ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತರ ಅಳಲು ಕೇಳಿಸುವುದೆಂದು?

ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಅವರ ಕಣ್ಣಿಗೆ  ದುರ್ಬಲರು, ಅಂಗವಿಕಲರು ಬಹುಶಃ ಕಾಣುತ್ತಿಲ್ಲ! ಯಾಕೆಂದರೆ 2012ರಲ್ಲಿ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ಮೂರು ಚಕ್ರದ ಸ್ಕೂಟರ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ 2014ರ ಜುಲೈ ತಿಂಗಳು ಬಂದರೂ ತ್ರಿಚಕ್ರ ವಾಹನಗಳನ್ನು ನೀಡಲು ಮೇಯರ್‌ ಸಾಹೇಬರು ಮನಸ್ಸು ಮಾಡುತ್ತಿಲ್ಲ!

ಈ ಬಗ್ಗೆ ಸಂಬಂಧಪಟ್ಟ ಕಾರ್ಪೊರೇಟರ್‌ ಅವರನ್ನು ಸಂಪರ್ಕಿಸಿದರೆ, ‘ಪಾಲಿಕೆಯಲ್ಲಿ ಹಣ ಇಲ್ಲ. ಇನ್ನು ಎರಡು ತಿಂಗಳಲ್ಲಿ ವಿತರಿಸುತ್ತೇವೆ’ ಎಂದು ಕಾಗಕ್ಕ ಗುಬ್ಬಕ್ಕನ ಕಥೆ ಹೇಳುತ್ತಾರೆ. ಇಲ್ಲಿಯವರೆಗೂ ಇಬ್ಬರು ಮೇಯರ್‌ಗಳು ಬದಲಾಗಿದ್ದಾರೆ ಮತ್ತು ಎರಡು ಬಜೆಟ್‌ಗಳು ಮಂಡನೆಯಾಗಿವೆ.

ಅಂಗವಿಕಲರ ಪಾಲಿನ ಮೀಸಲು ಹಣ ತೆಗೆದಿರಿಸಲಾಗಿದ್ದರೂ   ಸೌಕರ್ಯಗಳನ್ನು ವಿತರಿಸಲು ಮನಸ್ಸು ಮಾಡುತ್ತಿಲ್ಲ.
ಯೋಜನೆಗಾಗಿ ಈ ಬಾರಿಯ ಬಜೆಟ್‌ನಲ್ಲಿ ₨ 1.74 ಕೋಟಿ ಮೀಸಲಿಡಲಾಗಿದೆ. ಆದರೆ, ಇದುವರೆಗೂ ಫಲಾನುಭಾವಿಗಳ ಪಟ್ಟಿಯನ್ನೇ ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿಲ್ಲ.

ಕೆಲಸಕ್ಕೆ ಬಾರದ ಕಾಮಗಾರಿಗಳಿಗೆ ಪಾಲಿಕೆಯಿಂದ ಹಣ ಮೀಸಲಿಡಲಾಗುತ್ತದೆ. ಕೆಂಪೇಗೌಡ ಪ್ರಶಸ್ತಿ ಪಟ್ಟಿ ಬೆಳೆಸಲು ಹಣ ಇರುತ್ತದೆ, ಸಭಾಂಗಣ ಕಟ್ಟಿ ತಮ್ಮ ಹೆಸರಿಡಲು ಹಣ ಇರುತ್ತದೆ. ಆದರೆ ಅಂಗವಿಕಲರಿಗೆ ಸೌಲಭ್ಯಗಳನ್ನು ನೀಡಲು ಮಾತ್ರ ಹಣ ಇಲ್ಲದಿರುವುದು ವಿಪರ್ಯಾಸ.

ಅಶಕ್ತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡಬೇಕಾದ ಸ್ಥಿತಿ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಘೋರ ವ್ಯಂಗ್ಯ. ಸಾಮಾನ್ಯರಂತೆ ಬಿ.ಬಿ.ಎಂ.ಪಿ. ಕಚೇರಿಗೆ ಅಲೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಪದೇ ಪದೇ ಕಚೇರಿಗೆ ಹೋಗಿ ಒತ್ತಡ ಹಾಕಿದ್ದರೆ ಸ್ಕೂಟರ್‌ಗಳು ಸಿಗುತ್ತಿದ್ದವೋ ಏನೋ!

ಅಂಗವಿಕಲರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂಬ ಬದ್ಧತೆ ಪಾಲಿಕೆಯ ಅಧಿಕಾರಿಗಳಿಗೆ ಇಲ್ಲ. ಈಗಾಲಾದರೂ ಕಣ್ಣು ತೆರೆದು ಅಂಗವಿಕಲರಿಗೆ ಸೌಲಭ್ಯಗಳನ್ನು ನೀಡಲಿ.
–ನೊಂದ ಅಂಗವಿಕಲ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT