ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನು–ಅವಳೂ...?

ಕಥೆ
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

‘ಯಾಕೋ ಇವತ್ತು ಅವಳು ಸ್ವಲ್ಪ ಬೇಜಾರಿಂದ ಇದ್ದಳಲ್ಲ... ಏನಾಯ್ತು ನೀವೇನಾದರೂ ಹೇಳಿದ್ರಾ’ ಎನ್ನುತ್ತಿದ್ದಂತೆಯೇ ಕೈಲಿದ್ದ ನೀರಿನ ಲೋಟ ಕೆಳಕ್ಕೆ ರಪ್ಪನೆ ಕುಕ್ಕಿ– ‘ನಾನು ಹೇಳೋಕೇನಿದೆ ಈ ಮನೇಲಿ ಹೇಳು? ಎಲ್ಲಾ ನಿಮ್ಮಿಚ್ಛೆ ತಾನೆ, ಇವತ್ತೇನು ನನ್ನ ಕೇಳ್ತಾ ಇದ್ದೀರಲ್ಲ... ಸಾರ್ಥಕ ಆಯ್ತು ನಾನು ಬದುಕಿದ್ದಕ್ಕೆ’ ಎಂದ.

‘ಹಾಗಂದರೆನು? ನಾವು ನಿಮ್ಮನ್ನ ಕಡೆಗಣಿಸಿದ್ದೇವೆ ಅಂತಾನಾ ನೀವ್ ಹೇಳ್ತಿರೋದು?’.

‘ಮತ್ತೇನು ಬಿಡ್ಸಿಬೇರೆ ಹೇಳ್ಬೇಕೆ... ನಾನು ಬರಿ ಸಂಬಳ ತರೋ ಪ್ರಾಣಿ ಅಷ್ಟೇ ಈ ಮನೇಲಿ. ಹೋಗಿ ಅವಳನ್ನೆ ಕೇಳು, ಏನಾಯ್ತು ಮಗಳೇ ಅಂತ...’

‘ಯಾಕೆ ಇಷ್ಟು ಬೇಗ ಬಂದು ಬಿಟ್ಟೆ? ಮುಗೀತಾ ಎಲ್ಲಾ? ಇವತ್ತು ಹೀಗೇಕೆ ಕೂತಿದ್ದೀಯ? ಏನಾಯ್ತು, ನನ್ ಹತ್ರ ಹೇಳೋದ್ ತಾನೆ, ಯಾಕೆ ಸುಮ್ಮನಿದ್ದೀಯ, ನಿನ್ನ ಸ್ನೇಹಿತರು ನಿನ್ನ ಬಗ್ಗೆ ಏನಾದರೂ ಹೇಳಿದರಾ ಹೇಗೆ?’

ಮೊದಲೇ ಬಾಡಿದ್ದ ಅವಳ ಮುಖ ಹಠಾತ್ತನೆ ಹೇಳುತ್ತಿದ್ದವರ ಕಡೆ ಕಣ್ಣಗಲಿಸಿ ಮತ್ತಷ್ಟು ಮಂಕಾಗಿ ಮೈನಡುಗಿತ್ತು. ಅಷ್ಟಕ್ಕೆ ಅವಳಿಗೆ ಇವಳೇಕೆ ಹೀಗಿದ್ದಾಳೆಂದು ಅಲ್ಪಸ್ವಲ್ಪ ತಿಳಿಯಿತು.

‘ಬಿಡು ಅಲ್ಲಿ ವಿಚಾರವನ್ನ ಯಾಕೆ ನೀನು ಸೀರಿಯಸ್ಸಾಗಿ ತಗೊಂಡೆ. ಅವನು ಹೋದ ದಿನವೇ ಅದು ಮುಗಿದ ಅಧ್ಯಾಯ. ಅದನ್ನ ಮತ್ತೆ ಮತ್ತೆ ಯಾಕೆ ತೆಗೀತೀಯ. ಎದ್ದೇಳು, ಹೊತ್ತಾಯ್ತು ಊಟ ಮಾಡಿ ಆರಾಮವಾಗಿ ನಿದ್ದೆ ಮಾಡು, ಎಲ್ಲಾ ಸರಿ ಹೋಗುತ್ತೆ’.

‘ಅದು ಹೇಗೆ ಊಟಮಾಡ್ಲಿ ಹೇಳು. ಹೋದಕಡೆ ಬಂದಕಡೆ ಎಲ್ಲರೂ ಅವನ ಬಗ್ಗೆಯೇ ವಿಚಾರಿಸ್ತಾರೆ. ಅವನ ಬಗ್ಗೆ ನಾನು ಏನೂ ಹೇಳಲಾರೆ. ಆದರೆ ಹೊರಗೆ ನಿಂತಿರುವ ಅವರ ಪ್ರಶ್ನೆಗಳು ನನ್ನನ್ನು ಬಿಡದೆ ಇರಿಯುತ್ತಿವೆ. ಒಳಗೆ ಅವನೂ...’

‘ನೀವು ಅವನಿಂದ ಸ್ವಲ್ಪ ದೂರವೇ ಉಳಿಬೇಕಿತ್ತು ಅಂತ ನಿಮಗೆ ಅನ್ನಿಸಲಿಲ್ಲವೇ? ಅವನ ನಿಮ್ಮ ಸ್ನೇಹದ ಬಗ್ಗೆ ಏನು ಹೇಳ್ತೀರಿ? ಈ ದುರಂತಕ್ಕೆಲ್ಲಾ ನೀವೇ ಕಾರಣ ಅಂತಾ ಅವರ ತಾಯಿ ಹೇಳುತ್ತಾರಲ್ಲ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು..? ನೀವು ಈ ನಡುವೆ ಬೇರೆ ಚಲನಚಿತ್ರದಲ್ಲಿ ನಟಿಸಲಿದ್ದೀರಂತೆ? ನೀವು ನಟನೆ ಕಲಿತದ್ದೆಲ್ಲಿ? ನಿಮ್ಮ ಚಿತ್ರದ ಹೆಸರೇನು ತಿಳಿಯಬಹುದೇ? ಒಂದು ವೇಳೆ ನಿಮಗೆ ಹೇಳೋಕೆ ಇಷ್ಟ ಇಲ್ಲ ಅಂದ್ರೆ, ಆ ಹುಡುಗನ ಕುರಿತ ಚಿತ್ರವೇ ಇದು ಅಂತ ನಾವು ಭಾವಿಸಿಕೊಳ್ಳಬಹುದೇ... ಅದನ್ನಾದರೂ ಹೇಳಿ. ನಿಮಗೆ ಯಾರಾದರೂ ಬಾಯ್‌ಫ್ರೆಂಡ್ ಇದ್ದಾರ? ಇದರ ಬಗ್ಗೆ ಅವರ ಪ್ರತಿಕ್ರಿಯೆ ಏನು...?’

‘ಸಾಕು ನಿಲ್ಸಿ... ದಯವಿಟ್ಟು ಹೊರಗೆ ಹೋಗಿ ಈಗ’.
‘ಯಾಕೆ ಮೇಡಂ. ನಮ್ಮಿಂದ ನಿಮಗೆ ತೊಂದರೆಯಾಗಿದ್ದರೆ ಕ್ಷಮಿಸಿ. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಬಿಟ್ಟರೆ ನಾವು ಇಲ್ಲಿಂದ ಹೊರಟುಬಿಡ್ತೇವೆ...’

‘ನನ್ನ ಬಳಿ ನಿಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರ ಇಲ್ಲ. ನನ್ನನ್ನ ಕೆರಳಿಸಬೇಡಿ. ದಯವಿಟ್ಟು ಹೊರಗೆ ನಡೆಯಿರಿ’.

‘ನಾವು ಹಾಗೆಲ್ಲ ಹೋಗೋಕೆ ಆಗಲ್ಲ ಮೇಡಂ, ನೀವು ಉತ್ತರಿಸಲೇ ಬೇಕು... ಅವನ ಹೊಣೆಯನ್ನ ಎಲ್ಲರ ಎದುರು ನೀವು ಹೊತ್ತದ್ದು ಸುಳ್ಳಲ್ಲ. ಈಗ ನಡೆದಿರುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಅನ್ನುವ ಹಾಗೆ ಜಾರಿಕೊಳ್ಳೊಕೆ ನಾವು ಬಿಡಲ್ಲ..  ಉತ್ತರ ಹೇಳಿ’.
‘ದಯವಿಟ್ಟು ನನ್ನ ಹೋಗಲು ಬಿಡಿ.. ಇಲ್ಲ ನಾನು ನಿಮ್ಮೆದುರೇ ಆತ್ಮಹತ್ಯೆ ಮಾಡಿಕೊಳ್ತೇನೆ ಅಷ್ಟೇ. ಆಗ ನೀವೂ ಕೊಲೆಗಾರರಾಗ್ತೀರಾ ಯೋಚಿಸಿ’.

ಹೀಗೆ ಹೇಳುತ್ತ ನೆರೆದಿದ್ದ ಗುಂಪನ್ನ ಇಬ್ಭಾಗವಾಗಿ ಸೀಳಿ ಹರಿವ ಹಾವಿನಂತೆ ಮಾಯವಾದದ್ದು ನೆನಪಿಗೆಬಂತು...
‘ನೀನೂ ನನ್ನ ಪ್ರಶ್ನೆ ಕೇಳಿ ಕಾಡಬೇಡ. ಪ್ಲೀಸ್ ಲೀವ್ ಮಿ ಅಲೋನ್...’
***
‘ಬಂತು ಬಂತು ಬಂಡಿ ಬಂತು ಅವ್ವಯ್ಯಾ... ಅವ್ವಾ, ಬಾ ಹೊರಗ್ ಬಾ. ಇಲ್ಲ ನಿನ್ನ ಮ್ಯಾಲೆ ಹರಸ್ತಾರೆ ಬೇಗ ಬಾವ್ವ... ದೊಡ್ಡ್ ಬಂಡಿ ಬತ್ತಾದೆ... ನಮ್ಮ ಹಾಡಿ ದಿಕ್ಕೇ ಬತ್ತಾದೆ... ಚಿರತೆಯಂಗೆ... ಬಂದೇಬುಡ್ತು.. ಬಂದೇಬುಡ್ತು....’

ನೆಲವನ್ನೇ ಸೀಳಿದಂತೆ ಎರಡು ಸಮಾನಾಂತರ ಗೆರೆ ಎಳೆದು ಜೀಪು ನಿಂತಿತು. ಅದರ ಹಿಂದೊಂದು ಕಾರು ಹಿಂಬಾಲಿಸಿ ಬಂತು. ಅದರ ಬಾಲ ಹಿಡಿದು ಹಾಡಿಯ ಹೈಕಳೆಲ್ಲ ಓಡಿಬಂದವು.

ಜೀಪಿನಿಂದ ಇಳಿದ ಐದು ಅಡಿ ಎತ್ತರದ ಇಬ್ಬರು ಗಂಡಸರು ನೇರ ಆ ಹುಡುಗನ ಗುಡಿಸಲಿಗೆ ಲಗ್ಗೆ ಇಟ್ಟರು. ಉಳಿದವರು ಅಲ್ಲಿನ ಗಲೀಜು ಕಂಡು ಹೆದರಿ ಕೆಳಗಿಳಿಯದೇ ಮೂಗುಮುಚ್ಚಿ ಕಾರಿನ ಗಾಜು ಮೇಲೇರಿಸಿ ಕುಳಿತರು. ಬರಗಾಲದಲ್ಲಿ ಮೈಸೂರು ಪಾಕು ಎದುರಿಟ್ಟಂತೆ ಜೊಲ್ಲು ಸುರಿಸುತ್ತ ಕಾರು ಜೀಪನ್ನೇ ದುರುಗುಟ್ಟಿನೋಡುತ್ತ ಹಾಡಿ ಹೈಕಳು ಸುತ್ತುವರಿದವು. ಅಕ್ಕಪಕ್ಕದ ಹಾಡಿಗುಡಿಸಲ ಹೆಂಗಸರೂ ಸದ್ದುಹಿಡಿದು ತಮ್ಮ ಕಣ್ಣ ಬಾಣಗಳನ್ನೂ ಗುರಿಇಟ್ಟು ಅತ್ತಲೇ ಎಸೆದು ಬಾಗಿಲ ಬಳಿಯೇ ನಿಂತರು. ಮಕ್ಕಳ ಆ ಸದ್ದಿನಲ್ಲಿ ಅವರಿಗೆ ಅದು ಪುಷ್ಪಕವಿಮಾನವಾಗಿ ಕಂಡಿತು.

ಇದ್ದಕ್ಕಿದಂತೆ ಕಾಡಿನಿಂದ ಆನೆಗಾತ್ರದ ಹೊರೆ ಹೊತ್ತು ತಂದು ಇಳಿಸಿದೊಡನೆ, ಆಚೆ ಇದ್ದ ಕಾರು ಜೀಪು ಕಂಡು ಗಾಬರಿಯಾಗಿ ತಾನು ನಿತ್ಯ ಹುಲ್ಲು ಹಾಕುತ್ತಿದ್ದ ಕೊಟ್ಟಿಗೆ ಕಡೆ ಹೋಗದೆ ನೇರ ಗುಡಿಸಲಿಗೆ ನುಗ್ಗಿದ ಅವನು ತನ್ನ ಬಾಡಿದ ಮುಖಹೊತ್ತು ಒಂದರಡು ಜೊತೆ ಹೊರಗೆ ಬಿಸಿಲಿಗೆ ಹಾಕಿದ್ದ ಬಟ್ಟೆಗಳನ್ನು ಹಳೆ ಚೀಲ ಒಂದಕ್ಕೆ ತುರುಕಿಕೊಂಡು ಮನಸ್ಸಿಲ್ಲದ ಮನಸ್ಸಿನಲ್ಲಿ, ಅದೇ ತಾನೇ ಹುಟ್ಟಿದ್ದ ತನ್ನ ದೊರೆಮಗನ ಮುಖ ನೋಡಿ, ಮುದ್ದಿನ ಹೆಂಡತಿಯನ್ನ ಬಿಟ್ಟು, ಅವ್ವನ ಕಾಲಿಗೆ ಬಿದ್ದು ಜೀಪು ಹತ್ತಿದ್ದ.

ಬಂದಷ್ಟೇ ಬಿರುಸಿನಿಂದ ಏನೋ ಸಾಧಿಸಿದ ಹುರುಪಿನಿಂದ ಆ ಜೀಪು ಬಂದಹಾಗೇ ಹರಿದು ಕ್ಷಣಮಾತ್ರದಲ್ಲಿ ಮಾಯವಾಯಿತು. ಹಿಂದೆ ಬಂದಿದ್ದ ಕಾರು ಸದ್ದಿಲ್ಲದೆ ಅದನ್ನೇ ಅನುಸರಿಸಿತು.
***
‘ನೋಡು ಹುಡುಗ, ಇನ್ನು ಮುಂದೆ ನೀನು ನಾವು ಹೇಳಿದಹಾಗೆ ಕೇಳಬೇಕು ತಿಳೀತ. ಇದು ನಿಮ್ಮ ಹಾಡಿ ಅಲ್ಲ, ಕಾಡೂ ಅಲ್ಲ. ನೀನು ನಾವು ಹೇಳಿಕೊಟ್ಟ ಹಾಗೆ ಮಾಡ್ಬೇಕು. ಆಗ ನಿನಗೇ ಒಳ್ಳೇದು ತಿಳೀತ? ನೀನು ಇಲ್ಲಿಗೆ ಬಂದುದಕ್ಕೆ ಸಾರ್ಥಕವಾಗುತ್ತೆ. ಇಲ್ಲ ನಿಮ್ಮವ್ವ ಹೇಳಿದ ಹಾಗೆ ನೀನು ಬೆಳೆಯೋಕೆ ಆಗಲ್ಲ ತಿಳೀತಾ... ನೋಡು ಈ ಕಡೆ, ಈ ಹುಡುಗಿನೇ ಇನ್ನುಮುಂದೆ ನಿನಗೆ ಎಲ್ಲ ಸರೀನ. ನೀನು ಏನೇ ಮಾಡಿದರೂ ಇವಳನ್ನ ಕೇಳೇ ಮಾಡಬೇಕು. ಅವಳು ಹೇಳಿದ ಹಾಗೆ ನೀನು ಕೇಳಬೇಕು. ಅವಳು ಕುಣಿ ಅಂದರೆ ಕುಣಿಬೇಕು, ಕೂತ್ಕೋ ಅಂದರೆ ಕೂತ್ಕೋಬೇಕು, ನಿಂತ್ಕೋ ಅಂದ್ರೆ ನಿಂತ್ಕೋಬೇಕು. ಇಲ್ಲ, ನಾವು ನಿಮ್ಮ ಅವ್ವನ ಕೈಗೆ ಕೊಟ್ಟ ನೋಟಿನ ಕಂತೆ ವಾಪಸ್ ಕೊಡಬೇಕಾದೀತು, ಮರೀಬೇಡ. ಮತ್ತೆ ನಿನ್ನ ಮಗನ ಓದು ಕನಸಾಗಿ ಹೋಗುತ್ತೆ’.

‘ಇನ್ನೊಂದು ಮುಖ್ಯ ವಿಚಾರ. ನಿನ್ನ ಇನ್ನು ಆರು ತಿಂಗಳು ನಿಮ್ಮ ಮನೆಗೆ ಕಳುಹಿಸೊಲ್ಲ. ಅಲ್ಲಿಯವರೆಗೂ ಇದೇ ನಿಮ್ಮ ಮನೆ. ಈ ಹುಡುಗೀನೆ ನಿನಗೆ ಎಲ್ಲ. ತಿಳೀತಾ...’
‘ಮತ್ತೆ ನನ್ನ ಹೆಂಡತಿ ಮಗು... ಅವ್ವ...’
‘ಅವು ಈ ಆರು ತಿಂಗಳು ಬದುಕಿಲ್ಲ ಅಂದ್ಕೊ, ಆರಾಮವಾಗಿರು...’
‘ಸಾ, ದಯವಿಟ್ಟು ಹಾಂಗೆಲ್ಲ ಅನಬ್ಯಾಡಿ. ಅವರು ನನ್ನ ಪ್ರಾಣ. ನಮ್ಮವ್ವ...’
‘ಸಾಕು ನಿನ್ನ ರಾಗ, ಇನ್ನಮೇಲೆ ಇವಳನ್ನ ಬಿಟ್ಟು ಬೇರೆ ಯಾರ ಹೆಸರೂ ನಿನ್ನ ಬಾಯಿಂದ ಬರಬಾರದು ತಿಳ್ಕೊ. ಇವಳು ನಿನಗೆ ಎಲ್ಲ  ಹೇಳಿಕೊಡ್ತಾಳೆ, ಶ್ರದ್ಧೆಯಿಂದ ಎದುರಾಡದೆ ಕಲಿಬೇಕು’.

‘ನೋಡಮ್ಮ ಈ ಹುಡುಗನ ಜವಾಬ್ದಾರಿ ನಿಂದು. ಹೇಗೆ ಸುಧಾರಿಸ್ತೀಯೋ ನಿನಗೆ ಬಿಟ್ಟ ವಿಚಾರ. ಆದರೆ ಅವನು ಮತ್ತೆ ಹಾಡಿಗೆ ವಾಪಸ್ ಹೋಗಬೇಕು ಅಂತ ಹೇಳಬಾರದು, ತಿಳೀತ. ಹುಡುಗ ಸ್ವಲ್ಪ ಮುಗ್ಧ ಅನ್ನಿಸುತ್ತೆ. ಚೂರು ಪ್ರೀತಿಯಿಂದ ಮಾತಾಡಿಸಿದ್ರೆ ಅವನು ಪಳಗಿ ಹೋಗ್ತಾನೆ. ನಿನ್ನ ಪ್ರತಿಭೆಗೆ ಇದೂ ಒಂದ್ ಸವಾಲಿನ ಕೆಲ್ಸವೇ? ನೋಡೋಣ ಇಬ್ಬರೂ ಹೊಸಬರೇ... ಆದರೆ ನನ್ನ ಕಾರ್ಯಕ್ರಮ ಹದಗೆಡಬಾರದಷ್ಟೆ. ಉಳಿದವರೂ ನಿಮ್ಮ ಜೊತೆ ಇರ್ತಾರೆ.

ನೀವು ಗೆಲ್ಲಬೇಕು ಅಂತಲ್ಲ, ಆದರೆ ನಮ್ಮ ಕಾರ್ಯಕ್ರಮ ಸೋಲಬಾರದು, ಅಷ್ಟೇ, ತಿಳಿತಾ. ಮೊದಲೇ ನೀನು ಇಲ್ಲಿ ಬಂದಿರೋದು ನಿಮ್ಮ ತಂದೆತಾಯಿಗೆ ಇಷ್ಟವಿಲ್ಲ ಅಂತ ಹೇಳಿದ್ದೀಯ. ಮುಂದೆ ಏನೇ ಸಂಭವಿಸಿದರೂ ಅದಕ್ಕೆ ನಾವು ಹೊಣೆಯಾಗೊಲ್ಲ, ನಿನಗೆ ತಿಳಿದಿದೆ ಅಂದುಕೊಂಡಿದೇನೆ. ನೋಡೋಕೂ ಚಂದ ಇದ್ದೀಯ. ಮುಂದೆ ನಿನಗೂ ಸಿನಿಮಾ ನಟಿ ಅವಕಾಶ ಸಿಗಬಹುದೇನೋ... ಈ ಆರು ತಿಂಗಳಲ್ಲಿ ನಿನ್ನ ಭವಿಷ್ಯ ಬದಲಾಗಬಹುದು. ನೀನೂ ಮನಸ್ಸುಮಾಡು... ತಿಳೀತೇ...’

ಕತ್ತೆತ್ತದೆ ಅವಳು ಸುಮ್ಮನಾದಳು. ಹಾಗೆ ಕಣ್ಣು ಮಿಟುಕಿಸುತ್ತ ತಲೆ ಮೆಲ್ಲಗೆ ಗಿರಕಿಹೊಡೆಸಿದಳು. ಅವಳ ಮನಸ್ಸು ಮೆದುಳು ಪರಸ್ಪರ ತಾಳ ತಪ್ಪಿದಂತೆನಿಸಿ ಮತ್ತೆ ಒಂದು ಕ್ಷಣ ಕಣ್ಣುಮುಚ್ಚಿದಳು.
***
‘ನೋಡು, ನೀನು ಆ ಕಾರ್ಯಕ್ರಮಕ್ಕೆ ಹೋಗೋದು ನಮಗೆ ಇಷ್ಟವಿಲ್ಲ. ಇದು ನನ್ನ ಕೊನೆ ಅಭಿಪ್ರಾಯ. ನಿಮ್ಮಮ್ಮನಿಗೂ ಅದು ಇಷ್ಟವಿಲ್ಲ. ನಿನ್ನ ಬಲವಂತಕ್ಕೆ ಒಪ್ಪಬಹುದಷ್ಟೇ. ನೀನು ಅಲ್ಲಿ ಹೋಗಿ, ಯಾರೋ ಹಳ್ಳೀ ಗಮಾರನ ಚಾಕರಿ ಮಾಡಿ ಸಾಧಿಸೋ ಕೆಲಸ ನನಗೆ ಚೂರೂ ಇಷ್ಟವಿಲ್ಲ. ಮೊದಲೇ ಕಾಡಿನ ಜನ, ಅವರ ಜೀವನ ಕ್ರಮವೇ ಬೇರೆ. ನಮ್ಮ ಬದುಕಿನ ರೀತಿಯೇ ಬೇರೆ. ಅದನ್ನ ಕದಲುವ ಕೆಲಸ ಮಾಡೋದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಅಂತದ್ರಲ್ಲಿ ನನ್ನ ಮಗಳಾಗಿ ನೀನು ಅದರಲ್ಲಿ ಭಾಗವಹಿಸೋದನ್ನ ನಾನು ಊಹಿಸಿಕೊಳ್ಳೋದು ಕಷ್ಟ’.

‘ಅವರು ಕಾಡ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಹಾಡಿ ಹಾರಾಡಬಯಸುವವರು. ಅವರನ್ನ ಈ ಮೊಬೈಲ್ ತರಂಗದ ಜಗತ್ತಿಗೆ ತಂದು, ಕಾಂಕ್ರೀಟ್ ಕಾಡಿಗೆ ಕರೆದು ನೀವು ಉದ್ಧಾರ ಮಾಡುವುದಾದರೂ ಏನು? ಖಂಡಿತಾ ಇಲ್ಲ, ಅವರ ಹೃದಯದ ಮಿಡಿತ ನಿಂತುಹೋಗುತ್ತೆ. ಇದು ಕೇವಲ ಅಮಾನವೀಯರು ಮಾತ್ರ ಮಾಡೋ ಕೆಲಸ. ಇದಕ್ಕೆ ನಿನ್ನ ಕಳಿಸೋಕೆ ನಾ ಒಪ್ಪೋದಿಲ್ಲ’.

‘ಹಾಗೆಲ್ಲ ಇಲ್ಲ ಅಪ್ಪ. ಅವರೂ ನಮ್ಮ ಪ್ರಪಂಚ ನೋಡಬೇಕು ಅಲ್ವೇ. ಅವರನ್ನ ಕಾಡಿನ ಪ್ರಾಣಿಗಳ ಹಾಗೆ ಅಲ್ಲೇ ಬಿಡೋದು ಯಾವ ನ್ಯಾಯ? ಇದು ಅಮಾನವೀಯ ಅಲ್ಲವೇ? ನನಗೆ ಇದು ಒಂದು ಒಳ್ಳೆ ಅವಕಾಶ. ಇದನ್ನ ನಾನು ಹೇಗೆ ಬೇಡ ಅನ್ನಲಿ? ನೀವೇನೇ ಹೇಳಿ, ನನಗೆ ಅವರು ಮುಖ್ಯ ಅಲ್ಲ, ನನ್ನ ಕನಸಿಗೆ ಇದು ಒಳ್ಳೆ ಸಂದರ್ಭ. ಇದನ್ನ ಕಳ್ಕೋಳ್ಳೋಕೆ ನನಗೆ ಇಷ್ಟವಿಲ್ಲ...’

‘ನೀನು ವಾದ ಮಾಡಬೇಡ. ನಿನ್ನನ್ನ ಇಷ್ಟು ಓದಿಸಿದ್ದೇ ನಮ್ಮ ತಪ್ಪಾಯ್ತು, ಒಬ್ಬಳೇ ಮಗಳು ಅಂತ ಪ್ರೀತಿಯಿಂದ ಸಾಕಿದ್ದು ದೊಡ್ಡ ತಪ್ಪು, ಇದರಮೇಲೆ ನಿನ್ನಿಷ್ಟ. ನೀನುಂಟು ನಿನ್ನ ಅಮ್ಮನುಂಟು’.

ಗಂಡನ ಮಾತು ಸರಿ ಅನಿಸಿ ಅಮ್ಮ ಏನೂ ಮಾತನಾಡದೆ ಅಡುಗೆಮನೆಗೆ ತೆರಳುತ್ತಿದ್ದಾಗ, ಅವಳು ಹಿಂಬಾಲಿಸಿ ಬಂದು, ತನ್ನನು ಕಳಿಸದಿದ್ದರೆ ತಾನು ಉಪವಾಸ ಮಾಡಿ ಸಾಯುವುದಾಗಿ ಹೆದರಿಸಿದಾಗ... ಗಂಡನ ವಿರೋಧದ ನಡುವೆಯೇ ಅಮ್ಮ ತಲೆಯಾಡಿಸಿ ಹೋಗುವಂತೆ ಹೇಳಿದೊಡನೆ, ಅವಳು ಆಗಲೇ ಸಿದ್ಧಪಡಿಸಿದ್ದ ಲಗೇಜನ್ನು ಕಾರಲ್ಲಿಟ್ಟು ಹೊರ ನಡೆದೇಬಿಟ್ಟಳು.
***
ಕಾಡಿನ ಹುಡುಗ ಊರು ಹೊಕ್ಕೊಡನೆ ಆಕಾಶ ತಲೆಯ ಮೇಲೆ ಬಿದ್ದಂತೆ ಸಪ್ಪಗಾದ. ಅವನನ್ನ ಒಪ್ಪಿಸಿ, ತಮಗೆ ಬೇಕಾದಂತೆ ಸಿಂಗರಿಸಿಕೊಳ್ಳುವ ವೇಳೆಗೆ ಸಾಕು ಸಾಕಾಗಿತ್ತು. ಆದರೂ ಕಾಡಹಕ್ಕಿಯ ಆ ಮುಗ್ಧ ಸೌಂದರ್ಯ ಒಂದು ಕ್ಷಣ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಅವಳಂತೂ ಅವನ ಆ ಮೈಮಾಟಕ್ಕೇ ಮೊದಲೇ ಸೋತುಹೋಗಿದ್ದಳು.

‘ಮೇಡಂ, ಇವತ್ತು ಸರಿಯಾಗಿ ಹೇಳಿಕೊಟ್ಟಿದ್ದೀರಲ್ಲವೇ ಅವನಿಗೆ. ಮತ್ತೆ ಅದೇ ತಪ್ಪಾಗಬಾರದು ನೋಡಿ’.
‘ಹಾಂ ಹೇಳಿದ್ದೇನೆ...’
‘ಈ ನಾಟಕದಲ್ಲಿ ನಾನು ನಿನ್ನ ಲವ್ವರ್... ಅಂದರೆ ನಿನ್ನ ಪ್ರೇಯಸಿ, ನೀನು ಈಗ ನನ್ನೊಂದಿಗೆ ಡಾನ್ಸ್‌ ಮಾಡ್ಬೇಕು, ಅಷ್ಟೆ’.
‘ನೋಡಿ, ನೀವು ಹಾಕಿರೋ ತುಂಡು ಬಟ್ಟೆ ನನಗೆ ಇಷ್ಟವಾಗಲ್ಲ. ನೀವು ನನ್ನನ್ನು ಮುಟ್ಟಬೇಡಿ. ದೂರದಲ್ಲೇ ನಾನು ಡಾನ್ಸ್‌ ಮಾಡ್ತೀನಿ.

ನನ್ನ ಹೆಂಡತಿಗೆ ಇದೆಲ್ಲ ಇಷ್ಟವಿಲ್ಲ. ಅವಳು ನೋಡಿದ್ರೆ ಜೀವ ಬಿಟ್ಬಿಡ್ತಾಳೆ. ಏನೋ ಮಾಡಿದ ಸಾಲ ತೀರುತ್ತೆ... ಮಗನ್ನ ಚೆನ್ನಾಗಿ ಓದುಸ್ಬೋದು ಅಂತ ಒಪ್ಪಿ ನನ್ನ ಕಳಿಸಿಕೊಟ್ಟಿದಾಳೆ ಅಷ್ಟೆ. ಹಾಗಂತ ನಾನು ಅವಳ್ನ ಮರತು ನಿಮ್ಮ ಜೊತೆ ಹಿಂಗೆಲ್ಲ ಆಡೋದು ಸರಿಯಲ್ಲ. ಅವರ್ಗೆ ಹೇಳಿ, ಇದೆಲ್ಲ ಬ್ಯಾಡಾ ಬೇರೆ ಏನಾರ ಗೇಮೆ ಕೊಡಕ್ಕೆ’.

‘ನೋಡಮ್ಮ ನೀನು ಇವತ್ತು ನಮ್ಮ ಕೆಲಸ ಹಾಳು ಮಾಡಿದೆ. ನೀನು ಎಲ್ಲರ ಮುಂದೆ ಹೇಳಿದ್ದೀಯೋ ಇಲ್ಲವೋ ನಾನು ಇವನ ಜವಾಬ್ದಾರಿ ತೆಗೆದುಕೊಳ್ತೇನೆ ಅಂತ. ಈಗ ಹೀಗೆ ಆದರೆ ನಾನು ನಿನ್ನನ್ನ ಬೈಬೇಕಾಗುತ್ತೆ. ಹುಷಾರು, ನೀನು ಬರೆದು ಕೊಟ್ಟ ಪತ್ರ ನಮ್ಮ ಬಳಿ ಇದೆ. ನಮಗೆ ಪರಿಹಾರ ಕಟ್ಟಿಕೊಟ್ಟು, ನನ್ನ ಕೈಲಿ ಆಗೊಲ್ಲ ಅಂತ ಹೇಳಿ ಇಲ್ಲಿಂದ ಹೊರಟುಹೋಗು. ಒಂದು ತಿಂಗಳಾಯ್ತು... ಒಬ್ಬ ಹುಡುಗನ್ನ ಪಳಗಿಸೋಕೆ ಬರದೆ ಯಾವ ನಟನೆ ಮಾಡ್ತೀಯ ನೀನು...’
***
ದಿನೇ ದಿನೇ ಅವಳು ಅವನೊಂದಿಗೆ ತನ್ನ ನಟನಾ ಕೌಶಲವನ್ನು ಪ್ರಯೋಗಿಸುತ್ತಿದ್ದಂತೆ ಅವನು ಮೊದಲಿನ ಮೊನಚುತನ ಬಿಟ್ಟು ಅವಳೊಂದಿಗೆ ಆತ್ಮೀಯವಾಗಿ ವರ್ತಿಸತೊಡಗಿದ. ಇವಳಿಗೆ ಆಕಾಶವೇ ಕೈಗೆ ಸಿಕ್ಕಂತಾಗಿ ತಾನೊಬ್ಬಳು ಒಳ್ಳೆಯ ನಟಿಯೆಂಬ ರೆಕ್ಕೆ ಮೂಡಿದಂತಾಗಿತ್ತು.

‘ನಾನು ನೀವು ಹೇಳಿದಂತೆಯೇ ಮಾಡುತ್ತೇನೆ’ ಎಂದಾಗ ಅವಳ ಆನಂದಕ್ಕೆ ಪಾರವೇ ಇರಲಿಲ್ಲ.
ಇವನಿಗೆ ತಾನು ಅವಳ ಪ್ರಿಯತಮನೆಂಬ ಹುಚ್ಚು ಆಸೆಯ ಬೀಜ ಅವಳ ಸಹಕಾರದ ನೀರಿನಿಂದ ಅದಾಗಲೇ ಮೊಳಕೆಯೊಡೆದಿತ್ತು.
***
ಅವನ ಸೌಂದಯಕ್ಕೆ ಆಗಲೇ ಮರುಳಾಗಿದ್ದ ಅವಳು ಅವನ ಈ ನಡುವಿನ ಉತ್ಸುಕತೆಯಿಂದ ಆಕರ್ಷಿತಳಾದಳು,
ಅನಿವಾರ್ಯವಾಗಿ ಒಮ್ಮೆ ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿಯಬೇಕಾಗಿ ಬಂದಾಗ ಅವಳು ಇಡೀ ದಿನ ಅವನ ಮುಂದೆಯೇ ಕಣ್ಣರಳಿಸಿ ಕುಳಿತಳು. ತನ್ನ ಭವಿಷ್ಯದ ಕನಸಿಗೆ ಇವನು ಜೊತೆಯಾದರೆ... ಎಂಬ ಆಲೋಚನೆ ಅವಳನ್ನು ಆವರಿಸಿತು.

ಆ ಕತ್ತಲ ಚಳಿರಾತ್ರಿಗೆ ಹೆದರಿದ ಅವಳು ಏನನ್ನೂ ಯೋಚಿಸದೆ ಅವನ ರೂಮಿನ ಕದತಟ್ಟಿದ್ದಳು. ಅವನ ಮನಸ್ಸಿನಲ್ಲಿ ಮೂಡಿದ್ದ ಮೊಳಕೆಗೆ ಅವಳು ಅಂದೇ ನೀರು ಮಣ್ಣಿಟ್ಟು ಚಿಗುರಿಸಿಬಿಟ್ಟಳು,
ಅವನ ಆ ದಿನದ ಅಪ್ಪುಗೆಯೊಳಗೆ ಸುಳಿದು ಕಣ್ಣುಮುಚ್ಚಿದ ಅವಳು ಒಮ್ಮೆಲೇ ತರಣಿಯ ಹುಳುವಾದಳು.
ಅವನೋ ಅದಾಗಲೇ ಬೇರುಬಿಟ್ಟಿದ್ದ ಹೆಮ್ಮರ...
***
ಹಾಡಿಯಲ್ಲಿ ಅವರಿವರ ಬಾಯಿಂದ ಕೇಳುತ್ತಿದ್ದ ಅವನ ವಿಚಾರ ಇತ್ತ ಅವ್ವ ಮತ್ತು ಹೆಂಡತಿಗೆ ಗಾಬರಿ ಹುಟ್ಟಿಸಿದವು,
ಹಾಡಿ ಜನರ ಮಾತು ನಿಜವಾದರೆ ತನ್ನ ಗಂಡ ನನ್ನನ್ನು ನನ್ನ ಮಗುವನ್ನು ಬಿಟ್ಟು ಅವಳ ಹಿಂದೆ ಹೊರಟರೆ... ಎಂಬ ಭಯ ಆವರಿಸತೊಡಗಿತು.

ಇದ್ದಕ್ಕಿದ್ದಂತೆ ಅತ್ತೆಯ ಮಡಿಲಿಗೆ ಮಗುವನ್ನು ವರ್ಗಾಯಿಸಿ ಮೇಲೆದ್ದುನಿಂತು, ‘ನಾನು ನಿಮ್ಮ ಮಗನನ್ನ ವಾಪಸ್ ನನ್ನ ಜೊತೆಗೆ ಕರ್ಕೊಂಡು ಬರ್ತಿನಿ ಅತ್ತಮ್ಮ, ಇಲ್ಲ ಅಲ್ಲೇ ಸಾಯ್ತೀನಿ’ ಎಂದವಳೇ ಹುಚ್ಚಿಯಂತೆ ಓಡಿದಳು. ಕೈಲಿ ಅವತ್ತು ಗುಡಿಸಲಿಗೆ ಬಂದಿದ್ದ ಐದಡಿ ಎತ್ತರದ ವ್ಯಕ್ತಿ ನೀಡಿದ್ದ ಚೀಟಿಯೊಂದು ಬಿಟ್ಟು ಬೇರೇನೂ ಇರಲಿಲ್ಲ.
***
‘ನಿನ್ನ ಒಳಗೆ ಬಿಡೋಕೆ ಆಗೊಲ್ಲಮ್ಮ ಹೋಗು ಇಲ್ಲಿಂದ. ಇಲ್ಲಿ ನಿನ್ನ ಗಂಡ ಇಲ್ಲ’.
‘ಅವನು ಇದರ ಒಳಗೆ ಇರ್ತಾನಂತ ಹೇಳವ್ರೆ ಬುಡಿ ಬುದ್ದಿ’.
‘ಇವಾಗ ಇಲ್ಲಿಂದ ಹೋಗ್ತೀಯೋ ಇಲ್ಲವೋ’ ಎಂದು ಹೊರನೂಕಿ, ಗೇಟುಹಾಕಿಕೊಂಡುಬಿಟ್ಟ.
ಗೇಟನ್ನು ಬಡಿದು ಬಡಿದು ಸುಸ್ತಾಗಿ ಅಳುತ್ತ ಚೀರುತ್ತ ಅವನು ಬರುವವರೆಗೂ ತಾನು ಇಲ್ಲಿಂದ ಹೋಗುವವಳಲ್ಲವೆಂದು ಅದನ್ನೇ ಒರಗಿ ಕುಳಿತಳು.

ಅಷ್ಟರಲ್ಲಾಗಲೇ ಸೂರ್ಯ ಇದಕ್ಕೂ ತನಗೂ ಯಾವ ಸಂಬಂಧವಿಲ್ಲವೆಂಬಂತೆ ಜಾರಿಕೊಂಡಿದ್ದ. ಗೇಟಿನ ಎದುರು ರಸ್ತೆಯಲ್ಲಿ ಇದ್ದ ಬಾರಿನಲ್ಲಿ ಕುಡಿದು ತೇಲಾಡುತ್ತಿದ್ದ ಇಬ್ಬರು ಇವಳತ್ತ ತಿರುಗಿದರು. ಕುಡಿತದ ಮತ್ತಿನಲ್ಲಿದ್ದ ಅವರಿಗೆ ಆಗ ತಾನೆ ಅರಿಶಿನ ಹಚ್ಚಿದ್ದ ಹಸಿ ಬಾಣಂತಿಯ ಮೈ ಥೇಟ್ ಉಪ್ಪಿನಕಾಯಿಯಂತೆ ಕಂಡಿತ್ತು.

ಅವಳ ಕೂಗು ಆ ನಿರ್ಜನ ರಸ್ತೆಯಲ್ಲಿ ವ್ಯರ್ಥವಾಯಿತು. ಅಷ್ಟಕ್ಕಾಗಲೇ ಆ ಕಿಡಿಗೇಡಿ ಕಾಮುಕರು ಅವಳನ್ನು ಚಪ್ಪರಿಸಿಬಿಟ್ಟಿದ್ದರು.
ಕಾಡಿನ ಮೃಗವೆರಗಿದ್ದರೂ ಕಡೇ ಪಕ್ಷ ಬದುಕಿ ಉಳಿಯುತ್ತಿದ್ದಳೇನೋ.... ಆದರೆ ಈ ಊರ ಮೃಗಗಳು ಅವಳ ಉಸಿರನ್ನೂ ಬಿಡದೆ ಚಪ್ಪರಿಸಿ ಬಿಸಾಡಿದ್ದರು.
***
ಬೆಳಗಿನ ಕಾರ್ಯಕ್ರಮಕ್ಕೆ ತಡವಾಯಿತೆಂದು ಅವನನ್ನು ಅವಳು ತನ್ನ ಕಾರಿನಲ್ಲೇ ಕರೆತಂದಳು. ರಸ್ತೆಯ ದಿಕ್ಕಿಗೇ ಕಣ್ಣರಳಿಸಿದ್ದ ಅವನ ಕಣ್ಣುಗಳು ದಿಗಿಲುಗೊಂಡವು. ‘ಏನು ಇಷ್ಟೊಂದು ಜನ! ಕಾರು ನಿಲ್ಲಿಸಿ’ ಎಂದ. ಅವನ ಮಾತನ್ನು ಕೇಳಿಯೂ ಕೇಳದಂತೆ ‘ಈಗಾಗಲೇ ತಡವಾಗಿದೆ’ ಎಂದು ಡ್ರೈವರ್‌ಗೆ ನಿಲ್ಲಿಸಬಾರದೆಂದು ಅವಳು ಹೇಳಿದಳು. ಕಾರು ಮುಂದಕ್ಕೆ ಚಲಿಸಿತು. ಅವನು ಅವಳ ಮುಖವನ್ನು ದಿಟ್ಟಿಸಿದಾಗ ಅವಳು ಸಣ್ಣ ಮುಗುಳ್ನಗೆ ನಕ್ಕು ಸುಮ್ಮನಾದಳು.

ಇನ್ನೂ ಕಾರ್ಯಕ್ರಮ ಪ್ರಾರಂಭವಾಗಿಲ್ಲವಾದ್ದರಿಂದ, ಆರಾಮವಾಗಿ ಅಲ್ಲೇ ಒಳಗಿದ್ದ ದೊಡ್ಡ ಹಾಲಿನಲ್ಲಿ ಇಬ್ಬರೂ ಕುಳಿತರು.
ಟೀವಿ ನೋಡುತ್ತಿದ್ದಂತೆ ‘ಅವಳು... ನನ್ನ... ಅವಳು...’ ಎನ್ನುತ್ತ ಸೋಫಾದಿಂದ ಕುಸಿದು ಎದೆಯೊಡೆದಂತೆ ಉರುಳಿ ಹಣೆಹಣೆ ಚಚ್ಚಿಕೊಂಡು ಗೋಳಾಡತೊಡಗಿದ. ಅವಳಿಗೆ ಇವನ ಈ ವರ್ತನೆ ಏನೂ ಅರ್ಥವಾಗಲಿಲ್ಲ.

ಕೂಡಲೇ ಅವನ ಕೈ ಹಿಡಿದು ನಿಲ್ಲಿಸಿ, ‘ಏನಾಯ್ತು... ಏನಾಯ್ತು ಹೇಳು’ ಎಂದು ಕೇಳಿಕೊಂಡಳು. ಕಂಠ ಬಿಗಿದಂತಾಗಿ ದುಃಖ ಉಮ್ಮಳಿಸುತ್ತ, ಅವನು ‘ನೀನೇ... ನೀನೇ ಇದಕ್ಕೆಲ್ಲ ಕಾರಣ. ನನ್ನ ಸಾಯಿಸಿಬಿಟ್ರಿ ನೀವು. ಅಯ್ಯೋ....’ ಎಂದು ಹೆಂಡತಿಯ ಹೆಸರನ್ನು ಜೋರಾಗಿ ಕೂಗಿ ಕೂಗಿ ಕರೆಯತೊಡಗಿದ.

ಇವಳಿಗೆ ಏನೂ ಅರ್ಥವಾಗಲಿಲ್ಲ. ಅಷ್ಟಕ್ಕೆ ಗಾಬರಿಯಿಂದ ಒಳಬಂದ ಅವರು ‘ಏನಾಯ್ತು’ ಎಂದು ಕೇಳುವಷ್ಟರಲ್ಲೇ ಅವನು ಅವರ ಶರ್ಟಿನ ಕಾಲರಿಗೆ ಕೈ ಹಾಕಿ ಕತ್ತು ಹಿಸುಕಲು ಮುಂದಾದ. ಎಷ್ಟು ಪ್ರಯತ್ನಿಸಿದರೂ ಬಿಡಿಸಿಕೊಳ್ಳಲಾರದೆ, ತನ್ನೆಲ್ಲ ಶಕ್ತಿ ಒಮ್ಮೆಲೇ ಕೂಡಿಸಿಕೊಂಡು, ಅವನ ಕೆನ್ನೆಗೆ ಬಿಗಿದು ಜಾಡಿಸಿ ಸೋಫಾದ ಮೊನಚು ತುದಿಯೆಡೆಗೆ ತಳ್ಳಿದೊಡನೆ ಅವನ ಕೈ ಸಡಿಲವಾಗಿ, ಅವನ ಅಳು, ಏದುಸಿರು, ಆವೇಶ, ಇವರು ತೊಡಿಸಿದ್ದ ವೇಷ, ಎಲ್ಲವೂ ಒಮ್ಮೆಲೆ ಕಳಚಿಬಿದ್ದು ಸ್ತಬ್ಧ ನಿಶ್ಶಬ್ದವಾದವು.

ಅವಳು ಅದನ್ನು ಕಂಡು ಕಿಟಾರನೆ ಚೀರಿ ಅಳಲಾರಂಭಿಸಿದಳು. ಅವನ ಕತ್ತನ್ನೊಮ್ಮೆ ಮುಟ್ಟಿನೋಡಿ, ‘ಮುಗಿದಿದೆ... ಶ್..! ಬಾಯಿ ಮುಚ್ಚು’ ಎಂದರು ಅವಳನ್ನು ದಿಟ್ಟಿಸುತ್ತಾ. ‘ನೋಡು ನಿನ್ನ ಕೆಲಸ ಮುಗಿದಿದೆ. ನೀನಿನ್ನು ಹೊರಡು. ಅವನು ಎಲ್ಲೋ ತಪ್ಪಿಸಿಕೊಂಡು ಓಡಿಹೋಗಿದ್ದಾನೆ... ಅರ್ಥವಾಯಿತೇ, ಅವನು ಸತ್ತಿಲ್ಲ, ಅವನ ಬಗ್ಗೆ ನಿನಗೆ ಗೊತ್ತಿರುವುದು ಇಷ್ಟೆ... ತಿಳಿಯಿತೇ...’ ಎಂದ ಅವರ ಆ ಗಡಸು ದನಿಗೆ ಇವಳು ಮೂಕಳಂತೆ, ಕಣ್ಣುಮಿಟುಕಿಸದೇ ತಲೆಯಾಡಿಸುತ್ತಾ ಅಲ್ಲೇ ನಿಂತಳು
‘ಹೇಳಿದ್ದು ಕೇಳಿಸಲಿಲ್ಲವಾ ನಿನಗೆ. ನೀನಿನ್ನು ಹೊರಡು. ಅವನು ಸತ್ತಿಲ್ಲ. ಬದುಕಿದ್ದಾನೆ. ಆದರೆ ತಪ್ಪಿಸಿಕೊಂಡಿದ್ದಾನೆ, ಅಷ್ಟೇ. ಹಾಂ ಹೊರಡು... ಬೇಗ...’

ಇವಳ ಕಾಲು ಹೂತ ಕಂಬದಂತೆ ಮೇಲೇಳದೇ ನಾಟಿತ್ತು. ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು. ‘ಅವನು ಸತ್ತಿಲ್ಲ... ಅವನು ಸತ್ತಿಲ್ಲ... ಹಾಗಾದರೆ...?’
***
ಅಮ್ಮ ತಂದಿಟ್ಟ ಊಟದ ತಟ್ಟೆ ಪಕ್ಕಕ್ಕೆ ಸರಿಸಿ, ಮೇಲೆದ್ದು ತನ್ನ ಕೋಣೆಗೆ ಹೋಗಿ ಕದಮುಚ್ಚಿಕೊಂಡಳು. ಹಾಸಿಗೆಯಲ್ಲಿ ಹೊರಳಿ ಕಣ್ಣುಮುಚ್ಚಿದೊಡನೆ ಅವನ ವಿಶಾಲ ಎದೆ, ತೆರೆದ ಬಾಹುಗಳು ಅವಳನ್ನು ಬಂಧಿಸಿದವು. ಚೀರುತ್ತ ಮೇಲೆದ್ದು, ನಡುಗುತ್ತ ಕುಳಿತು, ಮತ್ತೆ ಕಣ್ಣು ಮುಚ್ಚಿ... ‘ಅವನು ಸತ್ತಿಲ್ಲ ಬದುಕಿದ್ದಾನೆ, ನನ್ನೊಳಗೆ ಜೀವ ಬಿತ್ತಿದ್ದಾನೆ... ಅವನು ಸತ್ತಿಲ್ಲ ಹೌದು... ಆದರೆ ನಾನು...’
*
(ದೀಪಾವಳಿ ಕಥಾಸ್ಪರ್ಧೆ 2015ರ ವಿದ್ಯಾರ್ಥಿ ವಿಭಾಗದ ಬಹುಮಾನಿತ ಕಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT