ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ ಮತ್ತು ಅಭಿವ್ಯಕ್ತಿ

ಧಾರ್ಮಿಕ ಅಸಹಿಷ್ಣುತೆ ಮತ್ತು ಅಭಿವ್ಯಕ್ತಿಯು ತಮ್ಮ ಮಿತಿಗಳನ್ನು ಮೀರುತ್ತಿರುವುದರಿಂದ ಜಟಿಲತೆ
Last Updated 22 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಗ್ರಾಮವನ್ನು ಸುತ್ತುವರಿದ ಸೇನಾಧಿಕಾರಿ ಆ ಊರಿನ ಪುರಪ್ರಮುಖನಿಗೆ ಸುದ್ದಿ ಕಳಿಸಿದ, ‘ನೀವು ಒಬ್ಬ ದ್ರೋಹಿಯನ್ನು ಬೈತಿಟ್ಟುಕೊಂಡಿದ್ದೀರಿ. ಅವನನ್ನು ನಮಗೊಪ್ಪಿಸದಿದ್ದರೆ ಇಡೀ ಗ್ರಾಮವನ್ನು ಧ್ವಂಸ ಮಾಡುತ್ತೇವೆ’.

ಆ ಗ್ರಾಮವು ಒಬ್ಬ ಆಗಂತುಕನಿಗೆ ರಕ್ಷಣೆ ನೀಡಿದ್ದು ನಿಜ. ಆದರೆ ಅವನು ಸಾತ್ವಿಕ, ಪ್ರಾಮಾಣಿಕ ಎಂಬುದೂ ಸತ್ಯ. ಪುರ ಪ್ರಮುಖನಿಗೆ ಚಿಂತೆಯಾಯಿತು. ಅಲ್ಲದೆ ಊರಿನ ರಕ್ಷಣೆಯೂ ಅವನ ಜವಾಬ್ದಾರಿಯೇ. ಜನಾಭಿಪ್ರಾಯದಿಂದಲೂ ಈ ಸಮಸ್ಯೆ ಬಗೆಹರಿಯಲಿಲ್ಲ.

ಕೆಲವರು ಆಗಂತುಕನನ್ನು ಸೇನೆಗೆ ಒಪ್ಪಿಸಬೇಕೆಂದರು. ಇನ್ನುಕೆಲವರು ಬೇಡವೆಂದರು. ಕೊನೆಗೆ ಧರ್ಮಾಧಿಕಾರಿಯೊಂದಿಗೆ ಪುರಪ್ರಮುಖ ಸಮಾಲೋಚಿಸಿದ. ರಾತ್ರಿಯಿಡೀ ಶಾಸ್ತ್ರಗ್ರಂಥಗಳನ್ನು ತಿರುವಿ ಹಾಕಿದರು. ಅವುಗಳಲ್ಲೊಂದರಲ್ಲಿ ಹೀಗಿತ್ತು- ‘ನಾಡಿಗಾಗಿ ಒಬ್ಬ ಬಲಿಯಾದರೂ ನಾಡು ಉಳಿಯುವುದು ಮುಖ್ಯ’.

ಪುರಪ್ರಮುಖ ಆಗಂತುಕನನ್ನು ಸೇನೆಗೆ ಒಪ್ಪಿಸಿದ. ಮರುದಿನವಿಡೀ ಅವನ ಆಕ್ರಂದನ ಕಣಿವೆಗಳಲ್ಲಿ ವ್ಯಾಪಿಸಿತು. ಚಿತ್ರಹಿಂಸೆಗೆ ಗುರಿಪಡಿಸಿ ಅವನನ್ನು ಕೊಲ್ಲಲಾಯಿತು. ಇಪ್ಪತ್ತು ವರ್ಷಗಳ ಬಳಿಕ ಆ ಊರಿಗೆ ಸಂತ(ಪ್ರವಾದಿ)ನೊಬ್ಬ ಬಂದ. ನೇರವಾಗಿ ಪುರಪ್ರಮುಖನ ಬಳಿ ಸಾಗಿ ನುಡಿದ - ‘ನೀವು ಹೀಗೆ ಮಾಡಬಹುದೆ? ಈ ನಾಡಿನ ಉದ್ಧಾರಕ್ಕಾಗಿ ಭಗವಂತನೇ ಕಳಿಸಿಕೊಟ್ಟಿದ್ದ ಮನುಷ್ಯನಾಗಿದ್ದ ಅವನನ್ನು ಸೇನೆಗೆ ಒಪ್ಪಿಸಿ ಕೊಲ್ಲಿಸಿದಿರಲ್ಲ’!

‘ನಾನೆಲ್ಲಿ ತಪ್ಪು ಮಾಡಿದೆ?’ ಪುರಪ್ರಮುಖ ಪ್ರತಿ ವಾದಿಸಿದ. ‘ನಾವು ಧರ್ಮಗುರುಗಳು. ಶಾಸ್ತ್ರಗ್ರಂಥಗಳನ್ನು ನೋಡಿದೆವು. ಅದರಲ್ಲಿದ್ದಂತೆ ನಡೆದುಕೊಂಡೆವು’.

‘ಅಲ್ಲೇ ನೀವು ಎಡವಿದ್ದು’ ನುಡಿದ ಸಂತ. ‘ಶಾಸ್ತ್ರಗಳಲ್ಲಿ ನೀವು ನೋಡಿದಿರಿ. ಆದರೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿತ್ತು ನೀವು!’

ಸಮಕಾಲೀನ ಸಂದರ್ಭವು ಸಂಕೀರ್ಣತೆಯಿಂದ ತುಂಬಿದೆ. ಏಕೆಂದರೆ, ಬೇರೆಬೇರೆ ಕಾರಣಕ್ಕಾಗಿ ಸಂಘರ್ಷವು ಎಲ್ಲೆ ಮೀರುತ್ತಿದೆ. ಒಂದೆಡೆ ಧಾರ್ಮಿಕ ಅಸಹಿಷ್ಣುತೆ; ಮತ್ತೊಂದು ಕಡೆ ಅಭಿವ್ಯಕ್ತಿಯ ತೀವ್ರತೆ. ಇವೆರಡರ ನಡುವಿನ ಸಂಘರ್ಷವು ಸಮಕಾಲೀನ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದೆ; ಕಲಕಿದೆ. ಅಸಹಿಷ್ಣುತೆಯ ಹೆಸರಲ್ಲಿ ರಕ್ತಪಾತ ಅಥವಾ ಜೀವಹಿಂಸೆಗೆ ಪ್ರಚೋದಿಸಿದರೆ, ಕೆಲವರು ಇದನ್ನು ನೆಪ ಮಾಡಿಕೊಂಡು ಧಾರ್ಮಿಕ ಗ್ರಂಥವೊಂದನ್ನು ಸುಡಬೇಕೆಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಸ್ವತಂತ್ರ ವಿವೇಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕೆಂಬುದರಲ್ಲಿ ಎರಡು ಮಾತಿಲ್ಲ. ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುತ್ತ ಹೋದರೆ ಯಾವ ಅಡ್ಡಿಯಿಲ್ಲ. ಸ್ಥಾಪಿತ ಮೌಲ್ಯಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಾಮರ್ಶೆಗೆ ಎತ್ತಿಕೊಂಡಾಗ, ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಲು ಹೊರಟಾಗ ಸಮಸ್ಯೆ ಎದುರಾಗುತ್ತದೆ.

ಆಧುನಿಕ ಯುಗವೆಂದರೆ, ವೈಜ್ಞಾನಿಕ ಯುಗ. ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಟಿಕೋನದೊಂದಿಗೆ ವಿಮರ್ಶಿಸುವ ಸಂದರ್ಭಗಳು ಅಧಿಕ. ಹಳೆಯ ವಿಚಾರವನ್ನು ಬಿಟ್ಟುಕೊಡಲು ಕೆಲವರು ಸಿದ್ಧರಿಲ್ಲ. ಹಳೆ ವಿಚಾರಗಳಿಗೆ ಒಗ್ಗಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಪ್ರಾಚೀನತೆಗೆ ಜೋತುಬಿದ್ದು, ವೈಚಾರಿಕತೆಯನ್ನು ಒಪ್ಪಿಕೊಳ್ಳಲಾರದ ಸ್ಥಿತಿ. ವೈಚಾರಿಕತೆಯನ್ನು ಒರೆಗಲ್ಲಿಗೆ ಹಚ್ಚುತ್ತ, ಪ್ರಾಚೀನತೆಯನ್ನು ಸ್ವೀಕರಿಸಲಾರದ ಸ್ಥಿತಿ. ಇವರೆಡು ತೀರದ ನಡುವೆ ಭಿನ್ನತೆ ಇರುವುದು ಸಹಜ.

ಸ್ವತಂತ್ರ ಆಲೋಚನೆಯನ್ನು ಮತ್ತು ಪ್ರಗತಿಪರ ಚಿಂತನೆಯನ್ನು ಒಪ್ಪಿಕೊಳ್ಳದವರಿಂದ ಅಸಹನೆ. ಜಗತ್ತು ಪರಿವರ್ತನೆಯ ಪ್ರಕಾಶದಿಂದ ದೂರ ಇರಬೇಕೆಂದು ಬಯಸುವುದು ಸರಿಯೆ? ಒಂದುಪಕ್ಷ ಹೀಗೆ ಬಯಸುವುದಾದರೆ, ಜಗತ್ತು ಕತ್ತಲಿನತ್ತ ಕ್ರಮಿಸಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಈ ಸಂಬಂಧ ಏನು ಹೇಳುತ್ತಾರೆ? ‘ಒಂದಾನೊಂದು ಕಾಲದಲ್ಲಿ ಮಾಡಿದ ಆಚಾರ - ವಿಚಾರಗಳು ಮತ್ತೊಂದು ಕಾಲಕ್ಕೆ ಮೌಢ್ಯ ಆಚರಣೆಗಳಾಗುವ ಸಂಭವ. ಅದಕ್ಕಾಗಿ ಮರುಶೋಧನೆ ಮತ್ತು ಪರಿಶೀಲನೆ ಅತ್ಯಗತ್ಯ. ಇದಕ್ಕೆ ಶೋಧನೆ ಹಾಗೂ ಅಂತರಂಗದ ಅವಲೋಕನೆ ಎರಡೂ ಬೇಕಾಗುತ್ತದೆ’. ವಿವೇಕಾನಂದರ ಈ ವಾದ ಸರಣಿಯನ್ನು ಎಷ್ಟುಜನ ಸಂಪ್ರದಾಯವಾದಿಗಳು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ!

ಅಮಾನವೀಯ ಧಾರ್ಮಿಕ ಅಸಹಿಷ್ಣುತೆಯು ಅತ್ಯಂತ ಅಪಾಯಕಾರಿ. ಅದಕ್ಕೆ ಕೇವಲ ಕಣ್ಣಿದ್ದರೆ ಸಾಲದು; ಹೃದಯವೂ ಇರಬೇಕಾಗುತ್ತದೆ. ಹೃದಯಹೀನ ಧಾರ್ಮಿಕತೆಯು ಅರ್ಥಹೀನ. ಧರ್ಮದ ಹೃದಯವೇ ಮಾನವೀಯತೆ. ಅದಿಲ್ಲದಿದ್ದರೆ ಧರ್ಮವು ಶುಷ್ಕ. ಅದರಂತೆ ಹೃದಯಹೀನ ವಿಚಾರಗಳು ಶುಷ್ಕ ಅನಿಸಿಕೊಳ್ಳುತ್ತವೆ. ಅಭಿವ್ಯಕ್ತಿಯ ವಿರುದ್ಧ ಪ್ರತಿಗಾಮಿತನ ಸೂಕ್ತವಲ್ಲ. ತಾತ್ತ್ವಿಕತೆ ಜೊತೆಗೆ ಮಾನವೀಯತೆ ಸೇರಿದರಷ್ಟೇ ಅದು ಧರ್ಮ ಎನಿಸಿಕೊಳ್ಳುತ್ತದೆ. ಅಭಿವ್ಯಕ್ತಿಯ ನೆಪದಲ್ಲಿ ಅತಿವಾದವು ಸಮಂಜಸವಲ್ಲ.

ಮಿತಿಯ ಒಳಗಡೆ ತಮ್ಮ ಕಾರ್ಯವನ್ನು ನಿರ್ವಹಿಸುವುದು ಇಂದಿನ ಅಗತ್ಯ. ಧಾರ್ಮಿಕ ಅಸಹಿಷ್ಣುತೆ ಮತ್ತು ಅಭಿವ್ಯಕ್ತಿಯು ತಮ್ಮ ಮಿತಿಗಳನ್ನು ಮೀರುತ್ತಿರುವುದರಿಂದ ಜಟಿಲತೆ. ಎರಡು ಹಂತದಲ್ಲೂ ಅತಿವಾದ (extremity). ಯಾವುದೇ ಅತಿಯು ಅವನತಿಗೆ ಕಾರಣವಾಗದಿರದು. ಸಂಘರ್ಷವನ್ನು ಜೀವಂತವಾಗಿ ಇಡಬಾರದೆನ್ನುವವರು ಈ ಸತ್ಯವನ್ನು ಬೇಗನೆ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪ್ರಜ್ಞಾವಂತ ನಡೆಯು ಪರಿಸ್ಥಿತಿಯ ತೀವ್ರತೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.

ಚುನಾವಣೆ ನಡೆದಾಗಲೆಲ್ಲ ಅಧಿಕಾರದ ಬದಲಾವಣೆ. ಯಾರೂ ಶಾಶ್ವತವಾಗಿ ದೇಶವನ್ನು ಆಳಲು ಸಾಧ್ಯವಿಲ್ಲ. ಪ್ರಜೆಗಳ ಅಭಿಮತವೇ ಅಂತಿಮ. ಯಾವ್ಯಾವ ಪಕ್ಷದ ಅಧಿಕಾರದಲ್ಲಿ ಎಂತೆಂಥ ವಿದ್ಯಮಾನ ನಡೆಯಿತೆಂಬುದನ್ನು ಪ್ರಜೆಗಳು ಗಮನಿಸುತ್ತಾರೆ. ಕಾರಣ ಉತ್ತಮ ವಿದ್ಯಮಾನಗಳು ಹೆಚ್ಚು ಅಪ್ಯಾಯಮಾನ. ರಾಷ್ಟ್ರಧರ್ಮವನ್ನು ಎಲ್ಲರೂ ಗೌರವಿಸಬೇಕಾಗುತ್ತದೆ. ರಾಷ್ಟ್ರಧರ್ಮವೇ ಪ್ರಥಮ; ನಂತರ ಮತಧರ್ಮ. ಎರಡೂ ಧರ್ಮಗಳು ಮಾನವ ಪ್ರೇಮವನ್ನು ಬೋಧಿಸುತ್ತವೆ.

ಮಾನವ ಪ್ರೇಮವನ್ನು ಮೀರಿದ ಧರ್ಮ ಇರಲಾರದು; ಇರಲಾಗದು. ಬದುಕಿನಲ್ಲಿ ಇರಬೇಕಾದುದು ಸಹನೆ. ಸ್ವಧರ್ಮದಲ್ಲಿ ನಿಷ್ಠೆ ಇರಲಿ. ಪರಧರ್ಮದಲ್ಲಿ ಸಹಿಷ್ಣುತೆ ಇರಬೇಕೆಂಬುದು ಭಾರತೀಯರ ಧ್ಯೇಯವಾಕ್ಯ. ಪರಧರ್ಮಗಳಲ್ಲಿ ಪ್ರಗತಿಪರವಾದ ಹಾಗೂ ಜೀವಪರವಾದ ಧರ್ಮವು ಸೇರಿದೆ. ‘ಬೈದವರೆನ್ನ ಬಂಧುಗಳೆಂಬೆ’ ಮಾತ್ರವಲ್ಲ ‘ನಿಂದಿಸಿದವರೆನ್ನ ಆಜನ್ಮ ಬಂಧುಗಳೆಂಬೆ’ ಎಂಬ ಬಸವವಾಣಿ. ಸಾಧು-ಸಂತರು-ದಾಸರು ಸಹಿಷ್ಣುತೆಯ ಸಂಬಂಧ ಸಾಕಷ್ಟು ಪ್ರತಿಪಾದಿಸಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಅದನ್ನೆಲ್ಲ ಅರ್ಥ ಮಾಡಿಕೊಂಡು, ಆಚರಿಸುವಂತಾದರೆ ಅಸಹಿಷ್ಣುತೆಗೆ ಅವಕಾಶ ಇನ್ನೆಲ್ಲಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT