ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನೊಳಗಿನ ಅಸ್ಮಿತೆ ರೂಹ

ಕಿರುದಾರಿ
Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

‘ರೂಹ್‌’ ಎಂದರೆ ಹಿಂದಿಯಲ್ಲಿ ಆತ್ಮ, ಚೈತನ್ಯ ಎಂದರ್ಥ. (ಕನ್ನಡದಲ್ಲಿ ‘ರೂಹ’) ಜೀವವಿರುವಷ್ಟು ದಿನ ಆತ್ಮ ದೇಹದೊಂದಿಗೆ ಬೆಸೆದುಕೊಂಡಿರುತ್ತದೆ. ದೇಹ ಇಹಯಾತ್ರೆ ಮುಗಿಸಿದಾಗ ಆತ್ಮವೂ ದೇಹದಿಂದ ದೂರವಾಗುತ್ತದೆ.

ದೇಹಾತ್ಮದ ನಡುವಿನ ಬೆಸುಗೆ ಮೇಲ್ನೋಟಕ್ಕೆ ಒಂದೇ ಎಂಬಂತೆ ಭಾಸವಾದರೂ, ಆತ್ಮದ ನೆಲೆ ಬೇರೆಯೇ ಆಗಿರುತ್ತದೆ. ಅಂಥ ಆತ್ಮದ ನಿಜದ ನೆಲೆಯನ್ನು ‘ರೂಹ’ ಕಿರುಚಿತ್ರದಲ್ಲಿ ಅನಾವರಣಗೊಳಿಸಿದ್ದಾರೆ ನಿರ್ದೇಶಕ ಮಲ್ಲಿಕಾರ್ಜುನ ದೇವರಮನೆ.

ಖ್ಯಾತನಟ ಕರಣ್‌, ರೂಹ ಎಂಬಾಕೆ ಜತೆ ತನ್ನ ಮನೆಯಲ್ಲೇ ಬಂಧಿಯಾಗಿದ್ದು, ಏಕಾಂತದೊಳಗೆ ಮಾತನಾಡುವ ದೃಶ್ಯದೊಂದಿಗೆ ಕಿರುಚಿತ್ರ ಆರಂಭವಾಗುತ್ತದೆ.

ಕರಣ್‌–ರೂಹ ನಡುವಿನ ಸಂಭಾಷಣೆ ವಾದ–ಪ್ರತಿವಾದ ಸ್ವರೂಪ ಪಡೆಯುತ್ತಾ, ಕರಣ್‌ ತನ್ನದಲ್ಲದ ಪಾತ್ರದೊಳಗೆ ಲೀನವಾಗುತ್ತಾನೆ. ಉದ್ದಕೂದಲು, ಸಿಗರೇಟು, ಕುಡಿತ ಇಷ್ಟವಿಲ್ಲವೆನ್ನುವ ಕರಣ್‌, ತನ್ನ ಮಾಜಿ ಪ್ರಿಯತಮೆ ಮೈಥಿಲಿಯನ್ನು ನೆನೆಯುತ್ತಾನೆ.

‘ಮೈಥಿಲಿ ನಿನ್ನನ್ನು ಕಟ್ಟಿಹಾಕಿದ್ದಳು, ಆದರೆ, ನಾನು ನಿನ್ನನ್ನು ನೀನಿರುವಂತೆಯೇ ಒಪ್ಪಿಕೊಂಡಿದ್ದೇನೆ. ನಿನಗೆ ಏನು ಇಷ್ಟವೋ ಅಂತೆಯೇ ನಾನೂ ನಡೆದುಕೊಳ್ಳುತ್ತೇನೆ’ ಎನ್ನುವ ರೂಹ ಕರಣ್‌ನನ್ನು ಮತ್ತೆ ತನ್ನ ತೆಕ್ಕೆಗೆಳೆದುಕೊಳ್ಳಲು ಪ್ರಯತ್ನಿಸುತ್ತಾಳೆ.
ರೂಹಳ ಆಹ್ವಾನವನ್ನು ನಿರಾಕರಿಸುತ್ತ, ತೀವ್ರ ಪ್ರತಿರೋಧ ಒಡ್ಡುತ್ತಿರುವಾಗಲೇ ಕರಣ್‌ ಕೊಲೆಯಾಗಿಬಿಡುತ್ತಾನೆ.

ಕಥೆಯ ಓಘದಲ್ಲಿ ಮುಳುಗಿ ಹೋಗುವ ಪ್ರೇಕ್ಷಕನಿಗೆ ಇದು ಸಾಮಾನ್ಯ ತ್ರಿಕೋನ ಪ್ರೇಮಕಥೆ ಎಂದೆನಿಸಿದರೂ, ನಟ ಕರಣ್‌ನನ್ನು ಕೊಂದದ್ದು ಯಾರು? ಅಷ್ಟಕ್ಕೂ ಕರಣ್‌ ಕೊಲೆಯಾದದ್ದು ಏಕೆ ಎಂಬ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳಲ್ಲೇ ಕಿರುಚಿತ್ರದ ಉತ್ತರವೂ ಅಡಕವಾಗಿದ್ದು, ಇದನ್ನು ನಿರ್ದೇಶಕ ಮಲ್ಲಿಕಾರ್ಜುನ ದೇವರಮನೆ ಬಹುಜಾಣ್ಮೆಯಿಂದ ನಿರೂಪಣೆ ಮಾಡಿದ್ದಾರೆ.

ತುಸು ನಾಟಕೀಯ ಗುಣಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವ ಈ ಕಿರುಚಿತ್ರ 2015ರ ಬೆಂಗಳೂರು ಅಂತರರಾಷ್ಟ್ರೀಯ
ಕಿರು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ರೋಲಿಂಗ್ ಫ್ರೇಮ್‌ ಫಿಲಂ ಸಮ್ಮಿಟ್‌ 2015ರಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಏಕೈಕ ಕನ್ನಡ ಕಿರುಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ‘ರೂಹ’ ಅತ್ಯುತ್ತಮ ನಟ ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು.

ಇದೇ ಮೊದಲ ಬಾರಿಗೆ ಕಿರುಚಿತ್ರ ನಿರ್ದೇಶಿಸಿರುವ ಮಲ್ಲಿಕಾರ್ಜುನ ದೇವರಮನೆ ಅನುಭವಿ, ವೃತ್ತಿಪರರಂತೆಯೇ ಚಿತ್ರೀಕರಿಸಿದ್ದಾರೆ. ಇದಕ್ಕೆ ಶಾಂತಿಸಾಗರ್ ಸೇರಿದಂತೆ ತಂಡದ ತಾಂತ್ರಿಕ ವರ್ಗವೂ ಸಾಥ್‌ ನೀಡಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಧಾಟಿಯಲ್ಲಿರುವ ಈ ಕಿರುಚಿತ್ರದ ವಿಷಯ ತೃತೀಯ ಲಿಂಗಿ ನಟನ ಕುರಿತದ್ದು.

ಖ್ಯಾತ ನಟನಾಗಿರುವ ಕರಣ್‌ ಯಶಸ್ಸಿನ ತುತ್ತ ತುದಿಯಲ್ಲಿ ತೇಲುತ್ತಿರುವಾಗಲೇ, ಅವನೊಳಗಿನ ಅವಳು ಕಾಣಿಸಿಕೊಳ್ಳತೊಡಗುತ್ತಾಳೆ. ಅವಳ ಕಾಡುವಿಕೆ ಹೆಚ್ಚಾದಂತೆ ಸಿನಿಮಾ, ಸಾರ್ವಜನಿಕ ಜೀವನದಿಂದ ಓಡುವ ಕರಣ್‌, ಅವಳೊಳಗೆ ತನ್ನ ಮನೆಯಲ್ಲೇ ಬಂಧಿಯಾಗುತ್ತಾನೆ.

ಬೇರೆ ಬೇರೆ ಪಾತ್ರಗಳನ್ನು ಮಾಡುವ ನಟನೊಬ್ಬ ನಿಜ ಜೀವನದಲ್ಲಿ ತನ್ನ ದೇಹದೊಳಗಿರುವ ‘ಅವಳ’ ಆತ್ಮದ ಜತೆ ಅನುಸಂಧಾನ ನಡೆಸುತ್ತಾ ಅವಳೇ ತಾನಾಗಿ ಬಿಡುವ ಪಾತ್ರದಲ್ಲಿ ನಟ ಕರಣ್‌ ಪಾತ್ರಧಾರಿ ಮಲ್ಲಿಕಾರ್ಜುನ ದೇವರಮನೆ ಇಷ್ಟವಾಗುತ್ತಾರೆ.

ಕೆಲವೇ ದೃಶ್ಯಗಳಲ್ಲಿ ಕಾಣುವ ರೂಹ (ರಾಜೇಶ್ವರಿ ತಲವಾರ್) ತಮ್ಮ ಅಭಿನಯದಿಂದ ನೆನಪಿನಲ್ಲಿ ಉಳಿಯುತ್ತಾರೆ. ರೋಷನಿ ಪಾತ್ರದಲ್ಲಿ ನೀನಾಸಂನ ಬಿಂಬಶ್ರೀ ಗಮನ ಸೆಳೆಯುತ್ತಾರೆ. ಪೊಲೀಸ್ ಮತ್ತು ತನಿಖಾಧಿಕಾರಿ ಪಾತ್ರದಲ್ಲಿ ಅಭಿಷೇಕ್‌ ಚಕ್ರಣ್ಣನವರ್ ಮತ್ತು ಕಾರ್ತೀಕ್‌ ಅಭಿನಯ ಕಾಡುತ್ತದೆ.

ಸಾಮಾನ್ಯವಾಗಿ ತೃತೀಯ ಲಿಂಗಿಗಳ ಕುರಿತಾದ ಚಿತ್ರಗಳಲ್ಲಿ ಅವನು ಅವಳಾಗುವ ಪರಿವರ್ತನಾ ಕ್ರಿಯೆಗೆ ಹೆಚ್ಚು ಅವಕಾಶವಿರುತ್ತದೆ. ಆದರೆ, ಈ ರೀತಿಯ ಏಕತಾನತೆಯಿಂದ ತುಸು ದೂರು ನಿಂತು ಕಾಡುವ ಗುಣವನ್ನು ಈ ಕಿರುಚಿತ್ರ ಪ್ರಜ್ಞಾಪೂರ್ವಕವಾಗಿಯೇ ಉಳಿಸಿಕೊಂಡಿದೆ.

ಯಶಸ್ಸಿನ ಉತ್ತುಂಗದಲ್ಲಿರುವ ವ್ಯಕ್ತಿಯೊಬ್ಬ ತಾನು ಇದ್ದಕ್ಕಿದ್ದಂತೆ ಲಿಂಗಾಂತರಿಯಾದಲ್ಲಿ ಸಮಾಜ, ಕುಟುಂಬ ತನ್ನನ್ನು ನೋಡುವ ಪ್ರಕ್ರಿಯೆಗೆ ಹೆದರುವ ಪಾತ್ರ ಮನ ತಟ್ಟುತ್ತದೆ.

ತಾನು ಅವನಲ್ಲ, ಅವಳು ಎನ್ನುವುದನ್ನು ತಾನೂ ಒಪ್ಪಿಕೊಂಡರೂ ಲೋಕದ ನಿಂದನೆಗೆ ಹೆದರಿ, ಆತ್ಮಹತ್ಯೆಗೆ ಶರಣಾಗುವ ನಟ ಕೊನೆಗೆ ತನ್ನಿಚ್ಛೆಯಂತೆಯೇ ‘ರೂಹ’ ಅಂದರೆ ಆತ್ಮದೊಂದಿಗೆ ಲೀನವಾಗುತ್ತಾನೆ.

ದೇಹ ಗಂಡಾದರೂ, ಒಳಗಿರವ ಹೆಣ್ತನದ ಪ್ರತೀಕವಾಗಿರುವ ‘ರೂಹ’ ಈ ಕಿರುಚಿತ್ರದಲ್ಲಿ ಮತ್ತೊಂದು ಪಾತ್ರವೇ ಆಗಿಬಿಡುತ್ತದೆ. ಅವನೊಳಗಿನ ಅವಳಿಗಾಗಿ ಅವನು ಅನುಭವಿಸುವ ಯಾತನೆಯ ಸ್ವರೂಪ ತೃತೀಯ ಲಿಂಗಿಗಳ ಬದುಕಿನ ಬಿಂಬದಂತೆ ಭಾಸವಾಗುತ್ತದೆ.

ತನ್ನನ್ನು ತಾನು ಒಪ್ಪಿಕೊಂಡರೂ, ಅರಿತರೂ ಸಮಾಜವನ್ನು ಒಪ್ಪಿಸಲಾಗದು ಎನ್ನುವ ಕಳವಳದಲ್ಲಿ ಪ್ರತಿವರ್ಷ ಆತ್ಮಹತ್ಯೆಗೆ ಈಡಾಗುವ ತೃತೀಯ ಲಿಂಗಿಗಳ ಸಂಖ್ಯೆ ಶೇ 31ರಷ್ಟಿದೆ. ಈ ಪ್ರಮಾಣ ಕರ್ನಾಟಕದಲ್ಲಿ ಶೇ 40ರಿಂದ 50ರಷ್ಟು ಎಂಬ ಆತಂಕಕಾರಿ ಅಂಶವನ್ನು ಕಿರುಚಿತ್ರದ ಅಂತ್ಯದಲ್ಲಿ ತೋರಿಸುತ್ತಲೇ, ತೃತೀಯಲಿಂಗಿಗಳಾಗಿದ್ದೂ ಸಮಾಜವನ್ನು ಎದುರಿಸಿ ತಮ್ಮ ಅಸ್ಮಿತೆ ಉಳಿಸಿಕೊಂಡ ತೃತೀಯ ಲಿಂಗಿಗಳ ಕ್ಲಿಪ್ಲಿಂಗ್‌ಗಳು ಮನಸಿಗೆ ನಾಟುತ್ತದೆ. ರೂಹ ಕಿರುಚಿತ್ರ ಯೂಟ್ಯೂಬ್‌ ಕೊಂಡಿ: http://youtube/g_R4SHbN56Q

ಆತ್ಮಹತ್ಯೆಗೆ ಶರಣಾದವರ ಬದುಕೇ ಪ್ರೇರಣೆ
ಹತ್ತು ವರುಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಮಲ್ಲಿಕಾರ್ಜುನ ದೇವರಮನೆ ಮೂಲತಃ ಬಳ್ಳಾರಿಯವರು.

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ದೇವರಮನೆ ಅವರಿಗೆ ರಂಗಭೂಮಿ ಅಪ್ಪಟ ಪ್ಯಾಷನ್. ಚೆನ್ನೈನ ‘ಥೇಟರ್‌ ವೈ’ ರಂಗ ತಂಡದಲ್ಲಿ ಮೂರು ವರ್ಷ ರಂಗಾನುಭವ ಪಡೆದಿರುವ ಅವರಿಗೆ ಕಿರುಚಿತ್ರ, ಸಿನಿಮಾ ಜಗತ್ತಿನ ಬಗ್ಗೆಯೂ ಅಪಾರ ಮೋಹವಿದೆ.

ಇತ್ತೀಚೆಗಷ್ಟೇ ಚಿತ್ರನಿರ್ದೇಶಕ ಬಿ.ಎಂ. ಗಿರಿರಾಜ್ ಅವರ ‘ಮಾಸ್ತಿಕಲ್ಲು’ ನಾಟಕದಲ್ಲಿ ಅಭಿನಯಿಸಿರುವ ದೇವರಮನೆ, ಅಪರೂಪದ ವಿಷಯಗಳನ್ನು ಆಯ್ದುಕೊಂಡು ಕಿರುಚಿತ್ರ ನಿರ್ಮಿಸುವ ಆಸಕ್ತಿಯುಳ್ಳವರು.

ತೃತೀಯ ಲಿಂಗಿಗಳ ಜೀವನ ಅಧ್ಯಯನ ಮಾಡುತ್ತಿದ್ದಾಗ, ತಮ್ಮದಲ್ಲದ ತಪ್ಪಿಗೆ ಆತ್ಮಹತ್ಯೆಗೆ ಶರಣಾಗುವ ಅವರ ಬದುಕು ತೀವ್ರವಾಗಿ ಕಾಡಿದ ಪರಿಣಾಮವೇ ‘ರೂಹ’ ರೂಪುಗೊಂಡಿದ್ದು ಎನ್ನುತ್ತಾರೆ ಅವರು.

ಪ್ರತಿ ಗಂಡಿನಲ್ಲೂ ಹೆಣ್ಣು, ಪ್ರತಿ ಹೆಣ್ಣಿನಲ್ಲೂ ಗಂಡಿನ ಅಂಶ ಇದ್ದದ್ದೇ. ಈ ಕಿರುಚಿತ್ರದ ನಟ ಕರಣ್‌, ತನ್ನನ್ನು  ಕನ್ನಡಿಯಲ್ಲಿ ನೋಡಿಕೊಂಡಾಗ ತನ್ನ ಆತ್ಮ ಬೇರೆ ದೇಹದೊಳಗೆ ಸಿಕ್ಕಿಹಾಕಿಕೊಂಡಿದೆ ಎಂಬ ಭಾಸವಾಗುತ್ತದೆ. ಆವನ ಮಾನಸಿಕ ತುಮುಲಗಳನ್ನೇ ಚಿತ್ರದಲ್ಲಿ ಹೇಳಿದ್ದೇನೆ.

‘ರೂಹ’ ಯಾರು ಎಂಬುದನ್ನು ನೆನಪಿಟ್ಟುಕೊಳ್ಳುವ ಪ್ರೇಕ್ಷಕರ ಮನದಲ್ಲಿ ‘ರೂಹ’ ಬದುಕಬೇಕಿತ್ತು ಎಂಬ ಭಾವ ಮೂಡುವಲ್ಲಿಯೇ ಕಿರುಚಿತ್ರದ ಯಶಸ್ಸು ಅಡಗಿದೆ ಎಂದು ವ್ಯಾಖ್ಯಾನಿಸುತ್ತಾರೆ ದೇವರಮನೆ.

‘ಈ ಕಿರುಚಿತ್ರ ನಿರ್ಮಿಸಿದ ಬಳಿಕ ಅನೇಕ ತೃತೀಯ ಲಿಂಗಿಗಳಿಗೆ ಈ ಚಿತ್ರವನ್ನು ತೋರಿಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದಿದ್ದೇನೆ. ತಾಂತ್ರಿಕವಾಗಿ ಮತ್ತಷ್ಟು ಸುಧಾರಿಸುವ ಬಗ್ಗೆಯೂ ಸಲಹೆಗಳು ಬಂದವು’ ಎಂದು ವಿನಯದಿಂದಲೇ ನುಡಿಯುತ್ತಾರೆ ಅವರು.

ಸಾಮಾಜಿಕ ಸಮಸ್ಯೆಯೊಂದನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ ಸಮಾಧಾನವೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT