ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸರಕ್ಕೆ ಪರಿಹಾರ ‘ಟು– ಡು’

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಔದ್ಯೋಗಿಕ ಮಹಿಳೆಯರೇ ಇರಲಿ, ಗೃಹಿಣಿಯರೇ ಇರಲಿ, ಸಾಮಾನ್ಯವಾಗಿ ಮಹಿಳೆಯರ ಬೆಳಗು ಬೆಳಗಿನ ಸೌಂದರ್ಯ ಒಂದೋ ಧಾವಂತದಲ್ಲಿ ಇಲ್ಲವೇ ಒತ್ತಡದಲ್ಲಿ ಕಳೆದು ಹೋಗಿರುತ್ತದೆ. ಹಾಗಾಗದೇ ಬೆಳಗಿನಷ್ಟೇ ತಾಜಾ ಮತ್ತು ಉಲ್ಲಾಸದಾಯಕವಾಗಿರಲು ಏನು ಮಾಡಬೇಕು? ನಿಮ್ಮದೇ ಒಂದು ‘ಟು–ಡು’ (To- Do) ಪಟ್ಟಿ ತಯಾರಿಸಿ... ನೋಡಿ.

ಔದ್ಯೋಗಿಕ ಮಹಿಳೆಯರಿಗೆ ಅತಿ ಒತ್ತಡವೆನಿಸುವ ಸಮಯವೆಂದರೆ ಬೆಳಗಿನದು. ತಾವೂ ಸಿದ್ಧರಾಗಿ, ಅಡುಗೆ ಮಾಡಿ, ಮಕ್ಕಳನ್ನೂ ತಯಾರು ಮಾಡುವುದರಲ್ಲಿ ಬಸವಳಿದು ಹೋಗಿರುತ್ತಾರೆ. ಮನೆಯಲ್ಲಿ ಕೆಲಸದವರಿದ್ದರೂ ಒತ್ತಡವೇನೂ ಕಡಿಮೆಯಾಗುವುದಿಲ್ಲ. ಕೊನೆಯ ಕ್ಷಣಗಳ ಧಾವಂತವೂ ಕಡಿಮೆಯಾಗುವುದಿಲ್ಲ.

ಎಲ್ಲವನ್ನೂ ತಾವೇ ನಿಭಾಯಿಸುವ ಮಹಿಳೆಯರಿಗಂತೂ ಬೆಳಗಿನ ಹೊತ್ತು ಉಸಿರಾಡುವುದೂ ಒಂದು ಕೆಲಸವೇ ಎನಿಸುವಷ್ಟು ಪುರುಸೊತ್ತಿರುವುದಿಲ್ಲ. ಇದೇ ಸಮಯದಲ್ಲಿಯೇ ಬಹುತೇಕ ಜನರಿಗೆ ರಕ್ತ ಏರೊತ್ತಡದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಧಾವಂತ ಮತ್ತು ಒತ್ತಡ ಎರಡೂ ಒಟ್ಟೊಟ್ಟಿಗೆ ದಾಳಿ ಇಡುತ್ತವೆ. ಎರಡನ್ನೂ ನಿಭಾಯಿಸಬೇಕೆಂದರೆ ಹಿಂದಿನ ರಾತ್ರಿ ಇನ್ನಷ್ಟು ಹೈರಾಣಾಗಲೇಬೇಕು. ಒಮ್ಮೆ ಊಟ ಮುಗಿಸಿ ಒಂದಷ್ಟು ಹೊತ್ತು ಟೀವಿ ನೋಡಿ ಮಲಗಬೇಕೆನ್ನುವವರು ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಬೆಳಗ್ಗೆ ಹಾಡು ಗುನುಗುತ್ತಲೇ ಸಿದ್ಧರಾಗಬಹುದು. ಮೊದಲು ಒಂದು ವಾರದ ತಿಂಡಿಯ ಪಟ್ಟಿ ಮಾಡಿಡಬೇಕು.

ಸೋಮವಾರ: ದೋಸೆ, ಮಂಗಳವಾರ: ಪಡ್ಡು, ಬುಧವಾರ: ಅವಲಕ್ಕಿ, ಗುರುವಾರ: ಪುಳಿಯೋಗರೆ, ಶುಕ್ರವಾರ: ಇಡ್ಲಿ, ಶನಿವಾರ: ಉಪ್ಪಿಟ್ಟು/ಸ್ಯಾಂಡ್ವಿಚ್‌/ ಪರಾಠಾಗಳು... ಹೀಗೆ. ಒಂದು ಪಟ್ಟಿಯನ್ನು ತಯಾರಿಸಿಕೊಳ್ಳಿ. ಕೆಲವು ಶಾಲೆಗಳಲ್ಲಿ ಇಂಥದ್ದೇ ಆಹಾರ ತರಬೇಕೆನ್ನುವ ಸೂಚನೆ ಇದ್ದರೆ ಅದನ್ನೂ ನಿಮ್ಮ ಪಟ್ಟಿಗೆ ಸಿದ್ಧಪಡಿಸಿಕೊಳ್ಳಿ.

ಇನ್ನು ಇವುಗಳನ್ನು ತಯಾರಿಸಲು ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನೂ ಹಿಂದಿನ ರಾತ್ರಿಯೇ ಎಲ್ಲ ಇವೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ. ಸಾಧ್ಯವಿದ್ದಲ್ಲಿ ಅವೆಲ್ಲವನ್ನೂ ಒಂದು ಟ್ರೇಗೆ ಹೊಂದಿಸಿಟ್ಟುಕೊಂಡು ಮಲಗಿ. ಬೆಳಗ್ಗೆ ಎದ್ದೊಡನೆ, ಹೆಚ್ಚಿ, ಕೊಚ್ಚಿ ಒಗ್ಗರಣೆ ಹಾಕುವುದಷ್ಟೇ ಕೆಲಸವಿರುತ್ತದೆ.

ಬಹುತೇಕ ಜನರಲ್ಲಿ ರಾತ್ರಿ ಊಟ ಮುಗಿಯುತ್ತಲೇ ಅಡುಗೆಮನೆ ಸ್ವಚ್ಛಗೊಳಿಸಿದರೆ ಅಂದಿನ ಲೆಕ್ಕ ಮುಗಿದಂತೆ. ಒಂದು ನಿಟ್ಟುಸಿರು ಬಿಟ್ಟಿರುತ್ತಾರೆ. ಆದರೆ ಇದನ್ನು ಒಂದೆರಡು ಗಳಿಗೆಗಳಿಗೆ ಮುಂದೂಡಿದರೆ ಮರುದಿನದ ಬೆಳಗು ಅತಿ ಸುಲಭವಾಗಿರುತ್ತದೆ. ಈ ಹೊಂದಿಸಿಕೊಳ್ಳುವ ಕೆಲಸದಲ್ಲಿ ಮಕ್ಕಳೂ ಪಾಲ್ಗೊಳ್ಳುವಂತೆ ಮಾಡಬಹುದು.

ಮರುದಿನದ ತಿಂಡಿಗೇನು ಬೇಕು ಎಂದು ಅವರಿಂದಲೇ ಕೇಳಿ ತಿಳಿದುಕೊಳ್ಳಿ. ನಂತರ ಅವರಿಗೆ ಬೇಕಿರುವುದನ್ನು ಮಾಡಲು ಒಂದಷ್ಟು ಸಹಾಯ ಮಾಡಲು ಕೇಳಬಹುದು. ಅವರೂ ಮನೆಕೆಲಸದಲ್ಲಿ ತೊಡಗುವುದರಿಂದ ನಿಮ್ಮ ಬಾಂಧವ್ಯವೂ ಗಟ್ಟಿಯಾಗುತ್ತದೆ. ಜೊತೆಗೆ ಅವರೊಂದಿಗೆ ಜವಾಬ್ದಾರಿಯನ್ನು ಹಂಚಿಕೊಂಡಂತೆ ಆಗುತ್ತದೆ.

ಈ ಕ್ರಮದ ಇನ್ನೊಂದು ಲಾಭವೆಂದರೆ ನಮ್ಮಲ್ಲಿಯೂ ‘ಎಲ್ಲವನ್ನೂ ನಾವೇ ಮಾಡಬೇಕು, ಯಾರೂ ಸಹಾಯಕ್ಕಿಲ್ಲ’ ಎಂಬ ಕೊರಗು ಉಳಿಯುವುದಿಲ್ಲ. ಹೀಗೆ ಕೊರಗುವ ಮಹಿಳೆಯರಲ್ಲಿ ಆತ್ಮ ಮರುಕದ ಸ್ವಭಾವ ಕ್ರಮೇಣ ಬೆಳೆಯುತ್ತದೆ.

ನಂತರ ಎಲ್ಲವನ್ನೂ ನಾನೇ ಮಾಡಬೇಕೆ ಎಂಬ ಪ್ರಶ್ನೆ ಮೂಡುತ್ತದೆ. ಪ್ರತಿದಿನದ ಕೆಲಸದಲ್ಲಿ ಯಾಂತ್ರಿಕತೆ ತಲೆದೋರುತ್ತದೆ. ಇವೆಲ್ಲವುಗಳಿಂದಲೂ ದೂರವಾಗಬೇಕೆಂದರೆ ನಾವು ನಮ್ಮ ಕುಂಟುಂಬದ ಮೇಲೆ ಅವಲಂಬಿತರಾಗಲೇಬೇಕು. ನಮ್ಮ ಕುಟುಂಬದವರೂ ನಮ್ಮೊಂದಿಗೆ ಸಮನ್ವಯದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲೇಬೇಕು.

ಆದರೆ ಇವ್ಯಾವೂ ಬಲವಂತವಾಗಿ ಹೇರುವುದರಿಂದ ಬರುವುದಿಲ್ಲ. ಇಲ್ಲಿ ಎಲ್ಲರಲ್ಲಿಯೂ ಸಹಕಾರಭಾವ ಒಡಮೂಡಬೇಕು. ಪುರುಷರು ತಮ್ಮ ಅಹಂಕಾರವನ್ನು ಬದಿಗೊತ್ತಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಬಹುತೇಕ ಔದ್ಯೋಗಿಕ ಮಹಿಳೆಯರಿರುವ ಕುಟುಂಬದಲ್ಲಿ ಈ ಚಿತ್ರಣವೀಗ ಬದಲಾಗಿರುವುದು  ಕಂಡುಬರುತ್ತದೆ.

ಸಿಡುಕು ಮುಖದ, ಪೇಪರ್‌ನಲ್ಲಿ ತಲೆ ಹುದುಗಿಸಿಕೊಳ್ಳುವ ಅಪ್ಪ ಈಗ ಸಿಗುವುದು ಅಪರೂಪ. ಮಕ್ಕಳಿಗೆ ಸ್ನಾನ ಮಾಡಿಸುವ, ಬಟ್ಟೆ ಇಸ್ತ್ರಿ ಮಾಡಿಸುವ, ತಿಂಡಿಯನ್ನು ಡಬ್ಬಕ್ಕೆ ತುಂಬಿಡುವ ಅಮ್ಮನಂಥ ಅಪ್ಪಂದಿರ ಸಂಖ್ಯೆ ಹೆಚ್ಚಿದೆ.

ಇನ್ನು ಅಮ್ಮಂದಿರು ತಮ್ಮ ಸಮಯವನ್ನು ಹೆಚ್ಚು ಮಕ್ಕಳಿಗೆ ನೀಡಲಾಗುವುದಿಲ್ಲ ಎಂಬ ಅಪರಾಧಿಪ್ರಜ್ಞೆಯಿಂದ ಹೊರಬರಬೇಕೆಂದರೆ, ಲಭ್ಯ ಇರುವ ಸಮಯವನ್ನು ಜಾಣ್ಮೆಯಿಂದ ಮಕ್ಕಳೊಂದಿಗೆ ಕಳೆಯುವುದು ಅಭ್ಯಾಸ ಮಾಡಿಕೊಳ್ಳಬೇಕು. ಅಡುಗೆಮನೆಯಲ್ಲಿರಲಿ, ಬಟ್ಟೆ ಎತ್ತಿಡುವಾಗಲಾದರೂ ಮಕ್ಕಳಿಗೂ ಕೆಲಸವನ್ನು ಹೇಳುತ್ತಲೇ ತಾವೂ ಮಾಡಿದರೆ ಎಲ್ಲವೂ ಸುಲಭವಾಗುತ್ತದೆ.

ತಿಂಡಿಪಟ್ಟಿಯಂತೆಯೇ ಧರಿಸುವ ಬಟ್ಟೆಗಳ ಪಟ್ಟಿಯನ್ನೂ ಸಿದ್ಧಪಡಿಸಿಟ್ಟುಕೊಳ್ಳಿ. ಭಾನುವಾರವೋ, ವಾರದ ರಜೆಯೋ ಇದ್ದಾಗ ಒಂದಷ್ಟು ಬಟ್ಟೆಗಳನ್ನು ಸಿದ್ಧಪಡಿಸಿಟ್ಟುಕೊಂಡರೆ ದಿನಚರಿಯ ಮೊದಲರ್ಧ ಸರಾಗವಾಗಿ ಸರಿದುಬಿಡುತ್ತದೆ. ‘To-–Do’ ಪಟ್ಟಿಯನ್ನು ಮೊದಮೊದಲು ಬರೆದಿಟ್ಟುಕೊಳ್ಳಿ. ನಂತರ ಅದು ಮಾನಸಿಕವಾಗಿಯೇ ಯೋಜಿಸಿಕೊಳ್ಳಬಹುದು.

ದಿನದ ಶುರುವಿನಲ್ಲಿಯೇ ಇವೊತ್ತು ತಿಂಡಿಗೇನು ಎಂಬ ಪ್ರಶ್ನೆಗೆ ನೀವು ಸಿದ್ಧರಾಗಿದ್ದಲ್ಲಿ ಇಡೀ ದಿನವನ್ನು ಲೀಲಾಜಾಲವಾಗಿ ಕಳೆದುಬಿಡಬಹುದು. ಒಂದೊಂದು ಮನೆಯಲ್ಲಂತೂ ಅಪ್ಪನಿಗೊಂದು, ಮಕ್ಕಳಿಗೊಂದು ಸಿದ್ಧಪಡಿಸಲೇಬೇಕಾದ ಅನಿವಾರ್ಯವಿರುತ್ತದೆ. ಆಗಲೂ ನಿಮ್ಮ ‘ಟು–ಡು’ ಲಿಸ್ಟ್‌ ಹೆಚ್ಚು ಸಹಕಾರಿಯಾಗಿರುತ್ತದೆ.

ಒಂದುವೇಳೆ ಮನೆಗೆ ಅಡುಗೆಯವಳು ಅಥವಾ ಕೆಲಸದವಳು ಬರುವಂತಿದ್ದರೆ ಆಗ ಮಹಿಳೆಯ ಮುಂದಿರುವ ಸವಾಲುಗಳೇ ಬೇರೆ. ಪ್ರತಿಯೊಂದಕ್ಕೂ ಏನು ಮಾಡಬೇಕು? ಏನಿದೆ? - ಎಂಬುದನ್ನೆಲ್ಲ ಪರಿಶೀಲಿಸಬೇಕು. ಅದರ ಬದಲು ಪ್ರತಿದಿನವೂ ಮರುದಿನದ ಅಡುಗೆ, ತಿಂಡಿಯ ಬಗ್ಗೆ ಮೊದಲೇ ಚರ್ಚಿಸಿಟ್ಟುಕೊಳ್ಳುವುದು ಒಳಿತು. ಅಗತ್ಯವಿರುವ ತರಕಾರಿ ಅಥವಾ ದಿನಸಿಗಳನ್ನು ಸಂಜೆಯೋ, ಅಥವಾ ಬೆಳಗ್ಗೆ ಅವರೇ ಬರುವಾಗ ತರುವ ವ್ಯವಸ್ಥೆಯನ್ನೂ ಮಾಡಿಟ್ಟುಕೊಳ್ಳಬಹುದು.

ಔದ್ಯೋಗಿಕ ಮಹಿಳೆಯರ ಬೆಳಗಿನ ಸವಾಲುಗಳಲ್ಲಿ ಬೆಳಗಿನ ತಿಂಡಿ, ಊಟದ ಡಬ್ಬಿ ಇವೆರಡನ್ನೂ ನಿರ್ವಹಿಸಿದರೆ ಅರ್ಧ ದಿನದ ಕೆಲಸ ಮುಗಿಸಿದಂತೆ. ಉಳಿದದ್ದೆಲ್ಲವೂ ಸರಾಗ ಹಾಗೂ ಸುಲಭ.

*
ಕೆಲಸಗಳ ಪೂರ್ವ ಯೋಜನೆ ಮುಖ್ಯ
ಒಂದು ಕಾಲವಿತ್ತು... ಮಗನಿಗೂ ತಯಾರು ಮಾಡಿ, ನಾನೂ ಓಡೋಡಿ ಹೋಗುತ್ತಿದ್ದೆ. ಗಾಡಿ ಕಲಿತೆ. ಅರ್ಧ ನಿರಾಳವೆನಿಸಿತು. ನಾವು ಎಲ್ಲದಕ್ಕೂ ಸ್ವಾವಲಂಬಿಯಾಗುತ್ತ ಹೋಗುವುದು ನಮ್ಮಲ್ಲಿ ನಿರಾಳ  ಭಾವವನ್ನು ಮೂಡಿಸುತ್ತದೆ. ಕೆಲಸದವರ ಮೇಲೆ ಅವಲಂಬಿತರಾದಷ್ಟೂ ಅಂಗವೈಕಲ್ಯ ಅನುಭವಿಸಿದಂತೆ ಆಗುತ್ತದೆ. ಕೆಲಸಗಳ ಪೂರ್ವ ಯೋಜನೆ ನಮ್ಮ ಧಾವಂತವನ್ನೂ ಕಡಿಮೆ ಮಾಡುತ್ತದೆ. ಒತ್ತಡವೂ ಇಲ್ಲದಂತಾಗುತ್ತದೆ.
– ಹೇಮಾ ವಸ್ತ್ರದ,
ಸಹಶಿಕ್ಷಕಿ, ಗ್ರಾಮೀಣ ಸರಕಾರಿ ಶಾಲೆ, ವಿಜಯಪುರ

*
ಮಕ್ಕಳ ಸಹಭಾಗಿತ್ವ ಅಗತ್ಯ
ನನಗೀಗ ಎಲ್ಲವೂ ಸರಳವೆನಿಸುತ್ತದೆ. ಮಗಳು ಪ್ರಾಥಮಿಕ ಶಾಲೆ. ಮಗ ಪ್ರೌಢ ಶಾಲೆ. ಇಬ್ಬರೂ ತಾವೇ ಸಿದ್ಧರಾಗುವುದರಿಂದ ಕೆಲಸ ಸರಾಗವೆನಿಸುತ್ತದೆ. ನಾನೂ ಕೆಲಸಕ್ಕೆ ಹೋಗುವುದರಿಂದ ಬೆಳಗಿನ ಧಾವಂತ ಮತ್ತು ಒತ್ತಡವನ್ನು ನಿರ್ವಹಿಸುವುದು ಕಲೆ ಹಾಗೂ ವಿಜ್ಞಾನ ಎರಡೂ ಹೌದು. ಎರಡನ್ನೂ ಸಮ್ಮಿಳಿತಗೊಳಿಸಿದರೆ, ಕುಟುಂಬದವರೆಲ್ಲರೂ ಭಾಗಿಯಾದಾಗ ಒತ್ತಡ ನಿಭಾಯಿಸುವುದು ಸುಲಭವೆನಿಸುತ್ತದೆ.
-ಶಿವಲೀಲಾ ಚೂಡಿ, (ಸ್ಪೆಶಲ್‌ ಎಜುಕೇಟರ್‌) ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT