ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಬದ್ಧ ಪ್ರಲಾಪ; ಸಾರ್ವಜನಿಕರಲ್ಲಿ ಅನುತಾಪ

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಠವೊಂದರ ಕಟ್ಟಡದ ಉದ್ಘಾಟನೆ ನೆರವೇರಿತು. ರಾಜಕೀಯ ನೇತಾರರು ಮತ್ತು ನೂರಾರು ಧಾರ್ಮಿಕರು ಆ ಸಂದರ್ಭ­ದಲ್ಲಿ ಉಪಸ್ಥಿತರಿದ್ದರು. ಮಠದ ಸ್ವಾಮಿಗಳು ಸ್ವಾಗತ ಭಾಷಣದ ಬಳಿಕ ಪ್ರಾಸ್ತಾವಿಕ ಮಾತ­ನ್ನಾಡಲು ಮುಂದಾದರು. ಎಂಥ ಸಂದರ್ಭ­ದಲ್ಲಿ ಪ್ರಾಸ್ತಾ­ವಿಕ ಮಾತು ಬೇಕಾಗುತ್ತದೆ? ಗೋಷ್ಠಿ­ಯೊಂದಕ್ಕೆ ನಿಗದಿಪಡಿಸಲಾದ ವಿಚಾರ, ಅದರ ಹಳಿಯನ್ನು ದಾಟಬಾರದೆಂದು ಕೆಲ ಮಾಹಿತಿ­-ಯನ್ನು ಕೊಡಲಾಗುತ್ತದೆ. ಇದರ ಹೊರತಾಗಿ ಪ್ರಾಸ್ತಾವಿಕ ನುಡಿಗಳ ಅಗತ್ಯ ಇರುವುದಿಲ್ಲ.

ಇತ್ತೀಚೆಗೆ ಕೆಲವರು ತಾವೇ ಸಂಘಟಿಸಿದ ಸಮಾರಂಭದಲ್ಲಿ ಸುದೀರ್ಘವಾದ ಪ್ರಾಸ್ತಾವಿಕ ಭಾಷಣ ಮಾಡುತ್ತಾರೆ.  ಇದು ಅನುಚಿತವಾದ ಕ್ರಮ. ತಾವೇ ಸಂಘಟಿಸಿದ ಸಮಾರಂಭದಲ್ಲಿ ತಮಗೆ ಮಾತನಾಡಲು ಸ್ವಾತಂತ್ರ್ಯ ಇರುತ್ತದಾ­ದರೂ ಬೇರೆಯವರು ಏನು ಹೇಳುತ್ತಾರೆಂದು ಕೇಳಿಸಿಕೊಳ್ಳಬೇಕಾಗುತ್ತದೆ. ಪರಿಣತರು ಮತ್ತು ಅನುಭವಿಗಳು ನೀಡುವ ಚಿಂತನೆಗಳಿಂದ ತಮ್ಮ ಮಾತಿನ ಜಾಡನ್ನು ಬದಲಿಸಿಕೊಳ್ಳಲು ಉತ್ತಮ ಒಳ­ನೋಟಗಳು ದೊರೆಯುತ್ತವೆ.  ಅರಿವನ್ನು ಕಟ್ಟಿ­ಕೊಡುವುದರ ಬದಲು ತಮ್ಮ ಪಾಂಡಿತ್ಯ ಪ್ರದ­ರ್ಶನಕ್ಕೆ ಅಥವಾ ಮತ್ತಿನ್ಯಾವುದಕ್ಕೋ ಒತ್ತು ಕೊಡ­ಲಾಗುತ್ತದೆ.

ನನ್ನನ್ನೂ ಸೇರಿ ನಾಲ್ವರು ಪೀಠಾಧೀಶರು ಭಾಗವಹಿಸಿದ್ದೆವು. ಪ್ರಾಸ್ತಾವಿಕ ಮಾತಿಗೆ ತೊಡಗಿದ ಸ್ವಾಮಿಗಳು, ಅವರ ಮಠಕ್ಕೆ ಆರಂಭದ ದಿನಗಳಲ್ಲಿ ಏನೂ ಇರಲಿಲ್ಲ ಎಂಬುದನ್ನು ಪ್ರಸ್ತಾಪಿಸಿದರು. ನಿಜ, ಅವರು ಶೂನ್ಯ­ದಿಂದ ಎದ್ದು ಬಂದಿದ್ದಾರೆ. ಎರಡು ಮಾತಿಲ್ಲ. ಎಲ್ಲ ಇದ್ದವರು ಸಾಧಿಸುವುದಕ್ಕಿಂತ ಏನೂ ಇಲ್ಲದವರು ಸಾಧಿಸುವುದೇ ನಿಜವಾದ ಸಾಧನೆ. ಸಮಾಜ ಸುಧಾರಣೆಯು ಭೌತಿಕ ಸುಧಾರಣೆ­ಗಿಂತ ಹೆಚ್ಚಿನ ಸವಾಲಿನದು. ಹಲವ­ರದು ಭೌತಿಕ ಸುಧಾರಣೆ; ಕೆಲವರದು ಸಾಮಾ­ಜಿಕ ಸುಧಾರಣೆ.

ಪ್ರಾಸ್ತಾವಿಕ ಮಾತುಗಳು ಮುಂದೆ ಹಳಿ­ಯನ್ನು ತಪ್ಪಿದವು. ಅವರು ಮುಂದೆ ರಾಜಕೀಯ ಭಾಷಣ ಮಾಡಿದರು. ಈ ರಾಜ್ಯಕ್ಕೆ ಮಂತ್ರಿಗಳು, ಮುಖ್ಯಮಂತ್ರಿಗಳು ಯಾರಾಗಬೇಕೆಂದು ಪ್ರಸ್ತಾ­ಪಿಸಿ­ದರು. ಆಗ ನಾನು ಪಕ್ಕದಲ್ಲಿ ಕುಳಿತಿದ್ದ ಪೀಠಾ­ಧೀಶ­ರೊಬ್ಬರಿಗೆ  ‘ಸ್ವಾಮಿಗಳು ಹಳಿ ತಪ್ಪಿದರು. ಸಮ­ತೋಲನ ಕಳಕೊಂಡರು. ನಾವೆಲ್ಲ ಭಾಗ­ವಹಿಸಿದ ಸಂದರ್ಭದಲ್ಲಿ ಹೀಗೆ ಸಭೆಯ ದಿಕ್ಕನ್ನು ಬದಲಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದೆ. ಆ ಮಠಾಧೀಶರೂ ನನ್ನ ಅಭಿಪ್ರಾಯವನ್ನು ಸಮರ್ಥಿಸಿದರು. ನನಗಂತೂ ತುಂಬಾ ಕಸಿವಿಸಿ.

ಅವರ ಪ್ರಾಸ್ತಾವಿಕ ಮಾತುಗಳ ನಂತರ ನನಗೆ ಮಾತನಾಡಲು ಅವಕಾಶ. ಎಲ್ಲ ಕ್ಷೇತ್ರಗಳಲ್ಲೂ ಇಂದು ಅಸಂಬದ್ಧ ಪ್ರಲಾಪ. ವಿನಾಕಾರಣ ರಗಳೆ­ಗಳು ಕೇಳಿಬರುತ್ತಿವೆ. ಅಸಂಬದ್ಧ ಪ್ರಲಾಪ­ಗಳಿಗೆ ಕಾರಣವೇನೆಂದರೆ, ವಿವೇಚನೆ ಇಲ್ಲದಿರುವುದು. ಶರೀರ– ಇಂದ್ರಿಯ ಮತ್ತು ಬುದ್ಧಿಯ ನಡುವಿನ ಸಮತೋಲನವನ್ನು ಕಳಕೊಳ್ಳುವುದು. ಈ ಸ್ಥಿತಿಯನ್ನು ಕಳಕೊಳ್ಳುವುದರಿಂದ ಅರ್ಥಹೀನ ಹೇಳಿಕೆಗಳು, ಹೋಲಿಕೆಗಳು, ವ್ಯಾಖ್ಯಾನಗಳು, ಸಮಂಜಸವಲ್ಲದ ನಡೆಗಳು. ಇಂಥ ನಡೆ ಮತ್ತು ನುಡಿಯು ಯಾವುದೇ ಸ್ಥಾನದಲ್ಲಿರುವ ವ್ಯಕ್ತಿಯ ಗೌರವ, ಘನತೆಯನ್ನು ಕಳೆದುಬಿಡುತ್ತದೆ. ಎಂಥವರ ಬಾಯಲ್ಲಿ ಎಂಥ ನುಡಿ ಬಂದುಬಿಟ್ಟಿ­ತಲ್ಲ!

ಎನ್ನಲು ಅವಕಾಶ. ಸಾರ್ವಜನಿಕ ಕ್ಷೇತ್ರದಲ್ಲಿ ಅದರಲ್ಲೂ ಸ್ವಾಮಿಗಳಾದ ನಮಗೆ ಸಾಮಾನ್ಯ­ಜ್ಞಾನ ಹೆಚ್ಚಿಗೆ ಇದ್ದಷ್ಟೂ ಸುರಕ್ಷಿತ. ಇದರ ಕೊರತೆ­ಯಿಂದ ಸಂಭವಿಸುವ ರಗಳೆ (ಉಪದ್ರವ)­ಗಳು ಅಧಿಕ. ಅದನ್ನು ನೋಡಿ, ಕೇಳಿ ಅವ­ಮಾನಿಸು­ವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅವಮಾನಿಸು­ವವರು ಕೇವಲ ಬಹಿರಂಗ­ದಲ್ಲಿ­ದ್ದಾ­ರೆಂದು ಕೆಲವರು ಭಾವಿಸುತ್ತಾರೆ.

ಅವ­ಮಾನಿ­ಸು­ವವರು ಪ್ರತಿಯೊಬ್ಬರ ಅಂತರಂಗ­ದಲ್ಲೇ ಇದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟು­ಕೊಳ್ಳ­ಬೇಕು. ಈ ಜಾಗೃತಿ ಇರುವುದಾದಲ್ಲಿ ಅಸಂಬದ್ಧ ಪ್ರಲಾಪಗಳಿಗೆ ಅವಕಾಶ ಆಗುವುದಿಲ್ಲ. ನಮ್ಮಲ್ಲಿ ಮೊದಲು ಪ್ರಜ್ಞೆ  ಇರಬೇಕು. ಪ್ರಜ್ಞೆಯೊಟ್ಟಿಗೆ ಸಾಮಾನ್ಯ ಪ್ರಜ್ಞೆ  ಇದ್ದರೆ, ಗೌರವಾನ್ವಿತ ನಡೆ. ಪ್ರಜ್ಞೆ (ಸೆನ್ಸ್) + ಸಾಮಾನ್ಯ ಪ್ರಜ್ಞೆ (ಕಾಮನ್ ಸೆನ್ಸ್) = ದಿವ್ಯ(ಜ್ಞಾನ)ಪ್ರಜ್ಞೆ  (ಬ್ರಿಲಿಯನ್ಸ್).

ಸಮಾರಂಭವೊಂದರಲ್ಲಿ ಒಬ್ಬರ ಅಸಮ­ತೋ­ಲನದ ಮಾತುಗಳು ಸಂದರ್ಭದ ಔಚಿತ್ಯವನ್ನು ಹಾಳು ಮಾಡುತ್ತವೆ ಮಾತ್ರವಲ್ಲ ಭಾಗವಹಿಸಿದ­ವರಲ್ಲಿ  ಎಲ್ಲಿಲ್ಲದ ಕಸಿವಿಸಿಗೆ ಕಾರಣವಾಗುತ್ತವೆ. ಸಮಾರಂಭವ­ನ್ನು ಮುಗಿಸಿಕೊಂಡು ವೇದಿಕೆ­ಯಿಂದ ಎದ್ದಾಗ, ವಿದ್ಯುನ್ಮಾನ ಮಾಧ್ಯಮ­ದವರು ತಮ್ಮ ಕ್ಯಾಮೆರಾದೊಂದಿಗೆ ನನ್ನನ್ನು ಅಡ್ಡಗಟ್ಟಿ, ಸ್ವಾಮಿಗಳ ರಾಜಕಾರಣದ ಪರವಾ­ಗಿನ ಮಾತುಗಳಿಗೆ ನೀವು ಏನು ಹೇಳುತ್ತೀರೆಂದು ಕೇಳಿದರು. ‘ಇಲ್ಲ, ನಾನು ಈ ಬಗ್ಗೆ ಏನೂ ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ನೀವುಗಳು ವೇದಿಕೆ­ಯಲ್ಲಿ ಇದ್ದುದರಿಂದ ನಿಮಗೂ ಸಂಬಂಧಿ­ಸುತ್ತ­ದೆಂದು ಪಟ್ಟುಹಿಡಿದರು. ‘ಅದು ಅವರ ಸ್ವಂತ ವಿಚಾರವೇ ಹೊರತು, ನಮ್ಮೆಲ್ಲರ ವಿಚಾರ­ವಲ್ಲ; ಅವರನ್ನೇ ಕೇಳಿರಿ’ ಎಂದು ಹೇಳಿ, ಬುದ್ಧಿ­ಪೂರ್ವಕ­ವಾಗಿ ತಳ್ಳಿಹಾಕಿ ಹೊರಬಂದೆ. ಸಂಜೆಯ ವೇಳೆಗೆ ಕೆಲ ಚಾನೆಲ್‌ಗಳು ಅದನ್ನು ಮರು­ಪ್ರಸಾರ ಮಾಡುವಾಗ ನನ್ನ ಹಾಗೂ ಸುತ್ತೂರು ಶ್ರೀಗಳ ಭಾವಚಿತ್ರಗಳನ್ನು ಸೇರಿಸಿ ಪ್ರಚುರಪಡಿಸಿದವೆಂದು ತಿಳಿಯಿತು. ಭಾವಚಿತ್ರ­ಗಳನ್ನು ಹಾಕುವುದರಿಂದ ದೊಡ್ಡಸುದ್ದಿ ಆಗುತ್ತ­ದೆಂದು ಇಂದಿನ ವಿದ್ಯುನ್ಮಾನ ಚಾನೆಲ್‌ಗಳ ಅಭಿ­ಪ್ರಾಯ.

ಸುಖಾಸುಮ್ಮನೆ ಭಾವಚಿತ್ರಗಳನ್ನು ಬಳಸಬಾರದೆಂಬ ನೀತಿ ಸಂಹಿತೆ ಅಲ್ಲಿ ಕೆಲಸ ಮಾಡುವವರಲ್ಲಿ ಇರುವುದಾದರೆ, ಇಂಥ ಅನೇಕ ರಗಳೆಗಳನ್ನು ನಿಯಂತ್ರಿಸಬಹುದು. ಮಾಧ್ಯಮದ ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದನ್ನು ಅರಿತರೆ ಯಾವ ತೊಂದರೆಯಿಲ್ಲ.

ಮರುದಿನ ಒಬ್ಬರು ನನ್ನೊಂದಿಗೆ ಕರೆ ಮಾಡಿ - ‘ನೀವುಗಳೇನಾದರೂ ನಿನ್ನೆಯ ಸಮಾರಂಭದಲ್ಲಿ ರಾಜಕೀಯ ಪ್ರೇರಿತವಾಗಿ ಮಾತನಾಡಿದಿರಾ?’ ಎಂದು ಪ್ರಶ್ನಿಸಿದರು. ನಾನೇನೂ ಉತ್ತರಿಸಲಿಲ್ಲ. ನಾವ್ಯಾರೂ ಹಾಗೆ ನಡೆದು­ಕೊಂಡಿ­ರುವುದಿಲ್ಲ. ಸಮಾರಂಭವನ್ನು ಸಂಘ­ಟಿಸಿದ ಸ್ವಾಮಿಗಳು ಹಾಗೆ ಮಾತನಾಡ­ಬಾರದಿತ್ತು. ನನಗೆ ಆಗಲೇ ಗೊತ್ತಿತ್ತು ಇದು ಸುದ್ದಿ ಆಗುತ್ತದೆಂದು. ಪ್ರಜ್ಞಾವಂತ ನಡೆಗೆ ಒಳಗಾದವರಿಂದ ತಪ್ಪುಗಳು ಕಡಿಮೆ ಸಂಭವಿ­ಸುತ್ತವೆ. ಮಾರನೇ ದಿನ ಅದೇ ಸ್ವಾಮಿಗಳು ನನ್ನೊಂದಿಗೆ ಮಾತನಾಡಿ- ‘ರಾತ್ರಿ­ಯೆಲ್ಲ ನಿದ್ದೆ ಬರಲಿಲ್ಲ. ನಾನು ಹೀಗೆ ಮಾತನಾಡಬಾರದಿತ್ತು.

ನಿಮ್ಮಂಥವರನ್ನು ಸಂದಿಗ್ಧತೆಗೆ ಸಿಲುಕಿಸ­ಬಾರದಿತ್ತು’ ಮುಂತಾಗಿ ಹಂಚಿಕೊಂಡರು. ‘ಅಹುದು, ನೀವು ನಿನ್ನೆಯ ಸಭೆಯಲ್ಲಿ ನಿಮ್ಮ ಸಾಧನೆಯನ್ನು ಹೇಳಲು ಅವಕಾಶವಿತ್ತು. ನಮ್ಮ ಸಮ್ಮುಖದಲ್ಲಿ ಹಾಗೆ ಮಾತನಾಡಬಾರದಿತ್ತು’ ಎಂದೆ. ರಾಜಕಾರಣಕ್ಕೆ ಸಂಬಂಧಿಸಿದ ಮಾತು­ಗಳು ಯಾವಾಗಲೂ ಸಮಂಜಸವಲ್ಲ; ಭಾವಾ­ವೇಶದ ಮೇಲೆ ಬುದ್ಧಿಯ ಅಂಕುಶವನ್ನು ಹಾಕುವುದರಿಂದ ಆಗುವ ತಪ್ಪುಗಳನ್ನು ತಪ್ಪಿಸ­ಬಹುದು. ಇಲ್ಲವಾದರೆ ಅದರಿಂದ ಬಹುದೊಡ್ಡ ಅನಾಹುತಗಳು. ಧಾರ್ಮಿಕರಿಗೆ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ, ಮತದಾನದ ಬಗ್ಗೆ ಅರಿವನ್ನು ಮೂಡಿಸುವ ಅಧಿಕಾರವಿದೆ.

ಎಲ್ಲ ಪಕ್ಷಗಳನ್ನು, ಸರ್ವಜಾತಿಯ ಅಭ್ಯರ್ಥಿಗಳನ್ನು ಸಮಾನ­ವಾಗಿ ನೋಡಿಕೊಳ್ಳಬೇಕಾಗುತ್ತದೆ. ಸಮ­ಭಾವ ಇಲ್ಲದೇ ಹೋದಲ್ಲಿ ಪಕ್ಷಭೇದ ಮತ್ತು ಜಾತಿಭೇದ. ಧಾರ್ಮಿಕ ಕೇಂದ್ರವು ರಾಜಕೀಯ ಮತ್ತು ಜಾತಿಯ ಶಕ್ತಿ ಪ್ರದರ್ಶನದ ಕೇಂದ್ರವಾದರೆ, ಜನರು ಮತ್ತು ಜನಪ್ರತಿನಿಧಿಗಳು ಎದುರಿಗೆ ಗೌರವ ನುಡಿಗಳನ್ನಾಡುತ್ತಾರೆ; ಹಿಂದಿನಿಂದ ಅದೇ ಜನರು ಅಗೌರವದ ಮಾತುಗಳನ್ನಾಡುತ್ತಾರೆ.

ಯಾವುದೇಧಾರ್ಮಿಕ ಕೇಂದ್ರದ ಸಮಾರಂಭದಲ್ಲಿ ಜನಪ್ರತಿನಿಧಿಗಳು ಭಾಗವಹಿಸುವುದು, ಅಲ್ಲಿ ಸಮಾವೇಶಗೊಳ್ಳುವ ಭಕ್ತರ ಓಲೈಕೆಗಾಗಿ. ಧಾರ್ಮಿಕ ಕೇಂದ್ರಕ್ಕೆ ಭಕ್ತರು; ರಾಜಕಾರಣಿಗಳಿಗೆ ಮತದಾರರು. ರಾಜಕಾರಣಿ­ಗಳಿಂದ ಇಂಥ ಸಂದರ್ಭದಲ್ಲಿ ಆಶ್ವಾಸನೆಗಳ ಸುರಿಮಳೆ; ಬೂಟಾಟಿಕೆಯ ವರ್ತನೆ. ಎಲ್ಲದಕ್ಕೂ ಮಿತಿಗಳಿವೆ. ಮಿತಿಯನ್ನು ಮೀರಬಾರದಷ್ಟೇ.

ಇನ್ನು ಕೆಲವರಲ್ಲಿ ಜಾಣಮರೆವು. ಕಂಡರೂ ಕಾಣದವರಂತೆ, ಗೊತ್ತಿದ್ದರೂ ಗೊತ್ತಿಲ್ಲದವರಂತೆ ವರ್ತಿ­ಸುವುದು. ಈ ನಡೆಗೆ ಒಳಗಾದವನು ಯಾವುದೇ ಸ್ಥಾನದಲ್ಲಿದ್ದರೂ ನಯವಂಚಕ. ನಯವಂಚಕತನವು ಯಾವುದೇ ನಾಯಕನಿಗೆ ಶೋಭೆ ಅಲ್ಲ. ಅಭಿವೃದ್ದಿ ಪರವಾದ ಪ್ರಯತ್ನವು ಎಂದೆಂದಿಗೂ ಆದರ್ಶ. ಅದು ಅಂತಿಮ. ಸೇಡಿನ ಭಾವನೆಯಿಂದ ಒಬ್ಬರನ್ನು ತುಳಿಯುವುದು, ಮತ್ತೊಬ್ಬರನ್ನು ಎತ್ತಿಕಟ್ಟುವ ಹುನ್ನಾರ ತರವಲ್ಲ. ಸಮತೋಲನವು ಶ್ರೇಷ್ಠವಾದ ಜ್ಞಾನ. ದಿವ್ಯಜ್ಞಾನವೆಂದರೆ ಇದುವೆ ಆಗಿದೆ. ಅದಿತ್ತೆಂದರೆ ಅವಕಾಶವಾದಿ ವರ್ತನೆ ಮತ್ತು ಆಲೋಚನೆಗೆ ಒತ್ತಾಸೆ ಸಿಗುವುದಿಲ್ಲ. ಅದರ ಅಭಾವದಿಂದಾಗಿ ಅನುಮಾನದ ಹುತ್ತವು ಬೆಳೆಯುತ್ತ ಹೋಗುವುದು. ಆರೋಪ, - ಪ್ರತ್ಯಾರೋಪಗಳಲ್ಲಿ ಅಮೂಲ್ಯವಾದ ಸಮಯ ಹಾಳಾಗಬಾರದು. ಖಂಡನೆ ಮತ್ತು ಸಮರ್ಥನೆಯಲ್ಲೂ ಒಳನೋಟ ತೂರಿ ಬರಬೇಕು. ಸಮತೋಲನ ಸ್ಥಿತಿಯಿದ್ದರೆ ಮಾತ್ರ ಪ್ರತಿಕ್ಷಣ ಶಿಕ್ಷಣ; ದಿವ್ಯಜ್ಞಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT