ಅಂಶಗಳೇ ಕಾರಣವಾದವು.

2008ರಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಮೂರು ಮತಗಳ ಕೊರತೆ ಬಿದ್ದಾಗ ಬಳ್ಳಾರಿಯ ರೆಡ್ಡಿ ಪಟಾಲಂ ಮಿಂಚಿನ ಕಾರ್ಯಾಚರಣೆಗೆ ಇಳಿಯಿತು. ರೆಸಾರ್ಟ್ ರಾಜಕಾರಣ ಪರಿಚಯವಾದುದು ಕೂಡ ಆಗಲೇ. ಹಣಬಲದ ಆಟ, ಮೋಜು–ಮಸ್ತಿಗಳಿಂದ ಶಾಸಕರನ್ನು ಸೆಳೆಯುವ ಪರಿಪಾಠ ಹೆಚ್ಚಿತು. ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬಲಗೈ ಬಂಟರಂತಿದ್ದ ರೆಡ್ಡಿ ಬಳಗ ಬಳಿಕ ಹೇಗೆ ಸೆರಗಿನ ಕೆಂಡವಾಯಿತು ಎಂಬುದು ರಾಜ್ಯದ ಜನರಿಗೆ ತಿಳಿದಿದೆ.

ಈಗ ಬಿಬಿಎಂಪಿ ಮಟ್ಟದಲ್ಲಿ ಕಾಂಗ್ರೆಸ್ಸಿನ ಬೈರತಿ ಬಸವರಾಜ್‌, ಮುನಿರತ್ನ, ಜೆಡಿಎಸ್‌ನ ಜಮೀರ್‌ ಅಹ್ಮದ್‌ ಖಾನ್, ಟಿ.ಎ. ಶರವಣ, ಕೆ.ಗೋಪಾಲಯ್ಯ ಥರದವರು ಈ ಎರಡೂ ಪಕ್ಷಗಳ ಪ್ರಭಾವಿ ನಾಯಕರ ಆಪ್ತವಲಯ ಸೇರಿ, ದಾಳ ಉರುಳಿಸುತ್ತಿದ್ದಾರೆ. ನಮ್ಮ ನಾಯಕರು ಇತಿಹಾಸದಿಂದ ಪಾಠ ಕಲಿತಿಲ್ಲ ಎಂಬುದಕ್ಕೆ ಈ ಬೆಳವಣಿಗೆಗಳು ತಾಜಾ ನಿದರ್ಶನ. ಇವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮಸಿ ಅಂಟಲಾರದು ಎಂಬ ಖಾತರಿ ಇದೆಯೇ?

ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಸಾಧನೆ ಮಾಡಿಲ್ಲ. ಅದರ ‘ವೈಫಲ್ಯದ ಹೊಣೆಯನ್ನು ನಾನೇ ಹೊರುತ್ತೇನೆ’ ಎಂದು ಫಲಿತಾಂಶ ಹೊರಬಿದ್ದ ಕೂಡಲೇ ಮುಖ್ಯಮಂತ್ರಿ ಪ್ರತಿಕ್ರಿಯಿಸಿ ಪ್ರಬುದ್ಧತೆ ಮೆರೆದಿದ್ದರು. ಅಂಥವರು ಬೈರತಿ–ಮುನಿರತ್ನ ಜೋಡಿ ಆಟಕ್ಕೆ ತಲೆಆಡಿಸುತ್ತಿರುವುದು ರಾಜಕೀಯ ವೈರುಧ್ಯ.

ಧರ್ಮಸಿಂಗ್‌ ನೇತೃತ್ವದ ಸರ್ಕಾರವನ್ನು ಉರುಳಿಸಿ ಬಿಜೆಪಿ ಜತೆ ಕೂಟ ಕಟ್ಟಿದ ಜೆಡಿಎಸ್‌ ವರಿಷ್ಠರ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಏಕಾಏಕಿ ವರಸೆ ಬದಲಿಸಿದ್ದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಜೆಡಿಎಸ್ ಒಳಗಿದ್ದವರು, ಆ ಪಕ್ಷದ ವರಿಷ್ಠರ ನಡೆಯನ್ನು ಖುದ್ದು ಕಂಡವರು, ಅದರ ಬಿಸಿ ಉಂಡವರು ಸಿದ್ದರಾಮಯ್ಯ. ಕ್ಷಣಿಕ ಲಾಭಕ್ಕಾಗಿ ದೊಡ್ಡ ಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಅನಿವಾರ್ಯ ಇದೆಯೇ?

ಸಮಯಸಾಧಕತನಕ್ಕೆ ಹೆಸರಾದ ಜೆಡಿಎಸ್‌, ಬಿಬಿಎಂಪಿ ಚುನಾವಣೆಯಲ್ಲಿ ಮತದಾರ ನೀಡಿದ ಆಘಾತದಿಂದ ತತ್ತರಿಸಿತ್ತು. ಇದರಿಂದ ಹತಾಶೆಗೊಂಡ ಕುಮಾರಸ್ವಾಮಿ, ಬೆಂಗಳೂರಿನ ವ್ಯವಹಾರಗಳಲ್ಲಿ ಇನ್ನು ಮುಂದೆ ತಲೆಹಾಕುವುದಿಲ್ಲ ಎಂಬರ್ಥದಲ್ಲಿ ವೈರಾಗ್ಯ ಪ್ರದರ್ಶಿಸಿದ್ದರು. ನಗರದ ಮತದಾರರ ವಿವೇಚನಾಶಕ್ತಿಯನ್ನು ಅಣಕಿಸುವಂತೆ ಮಾತನಾಡಿದ್ದರು. ಅದರ ಬೆನ್ನಿಗೇ ತಮ್ಮ ಪಕ್ಷದ ಕಾರ್ಪೊರೇಟರ್‌ಗಳನ್ನು ರೆಸಾರ್ಟ್‌ಗೆ ರವಾನಿಸಿದರು.

ಅಂದರೆ ಅವರ ಮೇಲೆ ವಿಶ್ವಾಸ ಇಲ್ಲ ಎಂದಾಯಿತಲ್ಲವೇ? ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಹೀಯಾಳಿಸುತ್ತಲೇ ಎರಡೂ ಪಕ್ಷಗಳೊಂದಿಗೆ ಹೊಂದಾಣಿಕೆಯ ಲಾಭ–ನಷ್ಟಗಳ ಗುಣಾಕಾರ ಮಾಡುವುದು ಎಂಥ ರಾಜಕಾರಣ? ಇಂಥ ನಡೆ ಪದೇ ಪದೇ ಪುನರಾವರ್ತನೆ ಆಗುವುದರಿಂದ ಪಕ್ಷದ ನಿಷ್ಠರಲ್ಲಿ  ರೇಜಿಗೆ ಹುಟ್ಟುತ್ತದೆ.

ನೂರು ಸ್ಥಾನ ಗೆದ್ದರೂ ಮೇಯರ್‌ ಸ್ಥಾನ ದಕ್ಕಿಸಿಕೊಳ್ಳಲು ಬೇಕಾದ ಸಂಖ್ಯಾಬಲ ಹೊಂದಿಸಲಾಗದೆ ಒದ್ದಾಡುತ್ತಿರುವ ಬಿಜೆಪಿಗೆ ಈ ಸ್ಥಿತಿ ಬರಲು ಕಾರಣ ಯಾರು? ನಾಲ್ವರು ಪಕ್ಷೇತರ ಸದಸ್ಯರು ಬಿಜೆಪಿ ಸೇರಲು ಬಯಸಿ ಆರ್‌. ಅಶೋಕ ಅವರನ್ನು ಸಂಪರ್ಕಿಸಿದಾಗ ಅವರು ಸಂಯಮದಿಂದ ನಡೆದುಕೊಂಡಿದ್ದರೆ, ರಾಜಕೀಯ ಜಾಣ್ಮೆ ಮೆರೆದಿದ್ದರೆ ಆ ಪಕ್ಷಕ್ಕೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್‌–ಜೆಡಿಎಸ್‌ ನಡುವೆ ಮೈತ್ರಿ ಮೂಡುವುದು ಸಾಧ್ಯವಿಲ್ಲ ಎಂದು ಭಾವಿಸಿ  ಅವರು ‘ಸಾಮ್ರಾಟ’ನಂತೆ ವರ್ತಿಸಿದ ಫಲವನ್ನು ಬಿಜೆಪಿ ಈಗ ಉಣ್ಣುತ್ತಿದೆ.

ಅಶೋಕರ ಮುಖ ನೋಡಿ ನಗರದ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂಬಂತೆ ಆ ಪಕ್ಷದ ಹಿರಿಯ ನಾಯಕರೇ ನಡೆದುಕೊಂಡಿದ್ದರಿಂದ ಅಶೋಕರ ತಲೆ ಭುಜ ಬಿಟ್ಟು ಮೇಲಕ್ಕೆ ಹೋಗಿರಲೂಬಹುದು. ಸಂಭ್ರಮದ ಅಲೆಯಲ್ಲಿ ತೇಲಿದ ಅನಂತಕುಮಾರ್‌, ಸದಾನಂದ ಗೌಡ, ಸುಬ್ಬಣ್ಣ ಮೊದಲಾದವರು ಈಗ ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ನಡುವಣ ಮೈತ್ರಿ ಪ್ರಸ್ತಾಪವನ್ನು ಕಟುವಾಗಿ ಟೀಕಿಸಿದ್ದ ಸದಾನಂದ ಗೌಡರೇ ಬಳಿಕ ಎಚ್‌.ಡಿ.ದೇವೇಗೌಡರ ಮನೆಗೆ ಓಡಿ ಆ ಪಕ್ಷದ ಬೆಂಬಲ ಯಾಚಿಸಬೇಕಾಯಿತು. ಜೆಡಿಎಸ್‌ನವರು ಬಿಜೆಪಿಗೂ ಕೈಕೊಟ್ಟಿದ್ದರಲ್ಲವೇ? ಕಾಂಗ್ರೆಸ್‌ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅಪರಾಧ ಎನ್ನುವುದಾದರೆ ಬಿಜೆಪಿಗೂ ಆ ಮಾತು ಏಕೆ ಅನ್ವಯಿಸುವುದಿಲ್ಲ?

ಈ ಎಲ್ಲ ಬೆಳವಣಿಗೆಗಳು ತೀವ್ರ ಹತಾಶೆಗೆ ಒಳಗಾಗಿದ್ದ ಜೆಡಿಎಸ್‌ಗೆ ಮರುಜೀವ ನೀಡುವ ಸಾಧ್ಯತೆ ಇದೆ. ಕಿಂಗ್‌ ಮೇಕರ್‌ ಪಾತ್ರ ವಹಿಸಬೇಕೆಂಬ ಅವರ ಆಸೆಗೆ ನೀರು ಎರೆದಿದೆ. ನಗರದ ಮಟ್ಟಿಗೆ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೊಂದು ಅವಕಾಶ  ಮನೆಬಾಗಿಲಿಗೆ ಬಂದಿದೆ. ಪಕ್ಷೇತರರಿಗಂತೂ ಭಾಗ್ಯದ ಬಾಗಿಲು ತೆರೆದುಕೊಂಡಿದೆ. ಆದರೆ ಮೈತ್ರಿ ಯಾವ ಪಕ್ಷಗಳ ನಡುವೆಯೇ ಮೂಡಲಿ, ಮೇಯರ್‌ ಯಾರೇ ಆಗಲಿ, ಅದರಿಂದ ದೂರಗಾಮಿ ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಯೋಜನ ಆಗಲಾರದು. ಈ ಪಕ್ಷಗಳಿಗೆ ಅದು ಆತ್ಮಹತ್ಯಾತ್ಮಕ. ಲಾಭ ಏನಿದ್ದರೂ ಜೆಡಿಎಸ್‌ಗೆ ಅಷ್ಟೇ.

ಲೇಖಕ ಮಾಜಿ ಮಾಧ್ಯಮ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT