ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಮಾನ್ಯ ಸೇವೆಗಳಲ್ಲಿ ಅಪಾರ ಅವಕಾಶಗಳು

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಆ ಕೆಲಸ ಮೇಲು, ಈ ಕೆಲಸ ಕೀಳು ಎಂಬ ಕಾಯಕದ ಅಂತರ ಸೇವಾ ವಲಯದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ದೈಹಿಕ ಶ್ರಮದ ಜತೆಗೆ ಸೂಕ್ಷ್ಮತೆ, ಕುಶಲತೆಯನ್ನೂ ಬಯಸುವ ಕೆಲಸಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಮನೆಗೆಲಸ, ಮಕ್ಕಳ ಪಾಲನೆ, ವೃದ್ಧರ ಸೇವೆ, ಬ್ಯುಟಿಷಿಯನ್‌, ಎಲೆಕ್ಟ್ರಿಷನ್‌, ಒಳಾಂಗಣ ವಿನ್ಯಾಸಗಾರರಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಮಕ್ಕಳ ಆರೈಕೆ, ಮನೆಯಲ್ಲಿರುವ ವೃದ್ಧರ ಸೇವೆ ಮಾಡಲು ಸೂಕ್ಷ್ಮ ಕೆಲಸಗಾರರು ಅಗತ್ಯ. ಪತಿ ಪತ್ನಿ ಇಬ್ಬರೂ ಕೆಲಸದಲ್ಲಿರುವ ಮನೆಗಳಲ್ಲಿ ಈ ಸೂಕ್ಷ್ಮ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಕಷ್ಟಸಾಧ್ಯವೇ ಸರಿ. ಇಂಥ ‘ಅಸಾಮಾನ್ಯ’ ಕೆಲಸಗಳನ್ನು ನಿರ್ವಹಿಸುವ ಕೆಲಸದವರ ಕೊರತೆ ನಗರ ಪ್ರದೇಶಗಳಲ್ಲಿದೆ. ಈ ಕೆಲಸಗಾರರಿಗೆ ಹೆಚ್ಚಿನ ಸಂಬಳವೂ ಇದೆ.

ಅಸಾಮಾನ್ಯ ಕೆಲಸಗಳನ್ನು ಮಾಡಲು ಹೆಚ್ಚು ಓದಿರಬೇಕೆಂದೇನಿಲ್ಲ. ಇಂಥ ಕೆಲಸಗಳನ್ನು ಮಾಡಲು ಸೂಕ್ಷ್ಮತೆ ಹೊಂದಿರುವ ಕುಶಲ ಕೆಲಸಗಾರರು ಬೇಕು. ಕೆಲವು ಏಜೆನ್ಸಿಗಳು ಈ ಅಸಾಮಾನ್ಯ ಕೆಲಸಗಾರರನ್ನು ಸೇವೆಗೆ ಪೂರೈಸಿದರೆ, ಕೆಲ ಆನ್‌ಲೈನ್‌ ಉದ್ಯೋಗಜಾಲಗಳು ಈ ಕೆಲಸಗಾರರಿಗೆ ಉತ್ತಮ ಜಾಗದಲ್ಲಿ ನೌಕರಿ ಒದಗಿಸುತ್ತಿವೆ.

ಬಾಬಾ ಜಾಬ್ಸ್‌, ಕ್ವಿಕರ್‌ ಜಾಬ್ಸ್‌, ನೌಕರಿ.ಕಾಂ ಸೇರಿದಂತೆ ಅನೇಕ ಉದ್ಯೋಗಜಾಲಗಳು ಈ ಅಸಾಮಾನ್ಯ ಸೇವೆಗಳಿಗೆ ಕೆಲಸಗಾರರನ್ನು ಹುಡುಕುವ ಹಾಗೂ ಈ ಅಸಾಮಾನ್ಯ ಕೆಲಸಗಾರರಿಗೆ ಕೆಲಸ ಕೊಡಿಸುವ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಿವೆ.

ಬೆಂಗಳೂರು, ಚೆನ್ನೈ, ಕೋಲ್ಕತ್ತ, ದೆಹಲಿ, ಮುಂಬೈ, ಹೈದರಾಬಾದ್‌ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ  ಇಂಥ ಸೇವೆಗಳ ಮಾರುಕಟ್ಟೆ ಬೆಳೆಯುತ್ತಿದೆ. ಕೆಲವು ಖಾಸಗಿ ಏಜೆನ್ಸಿಗಳು ನೌಕರರನ್ನು ನೇಮಿಸಿಕೊಂಡು ಸೇವೆ ಒದಗಿಸಿದರೆ, ಉದ್ಯೋಗಜಾಲಗಳ ಮೂಲಕ ನೌಕರರನ್ನು ನೇರವಾಗಿ ಕೆಲಸಕ್ಕೆ ನೇಮಿಸಿಕೊಳ್ಳುವ ಸೌಲಭ್ಯವೂ ಇದೆ.

₹ 6 ಸಾವಿರದಿಂದ ₹ 10 ಸಾವಿರ ವೇತನ ಬಯಸುವ ನೌಕರರು ಮನೆಗೆಲಸ ಹಾಗೂ ಮಕ್ಕಳ ಆರೈಕೆ ಮಾಡಲು ಸಿಗುತ್ತಾರೆ. ಇಂಥ ಕೆಲಸಗಳನ್ನು ಮಾಡುವುದು ಕೀಳು ಎಂಬ ಭಾವನೆ ಈಗಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಈ ಕೆಲಸಗಳಿಗೆ ವೇತನದ ಬೇಡಿಕೆಯೂ ಹೆಚ್ಚುತ್ತಿದೆ.

ವಿಶೇಷ ಮಕ್ಕಳ ಆರೈಕೆ
ಇನ್ನು ವಿಶೇಷ ಮಕ್ಕಳ ಆರೈಕೆ ಮಾಡುವವರಿಗೆ ₹ 15 ಸಾವಿರದವರೆಗೂ ವೇತನ ನೀಡಬೇಕಾಗುತ್ತದೆ. ಸಾಮಾನ್ಯ ಮಕ್ಕಳ ಲಾಲನೆ ಪಾಲನೆಯೇ ಬಹುಸೂಕ್ಷ್ಮವಾದ ಕೆಲಸ. ಇನ್ನು ವಿಶೇಷ ಮಕ್ಕಳ ಆರೈಕೆ ಹೆಚ್ಚು ತಾಳ್ಮೆ ಬೇಡುವಂಥದ್ದು. ಇಂಥ ಕೆಲಸಗಳಿಗೆ ತರಬೇತಿ ಪಡೆದ ದಾದಿಯರು ಹಾಗೂ ಆಯಾಗಳು ಉದ್ಯೋಗಜಾಲಗಳ ಮೂಲಕ ಸಿಗುತ್ತಾರೆ.

ಉದ್ಯೋಗಿಗಳನ್ನು ಹುಡುಕುವವರು ಈಗಾಗಲೇ ನೋಂದಣಿ ಮಾಡಿಕೊಂಡಿರುವವರ ಪಟ್ಟಿ ನೋಡಿ ಅವರಲ್ಲಿ ಸೂಕ್ತರೆನಿಸಿದವರ ಸಂದರ್ಶನ ನಡೆಸಿ ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಪಟ್ಟಿಯಲ್ಲಿರುವವರು ತಮ್ಮ ನಿರೀಕ್ಷೆಗಳಿಗೆ ಸೂಕ್ತವೆನಿಸದಿದ್ದರೆ ತಮ್ಮ ಅಗತ್ಯಗಳ ಪಟ್ಟಿ ಮಾಡಿ ಅದನ್ನು ಉದ್ಯೋಗ ತಾಣಗಳಲ್ಲಿ ಹರಿಬಿಡಬಹುದು.

ವೆಬ್‌ಸೈಟ್‌ಗಳ ಮೂಲಕ ಮಾತ್ರವಲ್ಲದೆ ಆ್ಯಪ್‌ಗಳ ಮೂಲಕವೂ ಉದ್ಯೋಗ– ಉದ್ಯೋಗಿಗಳನ್ನು ಹುಡುಕಿಕೊಳ್ಳಬಹುದು.

ಪ್ರಮುಖ ಉದ್ಯೋಗಜಾಲಗಳು
www.babajob.com
www.quikr.com
www.naukri.com
www.timesjobs.com

*
ಸೇವಾ ವಲಯದ ವಿಸ್ತರಣೆ
‘ವಿದ್ಯಾವಂತ ಹಾಗೂ ಕೌಶಲವುಳ್ಳ ಉದ್ಯೋಗಿಗಳಿಗೆ ಕೆಲಸ ಕೊಡಿಸುವುದರ ಜತೆಗೆ ಗ್ರಾಮೀಣ ಹಿನ್ನಲೆಯ ಮಧ್ಯಮ ಹಾಗೂ ತಳವರ್ಗದ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಿಸುವುದೂ ಮುಖ್ಯ. ಮನೆಗೆಲಸದವರು, ಮಕ್ಕಳು ಹಾಗೂ ವೃದ್ಧರ ಆರೈಕೆ ಮಾಡುವವರು, ಕಾರು ಚಾಲಕರು, ಭದ್ರತಾ ಸಿಬ್ಬಂದಿ, ಮೆಕ್ಯಾನಿಕ್‌ಗಳ ಸೇವೆಯೂ ಈಗ ಅತಿ ಮುಖ್ಯ. ಸೇವಾ ವಲಯ ವಿಸ್ತರಣೆಯಾಗುತ್ತಿದ್ದು ಇಲ್ಲಿ ಅವಕಾಶಗಳೂ ಹೆಚ್ಚಾಗುತ್ತಿವೆ’
– ಸೀನ್‌ ಬ್ಲಾಗ್ಸ್‌ವೆಟ್‌,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಬಾಬಾ ಜಾಬ್‌. ಕಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT