ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾಧಾನದ ‘ಜ್ವಾಲೆ’

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ ಗೆದ್ದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು   ಸುಮ್ಮನೆ ಇದ್ದುಬಿಟ್ಟಿದ್ದರೆ ಇಷ್ಟೊತ್ತಿಗೆ ಜನ ಅವರನ್ನು ಮರೆತೇ ಬಿಟ್ಟಿರುತ್ತಿದ್ದರೇನೋ?

ಏಕೆಂದರೆ, ಈ ಟೂರ್ನಿಯ ಒಟ್ಟು ಬಹುಮಾನದ ಮೊತ್ತವೇ ₹ 35 ಲಕ್ಷ. ಚಾಂಪಿಯನ್ ಜೋಡಿಗೆ ಲಭಿಸಿದ್ದು ಕೇವಲ ₹ 2.70 ಲಕ್ಷ  ಮಾತ್ರ. ಈ ಸಾಧಾರಣ ಮೊತ್ತದ ಬಹುಮಾನಕ್ಕಾಗಿ ಚೀನಾ, ಕೊರಿಯಾ ಮತ್ತಿತರ ರಾಷ್ಟ್ರಗಳ ಆಟಗಾರ್ತಿಯರನ್ನು ಭಾರತದ ಜೋಡಿ ಸೋಲಿಸಿದ್ದು ಸಣ್ಣ ಶ್ರಮವಂತೂ ಖಂಡಿತ ಅಲ್ಲ. ಬೇರೆಲ್ಲ ಖ್ಯಾತನಾಮ ಟೂರ್ನಿಗಳಿಗೆ ಹೋಲಿಕೆ ಮಾಡಿದರೆ, ಇದು ಅತ್ಯಂತ ಚಿಕ್ಕ ಸ್ಪರ್ಧೆ.

ಜನಮಾನಸದಿಂದ ಮರೆಯಾಗಲು ಇಷ್ಟು ಸಾಕಲ್ಲವೇ? ಆದರೆ, ಜ್ವಾಲಾ ಮತ್ತು ಅಶ್ವಿನಿ ಇಬ್ಬರ ಏರುಧ್ವನಿಯಿಂದಾಗಿ ಈಗ ಅವರ ಸಾಧನೆ ಹೆಚ್ಚು ಪ್ರಚಾರ ಪಡೆಯುತ್ತಿದೆ. ಬ್ಯಾಡ್ಮಿಂಟನ್ ಡಬಲ್ಸ್‌ ಆಟಗಾರರಿಗೆ ಸೂಕ್ತ ಸೌಲಭ್ಯ ಮತ್ತು ಗೌರವಗಳು ಸಿಗುತ್ತಿಲ್ಲ ಎಂದು  ತಕರಾರು ಎತ್ತಿರುವ ಇಬ್ಬರಿಗೂ ಈಗ ಕ್ರೀಡಾ ವಲಯದಲ್ಲಿ ಬೆಂಬಲ ಹೆಚ್ಚುತ್ತಿದೆ. ಸಿಂಗಲ್ಸ್ ಆಟಗಾರರಿಗೆ ನೀಡುತ್ತಿರುವ ಸೌಲಭ್ಯಗಳು,  ಧನಸಹಾಯ, ನೆರವು ಸಿಬ್ಬಂದಿ ನೇಮಕ, ಉನ್ನತ ದರ್ಜೆಯ ತರಬೇತಿಗಳು ಡಬಲ್ಸ್‌ನವರಿಗೆ ಸಿಗುತ್ತಿಲ್ಲ ಎನ್ನುವುದು ಅವರ ತಕರಾರು.

ಅವರ ಈ ಬೇಡಿಕೆ ಇಂದು ನಿನ್ನೆಯದಲ್ಲ. ಕಳೆದ ಐದಾರು ವರ್ಷಗಳಿಂದ ಜ್ವಾಲಾ ಗುಟ್ಟಾ ಸರ್ಕಾರ ಮತ್ತು ಬ್ಯಾಡ್ಮಿಂಟನ್ ಸಂಸ್ಥೆಯ ವಿರುದ್ಧ ಚಾಟಿ ಬೀಸುತ್ತಲೇ ಇದ್ದಾರೆ. ಪ್ರತಿ ಬಾರಿ ಇವರಿಬ್ಬರೂ ಯಾವುದಾದರೊಂದು ಟೂರ್ನಿಯಲ್ಲಿ ಪದಕ ಗಳಿಸಿದಾಗಲೂ ಅವರ ಆಟ ಮತ್ತು ಸಾಧನೆಗಿಂತ ವಿವಾದಾಸ್ಪದ ಹೇಳಿಕೆಗಳೇ ಸುದ್ದಿ ಮಾಡುತ್ತವೆ. ಆದರೆ, ಈ ಬಾರಿ ಕನ್ನಡತಿ ಅಶ್ವಿನಿ ಕೂಡ ತುಸು ಜೋರಾಗಿಯೇ ತಮ್ಮ ಜೊತೆಗಾತಿಗೆ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ವಿರುದ್ಧವೂ ತಿರುಗಿ ಬಿದ್ದಿದ್ದಾರೆ.  ಡಬಲ್ಸ್‌ ಆಟಗಾರರಿಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

‘ನಾವು ಮಹತ್ವದ ಟೂರ್ನಿಗಳಲ್ಲಿ ಗೆದ್ದು ನಮ್ಮ ಹಕ್ಕು ಕೇಳುತ್ತಿದ್ದೇವೆ. ಏನು ತಪ್ಪು?’ ಎನ್ನುವ ಜ್ವಾಲಾ ಅವರ ಮಾತನ್ನೂ ಕಡೆಗಣಿಸುವಂತಿಲ್ಲ. ಇವರಿಬ್ಬರೂ ಕಳೆದ ಏಳು ವರ್ಷಗಳಲ್ಲಿ ಮಾಡಿರುವ ಸಾಧನೆ ಸಣ್ಣದಲ್ಲ. ಅದರಲ್ಲೂ 2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕದ ಸಾಧನೆ ಮಹತ್ವದ್ದು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಲು  ಸಾಧ್ಯವಾಗದಿದ್ದರೂ ಬಿ ಗುಂಪಿನಲ್ಲಿ ಇವರ ಆಟ ನೆನಪಿನಲ್ಲಿ ಉಳಿಯುವಂತದ್ದು.

ನಮಗೆ ಏಕಿಲ್ಲ ಟಾಪ್ ?
2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿ ರುವ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ಕೇಂದ್ರ ಕ್ರೀಡಾ ಸಚಿವಾಲಯವು ಟಾರ್ಗೆಟ್ ಒಲಿಂಪಿಕ್ ಪೋಡಿಯಂ  ಯೋಜನೆ (ಟಾಪ್) ಜಾರಿಗೆ ತಂದಿದೆ. ಅದ ರಲ್ಲಿ ಎಲ್ಲ ಕ್ರೀಡೆಗಳಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಜ್ವಾಲಾ–ಅಶ್ವಿನಿ ಜೋಡಿಯನ್ನು ಪರಿಗಣಿಸಿಲ್ಲ. ಅಲ್ಲದೇ ತರಬೇತಿ ಪಡೆಯಲು ವಿದೇಶಿ ಕೋಚ್, ನೆರವು ಸಿಬ್ಬಂದಿ ನೇಮಕಕ್ಕೆ ಧನಸಹಾಯ ಮತ್ತಿತರ ಬೇಡಿಕೆಗಳಿಗೂ ಸ್ಪಂದಿಸಿಲ್ಲ. 

ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ತಮ್ಮ ಸ್ವಂತ ಅಕಾಡೆಮಿಯ ಆಟಗಾರರಿಗೆ ಟಾಪ್ ಸೌಲಭ್ಯ ಸಿಗುವಂತೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಜ್ವಾಲಾ ಮಾಡಿದ್ದಾರೆ. ಅಶ್ವಿನಿ ಪೊನ್ನಪ್ಪ ಮಹಿಳಾ ಡಬಲ್ಸ್‌ನಲ್ಲಿ ಜೊತೆಯಾಗುವ ಮುನ್ನ ವಿ. ದಿಜು ಜೊತೆಗೆ ಮಿಶ್ರಡಬಲ್ಸ್‌ನಲ್ಲಿ ಮಿಂಚಿದವರು ಜ್ವಾಲಾ. ಎಡಗೈ ಆಟಗಾರ್ತಿಯಾಗಿರುವ ಅವರು  ಅಶ್ವಿನಿಯೊಂದಿಗೆ ಹಲವು ಟೂರ್ನಿಗಳಲ್ಲಿ ಪದಕ ಸಾಧನೆ ಮಾಡಿದ್ದಾರೆ.

2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿಪದಕ ಗೆದ್ದ ನಂತರ ಬೇರೆ ಪ್ರಶಸ್ತಿ  ಒಲಿದಿರಲಿಲ್ಲ. ಅಮೆರಿಕ ಓಪನ್ ಮತ್ತು ಇಂಡಿಯನ್ ಜಿಪಿ ಗೋಲ್ಡ್‌ ಟೂರ್ನಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಇದೀಗ ಕೆನಡಾ ಒಪನ್ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೇ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಏರಿದ್ದಾರೆ.  ಭಾರತದ ಮಟ್ಟಿಗೆ ಇದು ನೂತನ ದಾಖಲೆ. ಪುರುಷರ ಡಬಲ್ಸ್‌, ಮಿಶ್ರಡಬಲ್ಸ್‌ನಲ್ಲಿ ಭಾರತದ ಆಟಗಾರರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಲ್ಲ. ಅದೇ ಸಿಂಗಲ್ಸ್‌ನಲ್ಲಿ, ಕೆ. ಶ್ರೀಕಾಂತ್, ಪರುಪಳ್ಳಿ ಕಶ್ಯಪ್‌, ಸೈನಾ ನೆಹ್ವಾಲ್, ಪಿ.ವಿ. ಸಿಂಧು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.

‘ಸಬ್‌ ಜೂನಿಯರ್, ಜೂನಿಯರ್ ಹಂತದಿಂದಲೇ ಡಬಲ್ಸ್‌ ಮಾದರಿಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ.  ಆದ್ದರಿಂದಲೇ ಭಾರತದಲ್ಲಿ ಡಬಲ್ಸ್‌ ಬ್ಯಾಡ್ಮಿಂಟನ್ ಬೆಳ ವಣಿಗೆ ಕಾಣುತ್ತಿಲ್ಲ. ಪ್ರತಿಭೆಗಳಿಗೆ ಕೊರತೆ ಇಲ್ಲ. ಕೋಚ್‌ಗಳು, ಕ್ರೀಡಾ ಆಡಳಿತ ಗಾರರು ತಾರತಮ್ಯ ಮಾಡುತ್ತಿರುವುದರಿಂದ ಆಟಗಾರರಿಗೆ ಅವಕಾಶ ಸಿಗುತ್ತಿಲ್ಲ. ಭಾರತದ ಬ್ಯಾಡ್ಮಿಂಟನ್ ಸಮಗ್ರವಾಗಿ ಬೆಳೆಯಬೇಕಾದರೆ ಎಲ್ಲ ಪ್ರಕಾರಗಳಿಗೂ ಸಮಾನ ಅವಕಾಶ ನೀಡಬೇಕು’ ಎಂದು ಜ್ವಾಲಾ ವಾದಿಸುತ್ತಾರೆ. ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆಯ ವಿವಾದವೂ ಅವರ ಮಾತುಗಳಿಗೆ ಪುಷ್ಟಿ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT