ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೂಕ್ಷ್ಮ ಬೆಳವಣಿಗೆಯತ್ತ ಬಿಜೆಪಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಜೆಪಿಯಲ್ಲಿ ಈಚೆಗೆ ಜರುಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸರ್ವಾಧಿಕಾರಿಯೊಬ್ಬ ಒಡಮೂಡುತ್ತಿದ್ದಾನೇನೊ? ಎಂಬ ಶಂಕೆ ಮೂಡುತ್ತದೆ. ಆ ಪಕ್ಷದ  ಸಂಸದೀಯ ಮಂಡಳಿಯಿಂದ ಪಕ್ಷದ ಅತ್ಯಂತ ಹಿರಿಯ­ರಾದ ಎ.ಬಿ.ವಾಜಪೇಯಿ, ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವ­ರನ್ನು ಕೈಬಿಟ್ಟಿರುವುದೇ ಇದಕ್ಕೆ ಸಾಕ್ಷಿ.

ವಾಜಪೇಯಿಯವರು ಅನಾರೋಗ್ಯದಿಂದಾಗಿ ಪಕ್ಷದ ಚಟುವಟಿಕೆಗಳಿಂದ ಮತ್ತು ಸಾರ್ವಜನಿಕ ಜೀವನದಿಂದ ದೂರವಿರುವುದರಿಂದ ಅವರನ್ನು ಕೈಬಿಟ್ಟಿರುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಅಡ್ವಾಣಿ ಮತ್ತು ಜೋಷಿಯ­ವರು ಹಾಲಿ ಸಂಸತ್‌ ಸದಸ್ಯರು,  ಈಗಲೂ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ಇಂತಹ ಹಿರಿಯರನ್ನು ವಯಸ್ಸಿನ ಕಾರಣದ ನೆಪದಡಿ ಸಂಸದೀಯ ಮಂಡಳಿಯಿಂದ ಹೊರಗಿಟ್ಟಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ.

75 ವರ್ಷ ವಯಸ್ಸು ಮೀರಿದ ನಾಯಕರನ್ನು ಸಂಸದೀಯ ಮಂಡಳಿಯಿಂದ ಕೈ ಬಿಡ­ಬೇಕು ಎಂಬ ನೀತಿಯೇ ಅಸಂಬದ್ಧ. ಇದಕ್ಕೆ ಸಂಘ ಪರಿವಾರದ ನಾಯಕರೂ ಸಮ್ಮತಿಸಿರು­ವುದು ಭಾರತೀಯ ಸಂಸ್ಕೃತಿಯ ಸಂಕೇತ ಎಂದು ಹೇಳಿಕೊಳ್ಳುವ  ಆ ಸಂಘಟನೆಗೆ ಶೋಭೆ ತರು­ವು­ದಿಲ್ಲ. ವಯಸ್ಸಿನ ಮಿತಿಯನ್ನು ಈಚೆಗೆ ನಡೆದ ಚುನಾವಣೆಗೆ ಟಿಕೆಟ್‌ ನೀಡುವಾಗಲೇ ಅನು­ಸರಿಸಿದ್ದರೆ ಚೆನ್ನಾಗಿತ್ತೇನೋ! ಇದು ಪ್ರಧಾನಿ  ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರು ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಸ್ಪಷ್ಟ ಸಂಕೇತ.

ಆ ಹಿರಿಯರೊಂದಿಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ  ಮೋದಿ ಅವರನ್ನು ಪ್ರಧಾನಿ­­ಯ­ನ್ನಾ­ಗಿಸಲು ಪಕ್ಕಕ್ಕೆ ಸರಿದು ನಿಂತವರು ಅಡ್ವಾಣಿ. ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಗೆ ಅಡ್ವಾಣಿ ಮತ್ತು ಜೋಷಿ ಅಂಥವರ ಮಾರ್ಗ­ದರ್ಶನ ಸಂಸ­ದೀಯ ಮಂಡಳಿಯಲ್ಲಿ ಅವಶ್ಯ. ‘ನನ್ನ ನಾಮಬಲದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿ­ರು­ವುದು, ನಾನೊಬ್ಬನೇ ಇಲ್ಲಿ ಪ್ರಶ್ನಾತೀತ ನಾಯಕ’ನೆಂಬ ಧೋರಣೆ ಮೋದಿ­ಯವರಲ್ಲಿ ಮೂಡಿದರೆ ಅದು ಅವನತಿಯ ದಾರಿಯನ್ನೂ ಹಿಡಿಯಬಹುದು.
–ರಾಘವೇಂದ್ರರಾವ್‌ ದೇಸಾಯಿ, ಕುರುಗೋಡು, ಬಳ್ಳಾರಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT