ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ತಾಣ ಖಾಸಗಿ ಬಸ್‌ ನಿಲ್ದಾಣ

ಹೊಳಲ್ಕೆರೆ: ಪಟ್ಟಣದ ಹೃದಯಭಾಗದಲ್ಲೇ ಗಲೀಜು, ನಾಗರಿಕರ ಆಕ್ರೋಶ
Last Updated 30 ಸೆಪ್ಟೆಂಬರ್ 2014, 9:52 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಹೃದಯ ಭಾಗವಾದ ಖಾಸಗಿ ಬಸ್‌ನಿಲ್ದಾಣದ ಪಕ್ಕದಲ್ಲೇ ರಸ್ತೆಯ ತುಂಬ ಕೆಸರು ತುಂಬಿದ್ದು, ವ್ಯಾಪಾರಿಗಳು, ಸಾರ್ವಜನಿಕರು, ಪ್ರಯಾಣಿಕರು ಪರದಾಡುವಂತೆ ಆಗಿದೆ. ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆ ಬಂದರೆ ಈ ಪ್ರದೇಶದಲ್ಲಿ ಓಡಾಡಲು ದೊಡ್ಡ ಸರ್ಕಸ್‌ ಮಾಡಬೇಕಾಗುತ್ತದೆ.

ಈ ರಸ್ತೆಯ ಪಕ್ಕದಲ್ಲೇ ಅಗತ್ಯ ವಸ್ತುಗಳ ಅಂಗಡಿಗಳು, ಹೊಟೇಲ್‌ಗಳಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರ ಗೋಳು ಹೇಳತೀರದು. ಇದೇ ರಸ್ತೆಯ ಪಕ್ಕದಲ್ಲಿಯೇ ಇರುವ ಶ್ರೀನಿವಾಸ ಅಯ್ಯಂಗಾರ್‌ ಬೇಕರಿಗೆ ಹೋಗುವ ಗ್ರಾಹಕರೂ ಕೆಸರಿನಲ್ಲಿಯೇ ಬಿದ್ದು, ಎದ್ದು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ.

ಇದೇ ಜಾಗದಲ್ಲಿ ಎಸ್‌ಬಿಎಂ, ಪ್ರಗತಿ ಗ್ರಾಮೀಣ ಬ್ಯಾಂಕ್‌ಗಳು, ಎಟಿಎಂ, ವಿ–ಪಾಯಿಂಟ್‌, ಎಂಆರ್‌ಎಸ್‌ ಕಂಪ್ಯೂಟರ್‌ ಸೆಂಟರ್‌ಗಳಿದ್ದು ಸದಾ ಸಾರ್ವಜನಿಕರ ಸಂಚಾರ ಹೆಚ್ಚಿರುತ್ತದೆ. ಇಲ್ಲಿನ ಕಿರಿದಾದ ಕೆಸರು ರಸ್ತೆಯಲ್ಲಿಯೇ ನೂರಾರು ದ್ವಿಚಕ್ರವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರ ನಿತ್ಯ ಪರದಾಟ ತಪ್ಪಿಲ್ಲ.

ಪಟ್ಟಣವು ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹೊಸದುರ್ಗ ಪಟ್ಟಣಗಳನ್ನು ಸಂಪರ್ಕಿಸುವ ಮುಖ್ಯ ಕೇಂದ್ರವೂ ಆಗಿದೆ. ನಿತ್ಯ ನೂರಾರು ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಈ ನಿಲ್ದಾಣಕ್ಕೆ ಬರುತ್ತವೆ. ಪಟ್ಟಣದಲ್ಲಿ ಸುಮಾರು 16 ಸಾವಿರ ಜನಸಂಖ್ಯೆ ಇದ್ದು, ವಲಸಿಗರೂ ಸೇರಿದರೆ 20 ಸಾವಿರ ದಾಟುತ್ತದೆ.

ಇಷ್ಟೂ ಜನರಿಗೆ ಇಡೀ ಪಟ್ಟಣದಲ್ಲಿ ಇರುವುದು ಒಂದೇ ಒಂದು ಸಾರ್ವಜನಿಕ ಶೌಚಾಲಯ! ಅದೂ ಬಸ್‌ನಿಲ್ದಾಣದ ಹಿಂಭಾಗ ಮೂಲೆಯಲ್ಲಿದ್ದು, ಸಾರ್ವಜನಿಕರು ಕೆಸರಿನಲ್ಲಿ ಅಲ್ಲಿಗೆ ಹೋಗಲಾರದೆ ಹಿಂಸೆ ಅನುಭವಿಸುವಂತೆ ಆಗಿದೆ. ಇದರಿಂದ ಬಸ್‌ನಿಲ್ದಾಣದ ಮುಂಭಾಗವೇ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ. ಕೆಲವರು ಕೆಸರಿನಲ್ಲಿ ಬಿದ್ದು, ಆಸ್ಪತ್ರೆ ಸೇರಿರುವ ಘಟನೆಗಳೂ ನಡೆದಿವೆ.

‘ನಿತ್ಯ ಬೇರೆ ಬೇರೆ ಕಡೆಯಿಂದ ನಮ್ಮ ಪಟ್ಟಣಕ್ಕೆ ಬರುವ ಜನ ಇಲ್ಲಿನ ಸ್ಥಿತಿ ನೋಡಿ ಅಸಹ್ಯಪಟ್ಟುಕೊಳ್ಳುತ್ತಾರೆ. ಇಲ್ಲಿನ ಬಸ್‌ ನಿಲ್ದಾಣದ ಪರಿಸ್ಥಿತಿ ನೋಡಿದರೆ ನಮಗೆ ನಾಚಿಕೆ ಆಗುತ್ತದೆ. ಇದುವರೆಗೂ ಇಲ್ಲಿನ ಪಟ್ಟಣ ಪಂಚಾಯ್ತಿಯ ಸದಸ್ಯರು, ಅಧಿಕಾರಿಗಳು ಇತ್ತಕಡೆ ತಿರುಗಿಯೂ ನೋಡಿಲ್ಲ. ಇಷ್ಟು ವರ್ಷಗಳಾದರೂ ರಸ್ತೆಗೆ ಟಾರ್‌ ಅಥವಾ ಕಾಂಕ್ರೀಟ್‌ ಹಾಕುವ ಮನಸ್ಸು ಮಾಡಿಲ್ಲ. ಅವರೆಲ್ಲ ಯಾರು ಬಿದ್ದರೇನು? ಎದ್ದರೇನು? ಎಂಬ ತಾತ್ಸಾರ ಭಾವನೆ ಹೊಂದಿದ್ದಾರೆ.

ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸದಿದ್ದರೆ ಪಟ್ಟಣ ಪಂಚಾಯ್ತಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಇಲ್ಲಿನ ಹೋಟೆಲ್‌ ಹಾಗೂ ಲಾಡ್ಜ್‌ ಮಾಲೀಕ ವಿರೂಪಾಕ್ಷಪ್ಪ, ಹೂವಿನ ಅಂಗಡಿ ಶರತ್‌ ಬಾಬು, ಬೀಡಾ ಅಂಗಡಿ ಸುರೇಶ್‌, ಇಸಾಕ್‌, ಅಜೀಜ್‌, ಅಶ್ಮತ್‌, ಅರ್ಜುನ್‌, ಸಂತೋಷ್‌, ಬಳೆ ಅಂಗಡಿ ಮಂಜಣ್ಣ, ರಘು, ಹೊಟೇಲ್‌ ಅಂಜಿನಪ್ಪ ಮತ್ತಿತರರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT