ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ ಮತ್ತು ರಾಜಕೀಯ ಹಿತ

ರಾಜಕೀಯ ಪಕ್ಷಗಳು ಶೂನ್ಯದಿಂದ ಅಸಹಿಷ್ಣುತೆ ಉಂಟು ಮಾಡುವುದು ಅಸಾಧ್ಯ
Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ತಮ್ಮ ಬಲಪಂಥೀಯ ವಿಚಾರಗಳನ್ನು ಪ್ರತಿಪಾದಿಸಲು ಪೂರ್ವಭಾವಿಯಾಗಿ ‘ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಅಸಹಿಷ್ಣುತೆ ಕುರಿತ ಗೋಷ್ಠಿಯಲ್ಲಿ  ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಹೊಸ ಪ್ರಶ್ನೆಗಳಾಗಲೀ ಉತ್ತರಗಳಾಗಲೀ ಹೊರಹೊಮ್ಮಲಿಲ್ಲ’ ಎಂದು ಡಾ.ಅಜಕ್ಕಳ ಗಿರೀಶ ಭಟ್ ಹೇಳಿದ್ದಾರೆ.

(ಸಂಗತ, ಫೆ. 1). ‘ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಸೆಕ್ಯುಲರಿಸಂ ಎಂಬ ತತ್ವವನ್ನು ಈ ದೇಶ ಪಾಲಿಸುತ್ತ ಬಂದಿರುವಾಗ... ‘ಕೋಮುವಾದಿ’, ‘ಅಸಹಿಷ್ಣು’ ಎಂಬ ಐಡೆಂಟಿಟಿ ಮಾತ್ರವೇ ಹೊಂದಿರುವ ಬಿಜೆಪಿ ಸ್ವಾತಂತ್ರ್ಯಾನಂತರ ಬಹುಕಾಲ ಅಧಿಕಾರದಿಂದ ದೂರವೇ ಇದ್ದಾಗ ಅಸಹಿಷ್ಣುತೆ ಹೇಗೆ ಬೆಳೆಯಲು ಸಾಧ್ಯವಾಯಿತು?’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಸಮಾಜದಲ್ಲಿ ಎಲ್ಲ ಕಾಲಕ್ಕೂ ಇದ್ದೇ ಇರುವ ಅಸಹಿಷ್ಣುತೆಯನ್ನು ರಾಜಕೀಯ ಪಕ್ಷಗಳು ತಮ್ಮ ಹಿತಕ್ಕಾಗಿ ದುಡಿಸಿಕೊಳ್ಳಬಲ್ಲವೇ ವಿನಾ ಶೂನ್ಯದಿಂದ ಅಸಹಿಷ್ಣುತೆಯನ್ನು ಉಂಟು ಮಾಡಲು ಯಾವುದೇ ರಾಜಕೀಯ ಶಕ್ತಿಗೂ ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರ ಅದನ್ನೇ ಬಲಪಂಥೀಯ ಪಕ್ಷಗಳು ಮಾಡಿದ್ದು. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿಗೆ ಅಧಿಕಾರ ಸಿಗಲಿಲ್ಲವಾದರೂ ಬಿಜೆಪಿಯನ್ನೂ ಒಳಗೊಂಡು ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳೂ ರಾಜಕೀಯ ಅಧಿಕಾರಕ್ಕಾಗಿ ಅಂದಿನಿಂದಲೂ ನಾನಾ ಪ್ರಯತ್ನಗಳನ್ನು ನಡೆಸಿಕೊಂಡೇ ಬಂದಿವೆ.

1951ರಲ್ಲಿ ಪ್ರಾರಂಭವಾದ ಭಾರತೀಯ ಜನಸಂಘ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹಣಕಾಸು ಹಾಗೂ ವಿದೇಶಾಂಗ ನೀತಿಗಳನ್ನು ವಿರೋಧಿಸುತ್ತಲೇ ಬೆಳೆಯಿತು. ತುರ್ತು ಪರಿಸ್ಥಿತಿ ನಂತರ ದೇಶದಾದ್ಯಂತ ಎದ್ದಿದ್ದ ಇಂದಿರಾ ಗಾಂಧಿ ವಿರೋಧಿ ಅಲೆಯಿಂದಾಗಿ ಜನಸಂಘವು ಸಮ್ಮಿಶ್ರ ಸರ್ಕಾರ ನಡೆಸಿತಾದರೂ ಹೆಚ್ಚಿನ ರಾಜಕೀಯ ಅಧಿಕಾರವನ್ನೇನೂ ಅನುಭವಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಮುಂದೆ ಜನಸಂಘ ವಿಲೀನಗೊಂಡು ಬಿಜೆಪಿ ಎಂಬ ಹೊಸ ಹೆಸರಿನಿಂದ ಅದು ತಲೆಯೆತ್ತಿತು. 

ಸಂವಿಧಾನದ ಎಲ್ಲೆಕಟ್ಟುಗಳೊಳಗೆ ಇದ್ದುಕೊಂಡೇ ಕ್ರಿಯಾಶೀಲವಾಗಿರುವಷ್ಟೂ ಕಾಲ ತಾನು ಉದ್ಧಾರವಾಗಲಾರೆ. ಅನಗತ್ಯ ಗಲಭೆ, ವಿವಾದಗಳನ್ನೆಬ್ಬಿಸಿದಾಗ ಮಾತ್ರ ಅಧಿಕಾರ ವಹಿಸಿಕೊಳ್ಳಲು ಸಾಧ್ಯ ಎಂದು ಯೋಚಿಸಿದ ಬಲಪಂಥೀಯ ಪಕ್ಷಗಳು 40 ವರ್ಷಗಳ ಕಾಲ ತಣ್ಣಗಿದ್ದ ಬಾಬ್ರಿ ಮಸೀದಿ ವಿವಾದವನ್ನು ಅನಿರೀಕ್ಷಿತವಾಗಿ ಮುನ್ನೆಲೆಗೆ ತಂದವು.

1986ರಲ್ಲಿ ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ರಥಯಾತ್ರೆ, ರಾಮಮಂದಿರ ನಿರ್ಮಾಣದ ವಿವಾದವನ್ನೆಬ್ಬಿಸಿದವು. ಬಾಬ್ರಿ ಮಸೀದಿ ನೆಲಸಮವಾದ ಮೇಲೆ, ಅಷ್ಟು ಕಾಲ ಎಂಟು, ಹತ್ತು ಸೀಟುಗಳನ್ನು ಗೆಲ್ಲುತ್ತಿದ್ದ ಬಿಜೆಪಿಗೆ 9ನೇ ಲೋಕಸಭಾ ಚುನಾವಣೆಯ ವೇಳೆಗೆ ಇದ್ದಕ್ಕಿದ್ದಂತೆ 85 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು. ಇದಾದ ಎರಡೇ ವರ್ಷಗಳಲ್ಲಿ ನಡೆದ 10ನೇ ಲೋಕಸಭಾ ಚುನಾವಣೆಯಲ್ಲಿ ಈ ಗೆಲುವಿನ ಸಂಖ್ಯೆ 121ಕ್ಕೇರಿತು.

ಮುಂದೆ 2002ರಲ್ಲಿ ನಡೆದ ಗೋಧ್ರೋತ್ತರ ಹತ್ಯೆಯ ನಂತರ ಯೋಗಾಯೋಗವೆಂಬಂತೆ ಮತ್ತೆಂದೂ ಹಿಂದಿರುಗಿ ನೋಡದಂತೆ ಬೆಳೆಯುತ್ತಲೇ ಬಂದ ಬಿಜೆಪಿ 12 ವರ್ಷಗಳ ನಂತರ ಸ್ಪಷ್ಟ ಬಹುಮತ ಪಡೆದು ದೇಶದ ಚುಕ್ಕಾಣಿ ಹಿಡಿಯಿತು. ಅಸಹಿಷ್ಣುತೆ ಹೊಗೆಯಾಡಿದಾಗಲೇ ತನ್ನ ಉಳಿವು ಸಾಧ್ಯ ಎಂಬ ಪಾಠವನ್ನು ಇಂದು ಎಲ್ಲ ರಾಜಕೀಯ ಪಕ್ಷಗಳೂ ಚೆನ್ನಾಗಿಯೇ ರಕ್ತಗತ ಮಾಡಿಕೊಂಡಿವೆ.

ಹೀಗೆ ಸಮಾಜದಲ್ಲಿನ ಅಸಹಿಷ್ಣುತೆಯನ್ನು ಅತ್ಯಂತ ವ್ಯವಸ್ಥಿತವಾಗಿ ದುಡಿಸಿಕೊಂಡೇ ಬೆಳೆದ ಮತ್ತು ಅಧಿಕಾರ ಸಿಗುವವರೆಗೂ ಈ ಅಸಹಿಷ್ಣುತೆಯನ್ನು ಬೆಳೆಸುತ್ತಲೇ ಉಸಿರಾಡಿಕೊಂಡು ಬಂದಿರುವ ಒಂದು ಪಕ್ಷದ ಪರ ವಹಿಸಿ ವಾದಿಸುತ್ತ ‘ಬಹುಕಾಲ ಅಧಿಕಾರದಿಂದ ದೂರವೇ ಇರುವ ಪಕ್ಷದಿಂದ ಅಸಹಿಷ್ಣುತೆ ಹೇಗೆ ಬೆಳೆಯಲು ಸಾಧ್ಯವಾದೀತು?’ ಎಂದು ಪ್ರಶ್ನಿಸಿದರೆ ಅದನ್ನು ಅಮಾಯಕತೆ ಎನ್ನುವುದೋ ಅಥವಾ ಕುರುಡುತನವೆನ್ನುವುದೋ ತಿಳಿಯದಾಗಿದೆ.

ಚಂಪಾ ಅವರಿಂದ ಹಿಡಿದು ದೇವನೂರ ಮಹಾದೇವ ಅವರವರೆಗೆ ಪ್ರಶಸ್ತಿ ವಾಪಸಾತಿ ಮಾಡಿರುವ ಕನ್ನಡದ ಪ್ರತಿ ಸಾಹಿತಿಯೂ ತಮ್ಮದು ಅಸಹಿಷ್ಣುತೆಯ ವಿರುದ್ಧದ ಹೋರಾಟ, ಪ್ರಭುತ್ವದ ವಿರುದ್ಧದ ಹೋರಾಟವಲ್ಲ ಎಂದು ಪದೇಪದೇ ಸ್ಪಷ್ಟಪಡಿಸಿದ್ದರೂ ಶ್ರೀಯುತರು ಹೀಗೆಂದಿರುವುದು ಆಧಾರರಹಿತವೇ ಆಗಿದೆ.

‘ಭಾರತದಲ್ಲಿರುವ ಕ್ರೈಸ್ತ, ಇಸ್ಲಾಮಿನಂತೆಯೇ ಹಿಂದೂ ಎಂಬೊಂದು ಕೆಟಗರಿಯನ್ನು ಪೋಷಿಸಿಕೊಂಡು ಬಂದ ಸೆಕ್ಯುಲರ್‌ವಾದ ಕೂಡ ಹಿಂದೂಗಳ ಏಕರೂಪೀಕರಣದ ಹೊಣೆ ಹೊರಬೇಕಾಗುತ್ತದೆ’ ಎಂಬ ಅವರ ವಾದವಂತೂ ಹಿಂದುತ್ವದ ಸ್ವಂತಿಕೆ, ಅನನ್ಯತೆಗಳನ್ನೇ ಪ್ರಶ್ನಿಸುವಂತಿದೆ. ಇವರ ವಾದವನ್ನೇ ಒಪ್ಪುವುದಾದರೆ ಹಿಂದುತ್ವವೆಂಬುದು ಆಳುವ ವರ್ಗದ ‘ಅಲ್ಪಸಂಖ್ಯಾತ ತುಷ್ಟೀಕರಣ’ದ ಫಲವಾಗಿ ಹುಟ್ಟಿದ ಶನಿಸಂತಾನವೆಂದು ತೀರ್ಮಾನಿಸಬೇಕಾಗುತ್ತದೆ.

ಹಿಂದುತ್ವವೆಂಬುದು ಇಂತಹ ಕ್ಷುಲ್ಲಕ ರಾಜಕೀಯ ವಿದ್ಯಮಾನಗಳಿಂದ ಪ್ರೇರೇಪಣೆಗೊಂಡು ಚೈತನ್ಯ ಪಡೆದುಕೊಳ್ಳುವಷ್ಟು ದುರ್ಬಲವಾದುದಲ್ಲ. 1964ರಲ್ಲಿ ಸ್ಥಾಪನೆಗೊಂಡ ವಿಎಚ್‌ಪಿ ಕ್ರಮೇಣ ಹಿಂದುತ್ವವಾದಿ ರಾಜಕೀಯ ಚಟುವಟಿಕೆಗಳ ಆಡುಂಬೊಲವಾಗಿ ಪರಿವರ್ತಿತವಾದ ಮೇಲೆ ಸ್ವಾಮಿ ಚಿನ್ಮಯಾನಂದ, ದಯಾನಂದ ಸರಸ್ವತಿ (ಇತ್ತೀಚೆಗೆ ತೀರಿಕೊಂಡ, ಮೋದಿಯವರ ರಾಜಕೀಯ ಗುರು) ಮುಂತಾದ ಅದರ ಸಂಸ್ಥಾಪಕ ಸದಸ್ಯರು ವಿಎಚ್‌ಪಿಯೊಂದಿಗಿನ ತಮ್ಮ ಸಂಬಂಧವನ್ನು ಸದ್ದಿಲ್ಲದೆ ತೊರೆದುಕೊಂಡು ಹೊರಬಂದರು, ಬೇರೆ ಹಲವು ಮಾರ್ಗಗಳಲ್ಲಿ ಸಾಮಾಜಿಕ ಚಟುವಟಿಕೆ ಮುಂದುವರಿಸಿದರು.

ಇಂದಿನ ಅಸಹಿಷ್ಣುತೆಯ ಯುಗದಲ್ಲಿ ಹಿಂದೂಗಳಿಗೆ ಇಂತಹವರ ಆದರ್ಶಗಳನ್ನು ಪರಿಚಯಿಸಬೇಕೇ ವಿನಾ ಆಳುವ ಪಕ್ಷದ ದೌರ್ಬಲ್ಯ, ಐಲುತನಗಳಿಂದ ಹಿಂದುತ್ವ ಹುಟ್ಟಿಕೊಂಡಿದೆ ಎಂದೆಲ್ಲ ಬೋಧಿಸಲು ಹೋಗಬಾರದು.

ಧಾರವಾಡದ ಗೋಷ್ಠಿಯಲ್ಲಿ ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳನ್ನು ಎತ್ತಲಿಲ್ಲ ಎನ್ನುವ ಗಿರೀಶ ಭಟ್ಟರು ‘ಇತರ ಸಂಸ್ಕೃತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಸ್ಕೃತಿಗಳು ಯಾವುವು? ದೇಶದೊಳಗಿನ ವಿವಿಧ ಸಮುದಾಯಗಳು ಆಧುನಿಕತೆಯನ್ನು ಸ್ವೀಕರಿಸುವ ವಿಭಿನ್ನ ಸ್ವರೂಪಗಳಿಗೂ ಅಸಹಿಷ್ಣುತೆಗೂ ಇರುವ ಸಂಬಂಧವೇನು  ಮುಂತಾದ ‘ಮೂಲಭೂತ’ ಪ್ರಶ್ನೆಗಳನ್ನು ಸೂಚಿಸಿದ್ದಾರೆ.

ಅಂತಹ ಚರ್ಚೆಗಳು ಆಯಾ ವರ್ಗಗಳಲ್ಲಿ ಈಗಾಗಲೇ ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಉದಾಹರಣೆಗೆ, ಸ್ತ್ರೀಯರಿಗೆ ಪ್ರವೇಶ ನಿರ್ಬಂಧಿಸಿರುವ ದೇವಸ್ಥಾನಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಿಂದೂ ಮಹಿಳೆಯರ ಹಾಗೆಯೇ ದರ್ಗಾಗಳ ವಿರುದ್ಧ (ಉದಾಹರಣೆಗೆ ಮುಂಬಯಿಯ ಹಾಜಿ ಅಲಿ ದರ್ಗಾ) ಪ್ರತಿಭಟಿಸುತ್ತಿರುವ ಮುಸ್ಲಿಂ ಮಹಿಳೆಯರೂ ಭಾರತದಲ್ಲುಂಟು. ಅಮಾನವೀಯ ಧಾರ್ಮಿಕ ಕಾಯ್ದೆಗಳ ವಿರುದ್ಧ ವಿಶ್ವದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಭಾರತದಲ್ಲೂ ಈ ನಿಟ್ಟಿನಲ್ಲಿ ಅನೇಕ  ಮುಸ್ಲಿಂ ಸಂಘಟನೆಗಳು ಕ್ರಿಯಾಶೀಲವಾಗಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಧರ್ಮದ ಕುರಿತ ವಿಮರ್ಶೆ ಅಥವಾ ಪ್ರತಿಭಟನೆ ಅನ್ಯರಿಂದ ನೆರವೇರದೆ ಆ ಧರ್ಮದ ಒಡಲೊಳಗಿನಿಂದಲೇ ಮೂಡಬೇಕಾಗುತ್ತದೆ. ಈ ಬಗೆಯ ಆತ್ಮವಿಮರ್ಶೆಯಿಂದ ಮಾತ್ರ ಒಂದು ಧರ್ಮದ ಆರೋಗ್ಯಪೂರ್ಣ ಸುಧಾರಣೆ ಮತ್ತು ವಿಕಾಸ ಸಾಧ್ಯ. ಎಲ್ಲಕ್ಕೂ ಸಾಹಿತಿಗಳಿಂದಲೇ ಉತ್ತರ ಸಿಗಬೇಕು ಎಂಬ ಭ್ರಮೆಯನ್ನು ನಾವಿಂದು ಕೈಬಿಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT