ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ ಜಾಡು ಹಿಡಿದು...

ಅಸಹಿಷ್ಣುತೆ ವ್ಯಕ್ತಿಯ ನಡುವೆ ಪ್ರೀತಿ ಹುಟ್ಟಿಸುವ ಬದಲು ಭೀತಿಯನ್ನು ಹುಟ್ಟಿಸುತ್ತದೆ. ಅಸ್ವಸ್ಥತೆಯನ್ನು ಬಿತ್ತುತ್ತಲೇ ಹೋಗುತ್ತದೆ.
Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಈಚೆಗೆ ಭಾರಿ ಸುದ್ದಿ ಮಾಡುತ್ತಿರುವ ಅಸಹಿಷ್ಣುತೆ ಬಗ್ಗೆ ಕೆಲವು ಅನಿಸಿಕೆಗಳನ್ನು ಓದುಗರ ಮುಂದೆ ಇಡಲು ಇಚ್ಛಿಸುತ್ತೇನೆ.
ಅಸಹಿಷ್ಣುತೆ ಎಂಬ ಪದಕ್ಕೆ ಅಸಹನಶೀಲ, ತಡೆದುಕೊಳ್ಳಲಾರದ, ಕ್ಷಮಾಶೀಲನಲ್ಲದ ಎಂಬರ್ಥಗಳಿವೆ.

ಅಸಹಿಷ್ಣುತೆ ಎಂಬುದು ವ್ಯಕ್ತಿಗತವಾದ ಗುಣವೇ ಹೊರತು ದೇಶದ ಸಾರ್ವತ್ರಿಕ ಗುಣವಲ್ಲ ಮತ್ತು ಸಾರ್ವಕಾಲಿಕವಾದುದೂ ಅಲ್ಲ. ಭಾರತೀಯ ಧರ್ಮದ ರೂಢಿಗತವಾದ ಮಾತುಗಳಲ್ಲೇ ಹೇಳುವುದಾದರೆ ಮನುಷ್ಯನನ್ನು ಆಕ್ರಮಿಸಿಕೊಂಡಿರುವ ಅಥವಾ ಆಶ್ರಯಿಸಿಕೊಂಡಿರುವ ಅರಿಷಡ್ವರ್ಗಗಳು ಆರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಈ ಆರು ಗುಣಗಳು ಮನುಷ್ಯನನ್ನು ಈ ಭೂಮಿಗೆ ಬಂಧಿಸಿವೆ.

ಈ ಆರರಲ್ಲಿ ಕೊನೆಯದಾದ ಮತ್ಸರದಲ್ಲಿ ಅಸಹಿಷ್ಣುತೆ ಅಂತರ್ಗತವಾಗಿದೆ. ಇದೊಂದು ವ್ಯಕ್ತಿಗತವಾದ ಗುಣ ಮಾತ್ರ. ಇವನ್ನೆಲ್ಲ ಗೆದ್ದವನು ಮಹಾತ್ಮನಾಗುತ್ತಾನೆ. ಆದರೆ, ಎಲ್ಲರೂ ಮಹಾತ್ಮರಾಗಲಿ ಎಂದು ಆಶಿಸುವುದು ಸರಿಯಲ್ಲ. ಮನುಷ್ಯ ವ್ಯಕ್ತಿತ್ವಕ್ಕೆ ಅನೇಕ ಮಿತಿಗಳಿವೆ. ಆ ಮಿತಿಗಳೇ ಅವನನ್ನು ಈ ಭೂಮಿಗೆ ಬಂದಿಯನ್ನಾಗಿಸಿವೆ.

ಈಗ ಎದ್ದಿರುವ ಅಸಹಿಷ್ಣುತೆಯ ಮಾತು ಮುಖ್ಯವಾಗಿ ಧರ್ಮಸಂಬಂಧಿಯಾದುದಾಗಿದೆ. ಅದರಲ್ಲೂ ಮುಖ್ಯವಾಗಿ ಹಿಂದೂ-ಮುಸ್ಲಿಂ, ಹಿಂದೂ-ಕ್ರೈಸ್ತ ಸಂಬಂಧಿಯಾಗಿದೆ. ಹಾಗೆಯೇ ದೇಶದಲ್ಲಿ ಆಚರಣೆಯಲ್ಲಿರುವ ಅನೇಕಾನೇಕ ಮೌಢ್ಯಗಳನ್ನು ಕುರಿತದ್ದಾಗಿದೆ. ಇವುಗಳನ್ನೇ ಪ್ರಧಾನಿಸಿ  ಸಾಹಿತ್ಯಕ-ಸಾಂಸ್ಕೃತಿಕ ಕ್ಷೇತ್ರದ ಕೆಲವು ಗಣ್ಯರು ಮತ್ತು ಕೆಲವು ಮಾಧ್ಯಮ ಪ್ರಕಾರಗಳು ಅತಿಯಾಗಿ ಬಿಂಬಿಸುತ್ತಿವೆ. ಮೇಲ್ಪದರ ಚಿಂತಕರಾದ ಕೆಲವರಿಗೆ ಸಮಾಜದಲ್ಲಿ ಹೆಸರು ಮಾಡಿಕೊಳ್ಳಲು ಇದೊಂದು ಸುಸಮಯವೂ ಆಗಬಹುದು. ಇದಿರಲಿ.

ಈ ಅಸಹಿಷ್ಣುತೆಯ ಬೇರುಗಳನ್ನು ನಾವು ರಾಮಾಯಣ, ಮಹಾಭಾರತ ಈ ಮಹಾಕಾವ್ಯಗಳಲ್ಲೇ ಕಾಣಬಹುದಾಗಿದೆ. ಕೌರವರ ಜನನ ಪ್ರಸಂಗವನ್ನೇ ತೆಗೆದುಕೊಳ್ಳಿ. ಪಾಂಡುರಾಜನ ಪತ್ನಿಯಾದ ಕುಂತಿಗೆ ಮಕ್ಕಳಾದವೆಂಬ ಸುದ್ದಿ ಕೇಳಿ, ಧೃತರಾಷ್ಟ್ರನ ಹೆಂಡತಿ, ಗರ್ಭವತಿಯಾದ ಗಾಂಧಾರಿಯು ತನ್ನ ಹೊಟ್ಟೆಯನ್ನು ಕಿಚ್ಚಿನಿಂದ ಹಿಸುಕಿಕೊಳ್ಳಲು, ತುಂಡುತುಂಡಾಗಿ ಉದುರಿದ ಪಿಂಡಗಳೇ ಕೌರವರಾಗಿ ಜನ್ಮ ತಳೆದರು.

ಈ ಪ್ರಸಂಗ ವ್ಯಕ್ತಿಯ ಈರ್ಷೆಗೆ (ಅಸಹನೆಗೆ, ಅಸೂಯೆಗೆ, ಅಸಹಿಷ್ಣುತೆಗೆ) ಒಂದು ಉತ್ತಮ ನಿದರ್ಶನವೆನ್ನಬಹುದು. ಅದೇ ರೀತಿ ರಾಮಾಯಣದಲ್ಲಿ ಬರುವ ರಾಮಚಂದ್ರನ ಪಟ್ಟಾಭಿಷೇಕ ಪ್ರಸಂಗ. ದಶರಥ ಮಹಾರಾಜನು ತನ್ನ ಹಿರಿಯ ಮಗನಾದ ರಾಮನಿಗೆ ರಾಜ್ಯಪಟ್ಟಾಭಿಷೇಕ ಮಾಡಬೇಕೆಂದು ಹೊರಟಾಗ, ಅದನ್ನು ಸಹಿಸದ ರಾಣಿ ಕೈಕೆ (ತನ್ನ ತವರಿನ ಸೇವಕಿ ಮಂಥರೆಯಿಂದ ಪ್ರಚೋದಿತಳಾಗಿ) ತನ್ನ ಮಗನಾದ ಭರತನಿಗೆ ರಾಜ್ಯಪಟ್ಟಾಭಿಷೇಕವಾಗಬೇಕೆಂದು ಆಗ್ರಹಿಸಿರುವುದು ಕೂಡ ಅಸಹಿಷ್ಣುತೆಗೆ ಇನ್ನೊಂದು ನಿದರ್ಶನವಾಗಿದೆ. ಮೇಲಿನ ಎರಡೂ ಅಸಹಿಷ್ಣುತೆ ಪ್ರಸಂಗಗಳು ಮುಂದೆ ಹೇಗೆ ಅನೇಕ ಕಷ್ಟ ಪರಂಪರೆಗೆ ನಾಂದಿ ಹಾಡಿದವು ಎಂಬುದು ಸುವಿದಿತ.

ಇಂಥ ಹಲವಾರು ಪ್ರಸಂಗಗಳು ನಮ್ಮ ಸಾಹಿತ್ಯ, ಪುರಾಣೇತಿಹಾಸಗಳಲ್ಲಿ ಲಭ್ಯ. ಆಂತರಿಕವಾಗಿ ನೋಡಿದರೆ ಅವೆಲ್ಲ ವ್ಯಕ್ತಿ ಸಂಬಂಧಿತವಾದ ಗುಣಗಳೇ ಆಗಿವೆ. ನಮ್ಮ ದೈನಂದಿನ ಬದುಕಿನಲ್ಲೂ ವ್ಯಕ್ತಿಗತವಾದ ಅಸಹನೆಯ ಈ ಗುಣ ಆಗಾಗ್ಗೆ ಪ್ರಕಟಗೊಳ್ಳುತ್ತಲೇ ಇರುತ್ತದೆ.

ಕುಟುಂಬ ವ್ಯವಸ್ಥೆಯಿಂದ ಹಿಡಿದು ಸಾಮಾಜಿಕ ವಲಯಗಳಲ್ಲಿ ಜೀವಂತವಾಗಿ ಉಳಿದುಕೊಂಡು ಬಂದಿರುವ ಈ ಗುಣ ಆಗಾಗ್ಗೆ ತನ್ನದೇ ಆದ ನೇತ್ಯಾತ್ಮಕ ಮನಸ್ಥಿತಿಯನ್ನು ಪ್ರಕಟಪಡಿಸುತ್ತಲೇ ಇರುತ್ತದೆ. ಆಗ ಅದು ವ್ಯಕ್ತಿಯ ನಡುವೆ ಪ್ರೀತಿ ಹುಟ್ಟಿಸುವ ಬದಲು ಭೀತಿಯನ್ನು ಹುಟ್ಟಿಸುತ್ತದೆ. ಅಸ್ವಸ್ಥತೆಯನ್ನು ಬಿತ್ತುತ್ತಲೇ ಹೋಗುತ್ತದೆ.

ವ್ಯಕ್ತಿಗತವಾದ ಈ ಗುಣ ಸಾಮೂಹಿಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಅಲ್ಲಿಯೂ ಅಸ್ವಸ್ಥತೆ, ಅಸಮಾನತೆಗಳು ಬೀಜಾಂಕುರವಾಗುತ್ತವೆ. ನಮ್ಮ  ದೇಶದ ಜಾತಿ ವ್ಯವಸ್ಥೆಯಲ್ಲಿ ಈ ಪರಿಸ್ಥಿತಿ ಢಾಳಾಗಿ ಎದ್ದು ಕಾಣುತ್ತದೆ. ಅದರಲ್ಲೂ ಅಸ್ಪೃಶ್ಯರಾದವರ ದೇವಾಲಯದ ಪ್ರವೇಶದ ನಿಷೇಧ, ಸವರ್ಣೀಯರೊಂದಿಗೆ ಸಾಮಾಜಿಕ ಸಮಾನತೆಯ ನಿರಾಕರಣೆ ಇಲ್ಲೆಲ್ಲ ಅಸಹಿಷ್ಣುತೆಯ ವಿರಾಟ್‌ರೂಪವನ್ನು ಕಾಣಬಹುದು. 

ಸಾಮೂಹಿಕ ಅಸಹಿಷ್ಣುತೆಯ ಮತ್ತೊಂದು ಕ್ರೂರ ರೂಪ ಮರ್ಯಾದೆಗೇಡಿ ಹತ್ಯೆ ಹಾಗೂ ಮಹಿಳೆಯರಿಗೆ ಕೆಲವು ದೇವಾಲಯಗಳಲ್ಲಿ ಪೂಜೆಗೆ ಅವಕಾಶವಿಲ್ಲದಿರುವುದು ಮತ್ತು ಪ್ರವೇಶ ನಿಷೇಧವಿರುವುದು. ಇಂಥ ಹತ್ತು ಹಲವು ನಿದರ್ಶನಗಳು ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಾಗಿವೆ ಮತ್ತು ಇವೆಲ್ಲದರ ಸ್ಥಾಯಿಭಾವ ಅಸಹಿಷ್ಣುತೆಯೇ ಆಗಿದೆ.

ಮುಖ್ಯವಾಗಿ, ವ್ಯಕ್ತಿಯ ಹೀನಗುಣವಾಗಿ ಹೊರಹೊಮ್ಮಿ  ಕ್ರಮೇಣ ಸಾಮೂಹಿಕ ಸಂಕರವಾಗಿ ಬೆಳೆಯುವ ಅಸಹಿಷ್ಣುತೆ ಸ್ವಸ್ಥ ಮನಸ್ಸನ್ನು ಅಸ್ವಸ್ಥಗೊಳಿಸುವ ಹಾಗೆ ಸಮಾಜವನ್ನೂ ಅಸ್ವಸ್ಥಗೊಳಿಸುವುದು. ದೇಶದ ಮಾತಾಗಿರುವ ಅಸಹಿಷ್ಣುತೆಯನ್ನು ಕಡೆಗಣಿಸಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಅದೇ ಎಲ್ಲವೂ ಅಲ್ಲ ಎಂಬ ಎಚ್ಚರಿಕೆ ನಮಗಿರಬೇಕಷ್ಟೆ.

ಈ ಬಗೆಯ ಅಸ್ವಸ್ಥತೆ ಸಮಾಜದ ನೈಜಸಮಸ್ಯೆಗಳನ್ನು ಮರೆಮಾಚಿ ಪ್ರಕ್ಷುಬ್ಧತೆಯನ್ನುಂಟು ಮಾಡುವುದಲ್ಲದೆ ಬೇರೇನಲ್ಲ. ದೇಶದ ಬಡತನ, ಜನಸಂಖ್ಯಾ ಸ್ಫೋಟ, ಜೀವನ ಭ್ರಷ್ಟತೆ ಈ ಮುಂತಾದ ದೇಶದ ನೈಜಸಮಸ್ಯೆಗಳು ಈ ಅಬ್ಬರದಲ್ಲಿ ಎರಡನೆಯ ಸ್ಥಾನಕ್ಕೆ ಜಾರಿವೆ.

ಹಾಗಾಗಿ ನೈಜ ಸಮಸ್ಯೆಗಳಿಗೆ ಆದ್ಯತೆಯಿತ್ತು, ಆಮೂಲಾಗ್ರವಾಗಿ ಅವನ್ನು ಪರಿಹರಿಸುವಲ್ಲಿ ನಾವು ಕಾರ್ಯಪ್ರವೃತ್ತರಾಗುವತ್ತ ಗಮನಹರಿಸಬೇಕು. ಆವಾಗ ಅಸಹಿಷ್ಣುತೆಯ ಜೊತೆಗೆ ಎಲ್ಲ ಭಾವುಕ ಸಂಗತಿಗಳಿಗೆ ಕೊನೆ ಹಾಡಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT