ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವದ ಉಳಿವಿಗೆ ಎಚ್ಚರಿಕೆಯ ಗಂಟೆ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಧಗೆ ದಿಗಿಲು ಹುಟ್ಟಿಸಿದೆ. ಸಿಲಿಕಾನ್‌ ಸಿಟಿ ಬೆಂಗಳೂರು ಇನ್ನು ಕೇವಲ 5 ವರ್ಷಗಳಲ್ಲಿ ‘ಮೃತ ನಗರ’ವಾಗುವ ಎಚ್ಚರಿಕೆ ಗಂಟೆಯನ್ನು ಐಐಎಸ್‌ಸಿ ತನ್ನ ವರದಿಯಲ್ಲಿ ಬಾರಿಸಿದೆ. ಹೋದ ವರ್ಷ ಮಲೆನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದ ಕಾರಣ ಅಡಿಕೆ, ಕಾಫಿ ಮುಂತಾದವು ಇಳುವರಿಯಲ್ಲಿ ರೈತರಿಗೆ ತುಸು ಸಂತಸ ನೀಡಿದ್ದು ನಿಜ. ಇದೇ ಬೇಸಿಗೆಯಲ್ಲಿ ಆಗುಂಬೆ ಬಳಿಯ ಅಡಿಕೆ ತೋಟಗಳು ಒಣಗುತ್ತಿವೆ. ಸಕಲೇಶಪುರದ ಬಳಿ ಕಾಫಿ ತೋಟಗಳು ಬತ್ತಿ ಹೋಗುತ್ತಿವೆ. ಕುಡಿಯುವ ಬಿಂದಿಗೆ ನೀರಿಗೆ ಮಲೆನಾಡಿನಲ್ಲಿ ಹುಡುಕಾಟ ಪ್ರಾರಂಭವಾಗಿದೆ. ಇನ್ನು ಬಯಲುಸೀಮೆ ಕತೆ ಹೇಳುವಂತೆಯೇ ಇಲ್ಲ.

ಎಲ್ಲ ಕಡೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. 1000 ಅಡಿ ತೆಗೆದರೂ ನೀರೇ ಕಾಣುತ್ತಿಲ್ಲ. ಅಂತರ್ಜಲ ಪಾತಾಳ ಸೇರಿದೆ. ನೀರು ಸಾಬರಾದ ನಜೀರ್‌ ಅವರ ಕನಸು ಬತ್ತಿ ಹೋಯಿತು. ಈ ಆತಂಕ ಈಗ ಕೇವಲ ರಾಜ್ಯದ್ದಲ್ಲ ಇಡೀ ದೇಶದ್ದು. ಈ ಮೂಲಕ ಈ ಜಗತ್ತೇ ತಲ್ಲಣಿಸುತ್ತಿದೆ. ಮನುಷ್ಯ ಪ್ರಕೃತಿಯಿಂದ ದೂರವಾದಂತೆಲ್ಲ ಕಾಂಕ್ರೀಟಿಗೆ ಹತ್ತಿರವಾದ ಕತೆಯಿದು. ಮಣ್ಣು ಮುಟ್ಟಿದರೆ ಕೈಕೊಳೆಯಾಗುತ್ತದೆ, ಮನೆ ಮುಂದೆ ಮರವೊಂದಿದ್ದರೆ ಎಲೆ ಉದುರಿ ಕಸವಾಗುತ್ತದೆ ಎಂಬ ಮನಸ್ಸು ಈಗ ಬಿಸಿ ಗಾಳಿ ಬರ ಮಾಡಿಕೊಂಡಿದೆ.

ನಗರದ ರಸ್ತೆಯ ಎಡಬಲ ಕಾಲುದಾರಿ ಮಣ್ಣಿನದಾಗಿತ್ತು. ಉದ್ಯಾನವೆಂದರೆ ಮಣ್ಣಿನ ಮೇಲೆ ಬೆಳೆವ ಮರಗಳಾಗಿದ್ದವು. ಮಕ್ಕಳು ಆಡಲು ಮಣ್ಣಿನ ಬಯಲಿತ್ತು. ಮಳೆ ಬಂದಾಗ ನೀರು ಕುಡಿಯುತ್ತಿದ್ದ ಭೂಮಿ, ಮಳೆ ತಡವಾದರೂ ತಂಪು ಹವಾ ನೀಡುತ್ತಿತ್ತು. ಕೆರೆಕಟ್ಟೆಗಳಿದ್ದವು. ಅಲ್ಲಲ್ಲಿ ಹಸಿರು ಇತ್ತು. ಈಗ ಎಲ್ಲವನ್ನೂ ಟಾರು ಮತ್ತು ಸಿಮೆಂಟಿನೊಳಗೆ ಅದುಮಲಾಗಿದೆ. ಹಳ್ಳ ಕೂಡ ಇದಕ್ಕೆ ಹೊರತಾಗಿಲ್ಲ. ಇಳಿ ಹೊತ್ತಿನಲ್ಲಿ ಮನೆ ಮುಂದೆ ಕುಳಿತು ತಲೆ ಬಾಚಿಕೊಳ್ಳುವ ಹೆಂಗಸರು, ಮಣ್ಣಿನೊಳು ಆಟವಾಡುತ್ತಿದ್ದ ಮಕ್ಕಳು ಕೇರಿ ತುಂಬಾ ಹಾಕಿರುವ ಕಾಂಕ್ರೀಟ್‌ ಜಳಕ್ಕೆ ಮುಖ ನೀಡಲಾರದೆ ತತ್ತರಿಸುತ್ತಿದ್ದಾರೆ. ಇದನ್ನು ಯಾವ ಅಭಿವೃದ್ಧಿ ಎನ್ನಬೇಕು! ಯಾರಿಗೂ ಮಣ್ಣಿನ ವೈಜ್ಞಾನಿಕ ಜ್ಞಾನದರಿವಿಲ್ಲ.

ಕೊಳವೆ ಬಾವಿಗಳಿಗೆ ವಿದ್ಯುತ್‌ ಬೇಕಲ್ಲವೇ? ಅದು ಹಳ್ಳಿಯಲ್ಲಿ ಈಗೊಂದು ಕನಸು. ಕೊಳವೆ ಬಾವಿಯೊಳಗೆ ನೀರಿದೆಯೋ! ಅದೂ ಒಂದು ಕನಸು. ಹಾಗಾದರೆ ಏನು ಮಾಡಬೇಕು? ಇರುವುದೊಂದೇ ಪರಂಪರೆಯ ಜ್ಞಾನ ತಿಳಿವಳಿಕೆ. ಅದು ಬರಬಹುದಾದ ಮಳೆ. ಅದಕ್ಕಾಗಿ ಕಾಯುತ್ತಾ ಹಾತೊರೆಯುವುದು. ಭೂಮಿ ಮೇಲಿನ ಹರಿವ ನೀರನ್ನು ಭೂಮಿಯೊಳಗೆ ಇಳಿಸುವುದು. ಈಗ ಸರ್ಕಾರದ ಸಹಾಯದಿಂದಾಗುತ್ತಿರುವ ಕೃಷಿ ಹೊಂಡಗಳು ರೈತರ ಭಾಗ್ಯನಿಧಿಗಳು. ಮಲೆನಾಡಿನ ಜೌಗು ನೆಲದಲ್ಲಂತೂ ತುಂಬಿಕೊಂಡ ಹೊಂಡಗಳು, ಚಿಕ್ಕ ಕೆರೆಗಳು ತೋಟ ತುಡಿಕೆ ಹಾಗೂ ಮನೆ ಮಂದಿಗೆ ನೀರಿನ ಆಶ್ರಯಗಳು. ಈ ಹೊಂಡಗಳನ್ನು ಮಳೆ ಕಡಿಮೆಯಿರುವ ಬಯಲುಸೀಮೆಯಲ್ಲಿ ಸಫಲಗೊಳಿಸಲು ಆಗುವುದಿಲ್ಲ. ಅಲ್ಲಿ ಚಿಕ್ಕ ಹಾಗೂ ದೊಡ್ಡ ಕೆರೆಗಳು, ರಾಜ ಕಾಲುವೆಗಳ ಮರು ನಿರ್ಮಾಣ ಮಾತ್ರ ಜಲ ಮರುಜನ್ಮಕ್ಕೆ ದಾರಿ.

ಈ ವರ್ಷವಂತೂ ಮೇ ತಿಂಗಳು ಬಂದರೂ ಮಳೆರಾಯನ ಆಗಮನ ಕಾಣುತ್ತಿಲ್ಲ. ಧಗೆಯಲ್ಲಿ ಕಲಬುರ್ಗಿಯೂ ಒಂದೇ ಆಗುಂಬೆಯೂ ಒಂದೇ ಆಗಿದೆ. ಅತಿವೃಷ್ಟಿ, ಅನಾವೃಷ್ಟಿ ಹಿಂದೆ ಇರಲಿಲ್ಲವೆಂದಲ್ಲ. ಆಗಾಗ ಚಾಟಿ ಏಟು ನೀಡುತ್ತಿದ್ದುದುಂಟು. ಈಗ ಮನುಷ್ಯನ ಸ್ವಯಂಕೃತ ಅಪರಾಧಕ್ಕೆ ಭೂಮಿ ಆಕಾಶಗಳೆರಡೂ ಮುನಿದು ನಿಂತಿವೆ. ‘ವಿಶ್ವ ವನ್ಯಜೀವಿ ನಿಧಿ’ ಈ ದೇಶದ ಮೂರು ಪರಂಪರೆಯ ತಾಣಗಳಾದ ಪಶ್ಚಿಮಘಟ್ಟ, ಸುಂದರಬನ್‌ ಹಾಗೂ ಅಸ್ಸಾಂ ಮಾನಸ್‌ ವನ್ಯಧಾಮಗಳು ಅಪಾಯದಂಚಿನಲ್ಲಿರುವುದನ್ನು ಗಂಟೆ ಬಾರಿಸಿ ಎಚ್ಚರಿಸಿದೆ. ಇಡೀ ದೇಶವೇ ಮೃತ್ಯುವಿನಂಚಿಗೆ ಸಾಗುತ್ತಿದೆ. ಇದು ಜಗತ್ತೇ ಸಾಗುತ್ತಿರುವ ದಾರಿಯೂ ಹೌದು.

ಈ ದೇಶದಲ್ಲಿ 130 ಕೋಟಿ ಜನರಿದ್ದಾರಲ್ಲವೆ. ತಲೆಗೊಂದು ಮರ ನೆಟ್ಟು ಬೆಳೆಸುವ ಶಪಥ ಭವಿಷ್ಯವನ್ನು ನಿರ್ಮಿಸಬಲ್ಲದು. ಇರುವ ಜಾಗವನ್ನು ನಿತ್ಯಹಸಿರಾಗಿರುವ ಮರಗಿಡ ನೆಟ್ಟರೆ ತುಸು ಸರಿದೂಗಿಸಬಹುದು. ಉದಾಹರಣೆಗೆ: 1000 ಎಕರೆಯ ಬೆಂಗಳೂರು ವಿಶ್ವವಿದ್ಯಾಲಯದ ಜಾಗ, ಹೆಸರಘಟ್ಟ ಬಳಿಯ 300 ಎಕರೆ ಫಿಲ್ಮ್‌ಸಿಟಿ ಜಾಗ. ಈ ಆಲೋಚನೆ ಆಳುವ ವರ್ಗದ ಎದೆಯೊಳಕ್ಕೆ ಇಳಿಯಬೇಕು. ಮತ ನೀಡುವ ಮನುಷ್ಯರ ಹೃದಯಕ್ಕೆ ತಟ್ಟಬೇಕು. ಸಂಘ ಸಂಸ್ಥೆಗಳು ಕೈಜೋಡಿಸಬೇಕು. ದೇಶದ ಶೇ 40ರಷ್ಟು ಐಟಿ, ಬಿಟಿ ಬೆಂಗಳೂರಿನಲ್ಲಿವೆ. ಇದರ 40ರಷ್ಟು ಆದಾಯ ಬೆಂಗಳೂರಿನಿಂದ ಬರುತ್ತಿದೆ. ಇದು ನಿಜ. ಈ ನಿಜದೊಂದಿಗೆ ಆಕಾಶದುದ್ದ ಎದ್ದುನಿಂತಿರುವ ಗಾಜು ಮತ್ತು ಅಲ್ಯೂಮಿನಿಯಂ ಗೋಡೆಗಳು ಸೂರ್ಯನ ಶಾಖವನ್ನೆಲ್ಲ ಹೀರಿ ಬೆಂಗಳೂರಿನ ಜನರ ಮುಖಕ್ಕೆ ಎರಚುತ್ತಿವೆ. ಮಣ್ಣಿನ ಇಟ್ಟಿಗೆ ಗೋಡೆಗಳಾಗಿದ್ದರೆ ಹೀಗಾಗುತ್ತಿರಲಿಲ್ಲ. ಇದನ್ನೆಲ್ಲ ಯಾರು ಯಾರಿಗೆ ಹೇಳಬೇಕು!

‘ಒಂದು ದೇಶದ ಅಥವಾ ಒಂದು ನಾಗರಿಕತೆಯ  ಸಾಧನೆಯನ್ನು ಅಳೆಯುವುದು ಅದರ ಉತ್ಪಾದನೆಯ ಅಂಕಿ ಅಂಶಗಳಿಂದ ಅಲ್ಲ. ಅದರ ತಾಳಿಕೆಯ ಶಕ್ತಿಯಿಂದ’ ಎಂದು 1947ರಲ್ಲಿಯೇ ಗ್ರಿಸ್ಕಮ್‌ ಮಾರ್ಗನ್‌ ಎಂಬ ಪರಿಸರ ತಜ್ಞ ಚರ್ಚಿಸಿದ್ದ. ‘ಸಾಮಾನ್ಯ ಮನುಷ್ಯ ಸ್ವಚ್ಛ ಗಾಳಿಯನ್ನು ಉಸಿರಾಡುತ್ತಿಲ್ಲ. ಹಸಿರು ನೆಲದ ಮೇಲೆ ನಡೆಯುತ್ತಿಲ್ಲ’ ಎಂದು ಆತಂಕದಿಂದ ವರ್ಡ್ಸ್‌ವರ್ತ್‌ ಮಹಾಕವಿ ಪರಿಸರವಾದಿಗಳೊಡನೆ ಎಚ್ಚರದ ಜಾಥಾ ಹೊರಟಿದ್ದ.  ‘ಭಾರಿ ಉದ್ದಿಮೆಗಳನ್ನು ಪ್ರಾರಂಭಿಸಿದರೆ ಭಾರತವು ಕ್ರಮೇಣ ಶೋಷಣೆಗೆ ಒಳಗಾಗುತ್ತದೆ’ ಎಂದು ಗಾಂಧಿ ಭವಿಷ್ಯ ನುಡಿದಿದ್ದರು.

ಯಾರೂ ಯಾರ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ಈ ಭೂಮಿ ಈಗ ಮುನಿದಿದೆ. ಆಕಾಶ ಕೆಕ್ಕರಿಸಿ ನೋಡುತ್ತಿದೆ. ಎಲ್ಲವೂ ದೂಳೀಪಟವಾಗುವ ಕಾಲ ಹತ್ತಿರವಾಗುತ್ತಿರಬಹುದು. ಅಷ್ಟರಲ್ಲಿ ಕ್ಷಮೆ ಯಾಚಿಸಿ ನರಮಾನವ ಪ್ರಕೃತಿ ಮೇಲಿನ ಅತ್ಯಾಚಾರವನ್ನು ನಿಲ್ಲಿಸಿದರೆ, ಭೂಮಿತಾಯಿಯ ಕೃಪೆಗೆ ಒಳಗಾದರೆ ಈ ಜಗತ್ತು ಉಳಿದೀತು.

ಬೆಂಗಳೂರನ್ನೇ ತೆಗೆದುಕೊಂಡರೆ 65 ಲಕ್ಷ ವಾಹನಗಳಿವೆ. ಒಂದೂಕಾಲು ಕೋಟಿ ಜನರಿದ್ದಾರೆ. ಎಲ್ಲರಿಗೂ ದಿನನಿತ್ಯ ಸ್ನಾನ. ಎಲ್ಲಿ ನೀರು ತರುವುದು? ಕೊಳಚೆಯನ್ನು ಎಲ್ಲಿಗೆ ನೂಕುವುದು? ಎಷ್ಟು ನದಿಗಳಿರಲಿ, ಅದೆಷ್ಟೇ ಅಣೆಗಳಿರಲಿ ವೈಜ್ಞಾನಿಕ ಬಳಕೆಯ ನೀರು, ನೆಲದ ಮೇಲಿನ ನಿಗಾ ಮಾತ್ರ ಈ ಹುಲು ಮಾನವನಿಗೆ ಸಹಕರಿಸಬಲ್ಲದು.

ನೀರಿನ ನ್ಯಾಯದಲ್ಲಿ ಬುದ್ಧ  ಬೋಧಿ ಅಡಿಯಲ್ಲಿ ನಿಂತಿದ್ದ. ಇದೇ ನ್ಯಾಯದ ಎಚ್ಚರವೆ ಮೂರನೇ ವಿಶ್ವ ಸಮರವನ್ನು ಅದುಮಿ ನಿಲ್ಲಿಸಬಹುದೆಂಬ ಅಭಿಲಾಷೆ ನಮ್ಮೆಲ್ಲರದ್ದಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT