ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೀಮ ಛಲಗಾತಿ ಅರುಣಿಮಾ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ನನ್ನ ಪ್ರಕಾರ ದೇಹದ ಒಂದು ಅಂಗ ಕಳೆದುಕೊಂಡವರು ಅಂಗವಿಕಲರಲ್ಲ. ಬದಲು, ಎಲ್ಲ ಅಂಗ ಸರಿಯಾಗಿದ್ದು, ಮತಿಯನ್ನು ಕಳೆದುಕೊಂಡು

ಮೃಗದಂತೆ ವರ್ತಿಸುವವರು ಅಂಗವಿಕಲರು’ ಎಂದು ಹೇಳಿದರು ಅರುಣಿಮಾ ಸಿನ್ಹಾ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್‌ ಏರಿದ ದೇಶದ ಪ್ರಥಮ ಅಂಗವಿಕಲ ಪರ್ವತಾರೋಹಿ ಎಂಬ ಕೀರ್ತಿಗೆ ಭಾಜನರಾದವರು ಅರುಣಿಮಾ.

ಹ್ಞಾಂ, ಅರುಣಿಮಾ ಹುಟ್ಟಾ ಅಂಗವಿಕಲೆಯಲ್ಲ. ಶಾಲಾ ಕಾಲೇಜು ದಿನಗಳಲ್ಲಿ ವಾಲಿಬಾಲ್ ಪಟುವಾಗಿದ್ದರು. ಮೂರು ವರ್ಷದ ಹಿಂದಷ್ಟೇ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ರೈಲಿನಲ್ಲಿ ಕಳ್ಳರಿಗೆ ಪ್ರತಿರೋಧ ತೋರಿದ ಪರಿಣಾಮ ಕಳ್ಳರು ಅವರನ್ನು ಚಲಿಸುವ ರೈಲಿನಿಂದ ಹೊರಗೆ ಎಸೆದರು. ಆ ಘಟನೆಯಲ್ಲಿ ಎಡಗಾಲು ಕಳೆದುಕೊಂಡ ಅರುಣಿಮಾ ಅಂಗವಿಕಲರಾದರು. 

ಜೀವನದಲ್ಲಿ ನಡೆದ ಆ ಕರಾಳ ಘಟನೆ, ನಂತರ ನಡೆದ ಜೀವನೋತ್ಸಾಹಕ್ಕೆ ಪ್ರೇರಕವಾದ ಅನುಭವಗಳನ್ನು ಎಳೆಎಳೆಯಾಗಿ ತೆರೆದಿಡುತ್ತ ‘ದುಷ್ಟ ಜನರು ನಿಮ್ಮ ಅಂಗ ಊನಗೊಳಿಸಬಹುದು. ಆದರೆ, ಮನೋಸ್ಥೈರ್ಯವನ್ನಲ್ಲ’ ಎಂದ ಅರುಣಿಮಾ ಅವರ ಮಾತುಗಳು ಇಲ್ಲಿ ಅಕ್ಷರ ರೂಪತಳೆದಿವೆ...
ನಮ್ಮೂರು ಮೂಲತಃ ಉತ್ತರ ಪ್ರದೇಶದ ಅಂಬೇಡ್ಕರ್ ನಗರ. ಸಾಧಾರಣ ಕುಟುಂಬ. ಅಪ್ಪ–ಅಮ್ಮ ಜತೆಗೆ ನಾವು ನಾಲ್ಕು ಮಕ್ಕಳು. ಶಾಲಾ ಕಾಲೇಜು ದಿನಗಳಲ್ಲಿ ನಾನು ಕ್ರೀಡಾಪಟುವಾಗಿದ್ದೆ.

ಸಧೃಡಳಾಗಿದ್ದ ನನಗೆ ವಾಲಿಬಾಲ್‌ ಎಂದರೆ ಪಂಚಪ್ರಾಣ. ಅನೇಕ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೆ. 2011ರಲ್ಲಿ ನಾನು ರಾಷ್ಟ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್‌) ಸೇರುವ ಆಸೆ ಇತ್ತು. ದೆಹಲಿಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಬೇಕಿತ್ತು. ಭವಿಷ್ಯದ ಕನಸು ಹೆಣೆಯುತ್ತ ಏಪ್ರಿಲ್ 11ರಂದು ಒಬ್ಬಂಟಿಯಾಗಿ ಲಖನೌದಿಂದ ಪದ್ಮಾವತಿ ಎಕ್ಸ್‌ಪ್ರೆಸ್‌ ರೈಲು ಏರಿದ್ದೆ. ಕತ್ತಲು ಮುಸುಕುತ್ತಿದ್ದಂತೆ ಕಳ್ಳರ ಗುಂಪೊಂದು ನಾನಿದ್ದ ಸಾಮಾನ್ಯ ದರ್ಜೆಯ ಬೋಗಿಗೆ ನುಗ್ಗಿತ್ತು. ನನ್ನ ಕೊರಳಲ್ಲಿದ್ದ ಪುಟ್ಟ ಚಿನ್ನದ ಚೈನು ಅವರ ಗಮನ ಸೆಳೆದಿತ್ತು. ಚೈನು ಕಸಿಯಲು ಆ ದುಷ್ಟರು ನನ್ನ ಮೇಲೆ ಎರಗಿದರು. 

‘ದುರಾತ್ಮರು ಮೈಮೇಲೆ ಬಿದ್ದಾಗ ಕೊನೆಯುಸಿರು ಇರುವವರೆಗೆ ಹೋರಾಡು’ ಎಂದು ಚಿಕ್ಕಂದಿನಲ್ಲಿ ಅಪ್ಪ ಹೇಳಿದ ಪಾಠ ಕ್ರಿಯೆಗೆ ಇಳಿದಿತ್ತು. ಪ್ರತಿರೋಧ ತೋರಿದೆ. ಶಕ್ತಿ ಸಾಲದಾಯಿತು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ನನ್ನನ್ನು ಹೊರಗೆ ನೂಕಿದರು. ಪಕ್ಕದ ಹಳಿಯ ಮೇಲೆ ಬಿದ್ದೆ. ಅಷ್ಟರಲ್ಲಿ ಎದುರಿನಿಂದ ಬರುತ್ತಿದ್ದ ರೈಲು ನನ್ನ ಎಡಗಾಲಿನ ಮೇಲೆ ಹರಿಯಿತು. ನನಗೆ ಪ್ರಜ್ಞೆ ತಪ್ಪಿತು. ನಸುಕಿನಲ್ಲಿ ಸಮೀಪದ ಹಳ್ಳಿಯ ಜನರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.

ನಂತರ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಎಡಗಾಲು ಕೀವು ತುಂಬಿ ನಂಜು ಏರಿತ್ತು. ವೈದ್ಯರು ಮೊಣಕಾಲಿನಿಂದ ಕೆಳಕ್ಕೆ ಕಾಲು ಕತ್ತರಿಸದೆ ವಿಧಿ ಇಲ್ಲ ಎಂದರು. ನನ್ನ ಮೌನವೇ ಅವರಿಗೆ ಸಮ್ಮತಿಯಾಗಿತ್ತು. ಶಾಶ್ವತ ಅಂಗವಿಕಲೆಯಾಗಿದ್ದೆ. ಮುಂದೇನು? ಎನ್ನುವ ಪ್ರಶ್ನೆ. ಕಣ್ಣೀರಿನ ಜತೆಗಿದ್ದ ಮತ್ತೊಬ್ಬ ಸ್ನೇಹಿತನೆಂದರೆ ನನ್ನ ಸಹೋದರ. ‘ಆ ದುಷ್ಟರು ನಿನ್ನ ಕಾಲು ಮಾತ್ರ ಕಳೆದಿದ್ದಾರೆ. ನಿನ್ನ ಮನೋಬಲವಲ್ಲ. ಅಷ್ಟಕ್ಕೆ ಹತಾಶಳಾದರೆ ಹೇಗೆ?’ ಎಂದು ಕೇಳುತ್ತಿದ್ದ ಆತ.

ಆಸ್ಪತ್ರೆಯಲ್ಲಿ ನೋವು ಮರೆಯಲು ಸ್ವಾಮಿ ವಿವೇಕಾನಂದರ ಪುಸ್ತಕಕ್ಕೆ ಮೋರೆ ಹೋಗಿದ್ದೆ. ‘ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂಬ ಅವರ ಧೀರ ನುಡಿ ನನ್ನನ್ನು ತುಂಬ ಕಾಡಿತ್ತು. ಕ್ಯಾನ್ಸರ್‌ ವಿರುದ್ಧ ಸೆಣಸಾಡಿ ಸಾವನ್ನು ಮೆಟ್ಟಿನಿಂತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ಅನುಭವ ಕಥನ ನನ್ನೊಳಗೆ ಜೀವನೋತ್ಸಾಹ ಮೂಡಿಸಿತ್ತು. ಇದೇ ಅವಧಿಯಲ್ಲಿ ಮೌಂಟ್ ಎವರೆಸ್ಟ್ ಪರ್ವತಾರೋಹಣ ಕುರಿತಾದ ಲೇಖನ ನನ್ನ ಗಮನ ಸೆಳೆಯಿತು. ನಾನೇಕೆ ಮೌಂಟ್ ಎವರೆಸ್ಟ್ ಹತ್ತಬಾರದು ಎನ್ನುವ ಯೋಚನೆ ಆಗ ಮನಸಿನಲ್ಲಿ ಮೂಡಿತು.

ಆಗ ನೆನಪಾದವರೇ ಭಾರತದ ಮೊದಲ ಮಹಿಳಾ ಪರ್ವತಾರೋಹಿ ಬಚೇಂದ್ರಿ ಪಾಲ್. ಹಾಸಿಗೆಯಲ್ಲಿ ಮಲಗಿಯೇ ದೂರವಾಣಿ ಮೂಲಕ ಅವರಿಗೆ ನನ್ನ ಮನದ ಬಯಕೆ ಅರುಹಿದೆ. ಅದನ್ನು ಗಂಭೀರವಾಗಿ ಪರಿಗಣಿಸದ ಅವರು ‘ಮೊದಲು ಗುಣವಾಗಿ ಮನೆಗೆ ಬಾ. ಆ ಮೇಲೆ ನೋಡೋಣ’ ಎಂದು ಮಾತು ಮುಗಿಸಿದರು.

‘ನಾನೂ ಏವರೆಸ್ಟ್‌ ಹತ್ತುವೆ’ ಎಂಬ ನನ್ನ ಬಯಕೆ ಬಹುತೇಕರಿಗೆ ಕ್ಲೀಷೆಯಾಗಿ ಕಂಡಿತು. ಅವರ ಅನುಕಂಪ ಬೇಡವಾಗಿತ್ತು. ನನ್ನ ನಿರ್ಧಾರ ಮಾತ್ರ ಆ ಗೌರಿಶಂಕರ ಶಿಖರದಂತೆ ದೃಢವಾಗಿತ್ತು. ಈ ನಡುವೆ ನನಗೆ ಕೃತಕ ಕಾಲನ್ನು ಅಳವಡಿಸಲಾಯಿತು. ನಡೆದಾಡಲು ಕಷ್ಟವಾದರೂ ಸತತ ಅಭ್ಯಾಸದಿಂದ ತಕ್ಕಮಟ್ಟಿಗೆ ನಡೆಯಲು ಕಲಿತೆ.

ಮತ್ತೊಮ್ಮೆ ಬಚೇಂದ್ರಿ ಪಾಲ್‌ ಅವರನ್ನು ಸಂಪರ್ಕಿಸಿದೆ. ಅವರ ಸಲಹೆಯಂತೆ 2012ರ ಮಾರ್ಚ್‌ನಲ್ಲಿ ಉತ್ತರಕಾಶಿಯ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್ ಆಯೋಜಿಸಿದ್ದ ಪರ್ವತಾರೋಹಣ ತರಬೇತಿ ಶಿಬಿರದಲ್ಲಿ ಪಾಲ್ಗೊಂಡೆ. ಶಿಬಿರದಲ್ಲಿ ಬಚೇಂದ್ರಿ ಪಾಲ್‌ ಮಾರ್ಗದರ್ಶಕರಾಗಿದ್ದರು. ಸದಾ  ಪ್ರೋತ್ಸಾಹದ ನುಡಿಗಳನ್ನೇ ಆಡುತ್ತಿದ್ದರು. ಆದರೆ, ಒಮ್ಮೊಮ್ಮೆ ಎಲ್ಲರಿಗಿಂತ ಹಿಂದುಳಿದಾಗ ತುಂಬ ದುಃಖವಾಗುತ್ತಿತ್ತು. ತುಟಿ ಕಚ್ಚಿ ಅಳು ಅದುಮುತ್ತಿದ್ದೆ. ಕಾಲಲ್ಲಿ ರಕ್ತ ಸುರಿದರೂ ಅನುಕಂಪ ಬಯಸಲಿಲ್ಲ. ಕಠಿಣ ಪರಿಶ್ರಮದಿಂದ ಕೆಲವೇ ದಿನಗಳಲ್ಲಿ ಎಲ್ಲರೊಳಗೊಂದಾದೆ.

2013ರ ಮಾರ್ಚ್ 31. ನಾನು ಆಕಾಶಕ್ಕೆ ಏಣಿ ಹಾಕಿದ ದಿನವಾಗಿತ್ತು.  ಅಂದಿನಿಂದ 52ದಿನಗಳ ಕಾಲದ ನನ್ನ ಪರ್ವತಾರೋಹಣ ಪಯಣ ಆರಂಭವಾಯಿತು. ಶ್ವೇತ ಹಿಮಚ್ಛಾದಿತ ಗಿರಿ ಕಂದರ­ಗಳಲ್ಲಿ ಅಡಿಅಡಿಗೆ ಸವಾಲುಗಳು. ಭಯವಾಗಲಿಲ್ಲ. ರೋಚಕವೆನಿಸುತ್ತಿತ್ತು. ಪರ್ವತಾರೋಹಣ   ಸಾವಿನೊಂದಿಗೆ ಸರಸ ಎಂಬುದು ಕೆಲವೇ ದಿನಗಳಲ್ಲಿ ಅರಿವಿಗೆ ಬಂದಿತ್ತು. ಅಷ್ಟರಲ್ಲಾಗಲೇ ಅರ್ಧದಾರಿ ಸವೆಸಿಯಾಗಿತ್ತು. ದೂರದಲ್ಲಿ ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿ ಕೈ ಬೀಸಿ ಕರೆಯುತ್ತಿತ್ತು.

ನನ್ನ ದುರಾದೃಷ್ಟಕ್ಕೆ ದಿನೇ ದಿನೇ ಮಾರ್ಗ ಮಧ್ಯೆ ಆರೋಗ್ಯ ಕೈಕೊಡುತ್ತಿತ್ತು. ಜತೆಗಿದ್ದ ಆಮ್ಲಜನಕದ ಸಿಲಿಂಡರ್‌ ಕೂಡ ಬರಿದಾಗತೊಡಗಿತ್ತು. ‘ಸಾಕು ನಿನಗೆ ಈ ಹುಚ್ಚು ಸಾಹಸ. ಸುಮ್ಮನೆ ವಾಪಸ್‌ ತೆರಳಿಬಿಡು’ಎಂದು ಜತೆಗಾರರು ಆಸೆಗೆ ತಣ್ಣೀರು ಎರಚಿದರು. ಅದರಲ್ಲಿ ಕಾಳಜಿಯೂ ಇತ್ತು. ಆದರೂ ಧೃತಿಗೆಡಲಿಲ್ಲ. ಮುಂದಿಟ್ಟ ಹೆಜ್ಜೆ ದೃಢವಾಗಿತ್ತು. ಸತತ 1,055 ಗಂಟೆ ಏಳುತ್ತ, ಬೀಳುತ್ತ ಜತೆಗೆ ಅಲ್ಲಲ್ಲಿ ನೋವಿನಿಂದ ಕುಂಟುತ್ತ ನಡೆದೆ.

2013ರ ಮೇ 21. ನನ್ನ ಬದುಕಿನ ಪುಸ್ತಕದ ಮರೆಯದ ಪುಟವದು. ಅಂದು ಭಾವಪರವಶಳಾಗಿ ಆನಂದಭಾಷ್ಪ ಸುರಿಸುತ್ತ ನಿಂತಿದ್ದೆ, ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿ ಮೇಲೆ. ಜತೆಗಿದ್ದ ತ್ರಿವರ್ಣ ಧ್ವಜವನ್ನು ಶಿಖರದ ತುದಿ ಮೇಲೆ ನೆಟ್ಟು. ಮೋಸ ಮಾಡಿದ ವಿಧಿಯನ್ನು ಸೋಲಿಸಿದೆ, ಎಂಬ ಸಂತಸದಲ್ಲಿ ಕೇಕೆ ಹಾಕಿದೆ.

ಈ ಪಯಣ ಕೆಲ ಹಾಲಿವುಡ್‌ ನಿರ್ಮಾಪಕರಿಗೂ ಸ್ಫೂರ್ತಿ ನೀಡಿದೆ. ಆದರೆ, ನನಗೆ ಈ ಸಾಧನೆಯಿಂದ ತೃಪ್ತಿಯಾಗಿಲ್ಲ. ಆಫ್ರಿಕಾದ ಅತಿ ಎತ್ತರದ ಪರ್ವತ ‘ಕಿಲಿಮಂಜಾರೊ’ ಸೇರಿದಂತೆ ಜಗತ್ತಿನ ಪ್ರಮುಖ ಏಳು ಶಿಖರಗಳನ್ನು ಹತ್ತಬೇಕೆಂಬ ಮಹತ್ವಾಕಾಂಕ್ಷೆ ಇದೆ. ಸದ್ಯ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಉಚಿತ ಶಿಕ್ಷಣ ನೀಡುವ ಕ್ರೀಡಾ ಅಕಾಡೆಮಿಯೊಂದನ್ನು ತೆರೆಯುವ ಯೋಜನೆ ಇದೆ.

ಇದಕ್ಕೆ ಈಗಾಗಲೇ ಜಮೀನು ಖರೀದಿಸಿದ್ದೇನೆ. ಕಟ್ಟಡಕ್ಕಾಗಿ ದೊಡ್ಡ ಮೊತ್ತ ಹಣದ ಅವಶ್ಯಕತೆ ಇದೆ. ಈ ವರೆಗೆ ಸನ್ಮಾನದ ಜತೆಗೆ ದೊರೆತ ಎಲ್ಲ ಹಣವನ್ನು ಈ ಯೋಜನೆಗಾಗಿ ಕೂಡಿಟ್ಟಿದ್ದೇನೆ. ಕೂಡಿಡುತ್ತಿದ್ದೇನೆ.  ‘ಜೀವನದಲ್ಲಿ ಎದುರಾಗುವ ಪ್ರತಿ ಆಘಾತಗಳನ್ನು ಆತ್ಮವಿಶ್ವಾಸ ಭರಿತ ಛಲದಿಂದ ಎದುರಿಸಿ. ನಿಮ್ಮ ಗುರಿಯಲ್ಲಿ ಸ್ಪಷ್ಟತೆ ಇರಲಿ. ಅದನ್ನು ಮುಟ್ಟುವವರೆಗೆ ಹಿಂತಿರುಗಿ ನೋಡದಿರಿ’ ಎಂದು ಎಲ್ಲೆಡೆ ಹೇಳುತ್ತೇನೆ. ನಾನು ಮಾಡಿದ್ದೂ ಅದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT