ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆಯೂ ಹಿಂದುತ್ವವೂ

ಶಾಂತಿಪ್ರಿಯ ಹಿಂದೂ ಸಮಾಜ ವಿಚಾರ ವಿಮರ್ಶೆಗೆ ಯಾವಾಗಲೂ ತೆರೆದುಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಸೂಕ್ತವಾದುದಾಗಿದೆ
Last Updated 25 ನವೆಂಬರ್ 2015, 19:46 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಬಹುಮತದ ಬಿಜೆಪಿ ಸರ್ಕಾರ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ, ದೇಶ ಹಾಗೂ ಸಮಾಜದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತಿದೆ. ಅನೇಕ ಸಾಹಿತಿ, ಕಲಾವಿದರು
ಈಗ ದೇಶದಲ್ಲಿ ಉಸಿರು ಕಟ್ಟುವ ವಾತಾವರಣವಿದೆ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಜಕೀಯವಲ್ಲದ ಸಾಹಿತ್ಯ, ಸಾಂಸ್ಕೃತಿಕ ಸಭೆ, ಎಲೆಕ್ಟ್ರಾನಿಕ್ ಮಾಧ್ಯಮ, ಅಂತರ್ಜಾಲದ ಸಾಮಾಜಿಕ ಮಾಧ್ಯಮ, ಪತ್ರಿಕಾ ಅಂಕಣ ಎಲ್ಲದರಲ್ಲಿಯೂ, ದೇಶದಲ್ಲಿ ಹೆಚ್ಚುತ್ತಿರುವ ಹಿಂದುತ್ವದ ಶಕ್ತಿ ಹಾಗೂ ಅಸಹಿಷ್ಣುತೆ ಒಂದೇ ನಾಣ್ಯದ ಎರಡು ಮಗ್ಗುಲುಗಳಾಗಿ ಚಿತ್ರಿತವಾಗುತ್ತಿವೆ. ದಶಕಗಳಿಂದಲೂ ಹಿಂದೂ ಕಟ್ಟಾಭಿಮಾನಿಗಳ ಕಣ್ಮಣಿಯಾದ ಮೋದಿ ‘ವಿಕಾಸ ಪುರುಷ’ ಎಂದು ಬಿಂಬಿಸಿಕೊಂಡು ಪ್ರಧಾನಿಯಾದ ಬಳಿಕ, ಹಿಂದುತ್ವದ ವಿಚಾರಧಾರೆಗಳಿಗೆ ಪ್ರಾಮುಖ್ಯ ದೊರೆಯುತ್ತಿರುವುದು, ಸಂಘ ಮತ್ತು ಅದರ ಪರಿವಾರದ ವ್ಯಾಪ್ತಿಯ ಪ್ರಗತಿ ದೇಶದ ಪ್ರಗತಿಯ ಅಂಕಿಗಳಿಗಿಂತ ಹಲವು ಪಟ್ಟು ಹೆಚ್ಚುತ್ತಿರುವುದು ಸತ್ಯ ಸಂಗತಿಯಾಗಿದೆ.

ಆದರೆ ಸಮಾಜದಲ್ಲಿ ಇತ್ತೀಚೆಗೆ ಹಿಂದುತ್ವದ ಈ ರೀತಿಯ ಬೆಳವಣಿಗೆಗೆ ಕಾರಣಗಳೇನು ಹಾಗೂ ಇದರಿಂದ ವಿಶ್ವದ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶ ಪ್ರಗತಿಯ ಹಾದಿಯನ್ನು ಬಿಟ್ಟು ಧಾರ್ಮಿಕತೆಗೆ, ಹಿಂದೂ ತಾಲಿಬಾನೀಕರಣಕ್ಕೆ ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಯ ದಾರಿಯಲ್ಲಿ ಸಾಗುವ ಸಾಧ್ಯತೆಗಳಿವೆಯೇ ಎನ್ನುವ ಕುರಿತು ವಿಶ್ಲೇಷಿಸಬೇಕಿದೆ. ಬಹುಸಂಖ್ಯಾತರ ಹಿಂದೂ ಧರ್ಮ ಜಗತ್ತಿನ ಇತರ ಪ್ರಮುಖ ಧರ್ಮಗಳ ಪರಿಭಾಷೆಯಂತಿರದೇ, ಸುಪ್ರೀಂ ಕೋರ್ಟ್‌ ಹೇಳಿರುವಂತೆ ಹಾಗೂ ನಾವೆಲ್ಲ ಪ್ರತ್ಯಕ್ಷವಾಗಿ ಅನುಭವಿಸಿರುವಂತೆ ಭರತ ಖಂಡದ ಜೀವನ ಪದ್ಧತಿಯಾಗಿದೆ.

ಅನೇಕ ಜಾತಿ, ಪಂಗಡಗಳಲ್ಲಿ ಹಂಚಿ ಹೋದ ಹಾಗೂ ವಿವಿಧ ಭಾಷೆ, ಸಂಪ್ರದಾಯ, ನಂಬಿಕೆ, ಆಚಾರ ವಿಚಾರ, ಪೂಜಾ ಪದ್ಧತಿಯನ್ನು ಹೊಂದಿರುವ ಹಿಂದೂ ಸಮಾಜ  ಇತ್ತೀಚೆಗೆ ಧಾರ್ಮಿಕ ನೆಲೆಯಲ್ಲಿ ಒಗ್ಗೂಡುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರವು ಹಿಂದೂ ಸ್ವಾಭಿಮಾನದ ಸಂಕೇತವಾಗಿಸಿದ ರಾಮ ಜನ್ಮಭೂಮಿ ಆಂದೋಲನದ ದಿನಗಳಿಗಿಂತ ಇಂದು, ಹಿಂದುತ್ವವಾದಿ ವಿಚಾರಗಳ ಸ್ವೀಕಾರಾರ್ಹತೆ ಹೆಚ್ಚಿದೆ.

ನಗರೀಕರಣ, ಜಾತಿ ಪದ್ಧತಿಯ ಬಾಹ್ಯ ಆಚರಣೆ ಹಾಗೂ ಅಸ್ಪೃಶ್ಯತೆಯಲ್ಲಿನ ಇಳಿಕೆ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯ ಅತೃಪ್ತಿ, ಪತ್ರಿಕಾ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲಿನ ಎಡಪಂಥೀಯ ವಿಚಾರಧಾರೆಯ ಏಕಸ್ವಾಮ್ಯದ ಅಂತ್ಯ, ಅಂತರ್ಜಾಲದಿಂದ ದೊರೆಯುವ ಮಾಹಿತಿ, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ, ಜಾಗತಿಕ ಮಟ್ಟದಲ್ಲಿ ಇಸ್ಲಾಂ ಭಯೋತ್ಪಾದನೆಯ ಹೆಚ್ಚಳ ಮೊದಲಾದವು ಹಿಂದುತ್ವದ ಏಳಿಗೆಗೆ ತಮ್ಮ ಕಾಣಿಕೆಯನ್ನು ನೀಡಿವೆ. ಇದಕ್ಕಿಂತ ಹೆಚ್ಚಾಗಿ, ಕೆಲವು ಬುದ್ಧಿಜೀವಿಗಳು ನೀಡುತ್ತಿರುವ ಹೇಳಿಕೆಗಳು ಹಿಂದೂವಾದಕ್ಕೆ ಪುಷ್ಟಿಯನ್ನು ನೀಡುತ್ತಿವೆ.

ಶಾಂತಿಪ್ರಿಯ ಹಿಂದೂ ಸಮಾಜ ವಿಚಾರ ವಿಮರ್ಶೆಗೆ ಯಾವಾಗಲೂ ತೆರೆದುಕೊಂಡಿದ್ದು, ಇತರ ಧರ್ಮದ ನಂಬಿಕೆಗಳ ಬಗ್ಗೆ ಹಾಗೂ ನಾಸ್ತಿಕ ವಾದಕ್ಕೆ ಸಹ ಸಹನಾನುಭೂತಿ ಹೊಂದಿರುವುದಲ್ಲದೆ ಆಧುನಿಕ ಕಾಲದಲ್ಲಿ ಪ್ರಜಾಪ್ರಭುತ್ವಕ್ಕೆ ಸೂಕ್ತವಾದುದಾಗಿದೆ. ತನ್ನಲ್ಲಿನ ಅನಿಷ್ಟ ಪದ್ಧತಿಗಳಾದ ಅಸ್ಪೃಶ್ಯತೆ, ಸತಿ ಸಹಗಮನ, ಬಾಲ್ಯವಿವಾಹ ಮತ್ತು ಅನೇಕ ಮೌಢ್ಯದ ಆಚರಣೆಗಳನ್ನು, ಸಾಮಾಜಿಕ ಪಿಡುಗುಗಳನ್ನು ನಿಯಂತ್ರಣಕ್ಕೆ ತರುತ್ತಾ ಬದಲಾವಣೆಗೆ ತೆರೆದುಕೊಂಡಿದೆ.

ಆದರೆ ಇತರ ಧರ್ಮಗಳ ಓರೆಕೋರೆ, ಪೈಶಾಚಿಕ ಕೃತ್ಯಗಳ ಕುರಿತು ಮಾತನಾಡಲು ಹಿಂಜರಿಯುವ ಬುದ್ಧಿಜೀವಿಗಳು, ತಾವು ವಿಚಾರವಾದಿಗಳೆಂದು ತೋರಿಸಿಕೊಳ್ಳಲು ಮತ್ತು ಪ್ರಚಾರ ಗಳಿಸಿಕೊಳ್ಳಲು ಹಿಂದೂ ಸಮಾಜ, ನಂಬಿಕೆ ಹಾಗೂ ದೇವತೆಗಳಿಗೆ ಅವಹೇಳನ ಮಾಡುವುದನ್ನೇ ಸುಲಭ ಮಾರ್ಗವನ್ನಾಗಿಸಿಕೊಂಡಿದ್ದಾರೆ. ಇವರ ವಾಕ್ ಸ್ವಾತಂತ್ರ್ಯದ ದುರುಪಯೋಗ ಹಾಗೂ ಹಿಂದೂ ಸ್ವಾಭಿಮಾನವನ್ನು ಕೆಣಕುವ ಕಾರ್ಯಗಳೇ ದೇಶದ ಶಾಂತಿ ಮತ್ತು ಧಾರ್ಮಿಕ ಸೌಹಾರ್ದಕ್ಕೆ ಕಂಟಕವಾಗುತ್ತಿವೆ. ಅಲ್ಲದೆ ಅನವಶ್ಯಕವಾಗಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಲಾಗುತ್ತಿದೆ.

ತನ್ನ ಉನ್ನತ ಮೌಲ್ಯಗಳಿಂದ ಜಾಗತಿಕ ಮುಂದಾಳತ್ವಕ್ಕೆ ತಯಾರಾಗುತ್ತಿರುವ ಯುವ ದೇಶವಾದ ಭಾರತ ಪ್ರಗತಿಗಾಗಿ ತಹಿತಹಿಸುತ್ತದೆಯೇ ಹೊರತು, ಬಹುಸಂಖ್ಯಾತರ ವಿಚಾರ ಮತ್ತು ದರ್ಪವನ್ನು ಇತರರ ಮೇಲೆ ಹೇರಲು ಅಲ್ಲ. ಆದರೆ ಉಜ್ವಲ ಭವಿಷ್ಯದ, ಗೌರವಯುತ ಜೀವನದ ಕನಸು ಕಾಣುತ್ತಿರುವ ಯುವಜನ, ದಶಕದ ಹಿಂದಿನ ಪ್ರಜೆಗಳಂತೆ ದೇಶ ಮತ್ತು ಧರ್ಮದ ಮೇಲಿನ ಅನವಶ್ಯಕ ಅವಹೇಳನವನ್ನು ನಗುತ್ತಾ ಸ್ವೀಕರಿಸುವುದು ಸಾಧ್ಯವಿಲ್ಲ. ಇದು ಬಹುತೇಕ ಹಿರಿಯ ವಯಸ್ಸಿನವರಾದ, ಇಲ್ಲವೇ ಗತ ಕಾಲದ ವಿಚಾರಧಾರೆಯಲ್ಲಿರುವ ಬುದ್ಧಿಜೀವಿಗಳ ತಿಳಿವಳಿಕೆಗೆ ಬಂದ ಹಾಗಿರುವುದಿಲ್ಲ.

ಹಿಂದೂ ಧರ್ಮದ ಮೇಲಿನ ಟೀಕೆಯನ್ನು ಪ್ರಶ್ನಿಸುವುದನ್ನು ಕೂಡ ಧಾರ್ಮಿಕ ಅಸಹಿಷ್ಣುತೆ ಎಂದು ಪ್ರಚಾರ ಮಾಡಲಾಗುತ್ತಿದೆ. ವಿದೇಶಿ ಬಂಡವಾಳ ಹರಿದು ಬರುವ ಈ ಸಮಯದಲ್ಲಿ, ದೇಶದಲ್ಲಿ ಭೀತಿಯ ಅಹಿತಕರ ವಾತಾವರಣವಿದೆ ಎಂದು ಬಿಂಬಿಸುತ್ತಿರುವುದು ಖೇದಕರ. ಸಮಕಾಲೀನವಲ್ಲದ ಹಾಗೂ ಪ್ರಾಯೋಗಿಕವಲ್ಲದ ತಮ್ಮ ಎಡಪಂಥೀಯ ವಿಚಾರಧಾರೆಯಲ್ಲಿ ಬದಲಾವಣೆ ತಂದುಕೊಂಡು ಬುದ್ಧಿಜೀವಿಗಳು ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕಾದುದು ಇಂದಿನ ಅವಶ್ಯಕತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT