ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ: ವಿವಾದಕ್ಕೆ ಎಡೆಮಾಡಿದ ಅಮೀರ್‌

ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಹೇಳಿಕೆ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ನವದೆಹಲಿ/ ಮುಂಬೈ (ಪಿಟಿಐ): ಬಾಲಿವುಡ್‌ ನಟ ಅಮೀರ್‌ ಖಾನ್‌ ‘ಅಸಹಿಷ್ಣುತೆ’ ಕುರಿತು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆಡಳಿತಾರೂಢ ಬಿಜೆಪಿಯು ಅಮೀರ್‌ಗೆ ತೀಕ್ಷ್ಣ ರೀತಿಯಲ್ಲಿ  ಪ್ರತ್ಯುತ್ತರ ನೀಡಿದರೆ, ಕಾಂಗ್ರೆಸ್‌ ಮತ್ತು ಎಎಪಿ  ಬಾಲಿವುಡ್‌ ನಟನ ಹೇಳಿಕೆಯನ್ನು ಸಮರ್ಥಿಸಿಕೊಂಡಿವೆ.

‘ಇದು ದೇಶದ ಘನತೆಗೆ ಮಸಿ ಬಳಿಯಲು ಕಾಂಗ್ರೆಸ್‌ ನಡೆಸುತ್ತಿರುವ ವ್ಯವಸ್ಥಿತ ಪಿತೂರಿಯ ಒಂದು ಭಾಗ’ ಎಂದು ಬಿಜೆಪಿ ಆರೋಪಿಸಿದೆ. ಮುಂಬೈನಲ್ಲಿರುವ ಅಮೀರ್‌ ಖಾನ್‌ ನಿವಾಸದ ಮುಂದೆ ಹಿಂದೂ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.

‘ದೇಶದಲ್ಲಿ ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಅಭದ್ರತೆ ಮತ್ತು ಭೀತಿಯ ವಾತಾವರಣ ಉಂಟುಮಾಡಿದೆ. ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಪತ್ನಿ ಕಿರಣ್‌ ರಾವ್‌ ಆತಂಕಕ್ಕೆ ಒಳಗಾಗಿದ್ದಳು. ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಬಗ್ಗೆ ಪ್ರಸ್ತಾಪಿಸಿದ್ದಳು’ ಎಂದು ಅಮೀರ್‌ ಸೋಮವಾರ ಹೇಳಿದ್ದರು. ‘ಅಸಹಿಷ್ಣುತೆ’ ಕುರಿತ ಚರ್ಚೆ ಬಿಹಾರ ಚುನಾವಣೆ ಬಳಿಕ ಅಲ್ಪ ತಣ್ಣಗಾಗಿತ್ತು. ಇದೀಗ  ಅಮೀರ್‌ ದನಿಗೂಡಿಸಿದ ಕಾರಣ ಮತ್ತೆ ಜೀವ ಪಡೆದುಕೊಂಡಿದೆ.

ಬಿಜೆಪಿ ಟೀಕೆ: ಅಮೀರ್‌ ಹೇಳಿಕೆಯನ್ನು ಬಿಜೆಪಿ ಕಠಿಣ ಮಾತುಗಳಿಂದ ಟೀಕಿಸಿದೆ. ‘ಅಮೀರ್‌ ಮತ್ತು ಕುಟಂಬ ಸದಸ್ಯರು ಭಾರತವನ್ನು ಬಿಟ್ಟು ಬೇರೆ ಎಲ್ಲಿಗೆ ಹೋಗುತ್ತಾರೆ? ಮುಸ್ಲಿಮರಿಗೆ ಭಾರತಕ್ಕಿಂತ ಸುರಕ್ಷಿತವಾದ ಮತ್ತೊಂದು ದೇಶ ಸಿಗದು’ ಎಂದು ರಾಷ್ಟ್ರೀಯ ವಕ್ತಾರ ಷಹನವಾಜ್‌ ಹುಸೇನ್‌  ಹೇಳಿದ್ದಾರೆ.

‘ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಮುಸ್ಲಿಮರು ಇಲ್ಲಿ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಈ ದೇಶದಲ್ಲಿ ಒಬ್ಬ ಕಲಾವಿದನನ್ನು ಆತನ ಜಾತಿ ಅಥವಾ ಧರ್ಮದ ಆಧಾರದಲ್ಲಿ ಗುರುತಿಸಲಾಗುತ್ತಿಲ್ಲ. ಆತನ ಕೆಲಸದ ಆಧಾರದಲ್ಲಿ ಗುರುತಿಸಲಾಗುತ್ತದೆ’ ಎಂದಿದ್ದಾರೆ.

ಕಾಂಗ್ರೆಸ್‌ ಸಮರ್ಥನೆ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೀರ್‌ ಬೆಂಬಲಕ್ಕೆ ನಿಂತಿದ್ದು,  ‘ಸರ್ಕಾರ ಹಾಗೂ ಮೋದಿ ಅವರ ವಿರುದ್ಧ ಧ್ವನಿಯೆತ್ತುವ ಎಲ್ಲರ ಮೇಲೂ ದೇಶದ್ರೋಹಿಗಳು  ಎಂಬ ಮುದ್ರೆ ಒತ್ತಲಾಗುತ್ತಿದೆ. ಅದರ ಬದಲು ಜನರ ಬಳಿ ತೆರಳಿ ಅಭದ್ರತೆಯ ಭಾವ  ಏಕೆ ಕಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

ಪಾಕ್‌ ಕೈವಾಡ: ಈ ನಡುವೆ ಹರಿಯಾಣ ಸಚಿವ ಅನಿಲ್‌ ವಿಜ್‌ ಮತ್ತೊಂದು ಹೇಳಿಕೆ ನೀಡಿದ್ದು, ಈ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ‘ಪಾಕಿಸ್ತಾನದ ಕುಮ್ಮಕ್ಕಿನಿಂದಾಗಿ ದೇಶದಲ್ಲಿ ಕೆಲವರು ಅಸಹಿಷ್ಣುತೆ ಕುರಿತು  ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸ್ಥಾನ ದೊರೆಯುವುದನ್ನು ತಪ್ಪಿಸಲು ಪಾಕ್‌ ಮಾಡಿರುವ ಹುನ್ನಾರ ಇದು’ ಎಂದಿದ್ದಾರೆ.
*
ಅಮೀರ್‌ ವಿರುದ್ಧ ದೂರು
ಕಿರುಚಿತ್ರಗಳ ನಿರ್ಮಾಪಕ ಉಲ್ಲಾಸ್‌ ಪಿ.ಆರ್‌. ಅವರು ಅಮೀರ್‌ ವಿರುದ್ಧ ಮಂಗಳವಾರ ನವದೆಹಲಿಯ ನ್ಯೂ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
*
‘ಪಿಕೆ’ಗೆ ಯಶಸ್ಸು ದೊರೆಯುತ್ತಿರಲಿಲ್ಲ
ಬಲಪಂಥೀಯ ಸಂಘಟನೆಗಳ ವಿರೋಧದ ನಡುವೆಯೂ ಅಮೀರ್‌ ಅವರ ‘ಪಿಕೆ’ ಸಿನಿಮಾ ಯಶಸ್ಸು ಗಳಿಸಿತ್ತು. ಭಾರತದಲ್ಲಿ ಸಹಿಷ್ಣುತೆ ಇದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.
-ನಳಿನ್‌ ಕೊಹ್ಲಿ,
ಬಿಜೆಪಿ ವಕ್ತಾರ
*
ಕಷ್ಟದ ಪರಿಸ್ಥಿತಿ ಎದುರಾದಾಗ ದೇಶ ಬಿಟ್ಟು ಹೋಗುತ್ತೇನೆ ಎನ್ನುವವ ನಿಜವಾದ ದೇಶಭಕ್ತನಲ್ಲ.
-ಪರೇಶ್‌ ರಾವಲ್‌,
ನಟ
*
ಇಡೀ ಜಗತ್ತು ಹೇಳುತ್ತಿರುವುದನ್ನೇ ಅಮೀರ್‌ ಹೇಳಿದ್ದಾರೆ. ಕೆಲ ದಿನಗಳಿಂದ ಎಲ್ಲರೂ ಇದನ್ನೇ ಹೇಳುತ್ತಿದ್ದಾರೆ.
-ಅಭಿಷೇಕ್‌ ಸಿಂಘ್ವಿ,
ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT