ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಪೂರ್ವ ಮಗು: ಎಚ್ಚರ ಅಗತ್ಯ

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಯಾವುದಾದರೂ ಕುಟುಂಬದಲ್ಲಿ ಮಗು ಹುಟ್ಟಿದೆ ಎಂಬ ಸುದ್ದಿ ತಿಳಿದರೆ ತಕ್ಷಣ ಕೇಳುವ ಪ್ರಶ್ನೆ ಮಗು ಗಂಡೋ ಹೆಣ್ಣೊ ಎಂದು. ಆನಂತರ ಕೇಳುವ ಪ್ರಶ್ನೆ, ತಾಯಿ ಮಗು ಚೆನ್ನಾಗಿದ್ದಾರ? ನಂತರ ಸಿಜೆರಿಯನ್ನೊ ನಾರ್ಮಲ್ಲೊ? ಎಂದು. ಆದರೆ ಈಗ ಮತ್ತೊಂದು ಪ್ರಶ್ನೆ ಕೇಳುತ್ತಾರೆ. ಅದೆಂದರೆ ಮಗುವಿಗೆ ಪೂರ್ತಿ ಟೈಮ್ ಆಗಿತ್ತಾ? ಇಲ್ಲವಾ? ಎಂದು. ಇಲ್ಲಿ ಟೈಮ್‌ ಎಂದರೆ ಒಂಬತ್ತು ತಿಂಗಳು ತುಂಬಿ ಹುಟ್ಟಿದ್ದಾ ಎಂದರ್ಥ.

ನವಜಾತ ಶಿಶು ಎಂದರೆ ಒಂಬತ್ತು ತಿಂಗಳು ತಾಯಿ ಗರ್ಭದಲ್ಲಿ ಇದ್ದ ಮಗು  ಹೆರಿಗೆಯಾಗಿ ಈ ಪ್ರಪಂಚಕ್ಕೆ ಬರುವುದು.  ಭಾರತ ಸೇರಿದಂತೆ ಹಲವು ಅಭಿವೃದ್ಧಿಶೀಲ  ಮತ್ತು ಹಿಂದುಳಿದ ದೇಶಗಳಲ್ಲಿ ಅವಧಿಪೂರ್ವ ಮಕ್ಕಳು ಹುಟ್ಟುತ್ತಿರುವುದು ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. 

ಹೀಗೆ ಅವಧಿಗೂ ಮೊದಲೇ ಹುಟ್ಟುತ್ತಿರುವ ಮಕ್ಕಳಲ್ಲಿ ಹಲವು ಮೃತಪಡುತ್ತಿವೆ. ಇದು ಅಧಿಕ ಶಿಶು ಮರಣ (High Infant Morta*ity)ಗೆ ಕಾರಣವಾಗುತ್ತಿದೆ. ಅವಧಿ ಪೂರ್ವ ಮಕ್ಕಳ ಜನನದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಅವಧಿಪೂರ್ವ ಮಕ್ಕಳ ಜನನ ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗುತ್ತಿದೆ. 

ಯಾವ ಮಕ್ಕಳು ಅವಧಿಪೂರ್ವ: 40 ವಾರ ತಾಯಿಯ ಉದರದಲ್ಲೇ ಇದ್ದು ಆನಂತರ ಹೆರಿಗೆಯಾದರೆ ಅದನ್ನು ಸಹಜ  ಮಗುವಿನ ಜನನ ಎಂದು ಕರೆಯಲಾಗುತ್ತದೆ. ಆದರೆ ಯಾವ ಮಕ್ಕಳು 37 ವಾರಗಳಿಗೂ ಮೊದಲು ಜನಿಸುತ್ತಾರೋ ಅದನ್ನು ಅವಧಿಪೂರ್ವ ಎಂದು ಪರಿಗಣಿಸಲಾಗುತ್ತದೆ.  ಈ ಮಕ್ಕಳು ಸೋಂಕುಗಳಿಗೆ ಅತಿ ಬೇಗನೇ ತುತ್ತಾಗುತ್ತಾರೆ.

ಅವರ ಅಂಗಾಂಗ ಸರಿಯಾಗಿ ಬೆಳೆದಿರುವುದಿಲ್ಲ. ಅಲ್ಲದೆ  ದೀರ್ಘ ಮತ್ತು ಅಲ್ಪಾವಧಿಯಲ್ಲಿ ಕಾಯಿಲೆಗೆ ಒಳಗಾಗುತ್ತಾರೆ. ಕೆಲವರು ಆಗದೆಯೂ ಇರಬಹುದು. ಆದರೆ ಎಲ್ಲ ಅವಧಿಪೂರ್ವ ಮಕ್ಕಳು ಹೀಗೆ ರೋಗಕ್ಕೆ  ತುತ್ತಾಗುತ್ತಾರೆ ಎಂದರ್ಥವಲ್ಲ. ಕೆಲವು ಮಕ್ಕಳಿಗೆ ಒಂದೇ ವಾರದಲ್ಲಿ ಕಾಯಿಲೆ ಕಾಣಿಸಬಹುದು.

ಕಡಿಮೆ ಅವಧಿಯ ಮಕ್ಕಳ ಸಮಸ್ಯೆಗಳು
*ಹೃದಯ ಸಮಸ್ಯೆ, ಉಸಿರಾಟಕ್ಕೆ ತೊಂದರೆ, ಕಡಿಮೆ ರಕ್ತದ ಒತ್ತಡ, ಮೆದುಳಿನಲ್ಲಿ ರಕ್ತಸ್ರಾವ, ದೇಹದ   ಉಷ್ಣಾಂಶ  ಕಡಿಮೆಯಾಗುವುದು

*ಉದರದಲ್ಲಿ ಸಮಸ್ಯೆ, ರಕ್ತದ ಕೊರತೆ, ಜಾಂಡೀಸ್‌, ರಕ್ತದಲ್ಲಿ ಕಡಿಮೆ ಸಕ್ಕರೆ

*ರಕ್ತದ ನಂಜು

ದೀರ್ಘಾವಧಿ ಸಮಸ್ಯೆಗಳು: ಸೆರೆಬ್ರಲ್ ಪಾಲ್ಸಿ, ಅರಿವಿನ ಕೌಶಲ ಇಲ್ಲದಿರುವಿಕೆ, ಕಿವುಡು ಮತ್ತು ಮೂಗತನ, ವರ್ತನೆ ಮತ್ತು ಮನೋ ಸಮಸ್ಯೆ
ಅವಧಿಪೂರ್ವ ಜನನಕ್ಕೆ ಕಾರಣಗಳೇನು?

*ಈ ಹಿಂದೆಯೂ ಅವಧಿಪೂರ್ವ ಮಗು ಜನಿಸಿದ್ದರೆ

*ಮೂತ್ರದ ಮತ್ತು ಯೋನಿಯ ಸೋಂಕಿಗೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ

*ಅವಳಿ ಮತ್ತು ತ್ರಿವಳಿ ಮಕ್ಕಳು ಇದ್ದರೆ

*ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದಿದ್ದರೆ

*ಒಂದು ಗರ್ಭಕ್ಕೂ ಮತ್ತೊಂದಕ್ಕೂ ಸರಿಯಾದ ಅಂತರ ಕಾಪಾಡದಿದ್ದರೆ

*ಮದ್ಯಸೇವನೆ, ಧೂಮಪಾನ, ಮಾದಕವಸ್ತುಗಳ ಬಳಕೆ 

*ರಕ್ತದ ಕೊರತೆ, ಅತಿ ಯಾದ ದೇಹದ ತೂಕ

*ಅಧಿಕ ರಕ್ತದ  ಒತ್ತಡ, ಮಧುಮೇಹ, ಚಿಂತೆ, ದೇಹಕ್ಕೆ ಗಾಯ, ಹಲವು ಬಾರಿ ಗರ್ಭಪಾತವಾಗಿದ್ದರೆ

ಯಾವ ರೀತಿ ಚಿಕಿತ್ಸೆ ಅಗತ್ಯ
ಅವಧಿ ಪೂರ್ವ ಮಕ್ಕಳನ್ನು ವಿಶೇಷವಾದ ತುರ್ತು ನಿಗಾ ಘಟಕದಲ್ಲಿ (ಎನ್‌ಐಸಿಯು)ಇಟ್ಟು ನೋಡಿಕೊಳ್ಳಲಾಗುತ್ತದೆ. ಅಲ್ಲಿ ಕೆಲ ವಾರ ಇಲ್ಲವೇ ತಿಂಗಳು ಇಡಬೇಕಾಗುತ್ತದೆ. ವೈದ್ಯಕೀಯ ಬೆಂಬಲದ ನೆರವು ಇಲ್ಲದೆಯೂ ಮಗು ಇರಬಲ್ಲದು ಎಂಬುದು ಖಚಿತವಾಗುವರೆಗೆ ಎನ್‌ಐಸಿಯುನಲ್ಲಿ ಇಡಬೇಕು.

*ಇನ್ಕುಬೇಟರ್‌
ಅವಧಿಪೂರ್ವ ಜನಿಸಿದ ಮಕ್ಕಳ ದೇಹದಲ್ಲಿ ಸಾಕಷ್ಟು ಪ್ರಮಾಣದ ಕೊಬ್ಬು ಇರುವುದಿಲ್ಲ.  ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತಾ ಹೋಗು ತ್ತದೆ. ಇದು ಅಪಾಯದ ಮಟ್ಟಕ್ಕೂ ತಲುಪುತ್ತದೆ. ಇಂತಹ ಮಕ್ಕಳನ್ನು ಇನ್ಕುಬೇಟರ್‌ನಲ್ಲಿ ಇಡಲಾಗುತ್ತದೆ. ಇದೊಂದು ಉಷ್ಣದ ಹಾಸಿಗೆಯಾಗಿದ್ದು, ಮಗುವಿನ ದೇಹದ ಉಷ್ಣಾಂಶ ಕಾಪಾಡುತ್ತದೆ.

*ಮಗುವಿನ ತಪಾಸಣೆ
ಮಗು ಜನಿಸಿದ ಕೂಡಲೇ ಮಗುವಿಗೆ ಕೆಲವು ಪರೀಕ್ಷೆಗಳನ್ನು ಮಾಡಬೇಕಾಗು ತ್ತದೆ. ರಕ್ತಪರೀಕ್ಷೆ, ಎಕ್ಸರೆ, ಎಕೊಕಾರ್ಡಿಯಾಗ್ರಾಂ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌, ಉಸಿರಾಟ ಮತ್ತು ಹೃದಯದ ಪರೀಕ್ಷೆ ಮಾಡಲಾಗುತ್ತದೆ. ಕರಳು, ದೃಷ್ಟಿ, ಶ್ವಾಸಕೋಶ, ಆಂತರಿಕ ಸ್ರಾವ, ಪಚನಕ್ರಿಯೆ ತಪಾಸಣೆ ಮಾಡಬೇಕು.

*ಕಾಂಗರೂ ಕೇರ್‌
ಇನ್ಕುಬೇಟರ್‌ನಲ್ಲಿ ಮಗು ಇಡುವುದಲ್ಲದೆ  ‘ಕಾಂಗರೂ ಕೇರ್’ ನೀಡಲಾಗುತ್ತದೆ. ಇದರಲ್ಲಿ ಮಗುವಿನ ಚರ್ಮಕ್ಕೆ ತಾಗುವಂತೆ ತಾಯಿ ಬಿಗಿದಪ್ಪಿಕೊಳ್ಳಬೇಕು. ಇದರಿಂದ ಹೃದಯ ಮತ್ತು ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ದೇಹದ ಆಮ್ಲಜನಕ ಸುಧಾರಿಸುತ್ತದೆ.

*ಪೈಪ್‌ಗಳಲ್ಲಿ ಫೀಡಿಂಗ್‌
ಕೆಲವು ಅವಧಿಪೂರ್ವ ಮಕ್ಕಳಿಗೆ ಬಾಯಿ ಮೂಲಕ ಹಾಲು ಅಥವಾ ಇತರ ದ್ರವಗಳನ್ನು  ಕೊಡಲಾಗುವುದಿಲ್ಲ. ಅಂತಹ ವೇಳೆ ಮೂಗಿನ ಮೂಲಕ ದ್ರವಾಹಾರ ನೀಡಲಾಗುತ್ತದೆ.

*ಉಸಿರಾಟದ ಬೆಂಬಲ
ಕೆಲವು ಮಕ್ಕಳಲ್ಲಿ ಶ್ವಾಸಕೋಶದ ಸರಿಯಾದ ಬೆಳವಣಿಗೆಯಾಗಿರುವುದಿಲ್ಲ. ಇಂತಹ ವೇಳೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕು.

*ದ್ರವಗಳ ನಿರ್ವಹಣೆ
ಮಗುವಿನ ದೇಹದಲ್ಲಿ ಕೆಲವು ದ್ರವಗಳು ಸಮತೋಲನ ಇಲ್ಲದಿದ್ದರೆ ಅಪಾಯವಾಗುತ್ತದೆ. ಸೋಡಿಯಂ, ಪೊಟ್ಯಾಶಿಯಂ ಮಟ್ಟವನ್ನು ತೀಕ್ಷ್ಣವಾಗಿ  ಎನ್ಐಸಿಯುನಲ್ಲಿ ನೋಡಿಕೊಳ್ಳಲಾಗುತ್ತದೆ.

*ರಕ್ತದ ವರ್ಗಾವಣೆ
ಕೆಲವು ಮಕ್ಕಳಿಗೆ ಕೆಂಪು ರಕ್ತದ ಕಣಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇಂತಹ ವೇಳೆ ರಕ್ತವನ್ನು ವರ್ಗಾವಣೆ ಮಾಡಬೇಕಾಗುತ್ತದೆ.

*ಬೆಳಕಿನ ಚಿಕಿತ್ಸೆ
ಜಾಂಡೀಸ್‌ ಇರುವ ಮಕ್ಕಳಿಗೆ ವಿಶೇಷ ಬೆಳಕಿನ ಚಿಕಿತ್ಸೆ ನೀಡಬೇಕು. ಇದನ್ನು Bi*rubin *ight treatment ಎಂದು ಕರೆಯಲಾಗುತ್ತದೆ.
ಅವಧಿಪೂರ್ವ ಮಗು ವಾರದ ಲೆಕ್ಕಾಚಾರ, ಅತೀ ಹೆಚ್ಚಿನ ಅವಧಿಪೂರ್ವ ಮಗು, 28 ವಾರಗಳಿಗೂ ಮೊದಲು 

*ಹೆಚ್ಚಿನ ಅವಧಿಪೂರ್ವ
28 ರಿಂದ 32 ವಾರಕ್ಕೂ ಮೊದಲು

*ಸಾಮಾನ್ಯ ಅವಧಿಪೂರ್ವ
32 ರಿಂದ 37 ವಾರ
ಶೇ 90ಕ್ಕೂ ಹೆಚ್ಚಿನ ವಾರಗಳ ಅವಧಿಗೂ ಮೊದಲು ಮಕ್ಕಳು ಹುಟ್ಟುತ್ತಿ ರುವುದು ಬಡದೇಶಗಳಲ್ಲಿ. ಇವುಗಳು ಕೆಲವೇ ದಿನಗಳಲ್ಲಿ ಮೃತಪಡುತ್ತವೆ. ಮುಂದುವರಿದ ದೇಶಗಳ ಶೇ 10 ರಷ್ಟು ಮಕ್ಕಳು ಮಾತ್ರ  ಸಾಯುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ವರದಿ ಹೇಳಿದೆ.

*
ಎನ್ಐಸಿಯುನಲ್ಲಿ ಅಗತ್ಯ ಚಿಕಿತ್ಸೆ
ನಮ್ಮಲ್ಲಿ ತಿಂಗಳಿಗೆ 30 ರಿಂದ 40 ಅವಧಿಗೂ ಮೊದಲೇ ಹುಟ್ಟಿದ  ಮಕ್ಕಳು  ದಾಖಲಾಗುತ್ತವೆ. ಜಾಂಡೀಸ್‌ ಇದ್ದರೆ ಫೋಟೊ ಥೆರಪಿ ಸೇರಿದಂತೆ   ಯಾವ ರೀತಿಯ ಚಿಕಿತ್ಸೆ ಬೇಕು ಅದನ್ನೆಲ್ಲ ನೀಡಲಾಗುತ್ತದೆ. ಇನ್ಕುಬೇಟರ್‌ ಅಗತ್ಯವಿದ್ದರೆ, ಸೋಂಕು ತಡೆ, ಫೀಡಿಂಗ್‌್  ಹೀಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ.

ಐಸಿಯು ಎಂದರೆ ಮೊದಲೇ ಭಾರಿ ಜಾಗ್ರತೆ ಮಾಡಲಾಗುತ್ತದೆ. ಅದರಲ್ಲಿ ಅವಧಿಪೂರ್ವ ಮಕ್ಕಳಾದರಂತೂ ಇನ್ನೂ ಹೆಚ್ಚಿನ ಜಾಗ್ರತೆ ಮಾಡುತ್ತೇವೆ.  ಮಗುವಿಗೆ ಏನಾಗಿದೆ ಎಂಬುದು 3 ರಿಂದ 5 ದಿನಗಳಲ್ಲಿ ತಿಳಿಯುತ್ತದೆ.

ಶೇ 80 ರಿಂದ 90 ರಷ್ಟು ಮಕ್ಕಳು ಬದುಕುತ್ತವೆ. ಮಗುವಿಗೆ ಮೆದುಳು, ಶ್ರವಣ, ಹೃದಯ, ಕಣ್ಣು, ಶ್ವಾಸಕೋಶಕ್ಕೆ ತೊಂದರೆ ಇದ್ದರೆ ಕಂಡುಹಿಡಿಯಲಾಗುತ್ತದೆ.
- ಡಾ.ಗಿರೀಶ್‌, ಎನ್‌ಐಸಿಯು ವೈದ್ಯ
ಅಪೋಲೊ ಆಸ್ಪತ್ರೆ, ಮೈಸೂರು

*
ತುಂಬಾ ಆತಂಕವಾಗಿತ್ತು
‘ಸಾಕಷ್ಟು ಫಾಲೋಅಫ್‌, ಡಾಕ್ಟರ್ ಸಲಹೆ ಹಾಗೂ ಸೂಚನೆ ತೆಗೆದುಕೊಂಡಿದ್ದರೂ ನಮ್ಮ ಮಗು 25 ದಿನ ಮೊದಲೇ ಹುಟ್ಟಿತು. ಇದರಿಂದ ನಮಗಾದ ಆತಂಕ ಹೇಳತೀರದು. ಇನ್ಕುಬೇಟರ್‌ನಲ್ಲಿ ಇಟ್ಟು ಮಗುವಿನ ದೇಹದ ಉಷ್ಣಾಂಶ ಕಾಪಾಡಿದರು.

ತಜ್ಞ ವೈದ್ಯರ ಸಲಹೆ ಪಡೆದು ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ. ಆದರೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲೇಬೇಕು. ಅವಧಿಪೂರ್ಣ ಮಕ್ಕಳನ್ನು  ನವಜಾತ ಶಿಶುವಿಗಿಂತ ಹೆಚ್ಚಿನ ಜಾಗ್ರತೆಯಿಂದ ನೋಡಿಕೊಳ್ಳಬೇಕು.
-ಅವಧಿಪೂರ್ವ ಮಗುವಿನ ಪೋಷಕರು
ಯಲ್ಲಾಪುರ, ಉತ್ತರ ಕನ್ನಡ ಜಿಲ್ಲೆ

*
ಮದಲಿಗಿಂತ ಈಗ ಕಡಿಮೆ
ನಮ್ಮಲ್ಲಿ ನೋಂದಣಿಯಾಗುವ ಗರ್ಭಿಣಿಯರಿಗೆ ಪ್ರತಿ ತಿಂಗಳು ಮತ್ತು 15 ದಿನಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸುತ್ತೇವೆ. ನಮ್ಮ ಆದ್ಯತೆ ನವಜಾತ ಶಿಶು ಜನಿಸಬೇಕು ಎಂಬುದು. ಆದರೂ ಕೆಲವೊಮ್ಮೆ ಅವಧಿಗೂ ಮೊದಲೇ ಮಕ್ಕಳು ಹುಟ್ಟುತ್ತವೆ. ಇದಕ್ಕೆ ಕಾರಣ ಕೆಲವು ಸಾರಿ ತಿಳಿಯುತ್ತದೆ.

ಕೆಲವು ಬಾರಿ ಗೊತ್ತಾಗುವುದಿಲ್ಲ. ಗರ್ಭಿಣಿಯ  ಪ್ರಿಹಿಸ್ಟರಿ, ಹಿಂದಿನ ಡೆಲಿವರಿ, ಆರೋಗ್ಯದ ಬಗೆಗಿನ ಮಾಹಿತಿ ಎಲ್ಲ ತಿಳಿದು ಕೊಳ್ಳಲಾಗುತ್ತದೆ. ಏನೆಲ್ಲ ಮಾಡಿದರೂ ಪ್ರಿಟರ್ಮ್‌ ಬೇಬಿ ಹುಟ್ಟಿದರೆ ಅವರಿಗೆ ನಮ್ಮಲ್ಲಿ ಲಭ್ಯವಿರುವ ಚಿಕಿತ್ಸೆ ನೀಡಲಾಗುತ್ತದೆ.

ಮೊದಲಿಗಿಂತ ಈಗ ಅವಧಿಪೂರ್ವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹಳ್ಳಿಗಳಲ್ಲೂ ಚೆಕ್‌ಅಪ್‌ ಮಾಡಿಸುತ್ತಾರೆ. ಒಂದು ತಿಂಗಳಲ್ಲಿ 1500 ಮಕ್ಕಳು ಹುಟ್ಟಿದರೆ 20 ಮಕ್ಕಳು ಅವಧಿಪೂರ್ವವಾಗಿರುತ್ತವೆ’.
- ಡಾ. ಬಾಲಕೃಷ್ಣ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ
ಸಾರ್ವಜನಿಕ ಆಸ್ಪತ್ರೆ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT